1990ರಲ್ಲೇ ಐವರು ಮಕ್ಕಳಿಂದ ಉಡುಪಿಯಲ್ಲಿ ನಿರ್ಮಾಣವಾಯ್ತು ರಾಮ ಮಂದಿರ: ಈಗ ಹೀಗಿದೆ ಗೊತ್ತಾ?
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮದ ವ್ಯಾಪ್ತಿಯಲ್ಲಿ ಮಕ್ಕಳು ಮನೆಯಿಂದ ರಾಮನ ಫೋಟೋ ತಂದು ಇಟ್ಟು ತೆಂಗಿನಗರಿಗಳನ್ನ ಬಳಸಿ ಮಂದಿರವನ್ನು ನಿರ್ಮಿಸುತ್ತಾರೆ. ಮನೆಯಿಂದ ತಂದ ಸಕ್ಕರೆಯನ್ನು ಪ್ರಸಾದ ರೂಪದಲ್ಲಿ ವಿತರಿಸುವ ಕೆಲಸವನ್ನು ಈ ಮಕ್ಕಳು ಮಾಡುತ್ತಾರೆ.
ಉಡುಪಿ, ಜನವರಿ 03: ಕೋಟ್ಯಾಂತರ ಭಾರತೀಯರ ಕನಸಿನ ರಾಮಮಂದಿರ (Ram Mandir) ಲೋಕಾರ್ಪಣೆಗೆ ಕ್ಷಣಗಣನೆ ಆರಂಭ ವಾಗಿದೆ. ಅಯೋಧ್ಯೆಯಲ್ಲಿ ರಾಮ ವಿರಾಜಮಾನರಾಗೋದನ್ನು ನೋಡಲು ಕೋಟ್ಯಾಂತರ ರಾಮ ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಉಡುಪಿಯ ಈ ರಾಮಮಂದಿರದಲ್ಲೂ ರಾಮಲಲ್ಲಾ ಪ್ರತಿಷ್ಠಾಪನೆಯ ಸಂಭ್ರಮ ಮನೆ ಮಾಡಿದೆ. ಕರಸೇವೆಯ ದಿನದಂದೇ ಐದು ಜನ ಯುವಕರು ಇಲ್ಲಿ ಮಂದಿರ ನಿರ್ಮಾಣ ಮಾಡಿದ್ದು, ಇದೀಗ ಆಯೋಧ್ಯೆಯಲ್ಲಿ ರಾಮಮಂದಿರ ಆಗುತ್ತಲೇ ಆಗ ಪ್ರತಿಷ್ಠಾಪಿಸಿದ ಈ ಮಂದಿರದಲ್ಲೂ ಹಬ್ಬದ ವಾತವರಣ ನಿರ್ಮಾಣವಾಗಿದೆ.
ಎಂಬತ್ತರ ದಶಕದಲ್ಲಿ ಅಯೋಧ್ಯ ರಾಮ ಜನ್ಮ ಭೂಮಿಯಲ್ಲಿ ಶ್ರೀ ರಾಮನನ್ನ ಪ್ರತಿಷ್ಠಾಪನೆ ಮಾಡಬೇಕು ಎನ್ನುವ ಹೋರಾಟದ ಕಿಚ್ಚು ಹತ್ತಿತ್ತು. 90ರ ದಶಕದ ಪ್ರಾರಂಭದಲ್ಲಿ ಕರಾವಳಿಯಲ್ಲಿ ಶ್ರೀರಾಮ ಮಂದಿರದ ಹೋರಾಟ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದ ಕಾಲ. ಇಂತಹ ಸಂದರ್ಭದಲ್ಲಿ ಟಿವಿಯಲ್ಲಿ ಬರುತ್ತಿದ್ದ ರಾಮಾಯಣದ ಧಾರವಾಹಿಯನ್ನು ನೋಡಿ ಪ್ರೇರೆಪಿತರಾದ ಐದು ಜನ ಮಕ್ಕಳು ನಾವು ರಾಮಮಂದಿರವನ್ನು ನಿರ್ಮಿಸಬೇಕು ಎನ್ನುವ ಸಂಕಲ್ಪ ಮಾಡಿದ್ದರು.
ಇದನ್ನೂ ಓದಿ: ಸಿದ್ದರಾಮಯ್ಯರೊಳಗೂ ರಾಮನಿದ್ದಾನೆ: ಉಡುಪಿ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮದ ವ್ಯಾಪ್ತಿಯಲ್ಲಿ ಮಕ್ಕಳು ಮನೆಯಿಂದ ರಾಮನ ಫೋಟೋ ತಂದು ಇಟ್ಟು ತೆಂಗಿನಗರಿಗಳನ್ನ ಬಳಸಿ ಮಂದಿರವನ್ನು ನಿರ್ಮಿಸುತ್ತಾರೆ. ಮನೆಯಿಂದ ತಂದ ಸಕ್ಕರೆಯನ್ನು ಪ್ರಸಾದ ರೂಪದಲ್ಲಿ ವಿತರಿಸುವ ಕೆಲಸವನ್ನು ಈ ಮಕ್ಕಳು ಮಾಡುತ್ತಾರೆ.
1990ರಲ್ಲಿ ತೆಂಗಿನ ಗರಿಗಳನ್ನ ನಿರ್ಮಿಸಿ ಪ್ರಾರಂಭವಾದ ಈ ರಾಮಮಂದಿರ ಇಂದು ಪರಿಪೂರ್ಣ ಮಂದಿರವಾಗಿ ನಿರ್ಮಾಣವಾಗಿದೆ. ಮಕ್ಕಳ ಈ ರಾಮಮಂದಿರದ ಕನಸಿಗೆ ಊರಿನ ಹಿರಿಯರು ಸಹಕಾರ ನೀಡಿದ ಪರಿಣಾಮ ಎನ್ನುವಂತೆ ತೆಂಗಿನ ಗರಿಯಲ್ಲಿದ್ದ ಶ್ರೀರಾಮ ಮಂದಿರ ಈಗ ಹೊಸ ರೂಪ ಪಡೆದುಕೊಂಡು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದಾನೆ.
ಇದನ್ನೂ ಓದಿ: ಕರ್ನಾಟಕದ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ರಾಮಲಲ್ಲಾ ವಿಗ್ರಹ ಫೈನಲ್, ಮೂರ್ತಿ ಹೇಗಿದೆ ಗೊತ್ತಾ?
ಬಹುತೇಕ ಕಡೆಗಳಲ್ಲಿ ಶ್ರೀರಾಮ ಸೀತೆ ಲಕ್ಷ್ಮಣ ಹಾಗೂ ಆಂಜನೇಯನ ಸಮೇತವಾಗಿ ಶ್ರೀರಾಮ ಮಂದಿರ ನಿರ್ಮಾಣವಾಗಿರುವುದನ್ನು ನಾವು ನೋಡಬಹುದು. ಆದರೆ ಸಾಲಿಗ್ರಾಮದಲ್ಲಿ ಮಕ್ಕಳು ನಿರ್ಮಿಸಿದ ರಾಮ ಮಂದಿರದಲ್ಲಿ ಕೇವಲ ಕೋದಂಡರಾಮನನ್ನ ಮಾತ್ರ ನೋಡಬಹುದಾಗಿದೆ. ಇಲ್ಲಿ ಯಾವುದೇ ತಂತ್ತಿಯನ್ನು ಕರೆಸಿ ವಿಗ್ರಹ ಪ್ರತಿಷ್ಠಾಪನೆ ಮಾಡದೆ ಮಕ್ಕಳೇ ಪ್ರತಿಷ್ಠಾಪನೆ ಮಾಡಿದ್ದಾರೆ. ಈ ಮಂದಿರದಲ್ಲಿ ಎಲ್ಲಾ ಜಾತಿಯವರು ಕೂಡ ಇಲ್ಲಿ ಪೂಜಿಸುವ ಅವಕಾಶವನ್ನು ನೀಡಲಾಗಿದ್ದು, ಇಂದಿಗೂ ರಾಮ ನವಮಿಯ ಸಂದರ್ಭ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಮಕ್ಕಳು ನಿರ್ಮಿಸಿದ ಶ್ರೀರಾಮ ಮಂದಿರ, ಹೋರಾಟದ ಪ್ರತಿರೂಪ ಎನ್ನುವಂತೆ ನಿಂತಿದೆ. ಅಯೋಧ್ಯೆಯಲ್ಲಿ ರಾಮಮಂದಿರದ ಲೋಕಾರ್ಪಣೆ ಸಂದರ್ಭದಲ್ಲಿ ಇಲ್ಲಿ ವಿಶೇಷ ಸಂಭ್ರಮಾಚರಣೆಗಳನ್ನು ಆಯೋಜಿಸಿರುವುದು ಇಲ್ಲಿನ ರಾಮಭಕ್ತರ ಸಂತಸಕ್ಕೆ ಕಾರಣವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.