ತುಮಕೂರಿನಲ್ಲಿ 19 ನವಿಲುಗಳ ನಿಗೂಢ ಸಾವು; ಸಾವಿನ ಸುತ್ತ ಅನುಮಾನಗಳ ಹುತ್ತ!

ಇತ್ತೀಚೆಗೆ ಚಾಮರಾಜನಗರದ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳ ಹತ್ಯೆ ಪ್ರಕರಣ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಬಳಿಕ ಅದೇ ಜಿಲ್ಲೆಯಲ್ಲಿ ಬರೋಬ್ಬರಿ 18 ಮಂಗಗಳ ಮಾರಣಹೋಮ ನಡೆದಿತ್ತು. ಸದ್ಯ ಇವೆರಡು ಘಟನೆಗಳನ್ನು ಮಾಸುವ ಮುನ್ನವೇ ಇತ್ತ ತುಮಕೂರು ಜಿಲ್ಲೆಯಲ್ಲಿ 19 ನವಿಲುಗಳು ನಿಗೂಢ ಸಾವನ್ನಪ್ಪಿವೆ.

ತುಮಕೂರಿನಲ್ಲಿ 19 ನವಿಲುಗಳ ನಿಗೂಢ ಸಾವು; ಸಾವಿನ ಸುತ್ತ ಅನುಮಾನಗಳ ಹುತ್ತ!
ನವಿಲುಗಳ ನಿಗೂಢ ಸಾವು
Edited By:

Updated on: Aug 04, 2025 | 10:46 AM

ತುಮಕೂರು, ಆಗಸ್ಟ್​ 04: ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ-ಕೊಡಸೋಗೆ ರಸ್ತೆಯಲ್ಲಿ 18 ಕೋತಿಗಳ (monkey) ಮಾರಣಹೋಮ ನಡೆದಿತ್ತು. ಆ ಪ್ರಕರಣ ಮಾಸುವ ಮುನ್ನವೇ ಇತ್ತ ನಗರದಲ್ಲಿ ರಾಷ್ಟ್ರಪಕ್ಷಿ ನವಿಲುಗಳ (Peacock) ಸಾವು ಸಂಭವಿಸಿದೆ. ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿಯ ಹನುಮಂತಪುರದಲ್ಲಿ 19 ನವಿಲುಗಳು ನಿಗೂಢವಾಗಿ ಸಾವನ್ನಪ್ಪಿವೆ. ಸದ್ಯ ಎಫ್ಎಸ್ಎಲ್​ಗೆ ರವಾನೆ ಮಾಡಲಾಗಿದ್ದು, ವರದಿ ಬಂದ ಬಳಿಕ ಸಾವಿಗೆ ಕಾರಣವೇನು ಎಂಬುವುದು ತಿಳಿಯಲಿದೆ.

ಮಧುಗಿರಿ ತಾಲೂಕಿನ ಮಿಡಿಗೇಶಿಯ ಹನುಮಂತಪುರ ಗ್ರಾಮದ ಕೆರೆ ಕೋಡಿ ನೀರು ಹರಿಯುವ ಪಕ್ಕದ ಜಮೀನುಗಳಲ್ಲಿ 5 ಗಂಡು ಹಾಗೂ 14 ಹೆಣ್ಣು ಸೇರಿ ಒಟ್ಟು 19 ನವಿಲುಗಳು ನಿಗೂಢವಾಗಿ ಸಾವನ್ನಪ್ಪಿರುವುದು ಪತ್ತೆ ಆಗಿದೆ. ಬೆಳಗ್ಗೆ ರೈತರು ಜಮೀನಿಗೆ ಬಂದಾಗ ನವಿಲುಗಳ ಮೃತದೇಹಗಳು ಪತ್ತೆ ಆಗಿವೆ. ಆಗಸ್ಟ್ 1ರ ರಾತ್ರಿ ನವಿಲುಗಳು ಮೃತಪಟ್ಟ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ನವಿಲುಗಳ ಸಾವಿನ ಬಗ್ಗೆ ಹಲವು ಶಂಕೆ  

ಇನ್ನು ನವಿಲುಗಳ ಸಾವಿಗೆ ನಿಖರ ಮಾಹಿತಿ ತಿಳಿದುಬಂದಿಲ್ಲ. ಕ್ರಿಮಿನಾಶಕ ಸಿಂಪಡಣೆ ಮಾಡಿರುವ ಬೆಳೆಗಳನ್ನು ಸೇವಿಸಿ ಮೃತಪಟ್ಟಿರಬಹುದು ಅಥವಾ ಯಾರಾದರೂ ಏನಾದರೂ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ
ಚಾಮರಾಜನಗರದಲ್ಲಿ 5 ಹುಲಿಗಳ ಸಾವು ಕೇಸ್​: ಕ್ರಿಮಿನಾಶಕ ಬಳಸಿರುವುದು ದೃಢ
ಹುಲಿ, ಮಂಗ ಆಯ್ತು ಚಿರತೆ ಸರದಿ: ಚಾಮರಾಜನಗರ ಕೊತ್ತಲವಾಡಿಲಿ ಚಿರತೆ ಶವ ಪತ್ತೆ
5 ಹುಲಿಗಳ ಸಾವು ಪ್ರಕರಣ: ಪ್ರಾಥಮಿಕ ವರದಿಯಲ್ಲಿ ಸ್ಫೋಟಕ ಅಂಶ ಬಯಲಿಗೆ
ಚಾಮರಾಜನಗರ: ಕೊಡಸೋಗೆ ರಸ್ತೆಯಲ್ಲಿ 18 ಕೋತಿಗಳ ಶವ ಪತ್ತೆ

ಇದನ್ನೂ ಓದಿ: ಚಾಮರಾಜನಗರದಲ್ಲಿ 5 ಹುಲಿಗಳ ಸಾವು ಕೇಸ್​: ಕ್ರಿಮಿನಾಶಕ ಬಳಸಿರುವುದು ವರದಿಯಲ್ಲಿ ದೃಢ

ಇನ್ನು ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ನ್ಯಾಯಾಧೀಶರ ಅನುಮತಿ ಬಳಿಕ ಎಫ್ಎಸ್ಎಲ್​ಗೆ ರವಾನೆ ಮಾಡಲಾಗಿದೆ. ಆ ಮೂಲಕ ನವಿಲುಗಳ ಸಾವಿನ ಕಾರಣದ ವರದಿ ಪಡೆಯಲು ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ.

ಚಾಮರಾಜನಗರದಲ್ಲಿ 5 ಹುಲಿಗಳ ಸಾವು

ಇತ್ತೀಚೆಗೆ ಚಾಮರಾಜನಗರದ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳ ಹತ್ಯೆ ಪ್ರಕರಣ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಹುಲಿಗಳನ್ನ ಕೊಂದ ಮೂವರನ್ನು ಪೊಲೀಸರು ಬಂಧಿಸಿದ್ದರು. ಅಷ್ಟೇ ಅಲ್ಲದೆ ಹುಲಿಗಳ ಹತ್ಯೆಗೆ ‘ಕಾರ್ಬೋಫ್ಯುರಾನ್​ ಕೀಟನಾಶಕ’ ಬಳಕೆ ಮಾಡಿರುವುದು ವರದಿಯಲ್ಲಿ ದೃಢ ಪಟ್ಟಿತ್ತು.

ಬರೋಬ್ಬರಿ 18 ಮಂಗಗಳ ಮಾರಣಹೋಮ

ಐದು ಹುಲಿಗಳ ಹತ್ಯೆ ಪ್ರಕರಣ ಮಾಸುವ ಮುನ್ನವೇ ಗಡಿನಾಡು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ ಗ್ರಾಮದ ಹೊರವಲಯದಲ್ಲಿ ಬರೋಬ್ಭರಿ 18 ಕೋತಿಗಳ ಶವ ಪತ್ತೆ ಆಗಿತ್ತು. ಕಿಡಿಗೇಡಿಗಳು ವಿಷ ಹಾಕಿದ್ದರು. ವಿಷ ಸೇವಿಸಿ ನಿತ್ರಾಣವಾದ ವಾನರ ಸೇನೆಯನ್ನ ಗೋಣಿ ಚೀಲದಲ್ಲಿ ತುಂಬಿಕೊಂಡು ಬಂದು ಕಂದೇಗಾಲ ಗ್ರಾಮದ ಹೊರ ವಲಯದಲ್ಲಿ ಬಿಸಾಡಿ ಹೋಗಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:45 am, Mon, 4 August 25