
ಉತ್ತರ ಪ್ರದೇಶದ ಮಥುರಾ ನಗರದ ವೃಂದಾವನದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಚೈತನ್ಯ ವಿಹಾರದಲ್ಲಿರುವ ಮಹರ್ಷಿ ಪಾಣಿನಿ ಸಂಸ್ಕೃತ ವಸತಿ ಗುರುಕುಲದ ಆವರಣದಲ್ಲಿದ್ದ 12 ಅಡಿ ಆಳದ ಅಂಡರ್‌ಗ್ರೌಂಡ್ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಲು ಇಳಿದಿದ್ದ ನಾಲ್ವರು ವಿದ್ಯಾರ್ಥಿಗಳು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಮೃತರನ್ನು ಕಟಾರೆ (22), ವಿಷು ಶರ್ಮಾ (19), ಆರ್ಯನ್ ಪಾಂಡೆ (16) ಮತ್ತು ದೇವಂಶ್ ಶರ್ಮಾ (17) ಎಂದು ಗುರುತಿಸಲಾಗಿದೆ. ಟ್ಯಾಂಕ್‌ಗೆ ಇಳಿದಿದ್ದ ಐವರ ಪೈಕಿ ರುದ್ರಾಕ್ಷ್ ಎಂಬ ಮತ್ತೊಬ್ಬ ವಿದ್ಯಾರ್ಥಿಯನ್ನು ರಕ್ಷಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ರ ಹಿನ್ನೆಲೆಯಲ್ಲಿ ಅರಮನೆಯ ದೊಡ್ಡಕೆರೆ ಮೈದಾನದಲ್ಲಿ ಗಜಪಡೆ ಹಾಗೂ ಅಶ್ವಪಡೆಗೆ ಸಿಡಿಮದ್ದು ತಾಲೀಮು ನಡೆಸಲಾಯಿತು. ಜಂಬೂಸವಾರಿ ದಿನದಂದು ತೋಪಿನ ಸದ್ದಿಗೆ ಬೆಚ್ಚಿಬೀಳದಂತೆ ತರಬೇತಿ ನೀಡಲು ಈ ಅಭ್ಯಾಸ ನಡೆಸಲಾಗಿದ್ದು, ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಧನಂಜಯ, ಮಹೇಂದ್ರ, ಏಕಲವ್ಯ, ಪ್ರಶಾಂತ, ಗೋಪಿ, ಶ್ರೀರಾಮ, ಶ್ರೀಕಂಠ, ಲಕ್ಷ್ಮೀ, ಕಾವೇರಿ, ಚೈತ್ರಾ, ರೂಪಾ ಹಾಗೂ ಸುಗ್ರೀವ ಸೇರಿದಂತೆ ಎಲ್ಲಾ ಆನೆಗಳು ಯಶಸ್ವಿಯಾಗಿ ಭಾಗವಹಿಸಿದವು.
ಚಿಕ್ಕಮಗಳೂರಿನ ಎನ್‌ಆರ್ ಪುರ ಠಾಣೆಯ ಅತ್ಯಾಚಾರ ಹಾಗೂ ವಂಚನೆ ಪ್ರಕರಣದ ಆರೋಪಿ ಸತೀಶ್ ಪಾತ್ರಿ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಠಾಣೆಯ ಮಾಹಿತಿ ಸೋರಿಕೆ ಮಾಡುತ್ತಿದ್ದ ಪೇದೆ ಕಾಂತೇಶ್ ಅವರನ್ನು ಎಸ್ಪಿ ಜಿತೇಂದ್ರ ಕುಮಾರ್ ದಯ್ಮಾ ಅಮಾನತುಗೊಳಿಸಿ ಆದೇಶಿಸಿದ್ದಾರೆ.
KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣದ ತನಿಖೆ ಚುರುಕುಗೊಳಿಸಿರುವ CID, ಪ್ರಕರಣದಲ್ಲಿ ಭಾಗಿಯಾದ ಅಭ್ಯರ್ಥಿಗಳನ್ನೇ ಸಾಕ್ಷಿಗಳನ್ನಾಗಿ ಪರಿಗಣಿಸಲು ನಿರ್ಧರಿಸಿದೆ. ಮೂವರು ಅಭ್ಯರ್ಥಿಗಳ ವಿಚಾರಣೆ ವೇಳೆ ಹಣ ನೀಡಿರುವುದು ಬೆಳಕಿಗೆ ಬಂದಿದ್ದು, ಈಗಾಗಲೇ ವಿಚಾರಣೆ ನಡೆಸಲಾಗಿರುವ 8ಕ್ಕೂ ಹೆಚ್ಚು ಅಭ್ಯರ್ಥಿಗಳು ನ್ಯಾಯಾಲಯದ ಮುಂದೆ ಹೇಳಿಕೆ ನೀಡಲು ಒಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳಿಂದ ಕೋರ್ಟ್ ಮುಂದೆ ಸೆಕ್ಷನ್ 164 ರಡಿ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಅಧಿಕೃತ ಹೇಳಿಕೆ ದಾಖಲಿಸಲು CID ಅರ್ಜಿ ಸಲ್ಲಿಸಲಿದೆ.
ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಇಂದು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಪ್ರವಾಸ ನಡೆಸಿ, ಬರ ಪೀಡಿತ ಜಮೀನುಗಳನ್ನು ವೀಕ್ಷಿಸಿ ರೈತರಿಂದ ಅಹವಾಲು ಸ್ವೀಕರಿಸಲಿದ್ದಾರೆ. ಬೆಳಿಗ್ಗೆ 11:30ಕ್ಕೆ ಜಿಂದಾಲ್ ಏರ್‌ಪೋರ್ಟ್‌ಗೆ ಆಗಮಿಸಲಿರುವ ಅವರು ಹಲಕುಂದಿ, ಬೆಳಗಲ್ ಮತ್ತು ಬಂಡ್ರಿ ಗ್ರಾಮಗಳಿಗೆ ಭೇಟಿ ನೀಡಲಿದ್ದು, ಸಂಜೆ 5:30ಕ್ಕೆ ಹೊಸಪೇಟೆ ಡಿಸಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ.
ಚಿತ್ರದುರ್ಗದ ವಾಲ್ಮೀಕಿ ಭವನದಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ಬಿಜೆಪಿಯಿಂದ ಸೇವಾ ಸಂಕಲ್ಪ ಅಭಿಯಾನ ಆಯೋಜಿಸಲಾಗಿದೆ. ವಿಪಕ್ಷ ನಾಯಕ ಆರ್. ಅಶೋಕ್, ಸಂಸದ ಗೋವಿಂದ ಕಾರಜೋಳ ಸೇರಿದಂತೆ ಪ್ರಮುಖ ನಾಯಕರು ಭಾಗವಹಿಸಲಿದ್ದು, ಬೆಳಿಗ್ಗೆ 11 ಗಂಟೆಗೆ ವಾಲ್ಮೀಕಿ ಭವನದಿಂದ ನೀಲಕಂಠೇಶ್ವರ ದೇಗುಲದವರೆಗೆ ಸೇವಾ ಜ್ಯೋತಿ ಯಾತ್ರೆ ನಡೆಯಲಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಪ್ರದೋಷ್‌ಗೆ ಮಾಫಿ ಸಾಕ್ಷಿ ನೀಡಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ಇಂದು ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದೆ. ನ್ಯಾ. ಜೆ.ಬಿ. ಪಾರ್ದಿವಾಲಾ ನೇತೃತ್ವದ ದ್ವಿಪೀಠದಲ್ಲಿ ಈ ಮಹತ್ವದ ವಿಚಾರಣೆ ನಡೆಯಲಿದೆ.
KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣದಲ್ಲಿ ಬಂಧಿತರಾದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಹಾಗೂ ಸದಸ್ಯೆ ಗೀತಾ ಅವರನ್ನು ಬೆಂಗಳೂರಿನ 4ನೇ CCH ಕೋರ್ಟ್ ಜಡ್ಜ್ ಮಂಜುನಾಥ್ ಇಂದು ಮಧ್ಯಾಹ್ನ 3 ಗಂಟೆಯವರೆಗೆ ED ಕಸ್ಟಡಿಗೆ ನೀಡಿದ್ದಾರೆ. 14 ದಿನಗಳ ಕಸ್ಟಡಿಗೆ ಕೋರಿದ್ದ ED ಅಧಿಕಾರಿಗಳಿಗೆ, ಮಧ್ಯಾಹ್ನ 3ಕ್ಕೆ ಓಪನ್ ಕೋರ್ಟ್‌ನಲ್ಲಿ ಹಾಜರುಪಡಿಸಲು ನ್ಯಾಯಾಧೀಶರು ಸೂಚಿಸಿದ್ದಾರೆ.
Breaking News Today Live Updates in Kannada: KPSC ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಮತ್ತು ಸದಸ್ಯೆ ಗೀತಾ ಅವರನ್ನು ಜಾರಿ ನಿರ್ದೇಶನಾಲಯ (ED) ಬಂಧಿಸಿದೆ. ನ್ಯಾಯಾಧೀಶರ ನಿವಾಸದಲ್ಲಿ ಹಾಜರುಪಡಿಸಿದ ಬಳಿಕ, ಬೆಂಗಳೂರಿನ 4ನೇ CCH ಕೋರ್ಟ್ ಜಡ್ಜ್ ಮಂಜುನಾಥ್ ಅವರು ಇಬ್ಬರನ್ನೂ ಮಧ್ಯಾಹ್ನ 3 ಗಂಟೆಯವರೆಗೆ ED ಕಸ್ಟಡಿಗೆ ನೀಡಿ, ನಂತರ ಓಪನ್ ಕೋರ್ಟ್‌ನಲ್ಲಿ ಹಾಜರುಪಡಿಸಲು ಆದೇಶಿಸಿದ್ದಾರೆ. ಅಕ್ಟೋಬರ್ 7 ಮತ್ತು 8ರಂದು ರಾಜ್ಯದಲ್ಲಿ ಮಳೆ ಮುಂದುವರಿಯಲಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನಲ್ಲಿ ಒಣಹವೆ ಇರಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಸೇವೆಯಲ್ಲಿ 25 ವರ್ಷ ಪೂರೈಸಿದ್ದಾರೆ. 2001ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಅವರು, ಸತತ 13 ವರ್ಷಗಳ ಕಾಲ ಸಿಎಂ ಆಗಿ ಕಾರ್ಯನಿರ್ವಹಿಸಿದ್ದರು. ರಾಷ್ಟ್ರೀಯ, ಅಂತಾರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.
Published On - 7:41 am, Wed, 7 October 26