ಉಡುಪಿಯಲ್ಲಿ ಭಾರಿ ಮಳೆಗೆ ಮೊದಲ ಬಲಿ; ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿ ಉಸುರುಗಟ್ಟಿ ಸಾವು
ಕರ್ನಾಟಕದ ಕರಾವಳಿ ಭಾಗದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಇದೀಗ ಮೊದಲ ಬಲಿ ಪಡೆದಿದೆ. ಉಡುಪಿ ಜಿಲ್ಲೆಯ ಬೈಂದೂರು(Byndoor) ತಾಲೂಕಿನ ಕೊಲ್ಲೂರು ಗ್ರಾಮದ ಸೊಸೈಟಿ ಗುಡ್ಡೆ ಎಂಬಲ್ಲಿ ಮಹಿಳೆಯೊಬ್ಬರು ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿ ಉಸುರುಗಟ್ಟಿ ಸಾವನ್ನಪ್ಪಿದ್ದಾರೆ.
ಉಡುಪಿ, ಜು.04: ರಾಜ್ಯದ ಹಲವೆಡೆ ಭಾರಿ ಮಳೆ ಆಗುತ್ತಿದ್ದು, ಉಡುಪಿ(Udupi)ಯಲ್ಲೂ ವರುಣಾರ್ಭಟ ಜೋರಾಗಿದೆ. ಅದರಂತೆ ಇಂದು (ಗುರುವಾರ) ಉಡುಪಿ ಜಿಲ್ಲೆಯ ಬೈಂದೂರು(Byndoor) ತಾಲೂಕಿನ ಕೊಲ್ಲೂರು ಗ್ರಾಮದ ಸೊಸೈಟಿ ಗುಡ್ಡೆ ಎಂಬಲ್ಲಿ ಮಹಿಳೆಯೊಬ್ಬರು ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿ ಉಸುರುಗಟ್ಟಿ ಸಾವನ್ನಪ್ಪಿದ್ದಾರೆ. ಹಳ್ಳಿ ಬೇರು ನಿವಾಸಿ ಅಂಬಾ (45) ಮೃತಪಟ್ಟವರು. ಈ ಮೂಲಕ ಜಿಲ್ಲೆಯಲ್ಲಿ ಭಾರಿ ಮಳೆ ಮೊದಲ ಬಲಿ ಪಡೆದಿದೆ. ಇನ್ನುಸ್ಥಳೀಯರ ಸಹಾಯದಿಂದ ಮಣ್ಣು ಸರಿಸಿ ಮೃತದೇಹವನ್ನ ಮೇಲಕ್ಕೆತ್ತಲಾಗಿದೆ.
ಬೈಂದೂರಿನಲ್ಲಿ ಮಳೆಯ ಆರ್ಭಟ; ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಯುವಕರಿಂದ ನೆರವು
ಇನ್ನು ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಮಳೆಯ ಆರ್ಭಟ ಹೆಚ್ಚಿದ್ದು, ಬೈಂದೂರು ತಾಲೂಕಿನ ನಾವುಂದ, ಬಡಾಕೇರಿ, ಮರವಂತೆ, ಸಾಲ್ಬುಡ, ಅರೆಹೊಳೆ ಕೋಣ್ಕಿ, ಕುದ್ರು, ಚಿಕ್ಕಳ್ಳಿ, ಪಡುಕೋಣೆ ಭಾಗದಲ್ಲಿ ಪ್ರವಾಹ ಉಂಟಾಗಿದೆ. ಈ ಹಿನ್ನಲೆ ಸ್ಥಳೀಯ ಯುವಕರು ಸೇರಿಕೊಂಡು ಪ್ರವಾಹ ಪೀಡಿತ ಪ್ರದೇಶಗಳಿಗೆ ಮೂರು ದೋಣಿ ಮೂಲಕ ತೆರಳಿ ರಕ್ಷಣಾ ಕಾರ್ಯದ ಜೊತೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಯಿಂದಲೂ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಪ್ರವಾಹ ಪೀಡಿತ ಪ್ರದೇಶಗಳಿಗೆ ಕುಂದಾಪುರ ಎಸಿ ರಶ್ಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರತಿ ವರ್ಷವೂ ನಾವುಂದ ಭಾಗದ ಜನರು ಪ್ರವಾಹದಿಂದ ಕಂಗೆಡುತ್ತಿದ್ದಾರೆ.
ಇದನ್ನೂ ಓದಿ:ಚಿಕ್ಕಮಗಳೂರಿನಲ್ಲಿ ಮಹಾಮಳೆಗೆ 3ನೇ ಬಲಿ: ಮಹಿಳೆ ಮೇಲೆ ಮರ ಬಿದ್ದು ಸಾವು
ಉಕ್ಕಿಹರಿದ ಮಡಿಸಾಲು ಹೊಳೆ; ಎಕರೆಗಟ್ಟಲೆ ಕೃಷಿ ಭೂಮಿ ಜಲಾವೃತ
ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಬ್ರಹ್ಮಾವರ ತಾಲೂಕಿನ ಆರೂರು- ಬೆಳ್ಮಾರು ಗ್ರಾಮದ ಮಧ್ಯ ಹರಿಯುವ ಜೀವನದಿಯಾದ ಮಡಿಸಾಲು ಹೊಳೆ ಆಲೂರು ಬಳಿ ಉಕ್ಕಿಹರಿದಿದ್ದು, ಹೊಳೆಯ ಪಕ್ಕದ ಎಕರೆಗಟ್ಟಲೆ ಕೃಷಿ ಭೂಮಿ ಜಲಾವೃತವಾಗಿದೆ. ಕೃಷಿಕರಿಗೆ ಜೀವನದಿಯಾಗಿದ್ದ ಮಡಿಸಾಲು ಹೊಳೆ ಉಕ್ಕಿ ಹರಿದ ಪರಿಣಾಮ, ಕೆಲವು ದಿನಗಳ ಹಿಂದೆಯಷ್ಟೆ ಭತ್ತದ ನಾಟಿ ಮಾಡಿದ್ದ ಪ್ರದೇಶದಲ್ಲಿ ಈಗ ನೆರೆಹಾವಳಿ ಉಂಟಾಗಿದೆ. ನೆರೆಯಿಂದಾಗಿ ಆರೂರು ಬೆಳ್ಮಾರು ಸಂಪರ್ಕ ಸಂಪೂರ್ಣ ಕಡಿತವಾಗಿದೆ. ಮಳೆ ಮತ್ತೆ ಮುಂದುವರಿದರೆ ಕಿರು ಸೇತುವೆ ಮುಳುಗಡೆಯಾಗುವ ಭೀತಿ ಎದುರಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:33 pm, Thu, 4 July 24