Mangaluru Kukke Subrahmanya Train: ಮಂಗಳೂರು ಕುಕ್ಕೆ ಸುಬ್ರಹ್ಮಣ್ಯ ಮಧ್ಯೆ ಹೊಸ ರೈಲು: ಸಚಿವ ಸೋಮಣ್ಣ ಘೋಷಣೆ
ಮಂಗಳೂರು ಕುಕ್ಕೆ ಸುಬ್ರಹ್ಮಣ್ಯ ರೈಲು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳುವ ಭಕ್ತರಿಗೆ ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಸಿಹಿ ಸುದ್ದಿ ನೀಡಿದ್ದಾರೆ. ತುಮಕೂರಿನಲ್ಲಿ ಇಲಾಖೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇದೇ ತಿಂಗಳ 12ನೇ ತಾರೀಖಿನಿಂದ ಮಂಗಳೂರು ಕುಕ್ಕೆ ಸುಬ್ರಹ್ಮಣ್ಯ ಮಧ್ಯೆ ಹೊಸ ರೈಲು ಸಂಚರಿಸಲಿದೆ ಎಂದು ಘೋಷಣೆ ಮಾಡಿದ್ದಾರೆ.

ತುಮಕೂರು, ಏಪ್ರಿಲ್ 9: ಕರ್ನಾಟಕದ ಪ್ರಸಿದ್ಧ ತೀರ್ಥಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಇದೇ 12ರಿಂದ ಮಂಗಳೂರಿನಿಂದ ಹೊಸ ರೈಲು (Mangaluru Kukke Subrahmanya Train) ಸಂಚರಿಸಲಿದೆ ಎಂದು ರೈಲ್ವೆ ಇಲಾಖೆಯ (Indian Railways) ರಾಜ್ಯ ಖಾತೆ ಸಚಿವ ವಿ ಸೋಮಣ್ಣ (V Somanna) ಬುಧವಾರ ಘೋಷಣೆ ಮಾಡಿದರು. ತುಮಕೂರಿನಲ್ಲಿ ರೈಲ್ವೆ ಗೇಟ್ ಮೇಲ್ಸತುವೆಗೆ ಗುದ್ದಲಿ ಪೂಜೆ ನಡೆಸಿದ ಬಳಿಕ ಮಾತನಾಡಿದ ಅವರು, ಕರ್ನಾಟಕದಲ್ಲಿ ರೈಲ್ವೆ ಇಲಾಖೆಯ ಯೋಜನೆಗಳಿಗೆ ಸಂಬಂಧಿಸಿ ಮಹತ್ವದ ಮಾಹಿತಿ ಹಂಚಿಕೊಂಡರು. ಇದೆ 12 ರಂದು ಮಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಒಂದು ಹೊಸ ರೈಲು ಬಿಡುತ್ತಿದ್ದೇವೆ. ದಿನಕ್ಕೆ ನಾಲ್ಕು ಬಾರಿ ಹೋಗಿ ಬರುವಂತಹ ಕೆಲಸ ಆಗಲಿದೆ ಎಂದು ಅವರು ಹೇಳಿದರು.
ಬಟವಾಡಿ ಗೇಟ್ನಲ್ಲಿ ಇವತ್ತು 27 ಕೋಟಿ ರೂ. ವೆಚ್ಚದಲ್ಲಿ ಕೆಲಸ ಆರಂಭ ಮಾಡಲಾಗಿದೆ. ಬಡ್ಡಿಹಳ್ಳಿ ಬಳಿ 43 ಕೋಟಿ ರೂ. ವೆಚ್ಚದಲ್ಲಿ, ಮೈದಾಳದ ಬಳಿ 51 ಕೋಟಿ ರೂ. ವೆಚ್ಚದಲ್ಲಿ ಮೇಲ್ಸತುವೆ ಮಾಡಲಾಗುತ್ತಿದೆ. 650 ಕೋಟಿ ರೂ. ವೆಚ್ಚದ 22 ಮೇಲ್ಸತುವೆ ಮತ್ತು ಕೆಳಸೇತುವೆ ಕಾಮಗಾರಿ ಪ್ರಾರಂಭ ಮಾಡಲಾಗುತ್ತಿದೆ. 23 ಕಾಮಗಾರಿಗಳ ಪೈಕಿ ಈಗಾಗಲೇ 10 ಕಾಮಗಾರಿಗೆ ಚಾಲನೆ ಕೊಡಲಾಗಿದೆ. ಹಂತ ಹಂತವಾಗಿ ಕೆಲಸಗಳನ್ನು ಪ್ರಾರಂಭ ಮಾಡಲಾಗುತ್ತದೆ. ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಬಂದ ಮೇಲೆ ರೈಲ್ವೆ ಇಲಾಖೆಗೆ ಒಂದು ಕಾಯಕಲ್ಪ ಕೊಟ್ಟಿದ್ದಾರೆ ಎಂದು ಸೋಮಣ್ಣ ಹೇಳಿದರು.
ಕರ್ನಾಟಕದಲ್ಲಿ ರೈಲ್ವೆಯಿಂದ 33 ಸಾವಿರ ಕೋಟಿ ರೂ. ವೆಚ್ಚದ ಯೋಜನೆ: ಸೋಮಣ್ಣ
ಕರ್ನಾಟಕದಲ್ಲಿ ಇದ್ದತಂಹ 33 ಸಾವಿರ ಕೋಟಿ ರೂ. ವೆಚ್ಚದ ಯೋಜನೆಗಳನ್ನ ನಾವು (ಕೇಂದ್ರ ಸರ್ಕಾರ) ಕೈಗೆತ್ತಿಕೊಂಡಿದ್ದೇವೆ. ಇದೇ 11 ರಂದು ಹಾವೇರಿಯಿಂದ ಬೆಂಗಳೂರಿಗೆ ವಂದೇ ಭಾರತ್ ರೈಲಿಗೆ ಚಾಲನೆ ಕೊಡುತ್ತಿದ್ದೇವೆ. ಮುಂದಿನ 15 ದಿನಗಳಲ್ಲಿ ಗದಗ, ವಾಡಿ, ಕುಷ್ಠಗಿ, ಯಲಬುರ್ಗಾ ರೈಲು ಸಂಚಾರ ಲೋಕಾರ್ಪಣೆ ಮಾಡುತ್ತೇವೆ. ಅನೇಕ ರೈಲ್ವೆ ಯೋಜನೆಗಳನ್ನು ಲೋಕಾರ್ಪಣೆ ಮಾಡುವಂತಹ ಕೆಲಸ ಈಗಾಗಲೇ ಆಗಿದೆ ಎಂದು ಸೋಮಣ್ಣ ಹೇಳಿದರು.

ತುಮಕೂರಿನಲ್ಲಿ ನಡೆದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ವಿ ಸೋಮಣ್ಣ
ಚಿಕ್ಕಮಗಳೂರು – ಬೇಲೂರು ರೈಲು ಮಾರ್ಗ ಅಪ್ಡೇಟ್
ಚಿಕ್ಕಮಗಳೂರಿನಿಂದ ಬೇಲೂರು ರೈಲು ಮಾರ್ಗದ ಬಗ್ಗೆ ಈಗಾಗಲೇ ಪರೀಕ್ಷೆ ನಡೆಯುತ್ತಿದೆ. ಕರ್ನಾಟಕಕ್ಕೆ ರೈಲ್ವೆಯ ಒಂದು ಹೊಸ ಯುಗ ಆರಂಭವಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಮೈಸೂರು ರೈಲು ಪ್ರಯಾಣಿಕರಿಗೆ ಸಂಕಷ್ಟ
ತುಮಕೂರು ಲೋಕಸಭಾ ವ್ಯಾಪ್ತಿಯಲ್ಲಿ ಒಂದೇ ಒಂದು ರೈಲ್ವೆ ಗೇಟ್ ಇಲ್ಲದ ಹಾಗೆ ಮಾಡುವಂತೆ ತೀರ್ಮಾನ ಮಾಡಲಾಗಿದೆ ಎಂದ ಅವರು ತುಮಕೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಬೇಡಿಕೆ ಹೆಚ್ಚಿದ ವಿಚಾರವಾಗಿಯೂ ಪ್ರತಿಕ್ರಿಯಿಸಿದರು. 34 ಜನ ಶಾಸಕರು ಜಯಚಂದ್ರ ನೇತೃತ್ವದಲ್ಲಿ ದೆಹಲಿಗೆ ಬಂದು ನನಗೆ ಮನವಿ ಕೊಟ್ಟಿದ್ದಾರೆ. ಅದನ್ನು ನಮ್ಮ ನಾಗರಿಕ ವಿಮಾನಯಾನ ಇಲಾಖೆ ಸಚಿವ ನಾಯ್ಡು ಅವರಿಗೆ ಸಲ್ಲಿಕೆ ಮಾಡಲಾಗಿದೆ. ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸುವುದಕ್ಕೂ ಮೊದಲೇ ಈ ಪ್ರಕ್ರಿಯೆ ಆಗಿತ್ತು ಎಂದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:35 am, Wed, 9 April 25