ತುಮಕೂರು ಜಿಲ್ಲೆಯಲ್ಲಿ ಮುಂದುವರಿದ ಮಳೆ; ಹಳ್ಳದಲ್ಲಿ ಕೊಚ್ಚಿಹೋದ ಶಿಕ್ಷಕ
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚನ್ನನಕುಂಟೆ ಗ್ರಾಮದ ಹಳ್ಳದಲ್ಲಿ ಶಿಕ್ಷಕ ಓರ್ವ ಕೊಚ್ಚಿಹೋಗಿದ್ದಾರೆ.
ತುಮಕೂರು: ಶಿರಾ (Sira) ತಾಲೂಕಿನ ಚನ್ನನಕುಂಟೆ ಗ್ರಾಮದ ಹಳ್ಳದಲ್ಲಿ ಶಿಕ್ಷಕ (Teacher) ಓರ್ವ ಕೊಚ್ಚಿಹೋಗಿದ್ದಾರೆ. ರಾತ್ರಿ ಸುರಿದ ಬಾರಿ ಮಳೆಯಿಂದ ತುಂಬಿ ಹರಿಯುತಿದ್ದ ಚಂದನಕುಂಟೆ ಹಳ್ಳ ತುಂಬಿ ಹರಿಯುತ್ತಿತ್ತು. ದಾವೂದ್ ಪಾಳ್ಯ ಸರ್ಕಾರಿ ಶಾಲೆಯ ಶಿಕ್ಷಕ ಆರಿಫ್‌ವುಲ್ಲಾ ಶಾಲೆ ಮುಗಿಸಿ ಶಿರಾಗೆ ವಾಹನದಲ್ಲಿ ವಾಪಸಾಗುತ್ತಿದ್ದರು. ಈ ವೇಳೆ ಹಳ್ಳ ದಾಟುವಾಗ ಹಳ್ಳದ ನೀರಿನ ರಬಸಕ್ಕೆ ವಾಹನ ಸಮೇತ ಕೊಚ್ಚಿ ಹೋಗಿದ್ದಾರೆ. ಕೊಚ್ಚಿಹೋದ ಆರಿಫ್‌ವುಲ್ಲಾಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಶಿರಾ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಳೆ ನೀರಲ್ಲಿ ಕೊಚ್ಚಿಹೋದ ಕಾರ್ಮಿಕ: ಮಳೆಯಿಂದ ಕಾರ್ಮಿಕ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ, ಕುಣಿಗಲ್ ತಾಲೂಕಿನ ಹುತ್ರಿದುರ್ಗ ಬಳಿಯ ಶಿವಪುರ ಗ್ರಾಮದಲ್ಲಿ ನಡೆದಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಮಾದಾಪುರ ತಾಂಡ್ಯ ಮೂಲದ ನಾಗರಾಜು (28) ಮೃತ ಕಾರ್ಮಿಕ. ನಾಗರಾಜು, ಶಿವಪುರ ಗ್ರಾಮದ ಬಳಿ ಚೆಕ್ ಡ್ಯಾಮ್ ನಿರ್ಮಾಣಕ್ಕಾಗಿ ಕೂಲಿ ಕೆಲಸಕ್ಕೆಂದು ಬಂದಿದ್ದನು.
ಚೆಕ್ ಡ್ಯಾಮ್ ಬಳಿಯಲ್ಲೇ ಶೆಡ್ನಲ್ಲಿ ನಾಗರಾಜು ಇದ್ದನು. ಮಳೆ ಹೆಚ್ಚಾದ ಪರಿಣಾಮ ಶಿವಪುರ, ದೀಪಾಂಬುದಿ ಕೆರೆ ಸಂಪರ್ಕಿಸುವ ನಾಲೆ ತುಂಬಿ ಹರಿಯುತ್ತಿತ್ತು. ಈ ವೇಳೆ ನಾಗರಾಜು ಮೂತ್ರ ವಿಸರ್ಜನೆಗೆ ತೆರಳಿದ್ದನು. ಯುವಕ ಕಾಲು ಜಾರಿ ನಾಲೆಯೊಳಗೆ ಬಿದ್ದು ನೀರಿನ ರಭಸಕ್ಕೆ ಕೊಚ್ವಿ ಹೋಗಿದ್ದಾನೆ. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಟವಾಡಲು ತೆರಳಿದ್ದ ಬಾಲಕರು ನೀರುಪಾಲು
ಚಿಕ್ಕಬಳ್ಳಾಪುರ: ಅವಳಿ ಜವಳಿ ಸೇರಿದಂತೆ ಮೂವರು ಬಾಲಕರು ನೀರುಪಾಲಾಗಿರುವ ಘಟನೆ ಚಿಂತಾಮಣಿ ತಾಲೂಕಿನ ಕೊಡೆಗಂಡ್ಲು ಗ್ರಾಮದಲ್ಲಿ ನಡೆದಿದೆ. ರಾಮ(10) ಲಕ್ಷ್ಮಣ(10) ಹಾಗೂ ಪ್ರಜ್ವಲ್ ಮೃತ ಬಾಲಕರು. ಬಾಲಕರು ಶಾಲೆಯಿಂದ ಮನೆಗೆ ಬಂದ ನಂತರ ಆಟವಾಡಲು ತೆರಳಿದ್ದರು.
ಬಾಲಕರು ಕೆರೆಯಲ್ಲಿ ಈಜಲು ಹೋಗಿ ನೀರು ಪಾಲಾಗಿದ್ದಾರೆ. ಸ್ಥಳಿಯರು ಮೂವರು ಬಾಲಕರ ಶವಗಳನ್ನು ಮೇಲೇತ್ತಿದ್ದಾರೆ. ವೆಂಕಟೇಶ ಎಂಬುವರ ಅವಳಿ ಜವಳಿ ಮಕ್ಕಳು. ಮತ್ತು ಮುನಿರಾಜು ಎಂಬುವರ ಮಗ ಪ್ರಜ್ವಾಲ್ ಸಾವನ್ನಪ್ಪಿದ್ದಾರೆ. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿ ಪ್ರಕರಣ ನಡೆದಿದೆ.
ಮೀನು ಹಿಡಿಯಲು ತೆರಳಿದ್ದ ತಂದೆ, ಮಗ ನೀರುಪಾಲು
ಕಲಬುರಗಿ: ಜಲಾಶಯದಲ್ಲಿ ಮೀನು ಹಿಡಿಯಲು ತೆರಳಿದ್ದ ತಂದೆ, ಮಗ ನೀರುಪಾಲಾಗಿರುವ ಘಟನೆ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿ ಡ್ಯಾಂನಲ್ಲಿ ನಡೆದಿದೆ. ಚಂದ್ರಂಪಳ್ಳಿಯ ರಾಜಪ್ಪ(45), ಮಹೇಶ್(12) ನೀರುಪಾಲಾದವರು. ತಂದೆ, ಮಗನಿಗಾಗಿ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.