ತುಮಕೂರು ಬಸ್ ಅಪಘಾತದಲ್ಲಿ ಮೃತಪಟ್ಟವರಿಗೆ ರಾಜ್ಯ ಸರ್ಕಾರ 25 ಲಕ್ಷ ರೂ. ಪರಿಹಾರ ನೀಡಬೇಕು: ಹೆಚ್​ಡಿ ಕುಮಾರಸ್ವಾಮಿ

| Updated By: preethi shettigar

Updated on: Mar 20, 2022 | 4:25 PM

ಮುಖ್ಯಮಂತ್ರಿಗಳು ಈ ದುರ್ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ದೊಡ್ಡ ಮೊತ್ತದ ಪರಿಹಾರ ಘೋಷಣೆ ಮಾಡಬೇಕು. ಮೃತ ಕುಟುಂಬಗಳ ಜೀವನೋಪಾಯಕ್ಕೆ ನೆರವು ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.​ಡಿ. ಕುಮಾರಸ್ವಾಮಿ ಟ್ವೀಟ್​ ಮೂಲಕ ತಿಳಿಸಿದ್ದಾರೆ.

ತುಮಕೂರು ಬಸ್ ಅಪಘಾತದಲ್ಲಿ ಮೃತಪಟ್ಟವರಿಗೆ ರಾಜ್ಯ ಸರ್ಕಾರ 25 ಲಕ್ಷ ರೂ. ಪರಿಹಾರ ನೀಡಬೇಕು: ಹೆಚ್​ಡಿ ಕುಮಾರಸ್ವಾಮಿ
ಹೆಚ್​ಡಿ ಕುಮಾರಸ್ವಾಮಿ
Follow us on

ತುಮಕೂರು: ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆ ಬಳಿ ಬಸ್‌ ಚಾಲಕನ ನಿರ್ಲಕ್ಷ್ಯದಿಂದ ಸಂಭವಿಸಿದ ಖಾಸಗಿ ಬಸ್‌ ದುರಂತದಲ್ಲಿ ಅಸುನೀಗಿದವರಿಗೆ ರಾಜ್ಯ ಸರಕಾರ(State government) ಕನಿಷ್ಠ 25 ಲಕ್ಷ ರೂ. ಪರಿಹಾರ ನೀಡಬೇಕು. 5 ಲಕ್ಷ ರೂ. ಕೊಟ್ಟು ಕೈತೊಳೆದುಕೊಳ್ಳುವುದು ಸರಿಯಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಅವರನ್ನು ಒತ್ತಾಯ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.​ಡಿ. ಕುಮಾರಸ್ವಾಮಿ(HD Kumaraswamy) ಸರಣಿ ಟ್ವೀಟ್​ ಮಾಡಿದ್ದಾರೆ.

ಈ ದುರಂತಕ್ಕೆ ಸಾರಿಗೆ ಇಲಾಖೆಯ ಕರ್ತವ್ಯಲೋಪ ಮತ್ತು ದಿವ್ಯನಿರ್ಲಕ್ಷ್ಯವೇ ಕಾರಣ. ಎಷ್ಟೋ ಕನಸುಗಳನ್ನು ಕಟ್ಟಿಕೊಂಡಿದ್ದ ವಿದ್ಯಾರ್ಥಿಗಳ ಜೀವಗಳು ಬಲಿಯಾಗಿವೆ. ಮುಖ್ಯಮಂತ್ರಿಗಳು ಈ ದುರ್ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ದೊಡ್ಡ ಮೊತ್ತದ ಪರಿಹಾರ ಘೋಷಣೆ ಮಾಡಬೇಕು. ಮೃತ ಕುಟುಂಬಗಳ ಜೀವನೋಪಾಯಕ್ಕೆ ನೆರವು ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.​ಡಿ. ಕುಮಾರಸ್ವಾಮಿ ಟ್ವೀಟ್​ ಮೂಲಕ ತಿಳಿಸಿದ್ದಾರೆ.

ಗಾಯಾಳುಗಳನ್ನು ಬೆಂಗಳೂರು, ತುಮಕೂರು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅವರಿಗೆ ಅಲ್ಲಿ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ವರದಿಗಳು ಬೆಳಗ್ಗೆಯಿಂದಲೂ ಮಾಧ್ಯಮಗಳಲ್ಲಿ ಬರುತ್ತಿವೆ. ಸರಕಾರ ಕೂಡಲೇ ತುರ್ತು ಗಮನ ಹರಿಸಿ, ಓರ್ವ ಉಸ್ತುವಾರಿ ಅಧಿಕಾರಿಯನ್ನು ನಿಯೋಜಿಸಬೇಕು. ಎಲ್ಲರಿಗೂ ಸಂಪೂರ್ಣವಾಗಿ ಉಚಿತ ಚಿಕಿತ್ಸೆ ಕೊಡಿಸಬೇಕು ಎಂದು ಹೆಚ್.​ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಬಸ್ಸಿನೊಳಗೆ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದರು. ಟಾಪ್‌ ತುಂಬಾ ಜನ ಕೂತಿದ್ದರು. ಮಕ್ಕಳು, ಮಹಿಳೆಯರು, ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಜನ ಹೆಚ್ಚಿದ್ದರೂ ಈ ಮಾರ್ಗದಲ್ಲಿ ಬಸ್‌ಗಳ ಸಂಚಾರ ಸರಿಯಾಗಿಲ್ಲ, ಏಕೆ? ಅಧಿಕಾರಿಗಳ ಉಪೇಕ್ಷೆ ಖಂಡನೀಯ ಎಂದು ಹೆಚ್.​ಡಿ. ಕುಮಾರಸ್ವಾಮಿ ಟ್ವೀಟ್​ ಮೂಲಕ ತಿಳಿಸಿದ್ದಾರೆ.

ಪಾವಗಡ ಗಡಿ ತಾಲೂಕು. ಹಿಂದುಳಿದ ಪ್ರದೇಶವೂ ಹೌದು. ಈ ಭಾಗದ ಜನರು ಸೂಕ್ತ ಸಾರಿಗೆ ಸೌಕರ್ಯ ಇಲ್ಲದೆ ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ತಾಲೂಕಿನ ಶೇ.25ರಷ್ಟು ಗ್ರಾಮಗಳಿಗೆ ಬಸ್‌ ಸಂಪರ್ಕವೇ ಇಲ್ಲ ಎನ್ನುವ ಮಾಹಿತಿ ಇದೆ. ಸರಕಾರ ಕೂಡಲೇ ಈ ಎಲ್ಲ ಗ್ರಾಮಗಳಿಗೂ ಕೆಎಸ್‌ಆರ್‌ಟಿಸಿ ಬಸ್‌ ಸಂಪರ್ಕ ಕಲ್ಪಿಸಬೇಕು ಎಂದು ಹೆಚ್.​ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಈ ದುರಂತಕ್ಕೆ ಆರ್‌ಟಿಓ ಅಧಿಕಾರಿಗಳ ನಿರ್ಲಕ್ಷ್ಯದ ಜತೆಗೆ ಪಾವಗಡದಲ್ಲಿ ಬಸ್‌ ಡಿಪೋ ಇದ್ದರೂ ಸೂಕ್ತ ಬಸ್‌ ವ್ಯವಸ್ಥೆ ಮಾಡದ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಉಪೇಕ್ಷೆಯೂ ಎದ್ದು ಕಾಣುತ್ತದೆ. ಸರಕಾರ ಸೂಕ್ತ ತನಿಖೆ ನಡೆಸಿ ಕರ್ತವ್ಯ ಲೋಪ ಎಸಗಿರುವ ಎಲ್ಲ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೆಚ್​ಡಿಕೆ ಟ್ವೀಟ್​ ಮಾಡಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಹೆಚ್​ಡಿಕೆ ಕಿಡಿ

ಪಳವಳ್ಳಿ ಕಟ್ಟೆ ಬಳಿ ಖಾಸಗಿ ಬಸ್ ಪಲ್ಟಿಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಹೆಚ್​ಡಿಕೆ ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಇಂತಹ ದುರ್ಘಟನೆ ಸಂಭವಿಸಿದ್ರೂ ನಿನ್ನೆ ಸಿನಿಮಾ ಬಿಡುಗಡೆ ಕಾರ್ಯಕ್ರಮದಲ್ಲಿ ಸಿಎಂ ಬ್ಯುಸಿಯಾಗಿದ್ದಾರೆ. ಅದೇನೋ RRR ಸಿನಿಮಾದ ಪ್ರಮೋಷನ್​ನಲ್ಲಿ ಬ್ಯುಸಿ ಇದ್ರು. 4 ಗಂಟೆ ಕಾಲ ದೊಡ್ಡ ಮಟ್ಟದ ಸಮಯವನ್ನ ‌ಕೊಟ್ಟಿದ್ದರು. ಸಿಎಂ ಇಂಥ ಕಾರ್ಯಕ್ರಮಗಳಿಗೆ ಪ್ರಾಮುಖ್ಯತೆ ಕೊಟ್ಟಿದ್ದಾರೆ. ನಿನ್ನೆ ಸಿಎಂ ಬಸವರಾಜ ಬೊಮ್ಮಾಯಿ ಭಾಷಣವನ್ನ ನೋಡಿದೆ. ಅವರು ಯಾರಿಗೆ ಡೆಡಿಕೇಟ್ ಮಾಡಬೇಕು ಅಂತ ಹೇಳ್ತಿದ್ದರು. ಅವರು ಹೇಳಿದ ಹೋರಾಟಗಾರರ ಹೋರಾಟ ಏನಿತ್ತೋ ಎಂದು ತುಮಕೂರಿನಲ್ಲಿ ಸಿಎಂ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ.

 

ಇದನ್ನೂ ಓದಿ:

ಅವ್ಯವಸ್ಥೆಯ ಆಗರವಾದ ತುಮಕೂರು ಜಿಲ್ಲಾಸ್ಪತ್ರೆ; ಬೆಡ್​ ಸಿಗದೆ ನೆಲದ ಮೇಲೆ ನರಳಾಡಿದ ಬಾಣಂತಿ

Pavagada Bus Accident: ಟಾಪ್​ನಲ್ಲಿ ಜನರನ್ನು ಕೂರಿಸಿಕೊಂಡು ಬಂದ ಬಸ್; ಅಪಘಾತಕ್ಕೂ ಮೊದಲ ವಿಡಿಯೋ ಇಲ್ಲಿದೆ

Published On - 2:51 pm, Sun, 20 March 22