ಕಾಂಗ್ರೆಸ್ ಯುವ ಮುಖಂಡನ ಮೇಲೆ ತಲ್ವಾರ್​ ದಾಳಿ: 5-6 ಜನರ ತಂಡದಿಂದ ಕೃತ್ಯ

ಶಾಂತವಾಗಿದ್ದ ಪೊಡವಿಗೊಡೆಯನ ನಾಡು ಉಡುಪಿಯಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಯುವ ಕಾಂಗ್ರೆಸ್​​ ಮುಖಂಡನ ಮೇಲೆ ಡೆಡ್ಲಿ ಅಟ್ಯಾಕ್​​ ನಡೆದಿದ್ದು, ಕ್ಷುಲ್ಲಕ ವಿಚಾರಕ್ಕೆ ಈ ದಾಳಿ ನಡೆದಿರುವ ಆರೋಪ ಕೇಳಿಬಂದಿದೆ. 5-6 ಜನ ಆರೋಪಿಗಳಿಗಾಗಿ ಖಾಕಿ ಹುಡುಕಾಟ ನಡೆಸುತ್ತಿದ್ದು, ಈ ಬಗ್ಗೆ ತನಿಖೆ ಮುಂದುವರಿದಿದೆ.

ಕಾಂಗ್ರೆಸ್ ಯುವ ಮುಖಂಡನ ಮೇಲೆ ತಲ್ವಾರ್​ ದಾಳಿ: 5-6 ಜನರ ತಂಡದಿಂದ ಕೃತ್ಯ
ಶರತ್​​ ಕುಂದರ್​​
Image Credit source: Tv9 Kannada
Edited By:

Updated on: Feb 02, 2026 | 3:16 PM

ಉಡುಪಿ, ಫೆಬ್ರವರಿ 02: ಕರಾವಳಿ ಜಿಲ್ಲೆ ಉಡುಪಿಯಲ್ಲಿ ತಲ್ವಾರ್​​ಗಳು ಝಳಪಿಸಿವೆ. ಕಾಂಗ್ರೆಸ್ ಯುವ ಮುಖಂಡನ ಮೇಲೆ ನಗರದ ಪಿಪಿಸಿ ಕ್ರಾಸ್ ಬಳಿ ದಾಳಿ ನಡೆಸಲಾಗಿದ್ದು, ಮಾತುಕತೆಗೆಂದು ಕರೆಸಿ ಅಟ್ಯಾಕ್​​ ಮಾಡಲಾಗಿದೆ ಎನ್ನಲಾಗಿದೆ. ಘಟನೆಯಲ್ಲಿ ಎನ್‌ಎಸ್‌ಯುಐ ಉಪಾಧ್ಯಕ್ಷ ಶರತ್ ಕುಂದರ್‌ ಗಂಭೀರ ಗಾಯಗೊಂಡಿದ್ದು, 6-7 ದುಷ್ಕರ್ಮಿಗಳ ತಂಡದಿಂದ ದಾಳಿ ನಡೆದಿದೆ. ಮಣಿಪಾಲ ಹೋಟೆಲ್‌ನಲ್ಲಿ ನಡೆದ ಗಲಾಟೆಯ ಮುಂದುವರಿದ ಭಾಗವಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಶರತ್ ಕುಂದರ್ ಜ.30ರಂದು ಸಂಜೆ 9 ಗಂಟೆ ಸುಮಾರಿಗೆ ಸ್ನೇಹಿತನ ಕಾರಿನಲ್ಲಿ ಮಣಿಪಾಲದ ಹೋಟೆಲ್‌ ಒಂದಕ್ಕೆ ಊಟಕ್ಕೆ ತೆರಳಿದ್ದರು. ಈ ವೇಳೆ ಹೋಟೆಲ್‌ನಲ್ಲಿ ಅವರ ಕೈ ಆರೋಪಿಗಳ ಪೈಕಿ ಒಬ್ಬರ ಕೈಗೆ ತಾಗಿದೆ. ಈ ಹಿನ್ನೆಲೆಯಲ್ಲಿ ವಾಗ್ವಾದ ನಡೆದಿತ್ತು. ಬಳಿಕ ಮನೆ ಕಡೆಗೆ ಶರತ್ ತೆರಳುತ್ತಿದ್ದ ವೇಳೆ ಅಕ್ಷತ್ ಪೈ ಎಂಬಾತ ಫೋನ್ ಮಾಡಿ ಹೋಟೆಲ್‌ನಲ್ಲಿ ನಡೆದ ಗಲಾಟೆಯ ಬಗ್ಗೆ ಮಾತನಾಡಲು ಪಿಪಿಸಿ ಕ್ರಾಸ್ ಬಳಿ ಬರುವಂತೆ ತಿಳಿಸಿದ್ದಾನೆ. ಅದರಂತೆ ಶರತ್ ಕುಂದರ್ ಹಾಗೂ ಸ್ನೇಹಿತರಾದ ಧ್ರುವ, ಸಿಲಾನ್ ಗಗನ್, ರೋಹಿತ್ ಜೊತೆಗೆ ಶರತ್​​ ಪಿಪಿಸಿ ಕ್ರಾಸ್ ಸಮೀಪದ  ಚಿಕನ್ ಅಂಗಡಿಯ ಬಳಿ ತೆರಳಿದ್ದು, ರಾತ್ರಿ 11.30ರ ಸುಮಾರಿಗೆ ಟಾಟಾ ಸಫಾರಿ ಹಾಗೂ ಮಹೀಂದ್ರ ಥಾರ್ ವಾಹನಗಳಲ್ಲಿ ಬಂದ ಅಕ್ಷತ್ ಪೈ, ಶಶಾಂಕ್, ರಾಧಾಕೃಷ್ಣ ಜನರಲ್ ಸ್ಟೋರ್‌ನ ಮಾಲಕ ಸೇರಿದಂತೆ ಇನ್ನೂ 6-7 ಮಂದಿ ಏಕಾಏಕಿ ವಾಹನಗಳಿಂದ ಇಳಿದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಸಿನಿಮಾ ಸ್ಟೈಲಲ್ಲಿ ಯುವಕನ ಅಡ್ಡಗಟ್ಟಿ, ಲಾಂಗ್ ಬೀಸಿ 31 ಕ್ಷ ರೂ. ದರೋಡೆ; ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಯ್ತು ಭಯಾನಕ ಕೃತ್ಯ

ಆರೋಪಿಗಳು ತಲವಾರಿನಂತಹ ಆಯುಧ ಹಾಗೂ ಕಬ್ಬಿಣದ ಕುರ್ಚಿಗಳ ಮೂಲಕ ಕೊಲೆ ಮಾಡುವ ಉದ್ದೇಶದಿಂದ ಶರತ್ ಕುಂದರ್ ಮೇಲೆ ದಾಳಿ ನಡೆಸಿದ್ದು, ಈ ವೇಳೆ ದಾಳಿ ತಪ್ಪಿಸಿಕೊಳ್ಳಲು ಕೈಗಳನ್ನು ಮುಂದಿಟ್ಟ ಶರತ್ ಗಾಯಗೊಂಡಿದ್ದಾರೆ. ಬಲ ಅಂಗೈ, ಮಧ್ಯ ಬೆರಳು ಹಾಗೂ ಎಡ ಕೈ ಮಣಿಕಟ್ಟು ಭಾಗದಲ್ಲಿ ಗಾಯಗಳಾಗಿವೆ. ಹಲ್ಲೆಯ ವೇಳೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುವ ಬಗ್ಗೆಯೂ ದೂರಲಾಗಿದ್ದು, ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಖಾಕಿ ಹುಡುಕಾಟ ನಡೆಸುತ್ತಿದ್ದು, ತನಿಖೆ ಮುಂದುವರಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 11:40 am, Mon, 2 February 26