ಮಾಹಿತಿ ಹಕ್ಕಿನಡಿ ಭ್ರಷ್ಟಾಚಾರ ಬಯಲಿಗೆಳೆದ ಗ್ರಾಮಸ್ಥರು: ತುಮಕೂರಿನ ನಿಟ್ಟೂರು ಬೆಸ್ಕಾಂ ಇಂಜಿನಿಯರ್ ಲಂಚಾವತಾರ ಬಯಲಿಗೆ
ಒಟ್ಟಾರೆ ಹಗರಣದ ಹಿಂದೆ ನಿಟ್ಟೂರು ಬೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಇದ್ದಾರೆ ಎಂದು ಆರೋಪಿಸಲಾಗಿದೆ. ಕಳಪೆ ಕಾಮಗಾರಿಯನ್ನು ಅರಿತ ಗ್ರಾಮಸ್ಥರು ಮಾಹಿತಿ ಹಕ್ಕಿನಡಿ ಮಾಹಿತಿ ಪಡೆದು ಭ್ರಷ್ಟಾಚಾರ ಬಯಲಿಗೆಳೆದಿದ್ದಾರೆ. ಅ
ಕಲ್ಪತರು ನಾಡು ತುಮಕೂರಿನ ಬೆಸ್ಕಾಂನಲ್ಲಿ ಭ್ರಷ್ಟಾಚಾರದ ವಾಸನೆ ಎದ್ದಿದೆ. 11 ಕೆ.ವಿ. ಎಕ್ಸಪ್ರೆಸ್ ಲೈನ್ ನಿರ್ಮಾಣದಲ್ಲಿ ಲಕ್ಷಾಂತರ ರೂ ಗುಳುಂ ಮಾಡಿದ ಆರೋಪ ಕೇಳಿ ಬಂದಿದೆ. ಅಲ್ಲದೇ ರೈತರ ಪಂಪ್ ಸೆಟ್ ಗಳಿಗೂ ಹಾನಿಯಾಗುತ್ತಿದೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ನಿಟ್ಟೂರು ಬೆಸ್ಕಾಂ ಉಪವಿಭಾಗದಲ್ಲಿ ಭ್ರಷ್ಟಾಚಾರದ ವಾಸನೆ ಬಡಿಯುತ್ತಿದೆ. ಕಡಬ ಬೆಸ್ಕಾಂ ಫೀಡ್ ನಿಂದ ಕಲ್ಲೂರು ಸಬ್ ಸ್ಟೇಷನ್ ವರೆಗೆ ನಿರ್ಮಿಸಿದ್ದ 11 ಕೆ.ವಿ. ಎಕ್ಸ್‌ಪ್ರೆಸ್ ಲೈನ್ ನಲ್ಲಿ ಗೋಲ್ ಮಾಲ್ ನಡೆದಿದೆ ಎನ್ನಲಾಗಿದೆ. ಸುಮಾರು 15 ಕಿ.ಮಿ. ದೂರದ ಈ ಮಾರ್ಗ ನಿರ್ಮಾಣಕ್ಕೆ 131 ಹೊಸ ವಿದ್ಯುತ್ ಕಂಬಗಳನ್ನು ಅಳವಡಿಸಬೇಕಿತ್ತು. ಆದರೆ ಕೇವಲ 40-45 ಮಾತ್ರ ಹೊಸ ಕಂಬಗಳನ್ನು ನೆಟ್ಟು , 131 ಹೊಸ ಕಂಬ ಎಂದು ಬಿಲ್ ಪಡೆಯಲಾಗಿದೆ.
ಅದೇ ರೀತಿ ಹಳೇ ವಿದ್ಯುತ್ ತಂತಿಗಳನ್ನೇ ಜೋಡಿಸಿ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಬಿಲ್ ನಲ್ಲಿ ಹೊಸ ವಿದ್ಯುತ್ ತಂತಿ ಎಂದು ನಮೂದಿಸಿದ್ದಾರೆ. ಗುಬ್ಬಿ ತಾಲೂಕಿನ ಕಡಬ ಹೋಬಳಿಯ ಪೆದ್ದನಹಳ್ಳಿ, ಮಲ್ಲೇನ ಹಳ್ಳಿ, ಗಂಗಪಟ್ಟಣ ಹಾಗೂ ಮೆಳೆಕಲ್ಲಹಳ್ಳಿ ಭಾಗದಲ್ಲಿ ರೈತರ ಸುಮಾರು 500-600 ಪಂಪಸೆಟ್‌ಗಳಿವೆ. ಹಾಗಾಗಿ ವಿದ್ಯುತ್ ಲೋಡ್ ಹೆಚ್ಚಾಗಿ ರೈತ ಪದೆ ಪದೇ ತೊಂದೆರ ಅನುಭವಿಸುತ್ತಿದ್ದ ಇದನ್ನು ತಪ್ಪಿಸಲು ನೂತನವಾಗಿ ಕಳೆದ ಎರಡು ವರ್ಷಗಳ ಹಿಂದೆ ಎಳೆದ ಎಕ್ಸ್‌ಪ್ರೆಸ್ ಲೈನ್ ನಲ್ಲಿ ಈ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ.
ಅಂದಹಾಗೆ ಈ ಎಕ್ಸ್‌ಪ್ರೆಸ್ ಲೈನ್ ಕಾಮಗಾರಿಯನ್ನು ತಮಿಳುನಾಡು ಮೂಲದ ಸೀಲ್ ವೆಲ್ ಕಂಪನಿಗೆ ಕೊಡಲಾಗಿತ್ತು. 2020 ಮಾರ್ಚ ತಿಂಗಳಲ್ಲಿ ವರ್ಕ್ ಆರ್ಡರ್ ಆಗಿ ಅನುಮೋದನೆ ಸಿಕ್ಕಿತ್ತು. ನಂತರ 2022 ಮಾರ್ಚ್‌ನಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಹೊಸ ಮಾರ್ಗ ನಿರ್ಮಾಣ ಎಂದು ಹೇಳಿ ಬರೊಬ್ಬರಿ 25 ಲಕ್ಷ ರೂ ಬಿಲ್ ಪಡೆಯಲಾಗಿದೆ. ಬಳಿಕ, ಕಳಪೆ ಕಾಮಗಾರಿಯನ್ನು ಅರಿತ ಕಡಬಾ, ಕಲ್ಲೂರು, ಮೆಳೆಕಲ್ಲಹಳ್ಳಿ, ಪೆದ್ದನಹಳ್ಳಿ, ಮಲ್ಲೇನ ಹಳ್ಳಿ ಹಾಗೂ ಗಂಗಪಟ್ಟಣ ಗ್ರಾಮದ ರೈತರು ಮಾಹಿತಿ ಹಕ್ಕಿನಡಿ ಮಾಹಿತಿ ಪಡೆದು ಭ್ರಷ್ಟಾಚಾರ ಬಯಲಿಗೆಳೆದಿದ್ದಾರೆ.
ಒಟ್ಟಾರೆ ಈ ಹಗರಣದ ಹಿಂದೆ ನಿಟ್ಟೂರು ಬೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಇದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಕಳಪೆ ಕಾಮಗಾರಿ ಮಾಡಿದ ಸೀಲ್ ವೆಲ್ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ರೈತರು ಒತ್ತಾಯಿಸಿದ್ದಾರೆ.
ತುಮಕೂರು ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:39 pm, Tue, 4 July 23