ಮುಖ್ಯಮಂತ್ರಿಯನ್ನು ನಾಯಿಮರಿಗೆ ಹೋಲಿಕೆ ಮಾಡಿ ಸಿದ್ದರಾಮಯ್ಯ ರಾಜ್ಯದ ಜನರಿಗೆ ಅಪಮಾನ ಮಾಡಿದ್ದಾರೆ: J.P.ನಡ್ಡಾ
ಸಿದ್ದರಾಮಯ್ಯನವರು ಒಬ್ಬ ಮುಖ್ಯಮಂತ್ರಿಗೆ ನಾಯಿ ಎಂದು ಕರೆದು ಕರ್ನಾಟಕದ ಜನರಿಗೆ ಅಪಮಾನ ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ J.P.ನಡ್ಡಾ ಹೇಳಿದ್ದಾರೆ.
ತುಮಕೂರು: ಕಾಂಗ್ರೆಸ್‌ನವರು ಅಣ್ಣ-ತಮ್ಮಂದಿರ ನಡುವೆ ಜಗಳ ತಂದಿಕ್ಕಿದರು. ಜಾತಿ ಜಾತಿ ಎಂದು ಒಡೆದು ಆಳುವ ನೀತಿ ಕಾಂಗ್ರೆಸ್ ನಾಯಕರದ್ದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ J.P.ನಡ್ಡಾ ಹೇಳಿದರು. ಜಿಲ್ಲೆಯ ಶಿರಾ ಪಟ್ಟಣದ ಜನಸಂಕಲ್ಪ ಸಮಾವೇಶದಲ್ಲಿ ಅವರು ಮಾತನಾಡಿ, ಸಿದ್ದರಾಮಯ್ಯ(Siddaramaiah) ನವರು ಒಬ್ಬ ಮುಖ್ಯಮಂತ್ರಿಗೆ ನಾಯಿ ಎಂದು ಕರೆದು ಕರ್ನಾಟಕದ ಜನರಿಗೆ ಅಪಮಾನ ಮಾಡಿದ್ದಾರೆ ಎಂದರು. ಯುಪಿಎ ಸರ್ಕಾರವಿದ್ದಾಗ ಕರ್ನಾಟಕವನ್ನು ಅಭಿವೃದ್ಧಿಪಡಿಸಿರಲಿಲ್ಲ. ಎನ್‌ಡಿಎ ಸರ್ಕಾರ ಬಂದ ಬಳಿಕ ರಾಜ್ಯ ಸಾಕಷ್ಟು ಅಭಿವೃದ್ಧಿ ಆಗಿದೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಸೇರಿ ರಾಜ್ಯವನ್ನು ಅಭಿವೃದ್ಧಿಪಡಿಸಿದ್ದಾರೆ. ಮೋದಿ ಅವರು ಭಾರತದ ರಾಜಕೀಯ ಸಂಸ್ಕೃತಿ ಬದಲಿಸಿದರು. ಬಿಜೆಪಿ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಮಾಡುತ್ತಿದೆ. ಕರ್ನಾಟಕದಲ್ಲೂ ಎಲ್ಲಾ ವರ್ಗದ ಜನರ ಹಿತ ಚಿಂತನೆ ಮಾಡುವ ಸರ್ಕಾರವಿದೆ ಎಂದು J.P.ನಡ್ಡಾ ಹೇಳಿದರು.
ಕೊವಿಡ್, ನೆರೆ ಹಾವಳಿ ಸಂಕಷ್ಟದಲ್ಲೂ ಆರ್ಥಿಕತೆ ಬೆಳೆದಿದೆ. 80 ಕೋಟಿ ಜನರಿಗೆ ಉಚಿತ ರೇಷನ್ ಕೊಟ್ಟಿದೆ ಬಿಜೆಪಿ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಮುಂದಿದೆ. 30 ಸಾವಿರ ಕೋಟಿ ರೂ ಯೋಜನೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ ಎಂದರು.
ಇದನ್ನೂ ಓದಿ: ಈ ಕಾರ್ಯ ಮಾಡಿದ್ರೆ ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ರಾಜ ಹುಲಿ ಬಿರುದು ಕೊಡ್ತಾರಂತೆ!
ಭದ್ರಾ ಮೇಲ್ಡಂಡೆ ಯೋಜನೆಗೆ 13 ಸಾವಿರ ಕೋಟಿ ಅನುದಾನ: ಸಿಎಂ ಬೊಮ್ಮಾಯಿ
ಜನಸಂಕಲ್ಪ ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ ಮಾತನಾಡಿ, ಮೋದಿಯವರು ರಾಜ್ಯಕ್ಕೆ ಹಲವು ಯೋಜನೆಗಳನ್ನು ಕೊಟ್ಟಿದ್ದಾರೆ. ರೈತ ಸಮ್ಮಾನ್ ಯೋಜನೆಯಡಿ ನೇರವಾಗಿ ರೈತರ ಖಾತೆಗಳಿಗೆ ಸರ್ಕಾರ ಹಣ ಜಮೆ ಮಾಡಿದೆ. ಭದ್ರಾ ಮೇಲ್ಡಂಡೆ ಯೋಜನೆಗೆ ರಾಷ್ಟ್ರೀಯ ಸ್ಥಾನಮಾನ ಸಿಕ್ಕಿದೆ. ಯೋಜನೆಗೆ 13 ಸಾವಿರ ಕೋಟಿ ಅನುದಾನ ಬಿಡುಗಡೆ ಆಗಲಿದೆ. ತುಮಕೂರು-ದಾವಣಗೆರೆ ರೈಲ್ವೆ ಯೋಜನೆ ಕೊಟ್ಟಿದ್ದು ಬಿಜೆಪಿ. ಸುಮಾರು 6 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನೀಡಿದ್ದಾರೆ. ಅದೇನು ಮನಮೋಹನ್ ಸಿಂಗ್ ಕೊಟ್ಟಿದ್ರಾ. ಮುಖ್ಯಮಂತ್ರಿ ಆಗಿದ್ದಾಗ ಸಿದ್ದರಾಮಯ್ಯ ಇದೆಲ್ಲಾ ಮಾಡಲಿಲ್ಲ ಎಂದು ವಾಗ್ದಾಳಿ ಮಾಡಿದರು.
ಸಿದ್ದರಾಮಯ್ಯ ವಿರುದ್ಧ ಸಿಎಂ ಬೊಮ್ಮಾಯಿ ತೀವ್ರ ವಾಗ್ದಾಳಿ
ಸಿದ್ದರಾಮಯ್ಯ ವಿರುದ್ಧ ಸಿಎಂ ಬೊಮ್ಮಾಯಿ ತೀವ್ರ ವಾಗ್ದಾಳಿ ಮಾಡಿದ್ದು, ಸೋನಿಯಾ ಗಾಂಧಿ ಮನೆ ಬಾಗಿಲು ಕಾದು ವಾಪಸ್ ಬರ್ತಿದ್ರಿ. ಸಂಸದ ರಾಹುಲ್ ಗಾಂಧಿ ಮುಂದೆ ನೀವು ಕೈ ಕಟ್ಟಿ ನಿಲ್ತೀರಾ? ನಿಮ್ಮಿಂದ ಪಾಠ ಕಲಿಯುವ ಅವಶ್ಯಕತೆ ನಮಗಿಲ್ಲ. ರಾಜ್ಯದಲ್ಲಿ ಯಾರನ್ನ ಹುಲಿ ಮಾಡಬೇಕು, ಇಲಿ ಮಾಡಬೇಕು ಕರ್ನಾಟಕದ 7 ಕೋಟಿ ಕನ್ನಡಿಗರ ಕೈಯಲ್ಲಿದೆ. ತಮ್ಮಷ್ಟಕ್ಕೆ ತಾವೇ ಹುಲಿ, ಉಳಿದವರು ನಾಯಿ, ನರಿ ಅಂತಾರೆ. ಅಂತಹವರಿಗೆ ರಾಜ್ಯದ ಜನರು ಸೂಕ್ತ ಉತ್ತರ ನೀಡಲಿದ್ದಾರೆ. ಇದೇ ಮಾತುಗಳಿಂದ ಮುಂದೆ ನಿಮಗೆ ಜನ ತೀರ್ಮಾನಿಸ್ತಾರೆ. ಜೆ.ಪಿ.ನಡ್ಡಾ ಕಾಲ್ಗುಣದಿಂದ ರಾಜ್ಯದಲ್ಲಿ ಕಮಲ ಅರಳಲಿದೆ. ಶಿರಾ ಅಂದರೇ ಸಿಹಿ, ಇಲ್ಲಿಂದಲೇ ರಾಜ್ಯಕ್ಕೆ ಸಿಹಿ ಹಂಚೋಣ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.