ಬೈಂದೂರು: ಕಾಣೆ, ಅಂಜಲ್, ಭೂತಾಯಿ ಇಷ್ಟ – ಚುನಾವಣೆ ಪ್ರಚಾರದ ವೇಳೆ ಶಿವಣ್ಣ ಮೀನೂಟದ ಮಾತು!

| Updated By: Ganapathi Sharma

Updated on: Mar 21, 2024 | 1:12 PM

ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಸ್ಯಾಂಡಲ್​ವುಡ್ ನಟ ಶಿವರಾಜ್ ಕುಮಾರ್ ಕಾಂಗ್ರೆಸ್ ಪಕ್ಷದ ಪರ ಭರ್ಜರಿ ಚುನಾವಣಾ ಪ್ರಚಾರ ಅಭಿಯಾನ ನಡೆಸಿದ್ದಾರೆ. ಇದೇ ವೇಳೆ ಅವರು, ಕರಾವಳಿ ಪ್ರದೇಶದಲ್ಲಿ ನಡೆದಿರುವ ಚಿತ್ರೀಕರಣ, ಮೀನು ಊಟ ಸವಿದಿದ್ದು ಇತ್ಯಾದಿ ನೆನಪುಗಳನ್ನು ಮೆಲಕು ಹಾಕಿದರು. ಶಿವಣ್ಣ ಮಾತಿನ ವಿವರಗಳಿಗಾಗಿ ಮುಂದೆ ಓದಿ.

ಬೈಂದೂರು: ಕಾಣೆ, ಅಂಜಲ್, ಭೂತಾಯಿ ಇಷ್ಟ - ಚುನಾವಣೆ ಪ್ರಚಾರದ ವೇಳೆ ಶಿವಣ್ಣ ಮೀನೂಟದ ಮಾತು!
ಬೈಂದೂರಿನಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಅಭಿಯಾನದಲ್ಲಿ ಶಿವರಾಜ್ ಕುಮಾರ್
Follow us on

ಉಡುಪಿ, ಮಾರ್ಚ್​ 21: ಚುನಾವಣಾ ಪ್ರಚಾರದ ವೇಳೆ ಸ್ಯಾಂಡಲ್​ವುಡ್ ಸ್ಟಾರ್ ಶಿವರಾಜ್ ಕುಮಾರ್ (Shiva Rajkumar) ಮೀನು ಊಟದ ಬಗ್ಗೆ ಮಾತನಾಡಿದ್ದಾರೆ! ಹೌದು, ಉಡುಪಿ (Udupi) ಜಿಲ್ಲೆಯ ಬೈಂದೂರಿನಲ್ಲಿ (Baindur) ಕಾಂಗ್ರೆಸ್ (Congress) ಪಕ್ಷದ ಚುನಾವಣಾ ಪ್ರಚಾರ ಅಭಿಯಾನದಲ್ಲಿ ಶುಕ್ರವಾರ ಭಾಗವಹಿಸಿದ ಅವರು, ಕರಾವಳಿಯ ಜನರ ಬಗ್ಗೆ ಪ್ರೀತಿ-ಅಭಿಮಾನದ ಮಾತುಗಳನ್ನಾಡಿದ್ದಾರೆ. ಕಾಣೆ, ಅಂಜಲ್, ಭೂತಾಯಿ ಮೀನೆಂದರೆ ನನಗೆ ಇಷ್ಟ. ಅದೇ ರೀತಿ ಇಲ್ಲಿನ ಜನರ ಬಗ್ಗೆಯೂ ವಿಶೇಷ ಪ್ರೀತಿ ಇದೆ ಎಂದು ಶಿವಣ್ಣ ಹೇಳಿದ್ದಾರೆ.

‘ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು. ಇದಕ್ಕೆ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಗಿಂತ ಬೇರೆ ಉದಾಹರಣೆ ಬೇಕಾ? ನನ್ನ ಪತ್ನಿ ಗೀತಾ ಶಕ್ತಿಧಾಮ ನಿರ್ವಹಣೆ ಮಾಡುತ್ತಿದ್ದಾರೆ. ಆಕೆಗೆ ಸೇವಾ ಅನುಭವ ಇದೆ. ಚುನಾವಣೆಯಲ್ಲಿ ಜನರ ಆಶೀರ್ವಾದಕ್ಕಾಗಿ ಬಂದಿದ್ದೇವೆ’ ಎಂದು ಶಿವರಾಜ್ ಕುಮಾರ್ ಹೇಳಿದರು.

ಕಾಂಗ್ರೆಸ್ ಪರ ಮಾತ್ರ ಪ್ರಚಾರ: ಶಿವರಾಜ್ ಕುಮಾರ್

ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಕೂಡ ಇಂಡಿಯನ್ ಪಾರ್ಟಿಗಳೇ. ಎರಡು ಪಕ್ಷಗಳಲ್ಲಿ ನನಗೆ ಹೆಚ್ಚು ವ್ಯತ್ಯಾಸ ಕಾಣಿಸುತ್ತಿಲ್ಲ. ಬೇರೆ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪರ ಮಾತ್ರ ಪ್ರಚಾರ ಮಾಡುತ್ತೇನೆ. ಉಡುಪಿ ಶಿವಮೊಗ್ಗ ಜೊತೆ ನಮಗೆ ಬಹಳ ನಂಟಿದೆ. ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಚಿತ್ರ ಇಲ್ಲೇ ಶೂಟಿಂಗ್ ಆಗಿತ್ತು. ಅಪ್ಪಾಜಿ (ರಾಜ್ ಕುಮಾರ್) ಬಿಟ್ರೆ ನಾನು ಹೆಚ್ಚು ಶೂಟಿಂಗ್ ಕರಾವಳಿಯಲ್ಲಿ ಮಾಡಿದ್ದೇನೆ. ಎರಡನೇ ಸಲ ಬೈಂದೂರಿಗೆ ಬರುತ್ತಿದ್ದೇವೆ. ಖಂಡಿತಾ ಒಳ್ಳೆ ಕೆಲಸ ಮಾಡುತ್ತೇವೆ. ಅವಕಾಶ ಕೊಡಿ ಎಂದು ಶಿವಣ್ಣ ಜನರಲ್ಲಿ ಮನವಿ ಮಾಡಿದರು.

ನಮಗೆ ಬಂಗಾರಪ್ಪ ಆಶೀರ್ವಾದ, ಮಧು ಬಂಗಾರಪ್ಪ ಸಾಥ್ ಇದೆ. ಕೊಲ್ಲೂರಿನ ತಾಯಿ ಮೂಕಾಂಬಿಕಾ ಆಶೀರ್ವಾದ ಬೇಡಿದ್ದೇವೆ. ಇದೀಗ ಜನರ ಆಶೀರ್ವಾದಕ್ಕಾಗಿ ಬಂದಿದ್ದೇವೆ. ಫಿಲಂ ಚೇಂಬರ್, ಪ್ರೊಡ್ಯೂಸರ್ ಎಲ್ಲರೂ ಪ್ರಚಾರಕ್ಕೆ ಬರುತ್ತಾರೆ. ಶೇಕಡ 85ರಷ್ಟು ನಾನು ಕ್ಷೇತ್ರದಲ್ಲಿ ಪ್ರಚಾರದಲ್ಲಿ ಇರುತ್ತೇನೆ. ಎಲ್ಲಾ ಊರಿಗೂ ಹೋಗುತ್ತೇನೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಪತಿಯೊಂದಿಗೆ ಭದ್ರಾವತಿಯಿಂದ ಪ್ರಚಾರ ಆರಂಭಿಸಿದ ಶಿವಮೊಗ್ಗ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಗೀತಾ ಶಿವರಾಜಕುಮಾರ್ ಅವರನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷಕ್ಕೆ ಕಣಕ್ಕಿಳಿಸಿದೆ. ಪತ್ನಿ ಪರ ಮಾತ್ರವಲ್ಲದೆ ಇತರ ಕ್ಷೇತ್ರಗಳಲ್ಲಿಯೂ ಪ್ರಚಾರಕ್ಕೆ ಬರುವುದಾಗಿ ಕಾಂಗ್ರೆಸ್ ಪಕ್ಷಕ್ಕೆ ಶಿವರಾಜ್ ಕುಮಾರ್ ಅಭಯ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ