KS Eshwarappa: ಇಡೀ ಹಿಂದೂ ಸಮಾಜದ ಮೇಲೆ ಬಿಜೆಪಿ ಹಕ್ಕು ಸಾಧಿಸಲಾಗದು; ಈಶ್ವರಪ್ಪ ಹೀಗೆಂದಿದ್ದೇಕೆ?
ಸಂಪೂರ್ಣ ಹಿಂದೂ ಸಮಾಜದ ಮೇಲೆ ಬಿಜೆಪಿ ಹಕ್ಕು ಸ್ಥಾಪಿಸಲಾಗದು. ಇಡೀ ಹಿಂದೂ ಸಮಾಜವನ್ನು ದತ್ತು ತೆಗೆದಕೊಂಡಿರುವಂತೆ ಭಾವಿಸಲಾಗದು ಎಂದು ಪಕ್ಷದ ನಾಯಕ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.

ಮಂಗಳೂರು: ಸಂಪೂರ್ಣ ಹಿಂದೂ ಸಮಾಜದ (Hindu society) ಮೇಲೆ ಬಿಜೆಪಿ (BJP) ಹಕ್ಕು ಸ್ಥಾಪಿಸಲಾಗದು. ಇಡೀ ಹಿಂದೂ ಸಮಾಜವನ್ನು ದತ್ತು ತೆಗೆದಕೊಂಡಿರುವಂತೆ ಭಾವಿಸಲಾಗದು ಎಂದು ಪಕ್ಷದ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ಹೇಳಿದ್ದಾರೆ. ಉಡುಪಿಯಲ್ಲಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಹೇಳಿದ್ದಾರೆ. ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ವಿಧಾನಭೆ ಚುನಾವಣೆಯಲ್ಲಿ ಕಣಕ್ಕಿಳಿಯುವುದಾಗಿ ಘೋಷಿಸಿರುವ ವಿಚಾರವಾಗಿ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಜತೆಗೆ, ಹಿಂದೂಗಳ ಹಿತರಕ್ಷಣೆಗಾಗಿ ಬಿಜೆಪಿ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭೆ ಕ್ಷೇತ್ರದಿಂದ ಪ್ರಮೋದ್ ಮುತಾಲಿಕ್ ಅವರು ಕಣಕ್ಕಿಳಿಯುತ್ತಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗೆ ಸ್ಪರ್ಧಿಸುವ ಹಕ್ಕು ಎಲ್ಲರಿಗೂ ಇದೆ ಎಂದು ಹೇಳಿದ್ದಾರೆ.
ಮುತಾಲಿಕ್ ಹಿಂದೂ ನಾಯಕ. ನಾವು ಇಡೀ ಹಿಂದೂ ಸಮಾಜವನ್ನು ದತ್ತು ತೆಗೆದುಕೊಂಡಿಲ್ಲ. ಇತರರೂ ಸಮಾಜಕ್ಕಾಗಿ ಕ್ರಮಗಳನ್ನು ಕೈಗೊಳ್ಳಬಹುದು, ಆದರೆ ಅದನ್ನು ಅಂತಿಮವಾಗಿ ಜನತೆ ನಿರ್ಧರಿಸಲಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ನಾನು ಧಾರ್ಮಿಕ ನಿಂದನೆ ಮಾಡಿಲ್ಲ, ಆಜಾನ್ನಿಂದ ಮಕ್ಕಳ ಪರೀಕ್ಷೆ ಮೇಲೆ ಎಫೆಕ್ಟ್ ಆಗುತ್ತದೆ -ಈಶ್ವರಪ್ಪ ಸ್ಪಷ್ಟನೆ
ಅಜಾನ್ ಬಗ್ಗೆ ಈಶ್ವರಪ್ಪ ನೀಡಿದ್ದ ಹೇಳಿಕೆ ಭಾರೀ ವಿವಾದಕ್ಕೀಡಾಗಿತ್ತು. ಆ ಬಗ್ಗೆ ನಂತರ ಸ್ಪಷ್ಟೀಕರಣವನ್ನೂ ಅವರು ನೀಡಿದ್ದರು. ಇದರ ಬೆನ್ನಲ್ಲೇ ಇದೀಗ ಹಿಂದೂ ಸಮಾಜದ ಬಗ್ಗೆ ಹೇಳಿಕೆ ನೀಡಿದ್ದಾರೆ.
ಮಂಗಳೂರಿನ ಕಾವೂರಿನ ಶಾಂತಿನಗರದಲ್ಲಿ ಬಿಜೆಪಿ ವಿಜಯ ಸಂಕಲ್ಪ ಕಾರ್ಯಕ್ರಮದಲ್ಲಿ ಈಶ್ವರಪ್ಪ ಭಾಷಣ ಮಾಡುತ್ತಿದ್ದಾಗ ಸ್ಥಳೀಯ ಮಸೀದಿಯಿಂದ ಆಜಾನ್ ಕೇಳಿಬಂದಿತ್ತು. ಆಗ ಅವರು, ನಾನು ಎಲ್ಲಿ ಹೋದರೂ ಇದೊಂದು ತಲೆನೋವು. ಮೈಕ್‌ನಲ್ಲಿ ಕೂಗಿದರೆ ಮಾತ್ರ ಅಲ್ಲಾಗೆ ಕಿವಿ ಕೇಳುವುದಾ? ಎಂದಿದ್ದರು. ನಂತರ ವಿವಾದವಾಗುತ್ತಿದ್ದಂತೆಯೇ ಸ್ಪಷ್ಟನೆ ನೀಡಿ, ನಾನು ಧಾರ್ಮಿಕ ನಿಂದನೆ ಮಾಡಿಲ್ಲ. ಆದರೆ ಆಜಾನ್ನಿಂದ ಮಕ್ಕಳ ಪರೀಕ್ಷೆ ಮೇಲೆ ಪರಿಣಾಮವಾಗುತ್ತದೆ ಎಂದು ಸ್ಪಷ್ಟನೆ ನೀಡಿದ್ದರು.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ಮಾಡಿ




