ಕೇಸರಿ ಅಂದರೆ ಕೆಲವರಿಗೆ ಬಹಳ ತುರಿಕೆ: ಕಲ್ಲಡ್ಕ ಪ್ರಭಾಕರ್ ಭಟ್ ಆಕ್ರೋಶ
ಆ್ಯಕ್ಷನ್ಗೆ ರಿಯಾಕ್ಷನ್ ತೋರಿಸದೆ ಹಿಂದೂ ಸಮಾಜ ಸೋತಿದೆ. ಇನ್ನು ಮುಂದೆ ಹಿಂದೂಗಳು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಉಡುಪಿ: ನಿಯಮಕ್ಕೆ ವಿರುದ್ಧವಾದ ಹಿಜಾಬ್ ಕೆಲವರಿಗೆ ತಪ್ಪಾಗಲಿಲ್ಲ. ಆದರೆ ನಮ್ಮ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿದ್ದೇ ತಪ್ಪಾಯ್ತಾ? ಕೇಸರಿ ಅಂದರೆ ಕೆಲವರಿಗೆ ಬಹಳ ತುರಿಕೆ ಎಂದು ಉಡುಪಿಯಲ್ಲಿ ಸಂಘ ಪರಿವಾರದ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ (Kalladka Prabhakar Bhat) ಹೇಳಿದರು. ಆ್ಯಕ್ಷನ್ಗೆ ರಿಯಾಕ್ಷನ್ ತೋರಿಸದೆ ಹಿಂದೂ ಸಮಾಜ ಸೋತಿದೆ. ಹೊಡೆದರೂ ಬಡಿದರೂ ಹಿಂದುಗಳು ಸುಮ್ಮನಿರಬೇಕಂತೆ. ಇನ್ನು ಮುಂದೆ ಹಿಂದೂಗಳು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಹಿಂದೂ ಸಮಾಜವು ಪ್ರತಿಕ್ರಿಯಿಸಬೇಕಾದ ಅಗತ್ಯವಿದೆ. ಹಿಜಾಬ್ ಎನ್ನುವುದು ಒಂದು ಕೇವಲ ಬಟ್ಟೆಗೆ ಸಂಬಂಧಿಸಿದ ಹೋರಾಟ ಅಲ್ಲ. ಇದರಲ್ಲಿ ದೇಶವನ್ನು ಇನ್ನೊಮ್ಮೆ ವಿಭಜಿಸುವ ಹುನ್ನಾರವಿದೆ ಎಂದು ಅವರು ವಿಶ್ಲೇಷಿಸಿದರು.
ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಗತಿಪರರ ಚಿಂತನೆಯನ್ನು ತರಾಟೆಗೆ ತೆಗೆದುಕೊಂಡರು. ಹಿಜಾಬ್ ಹುನ್ನಾರಕ್ಕೆ ನಾವು ಪ್ರತಿಕ್ರಿಯಿಸಿದ್ದರಿಂದಲೇ ಅದು ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಯಿತು. ಜಗತ್ತಿನ ಸರ್ವಶ್ರೇಷ್ಠ ಜೀವನಪದ್ಧತಿ ಇರುವುದು ಹಿಂದೂಧರ್ಮದಲ್ಲಿ ಮಾತ್ರ. ಸರ್ವಧರ್ಮ ಸಮ್ಮೇಳನ ಎಂಬ ಶಬ್ದವೇ ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಸರ್ವಧರ್ಮ ಸಮ್ಮೇಳನಗಳಲ್ಲಿ ಮುಸ್ಲಿಮರು ಪಾಲ್ಗೊಳ್ಳುವುದು ನಾಚಿಕೆಗೇಡು. ಒಂದು ದೇವರನ್ನು ಪೂಜೆ ಮಾಡಿ ಎಂದು ಹೇಳುವ ಕ್ರೈಸ್ತ ಮತ್ತು ಇಸ್ಲಾಂ ಮತಗಳು ಧರ್ಮವಾಗಲು ಸಾಧ್ಯವಿಲ್ಲ. ನಿಯಮ ಪಾಲಿಸದವರನ್ನು ಕತ್ತರಿಸುವ ಮತಗಳು ಹೇಗೆ ಧರ್ಮವಾಗಲು ಸಾಧ್ಯ? ನಮ್ಮ ಧರ್ಮವನ್ನು ಒಪ್ಪಿಕೊ, ಮತಾಂತರವಾಗು, ಇಲ್ಲದಿದ್ದರೆ ಓಡಿಹೋಗು ಎನ್ನುವ ನಿಯಮ ಇರುವ ಧರ್ಮ ಧರ್ಮವೇ ಅಲ್ಲ ಎಂದು ಹೇಳಿದರು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:11 pm, Thu, 9 June 22