ಸಂಕಷ್ಟ ಎದುರಿಸುತ್ತಿದೆ ಜೆಡಿಎಸ್: ತುಮಕೂರು ಸಮಾವೇಶದಲ್ಲಿ ಎಚ್ಡಿ ಕುಮಾರಸ್ವಾಮಿ
ಸಂಕಷ್ಟ ಕಾಲದಲ್ಲಿ ದೇವೇಗೌಡರ ಕೈಹಿಡಿಯುತ್ತಿದ್ದುದು ತುಮಕೂರು. ಇಲ್ಲಿ ಅವರ ಸೋಲಿಗೆ ಸೋಲಿಗೆ ಯಾರು ಕಾರಣ ಅಂತ ನಿಮಗೇ ಗೊತ್ತು ಎಂದು ಮಾರ್ಮಿಕವಾಗಿ ನುಡಿದರು.
ತುಮಕೂರು: ಜೆಡಿಎಸ್ ಪಕ್ಷವು ಸಂಕಷ್ಟ ಎದುರಿಸುತ್ತಿದೆ. 2018ರಲ್ಲಿ ಯಾವ ಪಕ್ಷಕ್ಕೂ ಬಹುಮತ ಬರಲಿಲ್ಲ. ತುಮಕೂರು, ಮೈಸೂರು, ಮಂಡ್ಯ, ತುಮಕೂರು, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಕಾಂಗ್ರೆಸ್ ವಿರುದ್ಧ ನಮ್ಮ ಹೋರಾಟ ನಡೆಯಿತು. ಒಂದು ತಿಂಗಳು ಮುಖ್ಯಮಂತ್ರಿ ಸ್ಥಾನವೆಂಬ ಮುಳ್ಳಿನ ಕುರ್ಚಿಯ ನೋವು ಅನುಭವಿಸಿದೆ. ರೈತರ ಸಾಲಮನ್ನಾ ಮಾಡಬೇಕು ಎನ್ನುವ ಉದ್ದೇಶದಿಂದ ಕಾಂಗ್ರೆಸ್ ಜೊತೆಗೆ ಕೈಜೋಡಿಸಿದ್ದೆ. ಸಾಲಮನ್ನಾಕ್ಕಾಗಿ ₹ 25 ಸಾವಿರ ಕೋಟಿ ಹಣ ಹೊಂದಿಸಿದ್ದೆ. ನಾನು ಹಣಕಾಸು ಇಲಾಖೆಯನ್ನು ಇರಿಸಿಕೊಂಡಿದ್ದು ರೈತರ ಹಿತ ಕಾಪಾಡಲು. ಹಣ ಹೊಡೆಯಬೇಕು ಅಂತ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ನಡೆಯುತ್ತಿರುವ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಸಂಕಷ್ಟ ಕಾಲದಲ್ಲಿ ದೇವೇಗೌಡರ ಕೈಹಿಡಿಯುತ್ತಿದ್ದುದು ತುಮಕೂರು. ಅವರು ಹಲವರ ಒತ್ತಡಕ್ಕೆ ಮಣಿದು ತುಮಕೂರು ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ನಿಂತಿದ್ದರು. ಅವರ ಸೋಲಿಗೆ ಸೋಲಿಗೆ ಯಾರು ಕಾರಣ ಅಂತ ನಿಮಗೇ ಗೊತ್ತು. ಜೆಡಿಎಸ್‌ಗೆ ಭವಿಷ್ಯ ಇಲ್ಲ ಎಂಬ ಮಾತು ಸೃಷ್ಟಿಸಿದ್ದಾರೆ. ಹತ್ತಾರು ರೀತಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಎಲ್ಲ ಕಡೆ ಶಂಖ ಊದಲಿಕ್ಕೆ ನಾನೇ ಹೋಗಬೇಕು ಮೈಸೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಆರರಿಂದ ಎಂಟು ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಹಾಕಲಾಗುವುದು ಎಂದು ಈ ಮೊದಲೇ ನಾನು ಹೇಳಿದ್ದೆ. ಈ ಕಾರಣಕ್ಕಾಗಿಯೇ ಮೈಸೂರು, ಕೊಡಗು, ಮಂಡ್ಯ, ಕೋಲಾರ, ಬೆಂಗಳೂರು ಗ್ರಾಮಾಂತರ, ತುಮಕೂರು, ಹಾಸನ ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆ ಮಾಡಿದ್ದೇವೆ. ನಮ್ಮ ಪಕ್ಷದ ಸ್ಥಳೀಯ ಕಾರ್ಯಕರ್ತರು, ಮುಖಂಡರ ಅಭಿಪ್ರಾಯ, ಸಲಹೆ ಪಡೆದು ಅಭ್ಯರ್ಥಿಗಳನ್ನು ಗುರುತಿಸಿದ್ದೇವೆ ಎಂದು ಹೇಳಿದರು.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ನಾವು ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದೇವು. ಈಗ ಏಳೂ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದೆ. ಸಮಯ ಕಡಿಮೆಯಿದ್ದರೂ, ಪ್ರಬಲ ಹೋರಾಟ ನಡೆಸಿ ಜಯ ಸಾಧಿಸುವುದು ನಮ್ಮ ಗುರಿಯಾಗಿದೆ ಎಂದರು. ಸಚಿವ ಈಶ್ವರಪ್ಪ ಅವರು ನಮ್ಮ ಬಗ್ಗೆ ಒಂದು ಮಾತು ಹೇಳಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ಶಂಖ ಊದಲಿಕ್ಕೆ ಜನ ಇಲ್ಲ ಎಂದು. ಹೌದು, ಅವರು ಹೇಳಿದ್ದು ನಿಜ. ಎಲ್ಲ ಕಡೆ ಶಂಖ ಊದುವುದಕ್ಕೆ ನಾನೇ ಹೋಗಬೇಕು. ಎಲ್ಲೆಲ್ಲಿ ಶಂಖ ಊದಲು ಸಾಧ್ಯವಿದೆಯೋ ಅಂತಹ ಕಡೆ ಮಾತ್ರ ಅಭ್ಯರ್ಥಿಗಳನ್ನು ಹಾಕಿದ್ದೇವೆ ಎಂದು ಪ್ರತಿಕ್ರಿಯಿಸಿದರು.
ನಮ್ಮ ಗುರಿ 2023ರ ಚುನಾವಣೆ ನಮ್ಮ ಶಕ್ತಿಗನುಸಾರವಾಗಿ ಉಪ ಚುನಾವಣೆಗಳನ್ನು ಎದುರಿಸಿದ್ದೇವೆ. ಈಗ ವಿಧಾನ ಪರಿಷತ್ ಚುನಾವಣೆಯಲ್ಲೂ ಸ್ಪರ್ಧೆ ಮಾಡುತ್ತಿದ್ದೇವೆ. ನಮ್ಮ ಗುರಿ 2023ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯ ಮೇಲಿದೆ. ಅದಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಎಲ್ಲ ಹಂತಗಳಲ್ಲೂ ಪಕ್ಷ ಸಂಘಟನೆ ಮಾಡಲು ಏನೆಲ್ಲ ಕ್ರಮ ವಹಿಸಬೇಕೋ ಅದನ್ನು ಮಾಡುತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳಿಗೆ ಶಕ್ತಿ ತುಂಬುವ ರೀತಿಯಲ್ಲಿ ಈ ಚುನಾವಣೆಯಲ್ಲಿ ಸ್ಥಳೀಯ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದ ಅವರು; ಹಿಂದೆ ಗೆದ್ದ ಕೆಲವರು ನಮ್ಮ ಪಕ್ಷದಿಂದ ದೂರ ಆಗಿದ್ದಾರೆ. ಅದು ಮುಗಿದ ಅಧ್ಯಾಯ. ಪಕ್ಷಕ್ಕೆ ಕಾರ್ಯಕರ್ತರನ್ನು ಹೊರತುಪಡಿಸಿ ಯಾರು ಅನಿವಾರ್ಯವಲ್ಲ. ಕಾರ್ಯಕರ್ತರ ದುಡಿಮೆ ಮೇಲೆ ನಾಯಕರು ಸೃಷ್ಟಿಯಾಗುತ್ತಾರೆ. ಈ ಕಾರ್ಯಕರ್ತರೇ ಮುಂದಿನ ಹಂತಕ್ಕೆ ಹೊಸ ನಾಯಕರನ್ನು ಮಾರ್ಮಿಕವಾಗಿ ತಿಳಿಸಿದರು.
ಇದನ್ನೂ ಓದಿ: ಜೆಡಿಎಸ್ ಬಿಟ್ಟು ಬಿಜೆಪಿ ಟಿಕೆಟ್ ಬಯಸಿದ್ದ ಸಂದೇಶ್ ನಾಗರಾಜ್ ಮತ್ತೆ ಜೆಡಿಎಸ್ ಕದ ತಟ್ಟಿದರು, ಕೊನೆಗೆ ಏಕಾಂಗಿಯಾದರು! ಇದನ್ನೂ ಓದಿ: ಪರಿಷತ್ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ; ಸಿದ್ದರಾಮಯ್ಯ ಆಪ್ತನಿಗೆ ಒಲಿದ ಟಿಕೆಟ್