ತುಮಕೂರು ಸಮೀಪ ಹೆದ್ದಾರಿ ಮೇಲೆ ಹರಿಯುತ್ತಿದೆ ನೀರು: ಬೆಂಗಳೂರು-ಪುಣೆ ಮಾರ್ಗದಲ್ಲಿ 10 ಕಿಮೀ ಟ್ರಾಫಿಕ್ ಜಾಮ್

ಈ ಹೆದ್ದಾರಿಯು ರಾಜಧಾನಿ ಬೆಂಗಳೂರಿನೊಂದಿಗೆ ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಕಲ್ಯಾಣ ಕರ್ನಾಟಕ ಮತ್ತು ಮುಂಬೈ ಕರ್ನಾಟಕದ ಬಹುತೇಕ ಜಿಲ್ಲಾ ಕೇಂದ್ರಗಳನ್ನು ಸಂಪರ್ಕಿಸುತ್ತದೆ.

ತುಮಕೂರು ಸಮೀಪ ಹೆದ್ದಾರಿ ಮೇಲೆ ಹರಿಯುತ್ತಿದೆ ನೀರು: ಬೆಂಗಳೂರು-ಪುಣೆ ಮಾರ್ಗದಲ್ಲಿ 10 ಕಿಮೀ ಟ್ರಾಫಿಕ್ ಜಾಮ್
ತುಮಕೂರು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಲುಗಟ್ಟಿರುವ ವಾಹನಗಳು
Edited By:

Updated on: Oct 20, 2022 | 10:59 AM

ತುಮಕೂರು: ತಾಲ್ಲೂಕಿನ ಹೆಬ್ಬಾಕ ಕೆರೆಯ ಕೋಡಿ ನೀರು ರಾಷ್ಟ್ರೀಯ ಹೆದ್ದಾರಿ 48ಕ್ಕೆ ನುಗ್ಗಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ. ಊರುಕೇರಿ ಗ್ರಾಮದ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಕೋಡಿ ನೀರು ಹರಿಯುತ್ತಿದೆ. ರಸ್ತೆ ಮೇಲೆ ನೀರು ಹರಿಯುತ್ತಿರುವುದರಿಂದ ತುಮಕೂರು-ಬೆಂಗಳೂರು ಮಾರ್ಗದ ಕ್ಯಾತ್ಸಂದ್ರದಿಂದ ತುಮಕೂರು-ಶಿರಾ ಮಾರ್ಗದ ಕೋರಾ ಗ್ರಾಮದವರೆಗೂ ವಾಹನಗಳು ಸಾಲುಗಟ್ಟಿ ನಿಂತಿವೆ. ಸುಮಾರು 10 ಕಿಮೀ ಉದ್ದಕ್ಕೆ ವಾಹನ ಸಾಲುಗಟ್ಟಿರುವುದರಿಂದ ಪ್ರಯಾಣಿಕರು ಪರದಾಡುತ್ತಿದ್ದಾರೆ.

ಈ ಹೆದ್ದಾರಿಯು ರಾಜಧಾನಿ ಬೆಂಗಳೂರಿನೊಂದಿಗೆ ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಕಲ್ಯಾಣ ಕರ್ನಾಟಕ ಮತ್ತು ಮುಂಬೈ ಕರ್ನಾಟಕದ ಬಹುತೇಕ ಜಿಲ್ಲಾ ಕೇಂದ್ರಗಳನ್ನು ಸಂಪರ್ಕಿಸುತ್ತದೆ. ಅಷ್ಟೇ ಅಲ್ಲದೆ, ಬೆಳಗಾವಿ-ಪುಣೆ ಮಾರ್ಗವಾಗಿ ಉತ್ತರ ಭಾರತದೆಡೆಗೆ ತೆರಳುವ ವಾಹನಗಳು ಸಹ ಇದೇ ಮಾರ್ಗವನ್ನು ಬಳಸುತ್ತವೆ. ಟ್ರಾಫಿಕ್ ಜಾಮ್​ನಲ್ಲಿ ಸಿಲುಕಿ ಚಾಲಕರು ಮತ್ತು ವಾಹನ ಸವಾರರು ಪರದಾಡುತ್ತಿದ್ದಾರೆ. ಸಂಚಾರ ವ್ಯವಸ್ಥೆಯನ್ನು ಮತ್ತೆ ತಹಬದಿಗೆ ತರಲು ಪೊಲೀಸರು ಹರಸಾಹಸ ಮಾಡುತ್ತಿದ್ದಾರೆ. ಊರುಕೆರೆ-ಹೆಬ್ಬಾಕ ನಡುವಣ ರಸ್ತೆ ಸಂಪರ್ಕ ಕಡಿತಗೊಂಡಿದೆ. ಗ್ರಾಮದ ಆಂಜನೇಯ ದೇಗುಲ, ಕೆರೆ ಅಂಚಿನ‌ ಮನೆಗಳು ಮುಳುಗಿವೆ. ಹೆಬ್ಬಾಕ, ನರಸಾಪುರ, ಊರುಕೆರೆ ಭಾಗದ ಬಹುತೇಕ ಅಡಿಕೆ ಹಾಗೂ ತೆಂಗು ತೋಟಗಳು ಜಲಾವೃತಗೊಂಡಿವೆ.

ಕೆರೆಗೆ ಬಿದ್ದ ಕಾರು

ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಲಕ್ಕೂರು ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕೆರೆಗೆ ಉರುಳಿರುವ ಘಟನೆ ಗುರುವಾರ ಮುಂಜಾನೆ ನಡೆದಿದೆ. ಕಾರಿನಲ್ಲಿದ್ದ ವ್ಯಕ್ತಿಯೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದ ದಳದ ಸಿಬ್ಬಂದಿ ಕೆರೆಗೆ ಬಿದ್ದ ಕಾರನ್ನು ಹೊರ ತೆಗೆದಿದ್ದಾರೆ. ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನದಿಯಲ್ಲಿ ಕಾರು ಪತ್ತೆ, ಮಾಲೀಕರಿಗಾಗಿ ಹುಡುಕಾಟ

ರಾಮನಗರ: ಕನಕಪುರ ತಾಲ್ಲೂಕಿನ ತಾಮಸಂದ್ರ ಬಳಿ ಅರ್ಕಾವತಿ‌ ನದಿಯಲ್ಲಿ ಕಾರು ತೇಲಿಬಂದಿದೆ. ನದಿಯಲ್ಲಿ ತೇಲಿ ಹೋಗುತ್ತಿದ್ದ ಕಾರ್ ಗಮನಿಸಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಕನಕಪುರ ಗ್ರಾಮಾಂತರ ಪೊಲೀಸರು ಕ್ರೇನ್ ಮೂಲಕ ಕಾರು ಮೇಲೆತ್ತಿದರು. ಇದೀಗ ಕಾರಿನ ಮಾಲೀಕನ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

ಮಳೆಯಿಂದ ಹೂವಿನ ಬೆಳೆ ನಾಶ

ನಿರಂತರ ಮಳೆ ಹಾಗೂ ಮೋಡಕವಿದ ವಾತಾವರಣದ ಹಿನ್ನೆಲೆಯಲ್ಲಿ ಹೂವಿನ ಬೆಳೆ ಹಾಳಾಗುತ್ತಿದೆ. ಇದರ ಜೊತೆಗೆ ದಸರಾ ನಂತರ ಯಾವುದೇ ಮುಖ್ಯ ಹಬ್ಬಗಳು ಇಲ್ಲದ ಕಾರಣ ಹೂವಿನ ಬೆಲೆ ಕಡಿಮೆಯಾಗಿದೆ. ಹೂವಿಗೆ ಬೆಲೆ ಇಲ್ಲದ ಕಾರಣ ರೈತರು ಕಂಗಾಲಾಗಿದ್ದಾರೆ. ಕೋಲಾರದ ಹೊರವಲಯದ ರಸ್ತೆಬದಿಯಲ್ಲಿ ರೈತರು ಹೂ ಸುರಿದಿದ್ದಾರೆ.

Published On - 10:08 am, Thu, 20 October 22