ಓಟಿಪಿಯಿಂದ ಬದುಕಿತು ಬಡಜೀವ: 3 ದಿನ ಬಳಿಕ ಬಾವಿಯೊಳಗಿಂದ ಪವಾಡ ಸದೃಶರಾಗಿ ಬದುಕಿ ಬಂದ ವೃದ್ಧ

ರಾಜ್ಯದಲ್ಲಿ ಎಲ್​​ಪಿಜಿ ಅಭಾವದಿಂದ ಜನರು ಹೈರಾಣಾಗಿದ್ದಾರೆ. ಆದರೆ ಇದೇ ಗ್ಯಾಸ್​ ಸಿಲಿಂಡರ್​ ಓರ್ವ ವೃದ್ಧನ ಜೀವ ಉಳಿಸಿದೆ ಅಂದರೆ ನೀವು ನಂಬಲೇಬೇಕು. ಇಂತಹದೊಂದು ಅಪರೂಪದ ಘಟನೆ ಉಡುಪಿ ನಗರದ ಕೊಡವೂರು ವಾರ್ಡ್ ಕಂಬ್ಳಕಟ್ಟದಲ್ಲಿ ನಡೆದಿದೆ. ಗ್ಯಾಸ್​ ಸಿಲಿಂಡರ್​​ನಿಂದ ವೃದ್ಧನ ಜೀವ ಉಳಿದಿದ್ದು ಹೇಗೆ ಎಂದು ತಿಳಿದರೆ ಶಾಕ್​ ಆಗುತ್ತೀರಿ.

ಓಟಿಪಿಯಿಂದ ಬದುಕಿತು ಬಡಜೀವ: 3 ದಿನ ಬಳಿಕ ಬಾವಿಯೊಳಗಿಂದ ಪವಾಡ ಸದೃಶರಾಗಿ ಬದುಕಿ ಬಂದ ವೃದ್ಧ
ಅಗ್ನಿಶಾಮಕ ಸಿಬ್ಬಂದಿಯಿಂದ ವೃದ್ಧ ರಕ್ಷಣೆ
Image Credit source: tv9 kannada
Edited By:

Updated on: Apr 06, 2026 | 5:24 PM

ಉಡುಪಿ, ಏಪ್ರಿಲ್ 06: ‘ಮುಳುಗುವವನಿಗೆ ಹುಲ್ಲು ಕಡ್ಡಿ ಕೂಡ ಆಸರೆ’ ಎನ್ನುವಂತೆ ಅದೊಂದು ಗ್ಯಾಸ್ ಸಿಲಿಂಡರ್​ ಓಟಿಪಿಯಿಂದ ವೃದ್ಧ ಜೀವವೊಂದು ದೊಡ್ಡ ಅಪಾಯದಿಂದ ಬದುಕಿಬಂದಿದೆ. ಆಯತಪ್ಪಿ ಬಾವಿಗೆ ಬಿದ್ದಿದ್ದ ವ್ಯಕ್ತಿಯನ್ನು ಗ್ಯಾಸ್ ಸಿಲಿಂಡರ್ (Gas cylinder) ಓಟಿಪಿಯಿಂದ ರಕ್ಷಣೆ ಮಾಡಲಾಗಿದೆ. ಆ ಮೂಲಕ ಅಪರೂಪದ ಘಟನೆಗೆ ಉಡುಪಿ (udupi) ಜಿಲ್ಲೆ ಸಾಕ್ಷಿ ಆಗಿದೆ. ಸದ್ಯ ರಕ್ಷಣೆಗೊಳಗಾದ ವೃದ್ಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಡೆದಿದ್ದೇನು?

ಉಡುಪಿ ನಗರದ ಕೊಡವೂರು ವಾರ್ಡ್ ಕಂಬ್ಳಕಟ್ಟದಲ್ಲಿ ನಿರ್ಜನ ಪ್ರದೇಶದ ಮನೆಯಲ್ಲಿ ಶೀನಿವಾಸ್​​ ಆಚಾರ್ಯ(62) ಎಂಬುವವರು ಒಬ್ಬಂಟಿಯಾಗಿ ವಾಸಿಸುತ್ತಿದ್ದಾರೆ. ಇತ್ತೀಚೆಗೆ ಅನಾರೋಗ್ಯದಿಂದ ಸುಧಾರಿಸಿಕೊಂಡದ್ದ ಅವರು ತೋಟಕ್ಕೆ ನೀರು ಹಾಯಿಸಲು ಅದೊಂದು ದಿನ ತೆರಳಿದ್ದಾರೆ. ಬಾವಿಗೆ ಹಾಕಿದ್ದ ಪಂಪ್​​ನಲ್ಲಿ ಕಸ ತುಂಬಿದೆ. ಅದನ್ನ ಸ್ವಚ್ಛ ಮಾಡಲು ಬಾವಿ ಕಡೆಗೆ ತೆರಳಿದ್ದಾರೆ. ಪೈಪ್ ಎಳೆಯಲು ಹೋಗಿ ಹಗ್ಗ ತುಂಡಾಗಿದೆ. ಈ ವೇಳೆ ಅವರು ಕೂಡ ಆಯತಪ್ಪಿ ಸುಮಾರು 15 ರಿಂದ 20 ಅಡಿ ಆಳದ ಬಾವಿಗೆ ಬಿದ್ದಿದ್ದಾರೆ.

ಇದನ್ನೂ ಓದಿ: ಕರಾವಳಿಯಲ್ಲಿ ಮತ್ತೆ ಕಾರಣಿಕ ತೋರಿದ ದೈವ: ತನ್ನಿಂದ ತಾನೆ ತೂಗಿತು ಉಯ್ಯಾಲೆ! ಪಿಲಿಚಂಡಿ ಕಾರ್ಣಿಕ ಕಂಡು ಭಕ್ತರು ಶಾಕ್

ಒಂಟಿ ಮನೆ ಹಾಗೂ ಏಕಾಂಗಿಯಾಗಿ ಶ್ರೀನಿವಾಸ್​ ಆಚಾರ್ಯ ವಾಸಿಸುತ್ತಿದ್ದ ಹಿನ್ನೆಲೆ ಯಾರ ಗಮನಕ್ಕೂ ಬಂದಿರಲಿಲ್ಲ. ಬಾವಿ ಒಳಗಿಂದ ಎಷ್ಟೇ ಬೊಬ್ಬೆ ಹೊಡೆದರು ಯಾರ ಅರಿವಿಗೂ ಬಂದಿಲ್ಲ. ಇನ್ನೇನು ಮಾಡುವುದು ಎಂದು ಬಾವಿಯಲ್ಲಿದ್ದ ಪೈಪ್​​ವೊಂದನ್ನು ಹಿಡಿದು ಕುಳಿತುಕೊಂಡಿದ್ದಾರೆ. ಶ್ರೀನಿವಾಸ್​​ ಆಚಾರ್ಯ ಅವರು ಹೇಳುವ ಪ್ರಕಾರ ಮೂರು ದಿನಗಳ ಕಾಲ ಬಾವಿಯಲ್ಲಿ ಇದ್ದೆ ಎನ್ನುತ್ತಿದ್ದಾರೆ.

ಜೀವ ಉಳಿಸಿತು ಗ್ಯಾಸ್ ಸಿಲಿಂಡರ್ ಓಟಿಪಿ

ಹೌದು. ಶ್ರೀನಿವಾಸ್​​ ಆಚಾರ್ಯರ ಜೀವ ಉಳಿಸಿದ್ದು ಗ್ಯಾಸ್​​ ಸಿಲಿಂಡರ್​ ಎಂದರೆ ನೀವು ನಂಬಲೇಬೇಕು. ಶ್ರೀನಿವಾಸ್ ಅವರು ಸಿಂಗಲ್ ಗ್ಯಾಸ್ ಸಿಲಿಂಡರ್ ಹೊಂದಿದ್ದಾರೆ. ಗ್ಯಾಸ್ ಬುಕ್ ಮಾಡಿ ಪರಿಚಯಸ್ಥರಾದ ಗಣೇಶ್ ಎಂಬವರಿಂದ ಖಾಲಿ ಸಿಲಿಂಡರ್ ಪಡೆದಿದ್ದರು. ಆ ಮೂಲಕ ಹೊಸ ಸಿಲಿಂಡರ್ ಪಡೆಯುವ ನಿರೀಕ್ಷೆಯಲ್ಲಿದ್ದರು. ಈ ನಡುವೆ ಬಾವಿಗೆ ಬಿದ್ದಿದ್ದಾರೆ.

ಮೂರು ದಿನದ ಬಳಿಕ ಪತ್ತೆ

ಹೊಸ ಸಿಲಿಂಡರ್ ಪಡೆಯಲು ಓಟಿಪಿ ಬೇಕಾಗಿತ್ತು. ಗ್ಯಾಸ್ ಸರಬರಾಜಿಗೆ ಬಂದಾಗ ಶ್ರೀನಿವಾಸ್ ಆಚಾರ್ಯ ಮನೆಯಿಂದ ನಾಪತ್ತೆಯಾಗಿದ್ದರು. ಸ್ಥಳೀಯರು ಸಿಲಿಂಡರ್​ ನೀಡಿದ್ದ ಗಣೇಶ್​​ ಅವರಿಗೆ ಮಾಹಿತಿ ನೀಡಿದ್ದಾರೆ. ಗಣೇಶ್ ತಮ್ಮ ಬಾಡಿಗೆ ಮನೆಯಲ್ಲಿ ಇರುವ ವ್ಯಕ್ತಿಗಳ ಮೂಲಕ ಶ್ರೀನಿವಾಸ್​ಗಾಗಿ ಹುಡುಕಾಡಿದ್ದಾರೆ. ಈ ವೇಳೆ ತೋಟದ ಮನೆಯ ಮೂಲೆಯಲ್ಲಿರುವ ಬಾವಿಯಲ್ಲಿ ಶ್ರೀನಿವಾಸ್ ಬಿದ್ದಿರುವುದು ಪತ್ತೆ ಆಗಿದೆ.

ಇದನ್ನೂ ಓದಿ: ಫಲಕೊಟ್ಟ ವಯಸ್ಕರ ಶಿಕ್ಷಣ ಅಭಿಯಾನ: ಉಡುಪಿ ಶೀಘ್ರವೇ ಪೂರ್ಣ ಸಾಕ್ಷರ ಜಿಲ್ಲೆ; ಘೋಷಣೆಯೊಂದೇ ಬಾಕಿ

ತಕ್ಷಣವೇ ಕಾರ್ಯಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ, ಶ್ರೀನಿವಾಸ್ ಆಚಾರ್ಯರನ್ನು ಬಾವಿಯಿಂದ ಮೇಲಕ್ಕೆ ಎತ್ತುವ ಮೂಲಕ ರಕ್ಷಣೆ ಮಾಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವ ಅವರು ಸಂಪೂರ್ಣ ಗುಣಮುಖರಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:22 pm, Mon, 6 April 26

ಪ್ರಜ್ವಲ್ ಅಮೀನ್​, ಉಡುಪಿ

ಪ್ರಜ್ವಲ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪಡೆದಿರುತ್ತಾರೆ. ಉಡುಪಿ ಜಿಲ್ಲೆಯ ಸ್ಥಳೀಯ ಖಾಸಗಿ ಸುದ್ದಿವಾಹಿನಿಯ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ ಇವರು ಬಳಿಕ ಪ್ರಜಾವಾಣಿಯ ವರದಿಗಾರನಾಗಿ ಕೆಲಸ ಮಾಡಿರುತ್ತಾರೆ. ನಂತರ 6 ವರ್ಷ ಟಿ.ವಿ 5ನ ದಕ್ಷಿಣ ಕನ್ನಡ ಜಿಲ್ಲಾ ವರದಿಗಾರನಾಗಿ ನಂತರ ದಿಗ್ವಿಜಯ ನ್ಯೂಸ್ ನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವರದಿಗಾರನಾಗಿ ಕಾರ್ಯನಿರ್ವಾಹಸಿದ್ದಾರೆ. ಕಳೆದ ಹನ್ನೊಂದು ತಿಂಗಳಿನಿಂದ ಟಿ.ವಿ 9 ಸಂಸ್ಥೆಯಲ್ಲಿ ಉಡುಪಿ ಜಿಲ್ಲಾ ವರದಿಗಾರನಾಗಿ ಕಾರ್ಯನಿರ್ವಾಹಿಸುತ್ತಿದ್ದಾರೆ.

Read More
Follow Us