ತುಮಕೂರು-ಬೆಂಗಳೂರು ಸಂಚರಿಸುವವರಿಗೆ ಗುಡ್ ನ್ಯೂಸ್
ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ನಿವಾರಿಸಲು 10 ಪಥದ ಹೆದ್ದಾರಿ ನಿರ್ಮಾಣ ಕಾರ್ಯ ಆರಂಭವಾಗಿದೆ. ನೆಲಮಂಗಲ ಮತ್ತು ತುಮಕೂರು ನಡುವೆ ನಡೆಯುತ್ತಿರುವ ಈ ವಿಸ್ತರಣೆಯಿಂದ ಪ್ರಯಾಣ ಸಮಯ 30 ನಿಮಿಷಗಳಿಗೆ ಇಳಿಯಲಿದೆ. 2026ರೊಳಗೆ ಪೂರ್ಣಗೊಳ್ಳುವ ಈ ಯೋಜನೆಯಿಂದ ವಾಹನ ದಟ್ಟಣೆ ಕಡಿಮೆಯಾಗಲಿದೆ ಮತ್ತು ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ತುಮಕೂರು, ಆಗಸ್ಟ್ 20: ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ (Tumakuru-Bengaluru National Highway) ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಈ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸಂಚಾರ ದಟ್ಟಣೆಗೆ ಮುಕ್ತಿ ನೀಡಲು ದಶಪಥ ರಸ್ತೆ (10 lane high way) ನಿರ್ಮಾಣದ ಕಾಮಗಾರಿ ಆರಂಭವಾಗಿದೆ. ಸದ್ಯ, ನಾಲ್ಕು ಪಥದ ಹೆದ್ದಾರಿ ಇದಾಗಿದ್ದು, ಆರು ಪಥಕ್ಕೆ ವಿಸ್ತರಣೆಯಾಗುತ್ತಿದೆ. ಈ ವಿಸ್ತರಣೆಯು ನೆಲಮಂಗಲ ಮತ್ತು ತುಮಕೂರು ನಡುವೆ ನಡೆಯುತ್ತಿದೆ.
ವಾಹನದಟ್ಟಣೆ ಕಡಿಮೆ ಮಾಡಿ ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರ ಹೊಸ ಮೈಸೂರು-ಬೆಂಗಳೂರು ಹೆದ್ದಾರಿ ಮಾದರಿಯಲ್ಲೇ ತುಮಕೂರು-ಬೆಂಗಳೂರು ಹೆದ್ದಾರಿ ನಿರ್ಮಾಣ ಮಾಡುತ್ತಿದೆ. ಈಗಾಗಲೇ ದಶಪಥ ಹೆದ್ದಾರಿ ಕಾಮಗಾರಿ ಆರಂಭಗೊಂಡಿದೆ. ಹೆದ್ದಾರಿಯಲ್ಲಿ ಆರು ಪಥಗಳು ನಿರ್ಮಾಣ ಹಾಗೂ ಎರಡೂ ಬದಿಗಳಲ್ಲಿ ಸೇವಾ ರಸ್ತೆ ನಿರ್ಮಾಣ ಮಾಡಲಾಗುತ್ತದೆ. 2026ರ ಒಳಗೆ ದಶಪಥ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸುವ ಉದ್ದೇಶ ಇದೆ. ಹೆದ್ದಾರಿ ನಿರ್ಮಾಣವಾದ ಬಳಿಕ ತುಮಕೂರಿನಿಂದ ಬೆಂಗಳೂರಿಗೆ ಕೇವಲ 30 ನಿಮಿಷದಲ್ಲಿ ಪ್ರಯಾಣ ಮಾಡಬಹುದಾಗಿದೆ.
ರಾಜ್ಯದಲ್ಲಿ ಪ್ರಗತಿಯಲ್ಲಿರುವ ಹೆದ್ದಾರಿ ಕಾಮಗಾರಿಗಳು
ತಮಿಳುನಾಡು ಗಡಿಯಿಂದ ಹೊಸಕೋಟೆ ವಿಭಾಗ, ಬೆಳಗಾವಿ-ಸಂಕೇಶ್ವರ್ ಬೈಪಾಸ್, ಹುಬ್ಬಳ್ಳಿ-ಧಾರವಾಡ ಬೈಪಾಸ್ 6 ಪಥ, ಖಾನಾಪುರ-ಗೋವಾ ಗಡಿ 2 ಪಥ, ಅಕ್ಕಲಕೋಟೆ-ತೆಲಂಗಾಣ ಗಡಿ, ಚನ್ನರಾಯಪಟ್ಟಣ- ಹಾಸನ ಬೈಪಾಸ್ 4 ಪಥ, ಅದ್ದಹೊಳೆಯಿಂದ ಬಂಟ್ವಾಳ ಕ್ರಾಸ್, ಸಣ್ಣೂರು – ಬಿಕನಕಟ್ಟೆ,ಕುಳೂರು ಬಳಿ ಫಲ್ಗುಣಿ ನದಿ ಸೇತುವೆ 6 ಪಥ, ನೆಲಮಂಗಲ – ತುಮಕೂರು 6 ಪಥ, ತುಮಕೂರು – ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ, ಹೊಸಪೇಟೆ – ಬಳ್ಳಾರಿ, ಬಳ್ಳಾರಿ ಬೈಪಾಸ್‌ನ ಪೇವ್ಡ್ ಶೋಲ್ಡರ್ 4 ಪಥ, ಹಾವೇರಿ – ಯಕಂಬಿ – ಶಿರಸಿ ರಸ್ತೆ, ಶಿರಸಿ – ಕುಮಟಾ – ಬೆಳಕೇರಿ ಬಂದರು, ಬೆಳಗಾವಿ – ಹುನಗುಂದ – ರಾಯಚೂರು ಮತ್ತು ಮೈಸೂರು – ಮಡಿಕೇರಿ ರಸ್ತೆ.
ಇದನ್ನೂ ಓದಿ: ಹೊಸೂರು ರಸ್ತೆ ಟ್ರಾಫಿಕ್ಗೆ ಬಿಗ್ ರಿಲೀಫ್ ನೀಡಿದ ಮೆಟ್ರೋ ಯೆಲ್ಲೋ ಲೈನ್!
ರಾಜ್ಯದಲ್ಲಿ ಪ್ರಸ್ತುತ 27 ಪ್ರಮುಖ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಒಟ್ಟಾರೆಯಾಗಿ 31,749 ಕೋಟಿ ರೂ. ಮೊತ್ತವನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ. 31,749 ಕೋಟಿ ರೂಪಾಯಿಯಲ್ಲಿ ಈವರೆಗೆ 14,455 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅಧಿವೇಶನಕ್ಕೆ ತಿಳಿಸಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:05 pm, Wed, 20 August 25



