ದೇವಣ್ಣ ದಳಂ ಹೆಸರಿನಲ್ಲಿ ಬೆದರಿಕೆ ಪತ್ರ: ಪಾವಗಡದಲ್ಲಿ ನಕಲಿ ನಕ್ಸಲ್ ವೆಂಕಟೇಶ್‌ಗಾಗಿ ಪೊಲೀಸರ ಶೋಧ

ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಕಲಿ ನಕ್ಸಲ್​​ ಕಾಟ ಮಾತ್ರ ನಿಲ್ಲುತ್ತಿಲ್ಲ. ಇತ್ತೀಚೆಗೆ ದೇವಣ್ಣ ದಳಂ ಹೆಸರಿನಲ್ಲಿ ಬೆದರಿಕೆ ಪತ್ರ ಹಾಗೂ ಕಚ್ಚಾ ಬಾಂಬ್ ಸ್ಫೋಟಿಸಿದ್ದ ನಕಲಿ ನಕ್ಸಲ್​​ಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಕಳೆದ ಒಂದೂವರೆ ತಿಂಗಳಿಂದ ನಾಪತ್ತೆಯಾಗಿರುವ ನಕಲಿ ನಕ್ಸಲ್​​ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ದೇವಣ್ಣ ದಳಂ ಹೆಸರಿನಲ್ಲಿ ಬೆದರಿಕೆ ಪತ್ರ: ಪಾವಗಡದಲ್ಲಿ ನಕಲಿ ನಕ್ಸಲ್ ವೆಂಕಟೇಶ್‌ಗಾಗಿ ಪೊಲೀಸರ ಶೋಧ
ಕನಿಕಲಬಂಡೆ ವೆಂಕಟೇಶ್‌
Image Credit source: tv9 kannada
Edited By:

Updated on: Sep 13, 2026 | 6:13 PM

ತುಮಕೂರು, ಸೆಪ್ಟೆಂಬರ್​ 13: ‘ದೇವಣ್ಣ ದಳಂ’ ಹೆಸರಿನಲ್ಲಿ ಬೆದರಿಕೆ ಪತ್ರ ಬರೆದು ಆತಂಕ ಸೃಷ್ಟಿಸಿದ್ದ ನಕಲಿ ನಕ್ಸಲ್ ಕನಿಕಲಬಂಡೆ ವೆಂಕಟೇಶ್ ಪತ್ತೆಗಾಗಿ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಪೊಲೀಸರು ಬೃಹತ್ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ್ದಾರೆ. ಎಎಸ್‌ಪಿ ಗೋಪಾಲ್ ಹಾಗೂ ಮಧುಗಿರಿ ಡಿವೈಎಸ್‌ಪಿ ಮಂಜುನಾಥ್ ನೇತೃತ್ವದಲ್ಲಿ 5 ಇನ್‌ಸ್ಪೆಕ್ಟರ್‌ಗಳು ಮತ್ತು 10 ಸಬ್ ಇನ್‌ಸ್ಪೆಕ್ಟರ್‌ಗಳು ಸೇರಿದಂತೆ ಒಟ್ಟು 120 ಮಂದಿ ಪೊಲೀಸರ 5 ಪ್ರತ್ಯೇಕ ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿವೆ. ಕನಿಕಲಬಂಡೆ ಮತ್ತು ಗಂಗಸಾಗರ ಸುತ್ತಮುತ್ತಲಿನ ದಟ್ಟ ಬೆಟ್ಟಗುಡ್ಡಗಳ ಪ್ರದೇಶದಲ್ಲಿ ಡ್ರೋನ್ ಕ್ಯಾಮೆರಾಗಳನ್ನು ಬಳಸಿ ಶೋಧ ನಡೆಸಲಾಗುತ್ತಿದೆ.

ಕಚ್ಚಾ ಬಾಂಬ್ ಸ್ಫೋಟ; ದೇವಣ್ಣ ದಳಂ ಹೆಸರಿನಲ್ಲಿ ಬೆದರಿಕೆ ಪತ್ರ

ಆರೋಪಿ ವೆಂಕಟೇಶ್ ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯ ಎರಡು ಪ್ರತ್ಯೇಕ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಸುಮಾರು ಒಂದು ತಿಂಗಳ ಹಿಂದೆ ಜಮೀನಿನ ಮೋಟಾರ್‌ನಲ್ಲಿ ಕಚ್ಚಾ ಬಾಂಬ್ ಸ್ಫೋಟಿಸಿದ್ದ ಈತ, ನಾಲ್ಕು ದಿನಗಳ ಹಿಂದೆ ಗಂಗಸಾಗರದ ನಾಗಭೂಷಣ್ ಎಂಬುವವರಿಗೆ ನಕ್ಸಲ್ ಸಂಘಟನೆ ‘ದೇವಣ್ಣ ದಳಂ’ ಹೆಸರಿನಲ್ಲಿ ಬೆದರಿಕೆ ಪತ್ರ ಬರೆದಿದ್ದ.

ಇದನ್ನೂ ಓದಿ: ರಾಜ್ಯದಲ್ಲಿ ನಕ್ಸಲ್​​ ನಿಗ್ರಹ ಪಡೆ ಮತ್ತೆ ರೀ ಆ್ಯಕ್ಟೀವ್? ಚಾಮರಾಜನಗರ ಬಾಂಬ್ ಬ್ಲಾಸ್ಟ್ ಪ್ರಕರಣ ಎಎನ್​​ಎಫ್​​ನಿಂದ ತನಿಖೆ?

ನಕ್ಸಲ್​​​ ಆರೋಪಿ ವೇಂಕಟೇಶ್​ ವಿರುದ್ಧದ ಕೋರ್ಟ್​​ನಲ್ಲಿ ದಾಖಲಾಗಿರುವ ಕೇಸ್​ ನಡೆಸಲು ಹಣ ಬೇಕಾಗಿರುವುದರಿಂದ ಐದು ಲಕ್ಷ ರೂ ನೀಡುವಂತೆ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಒಂದು ವೇಳೆ ಹಣ ಕೊಡದಿದ್ದರೆ ಅನಾಹುತ ಸಂಭವಿಸಲಿದೆ ಎಂದು ಬೆದರಿಕೆ ಹಾಕಲಾಗಿತ್ತು.

ಕುಟುಂಬಸ್ಥರ ಬಂಧನ; ತಲೆಮರೆಸಿಕೊಂಡಿರುವ ಆರೋಪಿಗಾಗಿ ಮುಂದುವರಿದ ತಲಾಶ್

ಕಚ್ಚಾ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾವಗಡ ಪೊಲೀಸರು ಈಗಾಗಲೇ ಆರೋಪಿ ವೆಂಕಟೇಶ್‌ನ ಪತ್ನಿ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ಐವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಆದರೆ ಪ್ರಮುಖ ಆರೋಪಿ ವೆಂಕಟೇಶ್ ಕಳೆದ ಒಂದೂವರೆ ತಿಂಗಳಿನಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದು, ಆತನನ್ನು ಸೆರೆಹಿಡಿಯಲು ಅರಣ್ಯ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಜಾಲ ಬೀಸಲಾಗಿದೆ.

Pavagada Naxalites: ನಕಲಿ ನಕ್ಸಲ್ ಕನಿಕಲಬಂಡೆ ವೆಂಕಟೇಶ್‌ಗಾಗಿ ಪೊಲೀಸರಿಂದ ಡ್ರೋಣ್ ಮೂಲಕ ಶೋಧ |#TV9D

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:02 pm, Sun, 13 September 26

ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More
Loading...
Unable to load recommendations.
Follow Us