ಅನಂತ್ ಕುಮಾರ್ ಹೆಗಡೆ ರೋಡ್ ರೇಜ್ ಪ್ರಕರಣ: ಬಂಧಿತರಿಗೆ ಜಾಮೀನು ಮಂಜೂರು
Anant Kumar Hegde Road Ranger Case: ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ರೋಡ್ ರೇಜ್ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈ ಪ್ರಕರಣ ಸಂಬಂಧ ದಾಬಸ್ ಪೇಟೆ ಪೊಲೀಸರು, ಅನಂತ್ ಕುಮಾರ್ ಹೆಗಡೆ ಅವರ ಕಾರು ಚಾಲಕ ಹಾಗೂ ಗನ್ ಮ್ಯಾನ್ ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಲಾಗಿದೆ. ಆದ್ರೆ, ಕೋರ್ಟ್ ಇಬ್ಬರಿಗೂ ಷರತ್ತುಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದೆ.

ಬೆಂಗಳೂರು, (ಜೂನ್ 24): ನೆಲಮಂಗಲದ ಬಳಿ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ರೋಡ್ ರೇಜ್ ಪ್ರಕರಣಕ್ಕೆ (Anant Kumar Hegde Road Ranger Case) ಸಂಬಂಧಿಸಿದಂತೆ ಬಂಧಿತ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಹಲ್ಲೆ ಪ್ರಕರಣದಲ್ಲಿ (Assault Case) ಬಂಧನಕ್ಕೊಳಗಾಗಿದ್ದ ಅನಂತ್ ಕುಮಾರ್ ಹೆಗಡೆ ಅವರ ಕಾರು ಚಾಲಕ ಹಾಗೂ ಗನ್ ಮ್ಯಾನ್ ಅವರಿಗೆ ಇಂದು (ಜೂನ್ 24) ನೆಲಮಂಗಲ ನ್ಯಾಯಾಲಯ(Nelamangala Court) ಷರತ್ತುಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದೆ. ಗನ್ ಮ್ಯಾನ್ ಹಾಗೂ ಡ್ರೈವರ್ ಪರವಾಗಿ ವಕೀಲ ನಾಗೇಂದ್ರ ವಾದ ಮಂಡಿಸಿದ್ದು, ನೋಟಿಸ್ ಕೊಡದೆ ಇಬ್ಬರನ್ನೂ ಬಂಧನ ಮಾಡಿದ್ದಾರೆ. 112 ಗೆ ಕರೆ ಬಂದ ತಕ್ಷಣ ಠಾಣೆಗೆ ಕರೆದೊಯ್ದಿದ್ದಾರೆ. ಎಫ್ಐಆರ್ ದಾಖಲಾಗುವ ಮುನ್ನ ಬಂಧನ ತೋರಿಸಿದ್ದಾರೆ ಎಂದು ಕೋರ್ಟ್ ಗೆ ತಿಳಿಸಿದರು. ಇದಕ್ಕೆ ಪ್ರತಿವಾದ ಮಂಡಿಸಿದ ಪಿಪಿ, ಆರೋಪಿಗಳ ಹಲ್ಲೆ ನಡಸಿರುವುದು ಸಾಕ್ಷಿ ಸಿಕ್ಕಿರುವುದರಿಂದ ಬಂಧನ ಮಾಡಲಾಗಿದೆ ಎಂದರು. ಈ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶೆ ಪೂಜಾ ಶೆಟ್ಟಿ, ಇಬ್ಬರಿಗೂ ಷರತ್ತು ಬದ್ದ ಜಾಮೀನು ನೀಡಿ ಆದೇಶ ಹೊರಡಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ (Nelamangala) ತಾಲೂಕಿನ ಹಳೇ ನಿಜಗಲ್ ಬಳಿ ಇನ್ನೋವಾ ಕಾರಿನಲ್ಲಿದ್ದ ನಾಲ್ವರ ಮೇಲೆ ಹಲ್ಲೆ, ಗೂಂಡಾಗಿರಿ ನಡೆಸಿದ ಆರೋಪದಲ್ಲಿ ಕೇಂದ್ರದ ಮಾಜಿ ಸಚಿವ, ಉತ್ತರ ಕನ್ನಡ ಕ್ಷೇತ್ರದ ಮಾಜಿ ಸಂಸದ ಅನಂತ ಕುಮಾರ್ ಹೆಗಡೆ (Anantkumar Hegde), ಅವರ ಕಾರು ಚಾಲಕ ಹಾಗೂ ಗನ್‌ಮ್ಯಾನ್ ಮೇಲೆ ಎಫ್ಐಆರ್ ದಾಖಲಾಗಿತ್ತು. ಇನ್ನು ಹಲ್ಲೆ ನಡೆಸಿದ್ದ ಗನ್‌ಮ್ಯಾನ್ ಶ್ರೀಧರ್, ಚಾಲಕ ಮಹೇಶ್ ನನ್ನು ದಾಬಸ್ ಪೇಟೆ ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ: ತೀವ್ರ ಸ್ವರೂಪ ಪಡೆದ ಹಲ್ಲೆ ಕೇಸ್: ಅನಂತ್ ಕುಮಾರ್ ಹೆಗಡೆ ಬಂಧಿಸುವಂತೆ ಪ್ರತಿಭಟನೆ
ಅನಂತ್ ಕುಮಾರ್ ಹೆಗಡೆಗೆ ನೋಟಿಸ್ ಜಾರಿ
ಇನ್ನು ನಾಳೆ (ಜೂನ್ 25) ವಿಚಾರಣೆ ಹಾಜರಾಗುವಂತೆ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಪ್ರಕರಣ ಎ1 ಆರೋಪಿಯಾಗಿರುವ ಅನಂತ್ ಕುಮಾರ್ ಹೆಗಡೆ ಅವರು ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ. ಹೀಗಾಗಿ ಪೊಲಿಸರು, ಅನಂತ್ ಕುಮಾರ್ ಹೆಗಡೆಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಏನಿದು ಘಟನೆ? ನಿಜಗಲ್ ಬಳಿ ನಡೆದಿದ್ದೇನು?
ಅನಂತ್ ಕುಮಾರ್ ಹೆಗಡೆ ಅವರು ತೆರಳುತ್ತಿದ್ದ ಕಾರನ್ನು, ಓವರ್ ಟೇಕ್ ಮಾಡಲಾಯಿತು ಎಂಬ ಕಾರಣಕ್ಕೆ ಇನ್ನೋವಾ ಕಾರಿನಲ್ಲಿದ್ದ ನಾಲ್ವರ ಮೇಲೆ, ಅನಂತ್ ಕುಮಾರ್ ಹೆಗಡೆ ಪುತ್ರ ಅಶುತೋಷ್, ಚಾಲಕ ಹಾಗೂ ಗನ್‌ಮ್ಯಾನ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನೋವಾ ಕಾರಿನಲ್ಲಿ ಸಲ್ಮಾನ್, ಸೈಫ್, ಇಲಿಯಾಜ್ ಖಾನ್ ಹಾಗೂ ಉನ್ನೀಸಾ ಎಂಬವರ ಮೇಲೆ ಹಲ್ಲೆ ನಡೆದಿದ್ದು, ಅವರಿಗೆ ದಾಬಸ್‌ಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಹಲ್ಲೆಗೊಳಗಾಗಿದ್ದ ಸೈಫ್ ನೀಡಿದ ದೂರಿನ ಮೇರೆಗೆ ದಾಬಸ್ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಅನಂತಕುಮಾರ್ ಹೆಗಡೆ A1, ಗನ್‌ಮ್ಯಾನ್ ಶ್ರೀಧರ್ A2, ಕಾರು ಚಾಲಕ ಮಹೇಶ್ A3 ಆರೋಪಿಯಾಗಿದ್ದಾರೆ.
ಘಟನೆ ಬಳಿಕ ಅನಂತ್ ಕುಮಾರ್ ಹೆಗಡೆಯನ್ನು ನೆಲಮಂಗಲ ಗ್ರಾಮಾಂತರ ಠಾಣೆಯ ಡಿವೈಎಸ್‌ಪಿ ಕಚೇರಿಯಲ್ಲಿ ವಿಚಾರಣೆಗೊಳಪಡಿಸಲಾಗಿತ್ತು. ವಿಚಾರಣೆಯ ಬಳಿಕ ಅವರನ್ನು ಕಳುಹಿಸಲಾಗಿತ್ತು. ಆದರೆ, ಗನ್‌ಮ್ಯಾನ್ ಶ್ರೀಧರ್ ಮತ್ತು ಚಾಲಕ ಮಹೇಶ್‌ರನ್ನು ಪೊಲೀಸರು ಬಂಧಿಸಿದ್ದರು. ಈ ಘಟನೆಯಿಂದಾಗಿ ಠಾಣೆ ಮುಂದೆ ಮುಸ್ಲಿಂ ಸಮುದಾಯ ಜನರು ಜಮಾಯಿಸಿದ್ದು, ಅನಂತ್ ಕುಮಾರ್ ಹೆಗಡೆ ಬಂಧನ ಮಾಡುವಂತೆ ಪ್ರತಿಭಟನೆ ನಡೆಸಿದ್ದರು.
ವರದಿ: ಮಂಜುನಾಥ್, ಟಿವಿ9, ನೆಲಮಂಗಲ
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:32 pm, Tue, 24 June 25




