
ಉಡುಪಿ, ಜುಲೈ 11: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಿಜೆಪಿ ಮುಖಂಡ ಜಗನ್ನಿವಾಸ ರಾವ್ (Puttur BJP leader) ಪುತ್ರ ಓರ್ವ ಯುವತಿಯನ್ನು ಪ್ರೀತಿಸಿ ಗರ್ಭಿಣಿ ಮಾಡಿದ್ದ ಪ್ರಕರಣದಲ್ಲಿ ಈಗ ಭೂಗತ ಪಾತಕಿಯ ಎಂಟ್ರಿ ಆಗಿದೆ. ‘ಟಿವಿ9’ ವಾಹಿನಿಯ ಉಡುಪಿ ವರದಿಗಾರರಿಗೆ ಭೂಗತ ಪಾತಕಿ ಕಲಿ ಯೋಗೀಶ್ (Kali Yogish) ಹೆಸರಿನಲ್ಲಿ ಕರೆ ಮಾಡಿದ ಆರೋಪಿ, ಕೃಷ್ಣ ಜೆ.ರಾವ್ ಜೈಲಿನಿಂದ ಹೊರ ಬಂದ ಮೇಲೆ ಯುವತಿಯನ್ನು ಮದುವೆ ಆಗಿಲ್ಲ ಎಂದಾದರೆ ಗುಂಡು ಹೊಡೆದು ಸಾಯಿಸುವುದಾಗಿ ಎಚ್ಚರಿಕೆ ನೀಡಿದ್ದಾನೆ. ಅಷ್ಟೇ ಅಲ್ಲದೆ, ಹಿಂದೂ ಸಂಘಟನೆ ಮತ್ತು ಬಿಜೆಪಿ ನಾಯಕರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಟಿವಿ9 ಪ್ರತಿನಿಧಿಗೆ ಭೂಗತ ಪಾತಕಿ ಕಲಿ ಯೋಗೇಶ್ ಅಂತೇಳಿ ಕರೆ ಮಾಡಿದ ವ್ಯಕ್ತಿ, ಬಿಜೆಪಿ ಮುಖಂಡನ ಪುತ್ರನ ಪ್ರಕರಣದ ಬಗ್ಗೆ ನಮಗೂ ದೂರು ಬಂದಿದೆ. ಓರ್ವ ಯುವತಿಯನ್ನು ಗಭಿ೯ಣಿ ಮಾಡಿ ಮೋಸ ಮಾಡಿದ್ದು, ಈಗ ಜೈಲಿನಲ್ಲಿ ಇರಬೇಕು. ಅನ್ಯಾಯವಾಗಿದೆ ಎಂದು ದೂರು ಬಂದಿದೆ. ಸಂತ್ರಸ್ತೆ ಮನೆಯವರ ಪರ ರಾಜಕೀಯದವರು ಯಾರೂ ನಿಲ್ಲುತ್ತಿಲ್ಲ. ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿ ಹಿಂದೂ ಅಲ್ಲವೇ? ಅವರ ಬಳಿ ಹಣವಿಲ್ಲ ಅಂತ ಬಿಟ್ಟುಬಿಡುವುದಾ ಹಿಂದೂ ಸಂಘಟನೆ ಮತ್ತು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪುತ್ತೂರು: ಯುವತಿಯ ಗರ್ಭಿಣಿ ಮಾಡಿ ಪರಾರಿಯಾಗಿದ್ದ ಬಿಜೆಪಿ ಮುಖಂಡನ ಪುತ್ರ ಕೊನೆಗೂ ಅರೆಸ್ಟ್, ಮೈಸೂರಿನಲ್ಲಿ ಸಿಕ್ಕಿಬಿದ್ದ ಆರೋಪಿ
ನಾನು ಹೇಳುವುದು ಇಷ್ಟೇ ಎರಡು ಸಮುದಾಯದರು ಕೂತು ಮಾತನಾಡಿ ಇತ್ಯರ್ಥ ಮಾಡಿ ಯುವತಿಯೊಂದಿಗೆ ಆ ಯುವಕನ ಮದುವೆ ಮಾಡಬೇಕು. ಜೈಲಿನಿಂದ ಹೊರ ಬಂದ ಮೇಲೆ ಹಿಂದೂ ಸಂಘಟನೆಗಳು ಮುಂದೆ ನಿಂತು ಮದುವೆ ಮಾಡಿಸಲಿ. ಒಂದೇ ವೇಳೆ ಮದುವೆ ಆಗಿಲ್ಲ ಅಂದರೆ ಆರೋಪಿ ಕೃಷ್ಣ ಜೆ.ರಾವ್ಗೆ ಗುಂಡು ಹೊಡೆಯುತ್ತೇವೆ ಬದುಕುವುದೇ ಬೇಡ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿ ಮುಖಂಡನ ಪುತ್ರನ ವಿರುದ್ಧ ಅತ್ಯಾಚಾರ ಕೇಸ್: ಮಗುವಿನ ಜನ್ಮ ನೀಡಿದ ಸಂತ್ರಸ್ತೆ
ಮತ್ತೆ ಮಾತು ಮುಂದುವರೆಸಿದ ವ್ಯಕ್ತಿ, ನಟ ಗಣೇಶ್-ಶಿಲ್ಪಾ ವಿಚಾರದಲ್ಲೂ ಹೀಗೇ ಆಗಿತ್ತು. ಆವಾಗ ನನ್ನ ಬಾಸ್ ರವಿ ಪೂಜಾರಿ ಜನ ಕಳಿಸಿದ್ದರು. ಗಣೇಶ್-ಶಿಲ್ಪಾ ಮದುವೆಯನ್ನು ನಾವೇ ಮಾಡಿಸಿದ್ದು ಎಂದಿದ್ದಾರೆ.
ಬಿಜೆಪಿ ಮುಖಂಡ ಜಗನ್ನಿವಾಸ ರಾವ್ ಪುತ್ರ ಕೃಷ್ಣ ಜೆ.ರಾವ್, ಪ್ರೀತಿಯ ನಾಟಕವಾಡಿ ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಮೋಸ ಮಾಡಿದ್ದಾನೆ. ಆತನ ವಯಸ್ಸು ಕಡಿಮೆ ಇದ್ದು, 21 ವರ್ಷದ ಬಳಿಕ ಮದುವೆ ಆಗುವುದಾಗಿ ಮುಚ್ಚಳಿಕೆ ಪತ್ರ ಬರೆದುಕೊಡಲಾಗಿತ್ತು. ಆದರೆ ಅಷ್ಟರಲ್ಲಿ ಆಕೆಗೆ ಮಗು ಜನಿಸಿದೆ. ಇತ್ತ ಕೃಷ್ಣ ಮದುವೆ ನಿರಾಕರಿಸಿದ್ದಾನೆ. ನಂತರ ಯುವತಿ ನೀಡಿದ ದೂರು ಆಧರಿಸಿ ಕೃಷ್ಣ ವಿರುದ್ಧ ಎಫ್ಐಆರ್ ದಾಖಲಿಸಿ ಬಂಧಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:04 pm, Fri, 11 July 25