ಸರ್ಕಾರದ ಆದೇಶಕ್ಕಿಲ್ಲ ಮರ್ಯಾದೆ; ಹಿಜಾಬ್‌- ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳು

TV9kannada Web Team

TV9kannada Web Team | Edited By: Ayesha Banu

Updated on: Feb 07, 2022 | 9:56 AM

ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಶಾಂತೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಿಜಾಬ್, ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದಿದ್ದಾರೆ.

ಸರ್ಕಾರದ ಆದೇಶಕ್ಕಿಲ್ಲ ಮರ್ಯಾದೆ; ಹಿಜಾಬ್‌- ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳು
ಸಾಂದರ್ಭಿಕ ಚಿತ್ರ

ಉಡುಪಿಯಲ್ಲಿ ಶುರುವಾದ ಈ ಸಮವಸ್ತ್ರದ ಸಮರ ಈಗ ರಾಜ್ಯಾದ್ಯಂತ ವ್ಯಾಪಿಸಿದೆ. ಕರಾವಳಿ ವಿದ್ಯಾರ್ಥಿಗಳು ಈಗ ಹಿಜಾಬ್‌- ಕೇಸರಿ ಅನ್ನೋ ವಿವಾದದಿಂದ ರಾಜ್ಯದಲ್ಲಿ ಮಾತ್ರವಲ್ಲ ದೇಶಾದ್ಯಂತ ಸುದ್ದಿಯಾಗಿದ್ದಾರೆ. ಸದ್ಯ ಹಿಜಾಬ್ ವಿರೋಧಿಸಿ ಕೇಸರಿ ಶಾಲು ಹಾಕಿಕೊಂಡು ಕಾಲೇಜ್ಗೆ ಬರಲು ವಿದ್ಯಾರ್ಥಿಗಳು ಮುಂದಾಗಿದ್ದಾರೆ. ಉಡುಪಿ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳಲ್ಲಿ ಹಿಜಾಬ್ ವಿವಾದ ತಾರಕಕ್ಕೇರಿದೆ. ಕಳೆದ ಒಂದು ತಿಂಗಳ ಹಿಂದೆ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಬೇಡಿಕೆ ಆರಂಭಿಸಿದ್ದರು. ಹಿಜಾಬ್ ಧರಿಸುವ ವಿಚಾರಕ್ಕೆ ನಿರಂತರ ಪ್ರತಿಭಟನೆ ನಡೆಸಿದ್ರು. ಕಳೆದ ಮೂರು ದಿನಗಳಿಂದ ಕುಂದಾಪುರಕ್ಕೂ ಹಿಜಾಬ್ ಹೋರಾಟ ವ್ಯಾಪಿಸಿದೆ.

ಕುಂದಾಪುರ ತಾಲೂಕಿನ 4 ಕಾಲೇಜಿನಲ್ಲಿ ಹಿಜಾಬ್ ಮತ್ತು ಕೇಸರಿ ಗಲಾಟೆ ಶುರುವಾಗಿದೆ. ಶನಿವಾರ ಸಂಜೆ ಸರ್ಕಾರ ಸಮವಸ್ತ್ರ ಸಂಹಿತೆಯ ಆದೇಶ ಹೊರಡಿಸಿದೆ. ಆದೇಶ ಬಂದ ನಂತರ ಇಂದು ಮೊದಲ ದಿನದ ಕಾಲೇಜು. ಹೀಗಾಗಿ ಹೋರಾಟ ಯಾವ ಸ್ವರೂಪ ಪಡೆದುಕೊಳ್ಳುತ್ತೆ ಎಂಬ ಆತಂಕ ಹೆಚ್ಚಾಗಿದೆ. ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ತೊಟ್ಟು ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ತೊಟ್ಟು ಬರುತ್ತಿದ್ದಾರೆ. ಸದ್ಯ ಈ ರೀತಿ ಹಿಜಾಬ್- ಕೇಸರಿ ಶಾಲು ತೊಟ್ಟು ಶಾಲೆಗೆ ಬಂದರೆ ಕ್ಲಾಸಿಗೆ ಪ್ರವೇಶ ಇಲ್ಲ ಎಂದು ಸರಕಾರಿ ಪದವಿ ಪೂರ್ವ ಕಾಲೇಜು ನಿರ್ಧಾರ ಮಾಡಿದೆ. ಕುಂದಾಪುರದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ತೀರ್ಮಾನ ಮಾಡಿದೆ. ಸರಕಾರದ ನೂತನ ಆದೇಶದ ಪ್ರಕಾರ ತರಗತಿಗೆ ಹಿಜಾಬ್ ಮತ್ತು ಕೇಸರಿ ಶಾಲು ತೊಟ್ಟು ಬರುವ ಹಾಗಿಲ್ಲ. ಹೊಸ ನಿಯಮ ಎಷ್ಟು ಮಂದಿ ಪಾಲಿಸುತ್ತಾರೆ ಎಂಬುದೇ ಪ್ರಶ್ನೆ. ಕಾಲೇಜಿನ ಬಳಿ ಯಾವುದೇ ಪ್ರತಿಭಟನೆ ನಡೆಸಬಾರದು ಎಂದು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.

ಇನ್ನು ಮತ್ತೊಂದೆಡೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಶಾಂತೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಿಜಾಬ್, ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದಿದ್ದಾರೆ. ಮುಂದೆ ಇದು ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎಂಬ ಭಯ ಕಾಲೇಜು ಆಡಳಿತ ಮಂಡಳಿಗೆ ಶುರುವಾಗಿದೆ. ಜೊತೆಗೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿರುವ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ 2 ಕಾಲೇಜುಗಳಿಗೆ ರಜೆ ವಿಜಯಪುರ ಜಿಲ್ಲೆ ಇಂಡಿ ಪಟ್ಟಣದ ಶಾಂತೇಶ್ವರ ‌PUC ಕಾಲೇಜು‌, GRB ಕಾಲೇಜಿಗೆ ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳು ಹಿಜಾಬ್ ಹಾಗೂ ಕೇಸರಿ ಶಾಲು ಧರಿಸಿ ಬಂದ ಕಾರಣ ಮುಂಜಾಗ್ರತಾ ಕ್ರಮವಾಗಿ 2 ಕಾಲೇಜುಗಳಿಗೆ ರಜೆ ನೀಡಲಾಗಿದೆ. ಕೇಸರಿ ಶಾಲು ಹಾಕಿಕೊಂಡು ವಿದ್ಯಾರ್ಥಿಗಳು ಕಾಲೇಜುಗಳಿಗೆ ಆಗಮಿಸಿದ ಕಾರಣ ತುರ್ತು ಸಭೆ‌ ನಡೆಸಿದ ಎರಡೂ‌‌ ಕಾಲೇಜುಗಳ ಆಡಳಿತ ಮಂಡಳಿಗಳು ವಿವಾದ ಉಂಟಾಗಬಾರದು ಎಂಬ ಕಾರಣದಿಂದ ಕಾಲೇಜುಗಳಿಗೆ ರಜೆ‌ ಘೋಷಣೆ ಮಾಡಿವೆ. ಇಂದು‌ ಒಂದು ದಿನದ ಮಟ್ಟಿಗೆ ರಜೆ ನೀಡಲಾಗಿದ್ದು ನಾಳೆಯಿಂದ ಸರ್ಕಾರ ಜಾರಿ ಮಾಡಿರೋ ಪ್ರಕಾರ ಯುನಿಫಾರ್ಮ್ ಹಾಕಿಕೊಂಡು‌ ಬರುವಂತೆ ಸೂಚಿಸಲಾಗಿದೆ.

ಕೇಸರು ಶಾಲು ಧರಿಸಿ ಬಂದ ವಿದ್ಯಾರ್ಥಿಗಳಿಗೆ ತಡೆ ಇನ್ನು ಉಡುಪಿ ಜಿಲ್ಲೆಯ ಕುಂದಾಪುರದಲ್ಲಿರುವ ವೆಂಕಟರಮಣ ಕಾಲೇಜಿಗೆ ಕೇಸರಿ ಶಾಲು ಹಾಕಿಕೊಂಡು ಬಂದ ವಿದ್ಯಾರ್ಥಿಗಳನ್ನು ಕುಂದಾಪುರ ಎಸ್ಐ ಸದಾಶಿವ ಗವರೋಜಿ ಕಾಲೇಜಿನ ಮೈದಾನದಲ್ಲಿ ತಡೆದಿದ್ದಾರೆ. ಕೇಸರಿ ಶಾಲು ಹಾಕಿಕೊಂಡು ಬಂದರೆ ಪ್ರವೇಶ ನೀಡಲ್ಲ. ಸ್ಕಾರ್ಫ್, ಬುರ್ಖಾ ಧರಿಸಿ ಕಾಲೇಜಿಗೆ ಬರುವಂತಿಲ್ಲ ಎಂದು ವೆಂಕಟರಮಣ ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಖಡಕ್ ಆಗಿ ಹೇಳಿ ಕಳಿಸಿದ್ದಾರೆ.

ಉಡುಪಿ ಜಿಲ್ಲೆ ಕುಂದಾಪುರದ ಪಿಯು ಸರ್ಕಾರಿ ಕಾಲೇಜಿಗೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದು ಪ್ರತ್ಯೇಕ ಕೊಠಡಿಯಲ್ಲಿ ಕುಳಿತಿದ್ದಾರೆ. ಸ್ಕಾರ್ಫ್ ತೆಗೆಯಲು ತಿಳಿಸಿದರೂ ವಿದ್ಯಾರ್ಥಿಗಳು ಮಾತು ಕೇಳುತ್ತಿಲ್ಲ. ಹಿಜಾಬ್ ತೆಗೆಯದಂತೆ ಮನೆಯಲ್ಲಿ ಹೇಳಿ ಕಳಿಸಿದ್ದಾರೆ. ಹೀಗಾಗಿ ನಾವು ಹಿಜಾಬ್ ತೆಗೆಯಲ್ಲವೆಂದು ವಿದ್ಯಾರ್ಥಿಗಳು ಉತ್ತರಿಸುತ್ತಿದ್ದಾರೆ. ಮಂಗಳವಾರ ನ್ಯಾಯಾಲಯದಿಂದ ಆದೇಶ ಬರಲಿದೆ. ಆದೇಶ ಬಂದ ಬಳಿಕ ಮುಂದಿನ ನಿರ್ಧಾರ ಮಾಡುತ್ತೇವೆ ಎಂದು  ಹಿಜಾಬ್ ಧರಿಸಿಕೊಂಡು ಬಂದ ವಿದ್ಯಾರ್ಥಿನಿಯರು ತಮ್ಮ ನಿಲುವನ್ನು ತಿಳಿಸಿದ್ದಾರೆ.

ಮುಸ್ಲಿಂ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬನ್ನಿ ಮುಸ್ಲಿಂ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬನ್ನಿ ಎಂದು ಉಡುಪಿಯಲ್ಲಿ ಸಚಿವ ವಿ.ಸುನಿಲ್ ಕುಮಾರ್ ಕರೆ ನೀಡಿದ್ದಾರೆ. ಇಸ್ಲಾಂ ನಿಮ್ಮನ್ನು ಬಗ್ಗುಬಡಿಯುವ ಕೆಲಸ ಮಾಡುತ್ತಿದೆ. ನಿಮ್ಮನ್ನು ಮುಸುಕಿನಲ್ಲಿ ಇರಿಸುವಂತಹ ಪ್ರಯತ್ನ ಮಾಡ್ತಿದೆ. ವಿಶ್ವದಲ್ಲಿ ಎಲ್ಲೂ ಇಲ್ಲದ ಕನಿಷ್ಠ ಪದ್ಧತಿ ಭಾರತದಲ್ಲಿ ಇದೆ. ಇಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶವಿಲ್ಲ. ಹೀಗಾಗಿ ತ್ರಿವಳಿ ತಲಾಖ್ ರದ್ದು ಮಾಡಿ ಭದ್ರತೆ ನೀಡಿದ್ದೇವೆ. ಇಂದು ಹಿಜಾಬ್ ಬೇಕು ಎಂದು ಕೇಳುತ್ತಿದ್ದಾರೆ. ನಾಳೆ ಉರ್ದುನಲ್ಲಿ ಪಾಠ ಮಾಡಲು ಒತ್ತಾಯ ಬರಬಹುದು. ವ್ಯವಸ್ಥೆಯಡಿ ಎಲ್ಲವೂ ಸರಿಯಾಗಿ ನಡೆಯಬೇಕು. ಇನ್ನುಮುಂದೆ ಹಿಜಾಬ್ ಧರಿಸಿ ಶಾಲಾ ಕಾಲೇಜಿಗೆ ಬರುವಂತಿಲ್ಲ. ಎಲ್ಲರೂ ಕಾನೂನು ಪಾಲನೆ ಮಾಡಬೇಕು. ಸಮವಸ್ತ್ರದ ಕಾನೂನು ಕೇಸರಿ ತೊಡುವವರಿಗೂ ಅನ್ವಯ ಎಂದು ಉಡುಪಿಯಲ್ಲಿ ಸಚಿವ ವಿ.ಸುನಿಲ್ ಕುಮಾರ್ ಹೇಳಿದ್ರು.

ಇದನ್ನೂ ಓದಿ: ಒಣ ನೆಲ್ಲಿಕಾಯಿ ತಿನ್ನುವ ಅಭ್ಯಾಸ ಇದೆಯೇ? ಆರೋಗ್ಯಕರ ಬದಲಾವಣೆಯ ಬಗ್ಗೆ ನೀವು ತಿಳಿಯಲೇಬೇಕು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada