ಶಿವಮೊಗ್ಗದ ಕೋಟೆ ಆಂಜನೇಯ ದೇವಸ್ಥಾನಕ್ಕೂ ರಾಮಾಯಣಕ್ಕೂ ಇದೆ ನಂಟು: ಹನುಮಂತ ದರ್ಶನ ನೀಡಿದ ಸ್ಥಳ !

| Updated By: ವಿವೇಕ ಬಿರಾದಾರ

Updated on: Jan 06, 2024 | 2:41 PM

ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಭವ್ಯ ಮಂದಿರ ನಿರ್ಮಾಣವಾಗಿದೆ. ಜನವರಿ 22 ರಂದು ಮಂದಿರ ಉದ್ಘಾಟನೆಯಾಗಲಿದೆ. ಈ ವೇಳೆಯೇ ಶಿವಮೊಗ್ಗ ಜಿಲ್ಲೆಯಲ್ಲಿ ರಾಮಾಯಣ ಕುರುಹು ಪತ್ತೆಯಾಗಿದೆ. ಹೌದು ಶಿವಮೊಗ್ಗದ ಕೋಟೆ ಆಂಜನೇಯ ದೇವಸ್ಥಾನಕ್ಕೂ ರಾಮಾಯಣಕ್ಕೂ ನಂಟಿದೆ.

ಶಿವಮೊಗ್ಗದ ಕೋಟೆ ಆಂಜನೇಯ ದೇವಸ್ಥಾನಕ್ಕೂ ರಾಮಾಯಣಕ್ಕೂ ಇದೆ ನಂಟು: ಹನುಮಂತ ದರ್ಶನ ನೀಡಿದ ಸ್ಥಳ !
ಕೋಟೆ ಆಂಜನೇಯ ದೇವಸ್ಥಾನ
Follow us on

ಶಿವಮೊಗ್ಗ, ಜನವರಿ 06: ಅಯೋಧ್ಯೆಯಲ್ಲಿ (Ayodhya) ಶ್ರೀರಾಮಚಂದ್ರನ (Sriram) ಭವ್ಯ ಮಂದಿರ ನಿರ್ಮಾಣವಾಗಿದೆ. ಜನವರಿ 22 ರಂದು ಮಂದಿರ ಉದ್ಘಾಟನೆಯಾಗಲಿದೆ. ಜೊತೆಗೆ ಬಾಲ ರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈ ಸುದಿನಕ್ಕಾಗಿ ದೇಶವಾಸಿಗಳು ಕಾಯುತ್ತಿದ್ದಾರೆ. ಈ ರಾಮಮಂದಿರ ಲೋಕಾರ್ಪಣೆಯ ದಿನಗಳು ಹತ್ತಿರ ಬರುತ್ತಿದ್ದಂತೆ, ದೇಶದಲ್ಲಿ ರಾಮ ಸಂಚರಿಸಿದ ಕುರುಹುಗಳು ಮತ್ತು ರಾಮಾಯಣದ ಕೆಲ ಸನ್ನಿವೇಶಗಳು ನಡೆದ ಸ್ಥಳಗಳು ಬೆಳಕಿಗೆ ಬರುತ್ತಿವೆ. ಇತ್ತೀಚಿಗೆ ಗದಗ, ಹಾಸನ, ಕೊಪ್ಪಳ ಮತ್ತು ತುಮಕೂರು ಜಿಲ್ಲೆಗಳಲ್ಲಿ ರಾಮ ಸಂಚರಿಸಿರುವ ಕುರುಹುಗಳು ಪತ್ತೆಯಾಗಿದ್ದವು.

ಇದೀಗ ಶಿವಮೊಗ್ಗ ಜಿಲ್ಲೆಯಲ್ಲಿ ರಾಮಾಯಣ ಕುರುಹು ಪತ್ತೆಯಾಗಿದೆ. ಹೌದು ಶಿವಮೊಗ್ಗದ ಕೋಟೆ ಆಂಜನೇಯ ದೇವಸ್ಥಾನಕ್ಕೂ ರಾಮಾಯಣಕ್ಕೂ ನಂಟಿದೆ. ರಾಮ-ರಾವಣನ ನಡುವೆ ಯುದ್ಧ ನಡೆಯುತ್ತಿರುತ್ತದೆ. ಈ ಸಂದರ್ಭದಲ್ಲಿ ರಾವಣ ಬಿಟ್ಟ ಬಾಣ ಲಕ್ಷ್ಮಣನಿಗೆ ತಗಲುತ್ತದೆ. ರಾವಣ ಬಿಟ್ಟ ಬಾಣದಿಂದ ಲಕ್ಷ್ಮಣ ಮೂರ್ಛೆ ಹೋಗುತ್ತಾನೆ. ಪ್ರಜ್ಞೆ ತಪ್ಪಿ ಬಿದ್ದ ಲಕ್ಷ್ಮಣನ ಪ್ರಾಣ ಉಳಿಸಲು ಸಂಜೀವಿನ ಔಷಧ ಅವಶ್ಯವಾಗಿರುತ್ತದೆ.

ಈ ಸಂಜೀವಿನಿ ಔಷಧಿಯು ಹಿಮಾಲಯ ಪರ್ವತದಲ್ಲಿರುತ್ತದೆ. ಹೀಗಾಗಿ ಹನುಮಂತ ಹಿಮಾಲಯದತ್ತ ಹಾರುತ್ತಾನೆ. ಆಂಜನೇಯ ಹಿಮಾಲಯದತ್ತ ಹೋಗುವ ರಭಸಕ್ಕೆ ಜೋರಾಗಿ ಗಾಳಿ ಬೀಸುತ್ತಿರುತ್ತದೆ. ಈ ಗಾಳಿಯ ವೇಗಕ್ಕೆ ದೂರ್ವಾಸ ಮುನಿಗಳ ಆಶ್ರಮ ಹಾರಿ ಹೋಗುತ್ತದೆ. ಇದರಿಂದ ಕೋಪಗೊಂಡ ದುರ್ವಾಸ ಮುನಿಗಳು, ಆಂಜನೇಯ ಮುಂದೆ ಚಲಿಸದಂತೆ ತಡೆಯುತ್ತಾರೆ.

ಇದನ್ನೂ ಓದಿ: ಹೇಮಾವತಿ ನದಿಯ ದಡದ ಬಂಡೆಯ ಮೇಲೆ ರಾಮನ ಪಾದದ ಗುರುತು ಗೋಚರ

ಆಗ ಆಂಜನೇಯ ಎಷ್ಟೇ ಪ್ರಯತ್ನಿಸಿದರು ಮುಂದೆ ಸಾಗಲು ಸಾಧ್ಯವಾಗುವುದಿಲ್ಲ. ಆಗ ಹನುಮಂತ ನನ್ನ ತಡೆದ ಶಕ್ತಿ ಯಾವುದು ಎಂದು ತಿಳಿಯುತ್ತಾನೆ. ಬಳಿಕ ಮಾರುತಿ ದೂರ್ವಾಸ ಮುನಿಗಳ ಬಳಿ ಬಂದು ನಡೆದ ಸಂಗತಿಯನ್ನು ಹೇಳುತ್ತಾನೆ. ಸೂರ್ಯಾಸ್ತವಾಗುವದರ ಒಳಗಾಗಿ ಸಂಜೀವಿನ ತೆಗೆದುಕೊಂಡು ಹೋಗದಿದ್ದರೇ ಲಕ್ಷ್ಮಣನ ಪ್ರಾಣಕ್ಕೆ ಕಂಟಕವಿದೆ ಎಂದು ಭಜರಂಗಬಲಿ ದೂರ್ವಾಸ ಮುನಿಗಳಿಗೆ ಹೇಳುತ್ತಾನೆ. ನಂತರ ತನ್ನನ್ನು ಸಂಚರಿಸಲು ಬಿಟ್ಟು ಬಿಡಿ ಎಂದು ಆಂಜನೇಯ ದೂರ್ವಾಸ ಮುನಿಗಳ ಬಳಿ ಪ್ರಾರ್ಥನೆ ಮಾಡುತ್ತಾನೆ.

ಆಗ ಮುನಿಗಳು ಕೆಳೆಗೆ ಬಂದು ದರ್ಶನ ನೀಡು ಎಂದು ಹಠ ಹಿಡಿಯುತ್ತಾರೆ. ಆಗ ಪವನಸುತ ಭೂಮಿಯ ಮೇಲೆ ಇಳಿದು ದರ್ಶನ ನೀಡುತ್ತಾನೆ. ಆಂಜನೇಯ ದರ್ಶನ ನೀಡಿದ ಭಂಗಿಯನ್ನು ಮುನಿಗಳು ಯಂತ್ರದಲ್ಲಿ ಬಿಡಿಸುತ್ತಾರೆ. ಬಳಿಕ ಮುನಿಗಳು ಆ ಯಂತ್ರವನ್ನು ಬಂಡೆ ಕಳಗೆ ಇಟ್ಟು ತೀರ್ಥ ಯಾತ್ರೆಗೆ ತೆರಳುತ್ತಾರೆ.

ಕಾಲಾನಂತರ ಜನಮೇಜಯ ಮಹಾರಾಜರು ಇಲ್ಲಿಗೆ ಬರುತ್ತಾರೆ. ಆಗ ಬಂಡೆಯಿಂದ ರಾಮ ನಾಮ ಕೇಳಿ ಬರುತ್ತದೆ. ಬಂಡೆ ತೆಗೆದು ನೋಡಿದಾಗ ಅಲ್ಲಿ ಯಂತ್ರ ಇರುತ್ತದೆ. ಆಂಜನೇಯ ಪ್ರತ್ಯಕ್ಷ ನೀಡಿರುವ ಸಂಗತಿ ರಾಜನಿಗೆ ಗೊತ್ತಾಗುತ್ತದೆ. ಬಳಿಕ ಯಂತ್ರದಲ್ಲಿ ಇರುವ ಆಂಜನೇಯನನ್ನು ಮೂರ್ತಿ ರೂಪದಲ್ಲಿ ಪ್ರತಿಷ್ಠಾಪನೆ ಮಾಡುತ್ತಾರೆ. ಹೀಗೆ ಪ್ರತಿಷ್ಠಾಪಿಸಿದ ಮೂರ್ತಿಯೇ ಇಂದಿನ ಕೋಟೆ ಆಂಜನೇಯ ಸ್ವಾಮಿ.

ಇನ್ನು ದೂರ್ವಾಸ ಮುನಿಗಳು ತಪಸ್ಸು ಮಾಡಿದ ಸ್ಥಳದಲ್ಲಿ ಶತಮಾನದ ಅರಳಿ ಮತ್ತು ಬೇವಿನ ಮರ ಇದೆ. ಈ ಮರಕ್ಕೆ ದೇವಾಶ್ವಥ್ ಅಥವಾ ದೂರ್ವಾಸ ಕ್ಷೇತ್ರ ಎಂದೂ ಕರೆಯುತ್ತಾರೆ. ನಿತ್ಯ ಪೂಜೆ ನೆರವೇರುತ್ತಿದೆ.

 ರಾಷ್ಟ್ರದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:38 pm, Sat, 6 January 24