ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್: ಕೇಸ್ ಮುಚ್ಚಿ ಹಾಕಲು ಸರ್ಕಾರದ ಯತ್ನ, ಸಹೋದರಿ ಗಂಭೀರ ಆರೋಪ
ಬೀದರ್‌ನ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದಿದೆ. ಸಚಿನ್ ಗುತ್ತಿಗೆದಾರರ ಪರವಾನಗಿ ಹೊಂದಿರಲಿಲ್ಲ ಎಂದು ಗುತ್ತಿಗೆದಾರರ ಸಂಘ ಹೇಳಿದೆ. ಆದರೆ, ಸಚಿನ್‌ನ ಸಹೋದರಿ ಸುರೇಖಾ, ರಾಜ್ಯ ಸರ್ಕಾರ ಪ್ರಕರಣ ಮುಚ್ಚಿಹಾಕಲು ಯತ್ನಿಸುತ್ತಿದೆ ಎಂದು ಆರೋಪಿಸಿ, ಪ್ರಧಾನಿಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ. ಸಿಬಿಐ ತನಿಖೆಗೆ ಅವರು ಆಗ್ರಹಿಸಿದ್ದಾರೆ.
ಬೀದರ್, ಜನವರಿ 2: ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣಕ್ಕೆ ಇದೀಗ ದೊಡ್ಡ ತಿರುವು ದೊರೆತಿದೆ. ಒಂದೆಡೆ, ಸಚಿನ್ ಬಳಿ ಗುತ್ತಿಗೆದಾರರ ಪರವಾನಿಗೆಯೇ ಇರಲಿಲ್ಲ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಗನ್ನಾಥ ಶೇಗಜಿ ಹೇಳಿದ್ದರೆ, ಮತ್ತೊಂದೆಡೆ ಪ್ರಕರಣ ಮುಚ್ಚಿ ಹಾಕಲು ರಾಜ್ಯ ಕಾಂಗ್ರೆಸ್ ಸರ್ಕಾರ ಯತ್ನಿಸುತ್ತಿದೆ ಎಂದು ಎಂದು ಸಚಿನ್ ಸಹೋದರಿ ಸುರೇಖಾ ಆರೋಪಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯುತ್ತೇನೆ ಎಂದು ಹೇಳಿದ್ದಾರೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕಟ್ಟಿತೂಗಾಂವ್‌ನಲಿ ಮಾತನಾಡಿದ ಸುರೇಖಾ, ಕಲಬುರಗಿಯಲ್ಲಿ ಸಚಿನ್ ಕೆಲಸ ಮಾಡಿಲ್ಲ. ಆತ ನಮ್ಮ ಭೇಟಿಯೇ ಆಗಿಲ್ಲ. ಸಚಿನ್ ಕೈ ಬರಹವೇ ಅದಲ್ಲ. ಸಚಿನ್ ಹುಟ್ಟಿಯೇ ಇಲ್ಲ ಎಂದು ಅವರು (ರಾಜ್ಯ ಸರ್ಕಾರ) ಮಾಡಿಬಿಡುತ್ತಾರೆ ಎಂಬ ಆತಂಕ ಇದೆ. ರಾಜ್ಯ ಸರ್ಕಾರದ ಮೇಲೆ ನಮಗೆ ನಂಬಿಕೆ ಉಳಿದಿಲ್ಲ. ಸಿಬಿಐ ತನಿಖೆ ಮಾಡಿದರೆ ನ್ಯಾಯ ಸಿಗಬಹುದು ಎಂಬ ವಿಶ್ವಾಸವಿದೆ ಎಂದರು.
ಡೆತ್ ನೋಟ್ನಲ್ಲಿ ಉಲ್ಲೇಖವಾದ ಆರೋಪಿಗಳನ್ನು ಈವರೆಗೆ ತನಿಖೆಗೆ ಒಳಪಡಿಸಿಲ್ಲ. ತನಿಖಾಧಿಕಾರಿಗಳು ನಮ್ಮನ್ನು ಮಾತ್ರ ವಿಚಾರಣೆ ಮಾಡುತ್ತಿದ್ದಾರೆ. ಇಲ್ಲಿವರೆಗೆ ತನಿಖಾಧಿಕಾರಿಗಳು ಯಾವುದೇ ಮಾಹಿತಿ ಕೊಟ್ಟಿಲ್ಲ. ಎಫ್ಎಸ್ಎಲ್ ವರದಿ, ಮರಣೋತ್ತರ ಪರೀಕ್ಷೆ ವರದಿ ಬಗ್ಗೆ ನಮಗೆ ಮಾಹಿತಿ ನೀಡಿಲ್ಲ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೂ ಪತ್ರ ಬರೆಯಲು ಪ್ರಯತ್ನಿಸುತ್ತೇವೆ ಎಂದು ಸುರೇಖಾ ಹೇಳಿದ್ದಾರೆ.
ಜಗನ್ನಾಥ ಶೇಗಜಿ ಹೇಳಿದ್ದೇನು?
ಬೀದರ್ ಜಿಲ್ಲಾ ಗುತ್ತಿಗೆದಾರರ ಬಳಿ ಮಾಹಿತಿ ಪಡೆದಿದ್ದೇನೆ. ಸಚಿನ್ ಪಾಂಚಾಳ್ ಗುತ್ತಿಗೆದಾರ ಅಲ್ಲ. ಅವರ ಯಾವುದೇ ಗುತ್ತಿಗೆ ಇಲ್ಲ, ಲೈಸೆನ್ಸ್ ಸಹ ಇಲ್ಲವೇ ಇಲ್ಲ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಗನ್ನಾಥ ಶೇಗಜಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ‘ಟಿವಿ9’ ಜತೆ ಮಾತನಾಡಿದ ಅವರು, ಸಚಿನ್ ಪಾಂಚಾಳ್ ಬಳಿ ಬೆಂಗಳೂರಿನ PWDನಲ್ಲಿ ರಿಜಿಸ್ಟರ್ ಆಗಿದ್ದ ಲೈಸೆನ್ಸ್ ಇದ್ದರೆ ಗುತ್ತಿಗೆದಾರ ಎಂದು ಪರಿಗಣಿಸಬಹುದು ಎಂದರು.
ಇದನ್ನೂ ಓದಿ: ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣದಲ್ಲಿ ಹಲವು ಅನುಮಾನ: ಖರ್ಗೆ ಮೇಲಿನ ಆರೋಪಗಳೇನು? ಇಲ್ಲಿದೆ ಸಮಗ್ರ ವಿವರ
ಧಾರವಾಡ ಮತ್ತು ಗುಲ್ಬರ್ಗ ಚೀಫ್ ಇಂಜಿನಿಯರ್ ಬಳಿ ವಿಚಾರಣೆ ಮಾಡಿದ್ದೇವೆ. ಚೀಫ್ ಇಂಜಿನಿಯರ್ ಬಳಿ ಮಾಹಿತಿ ಪಡೆದಾಗ ನೋಂದಣಿಯೇ ಆಗಿಲ್ಲ ಎಂದರು. ಇವತ್ತು ಬೆಂಗಳೂರಿನ ಕಚೇರಿಯಲ್ಲೂ ಪರಿಶೀಲನೆ ಮಾಡುತ್ತೇವೆ. ಪಾಂಚಾಳ್ ಹೆಸರಿನಲ್ಲಿ ಯಾವುದೇ ಬಾಕಿ ಬಿಲ್, ಟೆಂಟರ್ ಆಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. 32 ಸಾವಿರ ಕೋಟಿ ರೂಪಾಯಿ ಸರ್ಕಾರದಿಂದ ಬಾಕಿ ಬಿಲ್ ಬರಬೇಕಿದೆ. ಇದರಲ್ಲಿ ಸಚಿನ್ ಪಾಂಚಾಳ್ರ ಯಾವುದೇ ಬಿಲ್ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ