
ತುಮಕೂರು, ಮೇ 11: ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ (India-Pakistan Tension) ಉಂಟಾದ ಹಿನ್ನೆಲೆಯಲ್ಲಿ ತುಮಕೂರು (Tumakur) ಜಿಲ್ಲೆಯಲ್ಲಿ ಸಹಾಯವಾಣಿ ತೆರಯಲಾಗಿದೆ. ಬೆಸ್ಕಾಂ, ಪೊಲೀಸ್, ರೆವಿನ್ಯೂ ಮೂರು ಇಲಾಖೆಗಳದ್ದು ಒಂದೇ ಸಹಾಯವಾಣಿ ಇರುತ್ತದೆ. “08162213400 ” ಸಹಾಯವಾಣಿ ನಂಬರ್ ಆಗಿದ್ದು, 24 ಗಂಟೆಯೂ ಚಾಲ್ತಿಯಲ್ಲಿರುತ್ತದೆ. ತುಮಕೂರಿನಲ್ಲಿ ಏನೆ ಸಮಸ್ಯೆಯಾದರೂ ಅಥವಾ ಮಾಹಿತಿ ಬೇಕಿದ್ದರೂ ಸಹಾಯವಾಣಿಗೆ ಕರೆ ಮಾಡಬಹುದು ಎಂದು ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹೇಳಿದ್ದಾರೆ.
ಈ ಕುರಿತು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸಲು ಜಿಲ್ಲೆಯಲ್ಲಿ 9 ಸಾವಿರ ವೈದ್ಯಕೀಯ ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ತುರ್ತು ಸೇವೆಯ ಸಿಬ್ಬಂದಿಗಳು, ಆಸ್ಪತ್ರೆ ಸಿಬ್ಬಂದಿಗಳ ರಜೆ ರದ್ದು ಮಾಡಲಾಗಿದೆ. ಜಿಲ್ಲೆಯಲ್ಲಿ 20 ಸ್ಥಳಗಳನ್ನು ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿದೆ ಎಂದರು.
ಗ್ರಾಮ ಪಂಚಾಯಿತಿಗಳಲ್ಲಿ ಸೈರನ್ ಅಳವಡಿಕೆಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ನಾಗರಿಕ ರಕ್ಷಣಾ ಸಂಸ್ಥೆಗಳಿಗೆ ಕಾರ್ಯಕರ್ತರನ್ನು ನೇಮಕ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ನಾಗರಿಕ ರಕ್ಷಣಾ ಸಂಸ್ಥೆ ಕಾರ್ಯ ನಿರ್ವಹಣೆಗೆ ಎಎಸ್ಪಿಯನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. 18 ವರ್ಷ ಮೇಲ್ಪಟ್ಟ ಹಾಗೂ ಫಿಟ್ ಆದವರು ಸೂಚನೆ ನೀಡಿದ ಕೂಡಲೇ ಕರ್ತವ್ಯಕ್ಕೆ ಹಾಜರಾಗಬೇಕು. 3 ಸಾವಿರ ಕಾರ್ಯಕರ್ತರು ಬೇಕಾಗಿದ್ದಾರೆ. ಅರ್ಜಿ ಸಲ್ಲಿಸುವ ಮೂಲಕ ಸೇರಿಕೊಳ್ಳಬಹುದು. ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿ ಅರ್ಜಿಗಳನ್ನು ನೀಡಲಾಗಿದೆ. 2-3 ದಿನಗಳಲ್ಲಿ ಪರಿಶೀಲಿಸಿ ತರಬೇತಿ ನೀಡಲಾಗತ್ತದೆ. ಪುರುಷರ ಜೊತೆ ಮಹಿಳೆಯರು ಸಹ ಅಗತ್ಯವಿದೆ ಎಂದು ಹೇಳಿದರು.
ಆಹಾರ ಇಲಾಖೆಯಿಂದ ದಾಸ್ತಾನು ಸಂಗ್ರಹದ ಮಾಹಿತಿ ಪಡೆದುಕೊಂಡಿದ್ದೇವೆ. ಅದರ ಬಗ್ಗೆ ನಿಗಾವಹಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುವ ಕೆಲಸ ಮಾಡಬಾರದು. ಜನರಲ್ಲಿ ಆತಂಕ ಹುಟ್ಟಿಸುವವರ ಮೇಲೆ ಸೈಬರ್ ಸೆಲ್ ಮುಖಾಂತರ ನಿಗಾ ವಹಿಸಲಾಗುವುದು. ಮಾಕ್ ಡ್ರಿಲ್ ಮಾಡಲಾಗುತ್ತದೆ. ತುರ್ತು ಸಮಯ ಸಂದರ್ಭದಲ್ಲಿ ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಹಾಗೂ ಸಾರ್ವಜನಿಕರ ಪ್ರತಿಕ್ರಿಯೆ ಮೇಲೆ ನಿಗಾ ವಹಿಸಲಾಗುವುದು. ಪಾಲಿಕೆಗಳ ವ್ಯಾಪ್ತಿಯಲ್ಲಿ ಸೈರನ್ಗಳ ಅಳವಡಿಕೆಗೆ ಸೂಚನೆ ನೀಡಲಾಗಿದೆ. ಎಲ್ಲ ವಾರ್ಡ್ಗಳಲ್ಲೂ ಮಾಕ್ ಡ್ರಿಲ್ ಮಾಡಲಾಗುವುದು ಎಂದು ತಿಳಿಸಿದರು.
ಯುದ್ಧದ ವಾತಾವಾರಣ ಇರುವುದರಿಂದ ಜನ ಸೇರುವ ಕಾರ್ಯಕ್ರಮಗಳಿಗೆ ಅನುಮತಿ ಇಲ್ಲ. ಜಯಂತಿ ಹಾಗೂ ಪ್ರತಿಭಟನೆಗಳಿಗೆ ಅನುಮತಿ ಇಲ್ಲ. ಮದುವೆ ಕಾರ್ಯಕ್ರಮಗಳಿಗೆ ಕಡಿಮೆ ಜನ ಸೇರಬೇಕು. ಸಾಮಾಜಿಕ ಜಾಲತಾಣದಲ್ಲಿ ಹರದಾಡುವ ಪೋಸ್ಟ್ಗಳನ್ನು ಈ ಸಂದರ್ಭದಲ್ಲಿ ಗಂಭೀರವಾಗಿ ಪರಿಗಣಿಸಲಾಗುವುದು. ವಾಟ್ಸ್ಆಪ್ನಲ್ಲಿ ಶೇರ್ ಮಾಡಿದರೇ ಗ್ರೂಪ್ ಅಡ್ಮಿನ್ ಹಾಗೂ ಶೇರ್ ಮಾಡಿದವರೇ ಜವಾಬ್ದಾರಾಗಿರುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಹೆಚ್ಚು ಜನ ಸೇರುವ ಮಾಲ್, ಬಸ್ ನಿಲ್ದಾಣ ಸೇರಿದಂತೆ ಹಲವು ಕಡೆ ಪರಿಶೀಲನೆ ನಡೆಸಲಾಗುತ್ತಿದೆ. ನಿರಂತರವಾಗಿ ಈ ಪ್ರಕ್ರಿಯೆ ನಡೆಯುತ್ತಿದೆ. ಯಾರಿಗೆ ಅನುಮಾನದ ಸಂಗತಿಗಳು ಕಂಡು ಬಂದಲ್ಲಿ, ಸಹಾಯವಾಣಿ ಸಂಖ್ಯೆ ಅಥವಾ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿ. ಯುದ್ಧದ ಸಂದರ್ಭದಲ್ಲಿ ಅನುಮಾನಸ್ಪದ ವಸ್ತುಗಳು ಕಂಡು ಬಂದಲ್ಲಿ ಮಾಹಿತಿ ನೀಡಬೇಕು. ಅದನ್ನು ಮುಟ್ಟುವ ಕೆಲಸ ಮಾಡಬಾರದು ಎಂದು ಸೂಚನೆ ನೀಡಿದರು.
ಇದನ್ನೂ ಓದಿ: ಕರ್ನಾಟಕದ ಈ ಜಿಲ್ಲೆಗಳಲ್ಲಿ ಗಂಡ, ಮಕ್ಕಳೊಂದಿಗೆ ನೆಲೆಸಿರುವ ಪಾಕ್ ಮಹಿಳೆಯರು ಪತ್ತೆ!
ತುಮಕೂರಿನ ರೈಲ್ವೆ ನಿಲ್ದಾಣದಲ್ಲಿ ಬಾಂಬ್ ನಿಷ್ಕ್ರಿಯದಳ, ಶ್ವಾನದಳದಿಂದ ಪರಿಶೀಲನೆ ನಡೆಸಿತು. ಪ್ರಯಾಣಿಕರ ಬ್ಯಾಗ್ಗಳು, ಲಗೇಜ್ ಹಾಗೂ ವಾಹನಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ತಪಾಸಣೆ ನಡೆಸಲಾಯಿತು.
Published On - 5:02 pm, Sun, 11 May 25