ರಾಜ್ಯ ರಾಜಕಾರಣಕ್ಕೆ ಮಾಜಿ ಕೇಂದ್ರ ಸಚಿವ ಅನಂತ್​​ ಕುಮಾರ್​​ ಹೆಗಡೆ? ಯತ್ನಾಳ್​​ ಸ್ಫೋಟಕ ಹೇಳಿಕೆ

ಕೇಂದ್ರದ ಮಾಜಿ ಸಚಿವ ಅನಂತ್ ಕುಮಾರ್ ಹೆಗಡೆ ರಾಜ್ಯ ರಾಜಕಾರಣಕ್ಕೆ ಬರುವ ಬಗ್ಗೆ ವದಂತಿಗಳಿವೆ. ಲೋಕಸಭಾ ಚುನಾವಣೆ ಸಮಯದಿಂದಲೇ ಪಾಲಿಟಿಕ್ಸ್​​ನಿಂದ ದೂರ ಉಳಿದಿರುವ ಅವರು, ಉದ್ಯಮದಲ್ಲಿ ಬ್ಯುಸಿ ಆಗಿದ್ದಾರೆ. ಆದ್ರೆ ಮಾಜಿ ಸಂಸದನ ಬಗ್ಗೆ ಶಾಸಕ ಯತ್ನಾಳ್ ಸ್ಫೋಟಕ ಹೇಳಿಕೆ ನೀಡಿ, ಬಿಜೆಪಿಯೊಳಗಿನ ಕುಟುಂಬ ರಾಜಕಾರಣ ಹಾಗೂ ನಾಯಕತ್ವದ ಕೊರತೆಯನ್ನು ಟೀಕಿಸಿದ್ದಾರೆ.

ರಾಜ್ಯ ರಾಜಕಾರಣಕ್ಕೆ ಮಾಜಿ ಕೇಂದ್ರ ಸಚಿವ ಅನಂತ್​​ ಕುಮಾರ್​​ ಹೆಗಡೆ? ಯತ್ನಾಳ್​​ ಸ್ಫೋಟಕ ಹೇಳಿಕೆ
ಅನಂತ್​​ ಕುಮಾರ್​​ ಹೆಗಡೆ ಮತ್ತು ಯತ್ನಾಳ್​​
Image Credit source: Tv9 Kannada
Edited By:

Updated on: Feb 13, 2026 | 4:20 PM

ಉಡುಪಿ, ಫೆಬ್ರವರಿ 13: ಕಳೆದ ಲೋಕಸಭಾ ಚುನಾವಣೆ ಸಮಯದಿಂದಲೇ ರಾಜಕಾರಣದಿಂದ ದೂರ ಉಳಿದಿರುವ ಕೇಂದ್ರದ ಮಾಜಿ ಸಚಿವ ಅನಂತ್​​ ಕುಮಾರ್​​ ಹೆಗಡೆ ರಾಜ್ಯ ರಾಜಕಾರಣಕ್ಕೆ ಬರುತ್ತಾರೆಂಬ ಸುದ್ದಿ ಕಳೆದ ಕೆಲ ದಿನಗಳಿಂದ ಹರಿದಾಡ್ತಿದೆ. ಹಿಂದೂ ಕಾರ್ಯಕರ್ತರ ಪಾಲಿಗೆ ಫೈರ್​​ ಬ್ರ್ಯಾಂಡ್​​ ರಾಜಕಾರಣಿ ಎಂದೇ ಗುರುತಿಸಿಕೊಂಡಿರುವ ಅನಂತ್​​ ಕುಮಾರ್​​ ಮತ್ತೆ ರಾಜಕಾರಣಕ್ಕೆ ಬರಲಿ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ಈ ಹೊತ್ತಲ್ಲಿ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್​​ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಯತ್ನಾಳ್​​ ಹೇಳಿದ್ದೇನು?

ರಾಜ್ಯ ರಾಜಕಾರಣಕ್ಕೆ ಬರುವ ವಿಚಾರ ಸಂಬಂಧ ಅನಂತ್ ಕುಮಾರ್ ಹೆಗಡೆ ವೈಯಕ್ತಿಕವಾಗಿ ಎಲ್ಲೂ ಪ್ರತಿಕ್ರಿಯೆ ಕೊಟ್ಟಿಲ್ಲ. ಸಾಮಾಜಿಕ ಜಾಲತಾಣದಲ್ಲಿ ದೆಹಲಿಗೆ ಬುಲಾವ್ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಆ ಬಗ್ಗೆ ಯಾವುದೇ ದೃಢ ಮಾಹಿತಿ ಇನ್ನೂ ಸಿಕ್ಕಿಲ್ಲ. ಹೀಗಾಗಿ ರಾಜ್ಯ ರಾಜಕಾರಣಕ್ಕೆ ಬರಲು ಅವರಿಗೆ ಮನಸ್ಸಿದೆಯೋ? ಇಲ್ಲವೋ? ಎಂಬುದನ್ನು ಅವರೇ ಬಹಿರಂಗಪಡಿಸಬೇಕು. ಬಿಜೆಪಿಯಲ್ಲಿ ಒಳ್ಳೆಯ ನಾಯಕತ್ವವನ್ನು ಮುಗಿಸುತ್ತಾರೆ. ತಂದೆ ಮಕ್ಕಳ ಸಹವಾಸದಿಂದ ಹೀಗೆ ಆಗಿದ್ದು, ಇಂತವರಿಗೆ ನಾಯಕತ್ವ ನೀಡಬೇಕು ಎಂದು ಕೇಂದ್ರ ಸರ್ಕಾರ ನಿರ್ಧರಿಸಬೇಕು ಎಂದಿದ್ದಾರೆ.

ಇದನ್ನೂ ಓದಿ: ರಾಹುಲ್​ ಗಾಂಧಿ ಕೈನಲ್ಲಿ ಡಿ.ಕೆ.ಶಿವಕುಮಾರ್​ ಭವಿಷ್ಯ? ಸಿಎಂ ಗಾದಿಗೆ ಇನ್ನೊಂದೇ ಮೆಟ್ಟಿಲು?

ವಿಧಾನಸಭೆಯಲ್ಲಿ ಕೂಡ ಕೆಲ ಬಿಜೆಪಿಗರು ಮಾತನಾಡದೆ ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದಾರೆ. ವಿಜಯೇಂದ್ರ ನಿನ್ನ ಫೈಲ್​​ ತೆಗೆಯಲಾ ಎಂದು ಡಿ.ಕೆ ಶಿವಕುಮಾರ್ ನೇರವಾಗಿ ಬೆದರಿಸುತ್ತಾರೆ. ಬಿಜೆಪಿ ತನ್ನ ನೈತಿಕ ಶಕ್ತಿಯನ್ನೇ ವಿಧಾನಸಭೆಯಲ್ಲಿ ಕಳೆದುಕೊಂಡಿದೆ. ಹೀಗಿದ್ದರೂ ಕೇಂದ್ರದ ನಾಯಕರಿಗೆ ಯಾಕೆ ವಿಶೇಷ ಮಮಕಾರ ಇದೆಯೋ ಗೊತ್ತಿಲ್ಲ. ಕುಟುಂಬ ರಾಜಕೀಯಕ್ಕೆ ಅವಕಾಶ ನೀಡಲ್ಲ ಎಂದು ಪ್ರಧಾನಿ ಪದೇಪದೇ ಹೇಳುತ್ತಾರೆ. ಆದರೆ ಕರ್ನಾಟಕದಲ್ಲಿ ಆ ವಿಚಾರ ಮರೆತು ಹೋಗಿರುವುದು ದುರ್ದೈವ ಎಂದು ಯತ್ನಾಳ್​​ ಕಿಡಿ ಕಾರಿದ್ದಾರೆ.

ರಾಜಕೀಯದಿಂದ ಅಂತರ ಕಾಯ್ದುಕೊಂಡಿರುವ ಹೆಗಡೆ

ಒಮ್ಮೆ ಕೇಂದ್ರ ಸಚಿವ ಮತ್ತು ಬರೋಬ್ಬರಿ 6 ಬಾರಿ ಸಂಸದರಾಗಿದ್ದ ಅನಂತ ಕುಮಾರ ಹೆಗಡೆ ಅವರು 2024ರ ಲೋಕಸಭೆ ಚುನಾವಣೆ ಸಂದರ್ಭದಿಂದಲೇ ರಾಜಕೀಯದಿಂದ ಬಹಳ ಅಂತರ ಕಾಯ್ದುಕೊಂಡಿದ್ದಾರೆ. ತಮ್ಮ ಉದ್ಯಮದಲ್ಲಿ ಬ್ಯುಸಿ ಆಗಿರುವ ಅವರು, ಎಲ್ಲಿಯೂ ರಾಜಕೀಯ ಸಂಬಂಧಿತ ಹೇಳಿಕೆಗಳನ್ನೂ ನೀಡುತ್ತಿಲ್ಲ. ಇದರಿಂದಾಗಿ ಅವರ ಅಭಿಮಾನಿಗಳು ತೀವ್ರ ನಿರಾಸೆಗೆ ಒಳಗಾಗಿದ್ದಾರೆ. ಈ ನಡುವೆ ರಾಜಕೀಯಕ್ಕೆ ಬರುವಂತೆ ಅವರಿಗೆ ಹೈಕಮಾಂಡ್‌ ಕರೆ ಬಂದಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಸುದ್ದಿಯಾಗಿರೋದೀಗ ಹತ್ತು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.