ವಾಲ್ಮೀಕಿ ನಿಗಮ ಬಳಿಕ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲೂ ಅಕ್ರಮದ ವಾಸನೆ
ರೈತರಿಗೆ ನೀರಾವರಿ ಸೌಲಭ್ಯಗಳನ್ನು ಒದಗಿಸಲು ಕರ್ನಾಟಕ ಸರ್ಕಾರವು ಗಂಗಾ ಕಲ್ಯಾಣ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ತುಮಕೂರಿನ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಫಲಾನುಭವಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ತುಮಕೂರು, ಜುಲೈ 18: ರೈತರಿಗಾಗಿ (Farmers) ಜಾರಿಗೆ ಬಂದ ಗಂಗಾ ಕಲ್ಯಾಣ ಯೋಜನೆಯಲ್ಲಿ (Ganga Kalyana Scheme) ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಗಂಗಾ ಕಲ್ಯಾಣ ಯೋಜನೆಯಡಿ ಸಿಗಬೇಕಾದ ಸವಲತ್ತು ಸರಿಯಾಗಿ ಸಿಗದೆ ತುಮಕೂರಿನ (Tumakur) ರೈತರು ಕಳೆದ ನಾಲ್ಕು ವರ್ಷಗಳಿಂದ ಅಂಬೇಡ್ಕರ್ ನಿಗಮಕ್ಕೆ ಅಲೆದಾಡುತ್ತಿದ್ದಾರೆ. ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಸುಮಾರು 34 ಮಂದಿ ಫಲಾನುಭವಿ ರೈತರಿಗೆ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ.
2018-19ರಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತದ ಗಂಗಾ ಕಲ್ಯಾಣ ಯೋಜನೆಗೆ ತುಮಕೂರು ಜಿಲ್ಲೆಯ 106 ಮಂದಿ ಫಲಾನುಭವಿಗಳು ಆಯ್ಕೆಯಾಗಿದ್ದರು. ಇವರಲ್ಲಿ ಗುಬ್ಬಿಯ 32 ಹಾಗೂ ತುರುವೇಕೆರೆಯ ಇಬ್ಬರು ಸೇರಿದಂತೆ ಒಟ್ಟು 34 ಮಂದಿ ರೈತರೂ ಇದ್ದರು. ಈ 34 ಮಂದಿ ರೈತರ ಜಮೀನುಗಳಲ್ಲಿ ನಾಲ್ಕು ವರ್ಷಗಳ ಹಿಂದೆ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಬೋರ್ವೆಲ್ ಕೊರೆಯಲಾಗಿತ್ತು. ಆದರೆ, ಈ ಬೋರ್ವೆಲ್ಗಳಿಗೆ ಈವರೆಗೂ ಮೋಟಾರ್, ಪಂಪ್ ಸೆಟ್ ಹಾಗೂ ವಿದ್ಯುತ್ ಸಂಪರ್ಕ ನೀಡಿಲ್ಲ. ಸವಲತ್ತು ಸಿಗುವ ಭರವಸೆಯಲ್ಲಿ ರೈತರು ಅಡಿಕೆ, ತೆಂಗಿನ ಗಿಡ ಇನ್ನಿತರ ಬೆಳೆ ಬೆಳೆದಿದ್ದ ರೈತರು ಈಗ ಬೆಳೆಗೆ ನೀರಿಲ್ಲದೆ ರೈತರು ಕಂಗಾಲಾಗಿದ್ದಾರೆ.
ಇಷ್ಟೆಲ್ಲ ಅವಾಂತರಕ್ಕೆ ಕಾರಣ ತುಮಕೂರು ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತದ ಈ ಹಿಂದಿನ ಜಿಲ್ಲಾ ವ್ಯವಸ್ಥಾಪಕಿಯಾಗಿದ್ದ ಸರೋಜಾದೇವಿಯವರು ಮಾಡಿದ ಎಡವಟ್ಟು ಎನ್ನಲಾಗಿದೆ. ಹೌದು, ತುಮಕೂರಿನಲ್ಲಿ 2018-19ರಲ್ಲಿ ಬೋರ್ವೆಲ್ ಕೊರೆಯಲು ಮೂರು ಪ್ಯಾಕೇಜ್ ಮಾಡಲಾಗಿತ್ತು. ನಂತರ, ಜಿಲ್ಲಾ ವ್ಯವಸ್ಥಾಪಕಿ ಸರೋಜಾದೇವಿ ಗುತ್ತಿಗೆದಾರನಲ್ಲದ ವಿನಾಯಕ ಬೋರ್ವೆಲ್ಸ್ ಅಗ್ರಿ ಬೊಮ್ಮನಹಳ್ಳಿ ಕಂಪನಿಗೆ ವೈಯಕ್ತಿಕ ವರ್ಕ್ ಆರ್ಡರ್ ನೀಡಿದರು. ಬಳಿಕ, ಈ ಆಧಾರದ ಮೇಲೆ ವಿನಾಯಕ ಬೋರ್ವೆಲ್ಸ್ ಅಗ್ರಿ ಬೊಮ್ಮನಹಳ್ಳಿ ಕಂಪನಿ ರೈತರ ಜಮೀನುಗಳಲ್ಲಿ ಬೋರ್ವೆಲ್ ಕೊರೆಯಿತು. ಜಿಲ್ಲಾ ವ್ಯವಸ್ಥಾಪಕಿ ಸರೋಜಾದೇವಿ ಮಾಡಿದ ಈ ಒಂದು ಲೋಪದಿಂದ ರೈತರಿಗೆ ಸಿಗಬೇಕಾದ ಸವಲತ್ತುಗಳು ಇನ್ನೂವರೆಗೂ ಸಿಗುತ್ತಿಲ್ಲ.
ಈ ಕುರಿತು ಈಗಿನ ಅಂಬೇಡ್ಕರ್ ಅಭಿವೃದ್ಧಿ ನಿಗಮ ತುಮಕೂರು ಜಿಲ್ಲಾ ವ್ಯವಸ್ಥಾಪಕರು ಮಾತನಾಡಿ, ಪೂರ್ಣ ಪ್ರಮಾಣದ ವರದಿಯನ್ನು ಕೇಂದ್ರ ಕಚೇರಿಗೆ ನೀಡಿದ್ದು, ಅದರಲ್ಲಿ ಜಿಪಿಎಸ್ ಫೋಟೊ ಜೊತೆಗೆ ಫಲಾನುಭವಿಗಳ ಜಮೀನು ಸ್ಥಳ ಪರಿಶೀಲನೆಯನ್ನು ಸಹ ಉಲ್ಲೇಖಿಸಿದ್ದೇವೆ ಎಂದರು.
ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ ತನಿಖೆ ಸಿಬಿಐಗೆ ನೀಡಿ ಕೋರ್ಟ್ ಆದೇಶ: ಹಲವರಿಗೆ ಢವ ಢವ
ಈ ಹಿಂದಿನ ವ್ಯವಸ್ಥಾಪಕರ ಎಡವಟ್ಟಿಗೆ ಸರ್ಕಾರದಿಂದ ಹಣ ಬಿಡುಗಡೆಯಾಗದೆ ಫಲಾನುಭವಿಗಳು ಸಂಕಷ್ಟಕ್ಕೆ ಸಿಲುಕಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತಿದೆ. ಇನ್ನು, ನಿಗಮದ ಕೇಂದ್ರ ಅಧಿಕಾರಿಗಳು ತುಮಕೂರು ಕಚೇರಿಗೆ ಭೇಟಿ ನೀಡಿ ಯೋಜನೆ ಸಂಬಂಧಿತ ದಾಖಲೆಗಳ ಪರಿಶೀಲಿಸಿ ತೆಗೆದುಕೊಂಡು ಹೋಗಿದ್ದಾರೆ. ಆದರೆ ಇವತ್ತು, ನಾಳೆ, ಮುಂದಿನವಾರ ಅಥವಾ ಮುಂದಿನ ತಿಂಗಳು ಸವಲತ್ತು ಸಿಗುತ್ತೆ ಅಂತ ನಂಬಿರುವ ಫಲಾನುಭವಿಗಳು ನಂಬಿಕೆಯಲ್ಲೇ ನಾಲ್ಕು ವರ್ಷದಿಂದ ಕಾಲ ದೂಡುತಿದ್ದಾರೆ.







