ಸತ್ತವರ ಹೆಸರಿನಲ್ಲಿ ಕೋಟ್ಯಂತರ ರೂ. ಅಕ್ರಮ! ತಾಲೂಕು ಪಂಚಾಯಿತಿಯ ಸಿಬ್ಬಂದಿ ಅಮಾನತು

ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕು ಪಂಚಾಯಿತಿಯಲ್ಲಿ ನಿವೃತ್ತ ಹಾಗೂ ಮರಣ ಹೊಂದಿದ ಸರ್ಕಾರಿ ನೌಕರರ ಹೆಸರನ್ನು ದುರುಪಯೋಗಪಡಿಸಿಕೊಂಡು 4.24 ಕೋಟಿ ರೂ. ಅಕ್ರಮ ನಡೆದಿದೆ. ಈ ಹಿನ್ನೆಲೆ ದ್ವಿತೀಯ ದರ್ಜೆ ಸಹಾಯಕಿ ಅಮಾನತುಗೊಂಡಿದ್ದು, ಕಳೆದ ಐದು ವರ್ಷಗಳಿಂದ ನಕಲಿ ಖಾತೆಗಳ ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಹುಕೋಟಿ ವಂಚನೆ ಪ್ರಕರಣ ತನಿಖೆಯಲ್ಲಿದೆ.

ಸತ್ತವರ ಹೆಸರಿನಲ್ಲಿ ಕೋಟ್ಯಂತರ ರೂ. ಅಕ್ರಮ! ತಾಲೂಕು ಪಂಚಾಯಿತಿಯ ಸಿಬ್ಬಂದಿ ಅಮಾನತು
ತಾಲೂಕು ಪಂಚಾಯಿತಿಯ ಸಿಬ್ಬಂದಿ ಸೌಮ್ಯ ಅಮಾನತು
Edited By:

Updated on: Apr 11, 2026 | 12:28 PM

ತುಮಕೂರು, ಏಪ್ರಿಲ್ 11: ನಿವೃತ್ತಿ ಹಾಗೂ ಮರಣ ಹೊಂದಿದ ಸರ್ಕಾರಿ ನೌಕರರ ಹೆಸರನ್ನು ದುರುಪಯೋಗಪಡಿಸಿಕೊಂಡು ಕೋಟ್ಯಂತರ ರೂಪಾಯಿ ಅಕ್ರಮ ನಡೆಸಿದ ಪ್ರಕರಣ ತುಮಕೂರು (Tumkur) ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಮಧುಗಿರಿ ತಾಲ್ಲೂಕು ಪಂಚಾಯಿತಿಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಸೌಮ್ಯ ಅವರನ್ನು ಅಮಾನತು ಮಾಡಲಾಗಿದೆ.

ಆಡಿಟ್ ವೇಳೆ ಸತ್ಯ ಬಯಲು

ಪಂಚಾಯಿತಿ ವ್ಯಾಪ್ತಿಯ ನಿವೃತ್ತಿ ಮತ್ತು ಮರಣ ಹೊಂದಿದ ನೌಕರರ ಗಳಿಕೆ ರಜೆ ನಗದೀಕರಣ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಅನುಮಾನ ಮೊದಲಿಗೆ ಮೂಡಿತ್ತು. ಬಳಿಕ ಬೆಂಗಳೂರಿನ ಕೇಂದ್ರ ಕಚೇರಿಯಿಂದ ನಡೆದ ಆಡಿಟ್ ವೇಳೆ ದಾಖಲೆಗಳಲ್ಲಿ ವ್ಯತ್ಯಾಸ ಪತ್ತೆಯಾಯಿತು. ಈ ಮಾಹಿತಿ ತುಮಕೂರು ಜಿಲ್ಲಾ ಪಂಚಾಯಿತಿ ಸಿಇಒ ಅಶ್ವಿಜಾ ಅವರಿಗೆ ತಲುಪಿದ ನಂತರ ಸಮಗ್ರ ಪರಿಶೀಲನೆ ಕೈಗೊಳ್ಳಲಾಯಿತು.

ತನಿಖೆಯಲ್ಲಿ ನೌಕರರ ರೆಸಿಪಿಯಂಟ್ ಐಡಿ ಮತ್ತು ಹಣ ವರ್ಗಾವಣೆಯಾಗಿರುವ ಬ್ಯಾಂಕ್ ಖಾತೆದಾರರ ಹೆಸರಿನಲ್ಲಿ ವ್ಯತ್ಯಾಸ ಕಂಡುಬಂದಿದೆ. ಒಟ್ಟು 21 ನೌಕರರ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ, 18 ನಿವೃತ್ತ ಹಾಗೂ 3 ಮರಣ ಹೊಂದಿದ ನೌಕರರ ಹೆಸರನ್ನು ಬಳಸಿಕೊಂಡು ಅಕ್ರಮ ನಡೆದಿದೆ ಎಂಬುದು ಬಹಿರಂಗವಾಗಿದೆ.

ಇದನ್ನೂ ಓದಿ ಕೆಜಿಗಟ್ಟಲೆ ಚಿನ್ನ, 14 ಕೋಟಿ ರೂ. ಅಕ್ರಮ ಆಸ್ತಿ: ದಿನಗೂಲಿ ನೌಕರ ಕೋಟಿ ಕುಬೇರನಾಗಿದ್ದೇ ರೋಚಕ!

5 ವರ್ಷಗಳಿಂದ ಅವ್ಯವಹಾರ

ಕಳೆದ ಐದು ವರ್ಷಗಳಲ್ಲಿ 29 ಬ್ಯಾಂಕ್ ಖಾತೆಗಳ ಮೂಲಕ 118 ವ್ಯವಹಾರಗಳ ಮೂಲಕ ಸುಮಾರು 4.24 ಕೋಟಿ ರೂಪಾಯಿ ಸೌಮ್ಯ ಮತ್ತು ಆಕೆಯ ಕುಟುಂಬದ ಐದು ಸದಸ್ಯರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಣವನ್ನು ಹಂತ ಹಂತವಾಗಿ ವರ್ಗಾಯಿಸಿ ಅಂತಿಮವಾಗಿ ಕುಟುಂಬದ ಖಾತೆಗಳಿಗೆ ಸೇರಿಸಲಾಗಿದೆ.

ಈ ಪ್ರಕರಣದಲ್ಲಿ ಇತರ ಅಧಿಕಾರಿಗಳ ಭಾಗವಿರುವ ಸಾಧ್ಯತೆಯೂ ಇದ್ದು, ಅದರ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಸದ್ಯ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us