ಉಡುಪಿ: ಮಹಿಷ ದಸರಾಗೆ ಅವಕಾಶ ಕೊಟ್ಟರೆ ತಡೆಯುತ್ತೇವೆ: ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ
ದಸರಾ ಆಚರಣೆಗೆ ಭರ್ಜರಿ ಸಿದ್ಧತೆಗಳು ನಡೆಯುತ್ತಿದೆ. ಇದರ ನಡುವೆ ಮೈಸೂರು ಮಹಿಷ ದಸರಾಕ್ಕೆ ತಡೆ ಬರುತ್ತಿದ್ದಂತೆ ಉಡುಪಿಯಲ್ಲಿ ಮಹಿಷ ದಸರಾಕ್ಕೆ ವಿರೋಧ ವ್ಯಕ್ತವಾಗಿದೆ. ವಿಶ್ವ ಹಿಂದೂ ಪರಿಷತ್ ಭಜರಂಗ ದಳ ಮಹಿಷಾ ದಸರಾ ತಡೆಯುವುದಾಗಿ ಎಚ್ಚರಿಕೆ ನೀಡಿದೆ. ಕೇಂದ್ರ ಸಚಿವೆ ಸಂಸದೆ ಶೋಭಾ ಕರಂದ್ಲಾಜೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಉಡುಪಿ, ಅ.11: ನವರಾತ್ರಿ ಮತ್ತು ದಸರಾ ಮಹೋತ್ಸವಕ್ಕೆ ಇಡೀ ಕರ್ನಾಟಕ ಸಿದ್ಧವಾಗುತ್ತಿದೆ. ದೇವಾಲಯಗಳ ನಗರಿ ಉಡುಪಿ(Udupi)ಯ ದೇವಿ ದೇವಸ್ಥಾನಗಳಲ್ಲೂ ದಸರಾ ಮಹೋತ್ಸವ ವೈಭವವಾಗಿ ನಡೆಯುತ್ತದೆ. ಈ ನಡುವೆ ಪ್ರಪ್ರಥಮ ಬಾರಿಗೆ ಮಹಿಷ ದಸರಾ(Mahisha Dasara) ಆಚರಿಸುವುದಾಗಿ ದಲಿತ ಸಂಘರ್ಷ ಸಮಿತಿ ಹಾಗೂ ಅಂಬೇಡ್ಕರ್ ಯುವ ಸೇನೆ ಘೋಷಿಸಿತ್ತು. ಇದೀಗ ಕಾರ್ಯಕ್ರಮದ ರೂಪುರೇಷೆ ಸಿದ್ಧವಾಗುತ್ತಿರುವಾಗಲೇ ಭಾರಿ ವಿರೋಧ ವ್ಯಕ್ತವಾಗಿದೆ.
ಇನ್ನು ಮಹಿಷ ದಸರಾ ಆಯೋಜನೆ ಮಾಡಿ ದಲಿತರ ರಾಜ, ಮಹಿಷಮಂಡಲ ದೊರೆಗೆ ಗೌರವ ಕೊಡಬೇಕು ಎಂದು ಅಂಬೇಡ್ಕರ್ ಯುವ ಸೇನೆ ಪ್ಲ್ಯಾನ್ ಮಾಡಿತ್ತು. ಮೈಸೂರು ದಸರಾ ಸಂದರ್ಭ ಯಾವುದೇ ಸಮಸ್ಯೆ ಆಗಬಾರದು ಎಂದು ಚಾಮುಂಡಿ ಚಲೋ ಮತ್ತು ಮಹಿಷಾ ದಸರಾಕ್ಕೆ ಪೊಲೀಸರು ತಡೆ ಒಡ್ಡಿದ್ದಾರೆ. ಇದೇ ಮಾದರಿಯನ್ನು ಉಡುಪಿಯಲ್ಲಿ ಜಾರಿಗೆ ತರಬೇಕು ಎಂದು ವಿಶ್ವ ಹಿಂದೂ ಪರಿಷತ್ತು ಭಜರಂಗದಳ ಹಿಂದೂ ಸಮಾಜೋತ್ಸವ ವೇದಿಕೆಯಲ್ಲೇ ಒತ್ತಾಯಿಸಿದೆ.
ಇದನ್ನೂ ಓದಿ:ಮಹಿಷ ದಸರಾ-ಚಾಮುಂಡಿ ಬೆಟ್ಟ ಚಲೋ ಜಟಾಪಟಿ: ಮೈಸೂರು ನಗರ ಆಯುಕ್ತರು ಏನಂದ್ರು?
ಇನ್ನು ಕುರಿತು ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ‘ಹೊಸತೊಂದು ಆಚರಣೆ ಹುಟ್ಟುಹಾಕಿ ಬಹುಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ತರಬಾರದು. ಇದರ ಹಿಂದೆ ವಿಕೃತ ಮನಸ್ಸುಗಳು ಕೆಲಸ ಮಾಡುತ್ತಿದೆ. ಇಂತಹ ಆಲೋಚನೆಗಳನ್ನು ಆಯೋಜಕರು ಕೈಬಿಡಬೇಕು ಎಂದು ಮನವಿ ಮಾಡಿದ್ದಾರೆ.
ಮೈಸೂರಿನ ಬೆಳವಣಿಗೆ ನಂತರ ಉಡುಪಿಯಲ್ಲೂ ವಿರೋಧ
ಉಡುಪಿಯ ಹುತಾತ್ಮ ವೇದಿಕೆಯಿಂದ ಮೆರವಣಿಗೆ ಮಾಡಿ, ಟ್ಯಾಬ್ಲೋಗಳ ಜೊತೆ ಉಡುಪಿಯ ಪ್ರಮುಖ ರಸ್ತೆಗಳಲ್ಲಿ ಮಹಿಷ ಮಂಡಲದ ದೊರೆಯ ಮೆರವಣಿಗೆ ಮಾಡಬೇಕು ಎಂಬುದು ಅಂಬೇಡ್ಕರ್ ಯುವ ಸೇನೆಯ ಸಿದ್ಧತೆಯಾಗಿತ್ತು. ಆದಿ ಉಡುಪಿ ಅಂಬೇಡ್ಕರ್ ಭವನದಲ್ಲಿ ಈ ಬಗ್ಗೆ ಒಂದು ವಿಚಾರ ಸಂಕಿರಣ ಮಾಡುವ ಬಗ್ಗೆ ಘೋಷಣೆ ಮಾಡಿತ್ತು. ಮೈಸೂರಿನ ಬೆಳವಣಿಗೆ ನಂತರ ಉಡುಪಿಯಲ್ಲೂ ವಿರೋಧ ಬಂದಿದೆ. ಈ ಕುರಿತು ಜಿಲ್ಲಾಡಳಿತ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:22 pm, Wed, 11 October 23