Udupi Paryaya 2022: ಉಡುಪಿ ಪರ್ಯಾಯ ಎಂದರೇನು? ಪರ್ಯಾಯ ಉತ್ಸವದ ಇತಿಹಾಸ, ಮಹತ್ವ ಏನು?

Udupi Paryaya: ಜನವರಿ 18ರಂದು ಪರ್ಯಾಯ ಉತ್ಸವ ನಡೆಯಲಿದೆ. ಅಷ್ಟಕ್ಕೂ ಉಡುಪಿ ಪರ್ಯಾಯ ಎಂದರೆ ಏನು? ಪರ್ಯಾಯೋತ್ಸವ ಎಂದರೆ ಯಾವ ಉತ್ಸವ? ಯಾಕೆ ಸಂಭ್ರಮ? ಪರ್ಯಾಯ ಉತ್ಸವದ ಇತಿಹಾಸ ಏನು? ಈ ಬಗ್ಗೆ ವಿವರಗಳು ಇಲ್ಲಿದೆ.

Udupi Paryaya 2022: ಉಡುಪಿ ಪರ್ಯಾಯ ಎಂದರೇನು? ಪರ್ಯಾಯ ಉತ್ಸವದ ಇತಿಹಾಸ, ಮಹತ್ವ ಏನು?
ಉಡುಪಿ ಶ್ರೀಕೃಷ್ಣ ಮಠದ ರಥೋತ್ಸವ (ಸಾಂದರ್ಭಿಕ ಚಿತ್ರ)
Follow us
|

Updated on:Jan 17, 2022 | 11:50 AM

ಪರ್ಯಾಯೋತ್ಸವ, ಉಡುಪಿ ಪರ್ಯಾಯ ಹೀಗೆಂದರೆ ಸಾಕು ಉಡುಪಿಯ ಜನರ ಮನದಲ್ಲಿ ಸಂಭ್ರಮ ಮನೆಮಾಡುತ್ತದೆ. ಎರಡು ವರ್ಷಗಳಿಗೆ ಒಮ್ಮೆ ಬರುವ ಈ ದ್ವಿವಾರ್ಷಿಕ ಉತ್ಸವದ ಸಂದರ್ಭ ಉಡುಪಿಗೆ ಉಡುಪಿಯೇ ಸಿಂಗಾರಗೊಂಡು ಖುಷಿ ಪಡುತ್ತದೆ. ಜನವರಿ ತಿಂಗಳ ಚುಮುಚುಮು ಚಳಿಗಾಲದ ರಾತ್ರಿಯಲ್ಲಿ ಬೀದಿಯ ತುಂಬೆಲ್ಲಾ ಜಗಮಗ ಬೆಳಕು ರಾರಾಜಿಸುತ್ತಾ ಕಣ್ಮನ ಸೆಳೆಯುತ್ತದೆ. ಇದೀಗ ಮತ್ತೆ ಜನವರಿ ಬಂದಿದೆ. ಜನವರಿ 18ರಂದು ಪರ್ಯಾಯ ಉತ್ಸವ ನಡೆಯಲಿದೆ. ಅಷ್ಟಕ್ಕೂ ಉಡುಪಿ ಪರ್ಯಾಯ ಎಂದರೆ ಏನು? ಪರ್ಯಾಯೋತ್ಸವ ಎಂದರೆ ಯಾವ ಉತ್ಸವ? ಯಾಕೆ ಸಂಭ್ರಮ? ಪರ್ಯಾಯ ಉತ್ಸವದ ಇತಿಹಾಸ ಏನು? ಈ ಬಗ್ಗೆ ವಿವರಗಳು ಇಲ್ಲಿದೆ.

ಉಡುಪಿ ಎಂದಾಕ್ಷಣ ನಿಮಗೆಲ್ಲಾ ಉಡುಪಿ ಹೋಟೆಲು, ಮಲ್ಪೆ ಬೀಚ್ ನೆನಪಾಗಬಹುದು. ಜೊತೆಗೆ ಖ್ಯಾತ ಧಾರ್ಮಿಕ ಸ್ಥಳವಾದ ಕೃಷ್ಣ ಮಠವೂ ನೆನಪಾಗಲೇಬೇಕು. ಈ ಕೃಷ್ಣ ಮಠದ ಪೂಜೆ, ಅನುಷ್ಠಾನ ಹಾಗೂ ಆಡಳಿತಕ್ಕೆ ಸಂಬಂಧಿಸಿ ನಡೆಯುವ ದ್ವೈವಾರ್ಷಿಕ ಉತ್ಸವವೇ ಈ ಪರ್ಯಾಯ. ಶ್ರೀಕೃಷ್ಣ ಮಠದ ಪೂಜೆ ಮತ್ತಿತರ ಕಾರ್ಯಗಳನ್ನು ಒಬ್ಬರ ನಂತರ ಮತ್ತೊಬ್ಬರು ಯತಿಗಳಿಗೆ ವಹಿಸಿಕೊಡುವುದು. ಈಗಿನ ಪರ್ಯಾಯ ಮಠಾಧೀಶರು ಮುಂದೆ ಪರ್ಯಾಯ ಪೀಠಾರೋಹಣ ಮಾಡಲಿರುವ ಸ್ವಾಮೀಜಿಗಳಿಗೆ ಪೂಜಾ ಅಧಿಕಾರವನ್ನು, ಮಠದ ನಿರ್ವಹಣೆಯನ್ನು ಹಸ್ತಾಂತರಿಸುವುದು. ಈ ದಿನವನ್ನು ಪರ್ಯಾಯ ಎಂದು ಕರೆಯುತ್ತಾರೆ. ಸಂಭ್ರಮದಿಂದ ಆಚರಿಸಲಾಗುತ್ತದೆ.

ಪರ್ಯಾಯವನ್ನು ಸುಲಭವಾಗಿ ವಿವರಿಸುವುದಾದರೆ..

ಉಡುಪಿಯಲ್ಲಿ ಅಷ್ಟ ಮಠಗಳಿವೆ. ಈ ಎಂಟೂ ಮಠದ ಸ್ವಾಮೀಜಿಗಳು ಆವರ್ತದಲ್ಲಿ ಎರಡು ವರ್ಷಕ್ಕೊಮ್ಮೆ ಕೃಷ್ಣನ ಪೂಜಾ ಅಧಿಕಾರವನ್ನು ಹಸ್ತಾಂತರಿಸಿಕೊಳ್ಳುತ್ತಾರೆ. ಸರಳವಾಗಿ ಹೇಳಬೇಕು ಎಂದರೆ, ಒಂದು ವೃತ್ತದಲ್ಲಿ ಎಂಟು ಮಂದಿ ಇದ್ದು ಕೃಷ್ಣ ಪೂಜೆಯ ಅಧಿಕಾರ, ಮಠದ ನಿರ್ವಹಣೆಯನ್ನು ಒಬ್ಬರ ನಂತರ ಒಬ್ಬರು ಎರಡು ವರ್ಷಗಳಿಗೊಮ್ಮೆ ಬದಲಾಯಿಸಿಕೊಳ್ಳುವುದು. ಹೀಗೆ ಅದು ಒಂದು ಸುತ್ತು ಮುಗಿಸಿ ಮತ್ತೆ ಆರಂಭಿಸಿದವರ ಕೈಗೇ ಬರುತ್ತದೆ. ಮತ್ತೆ ಈ ಸುತ್ತು ಮುಂದುವರಿಯುತ್ತದೆ. ಹೀಗೆ ಎರಡು ವರ್ಷಗಳಿಗೆ ಒಮ್ಮೆ ಪರ್ಯಾಯ ಮಹೋತ್ಸವ ನಡೆಯುತ್ತದೆ.

ಉಡುಪಿಯ ಅಷ್ಟಮಠಗಳು ಯಾವುವು? ಈ ಬಾರಿ ಪರ್ಯಾಯ ಪೀಠಾರೋಹಣ ಮಾಡಲಿರುವ ಯತಿಗಳು ಯಾರು?

ಕಾಣಿಯೂರು ಮಠ, ಸೋದೆ ಮಠ, ಪುತ್ತಿಗೆ ಮಠ, ಅದಮಾರು ಮಠ, ಪೇಜಾವರ ಮಠ, ಪಲಿಮಾರು ಮಠ, ಕೃಷ್ಣಾಪುರ ಮಠ, ಶೀರೂರು ಮಠ. ಇವು ಉಡುಪಿಯ ಕೃಷ್ಣ ಮಠದ ಸುತ್ತಿನಲ್ಲಿ ಇರುವ ಎಂಟು ಮಠಗಳು. ಈ ಮಠಗಳ ಶ್ರೀಗಳಲ್ಲಿ ಈ ಬಾರಿ (ಜನವರಿ 18) ರಂದು ಪರ್ಯಾಯ ಪೀಠಾರೋಹಣ ಮಾಡಲಿರುವ ಯತಿಗಳು ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿಗಳು. ಹಾಗೂ ಪರ್ಯಾಯ ಪೀಠದಿಂದ ಇಳಿದು, ಪರ್ಯಾಯ ಹಸ್ತಾಂತರ ಮಾಡಲಿರುವ ಸ್ವಾಮೀಜಿಗಳು ಅದಮಾರು ಮಠದ ಶ್ರೀ ಈಶಪ್ರಿಯತೀರ್ಥರು.

ಪರ್ಯಾಯ ಉತ್ಸವಕ್ಕೆ ಯಾಕಿಷ್ಟು ಮಹತ್ವ?

ಪರ್ಯಾಯ ಎಂದರೆ ಸ್ವಾಮೀಜಿಗಳ ಶ್ರೀಕೃಷ್ಣನ ಪೂಜಾನುಷ್ಠಾನ ಅಧಿಕಾರ ಹಸ್ತಾಂತರ ಮಾತ್ರವೇ ಆಗಿದ್ದರೆ ಪರ್ಯಾಯಕ್ಕೆ ಇಷ್ಟೊಂದು ಮಹತ್ವ ಏಕೆ? ಅದರ ಸಂಭ್ರಮಗಳೇನು ಎಂದು ಅನಿಸಬಹುದು. ಪರ್ಯಾಯ ಎಂದರೆ ಕೇವಲ ಸ್ವಾಮೀಜಿಗಳ ಬದಲಾವಣೆ ಮಾತ್ರ ಆಗಿರದೇ ಅದು ಉಡುಪಿಯ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಬದಲಾವಣೆಯೂ ಹೌದು. ಇದು ಹೇಗೆ ಎನ್ನುತ್ತೀರಾ?

ಪ್ರತಿ ಬಾರಿ ಪರ್ಯಾಯ ಉತ್ಸವದ ಮೂಲಕ ಮಠದ ಆಡಳಿತ ಬದಲಾದಂತೆ ಅದು ಉಡುಪಿಯ ಚಿತ್ರಣದ ಮೇಲೂ ಪರಿಣಾಮ ಬೀರುತ್ತದೆ. ಪರ್ಯಾಯ ಪೀಠಾರೋಹಣ ಮಾಡಿರುವ ಶ್ರೀಗಳು ಹಾಗೂ ಅವರ ಮಠವು ಕೃಷ್ಣ ಮಠದ ಆಡಳಿತವನ್ನು ನೋಡಿಕೊಳ್ಳುತ್ತದೆ. ಮತ್ತು ಅದರಂತೆ ಮಠದಲ್ಲಿ ಕೊಡುವ ಭೋಜನ ಪ್ರಸಾದದಿಂದ ಹಿಡಿದು ಮಠದಲ್ಲಿ ನಡೆಯುವ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳು, ವಿಚಾರ, ಆಸಕ್ತಿ ಎಲ್ಲವೂ ಬದಲಾಗಬಹುದು.

ಒಂದು ಮಠದ ಯತಿಗಳಿಗೆ ಸಾಂಸ್ಕೃತಿಕ ಕಲಾ ಪ್ರಕಾರಗಳಲ್ಲಿ ಹೆಚ್ಚಿನ ಆಸಕ್ತಿ ಇದ್ದವರಾದರೆ ಆ ಎರಡು ವರ್ಷಗಳ ಅವಧಿಯಲ್ಲಿ ಉಡುಪಿಯಲ್ಲಿ ಅದ್ಧೂರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು  ನಿರೀಕ್ಷಿಸಬಹುದು. ಅಥವಾ ಒಂದು ಮಠದ ಸ್ವಾಮೀಜಿ ಬಹಳ ಧಾರ್ಮಿಕರಾಗಿದ್ದರೆ ಧಾರ್ಮಿಕ ಆಚರಣೆಗಳ ಆಸಕ್ತರಿಗೆ ಅ ಎರಡು ವರ್ಷಗಳು ಮಹತ್ವದ್ದಾಗಬಹುದು. ಒಂದು ಪರ್ಯಾಯ ಉಡುಪಿಯ ಜನರನ್ನು ವಿಭಿನ್ನ ರೀತಿಯಿಂದ ಪ್ರಭಾವಿಸಬಲ್ಲದು. ಇಂತಹ ಪಲ್ಲಟಕ್ಕೆ ಅವಕಾಶ ಇರುವ ಕಾರಣ ಪರ್ಯಾಯಕ್ಕೆ ವಿಶೇಷ ಮಹತ್ವವನ್ನು ಕೊಡಬಹುದು.

ಅಲ್ಲದೆ, ಪರ್ಯಾಯಕ್ಕೆ 500ಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ಪರ್ಯಾಯವನ್ನು ಉಡುಪಿಯ ಪ್ರಮುಖ ಉತ್ಸವಗಳಲ್ಲಿ ಒಂದಾಗಿ ಆಚರಿಸಲಾಗುತ್ತದೆ. ಎಲ್ಲಾ ಸಮುದಾಯದ ಬಂಧುಗಳು ಈ ಸಂಭ್ರಮಕ್ಕೆ ಜೊತೆಯಾಗುತ್ತಾರೆ. ಸಹಕಾರ ನೀಡುತ್ತಾರೆ. ಪ್ರತಿ ಎರಡು ವರ್ಷಗಳಿಗೊಮ್ಮೆ ಜನವರಿ 18ರಂದು ನಡೆಯುವ ಈ ಉತ್ಸವ, ಉಡುಪಿಯ ಪ್ರಾತಿನಿಧಿಕ ಹಬ್ಬವಾಗಿ, ಜನರ ಹಬ್ಬವಾಗಿಯೂ ಹತ್ತಿರವಾಗಿದೆ.

ಪರ್ಯಾಯದ ಇತಿಹಾಸ ಏನು?

ಶ್ರೀಮಧ್ವಾಚಾರ್ಯರು ಉಡುಪಿಯಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದ ನಂತರ ಅದರ ಪೂಜೆಯ ಅಧಿಕಾರವನ್ನು ಕೂಡ ತಮ್ಮ ಪರಂಪರೆಯ ಯತಿಗಳಿಗೆ ನೀಡಿದರು. ಕೃಷ್ಣ ಮಠದ ಪೂಜಾನುಷ್ಠಾನಗಳನ್ನು ಮಧ್ವ ಪರಂಪರೆಯ ಯತಿಗಳು ನಡೆಸಿಕೊಂಡು ಬರುತ್ತಿದ್ದಾರೆ. ಉಡುಪಿಯ ಅಷ್ಟಮಠಗಳ ಯತಿಗಳಿಗೆ ಪರ್ಯಾಯ ಪೂಜೆಯ ಅಧಿಕಾರವನ್ನು ನೀಡಿ ಹರಸಿದವರು ಮಧ್ವಾಚಾರ್ಯರು.

ಆ ಬಳಿಕ ಮೊದಲಿಗೆ ಎರಡು ತಿಂಗಳಿಗೊಮ್ಮೆ ಪರ್ಯಾಯ ನಡೆಯುತ್ತಿತ್ತು. ಅದನ್ನು ಮುಂದೆ ಸೋದೆ ಮಠಾಧೀಶರಾಗಿದ್ದ ಶ್ರೀವಾದಿರಾಜತೀರ್ಥರು ಎರಡು ವರ್ಷಗಳ ಅವಧಿಗೆ ವಿಸ್ತರಿಸಿದರು. ವಾದಿರಾಜ ಯತಿಗಳ ಕಾಲದಿಂದ ಇಲ್ಲಿಯವರೆಗೆ 250 ಪರ್ಯಾಯಗಳನ್ನು (ಅಂದರೆ 500 ವರ್ಷ) ಕಂಡಿರುವ ಉಡುಪಿ ಈ ಬಾರಿ 251ನೇ ಪರ್ಯಾಯ ಮಹೋತ್ಸವದ ಖುಷಿಯಲ್ಲಿದೆ.

ಇದನ್ನೂ ಓದಿ: ಉಡುಪಿ ಶ್ರೀಕೃಷ್ಣ ದೇವರಿಗೆ ಕಾಶೀ ಮಠಾಧೀಶರಿಂದ ಪಚ್ಚೆ ಕಲ್ಲಿನ ಸ್ವರ್ಣ ಹಾರ ಸಮರ್ಪಣೆ

ಇದನ್ನೂ ಓದಿ: ಉಡುಪಿ ಕೃಷ್ಣಮಠದ ಸ್ವಾಧೀನಕ್ಕೆ ಯತ್ನಿಸಿತ್ತು ಸಿದ್ದರಾಮಯ್ಯ ಸರ್ಕಾರ: ಪ್ರಮೋದ್ ಮಧ್ವರಾಜ್

Published On - 11:50 am, Sun, 16 January 22