ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಸಿಲುಕಿದ ಮೀನುಗಾರರು; ಮೀನು ವ್ಯಾಪರಕ್ಕೆ ಅವಕಾಶ ನೀಡುವಂತೆ ಒತ್ತಾಯ

ಬೋಟುಗಳಿಗೆ ಐಸ್ ತುಂಬಿಸುವುದು, ಬಲೆ, ಬೋಟ್ ರಿಪೇರಿ ಮಾಡಿಕೊಳ್ಳುವುದು ಮುಂತಾದ ಚಟುವಟಿಕೆಗಳಿಗೆ ಅಡ್ಡಿಯಾಗಿದೆ. ಮೀನುಗಾರಿಕೆಯನ್ನು ಕೂಡ ಕೃಷಿ ಎಂದು ಪರಿಗಣಿಸಿ ಹೆಚ್ಚಿನ ಸಮಯ ನೀಡಿ, ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮೀನುಗಾರರು ಒತ್ತಾಯಿಸಿದ್ದಾರೆ.

  • ಹರೀಶ್ ಪಾಲೆಚ್ಚಾರ್
  • Published On - 9:06 AM, 4 May 2021
ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಸಿಲುಕಿದ ಮೀನುಗಾರರು; ಮೀನು ವ್ಯಾಪರಕ್ಕೆ ಅವಕಾಶ ನೀಡುವಂತೆ ಒತ್ತಾಯ
ಮಲ್ಪೆ ಬಂದರಿನ ದೃಶ್ಯ

ಉಡುಪಿ: ಕೊರೊನಾ ಬಂದ ನಂತರ ಜನಸಾಮಾನ್ಯರ ಜೀವನ ದುಸ್ತರವಾಗಿದೆ. ಅದರಲ್ಲೂ ದುಡಿದು ತಿನ್ನುವ ವರ್ಗ ಸಂಕಷ್ಟಕ್ಕೀಡಾಗಿದೆ. ಅದರಲ್ಲೂ ಮುಖ್ಯವಾಗಿ ಕರಾವಳಿಯ ಆರ್ಥಿಕತೆಗೆ ಅತಿದೊಡ್ಡ ಕೊಡುಗೆ ನೀಡುವ ಮೀನುಗಾರಿಕಾ ವಲಯವಂತೂ ತೀವ್ರ ನಷ್ಟ ಅನುಭವಿಸಿದೆ. ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಅತಿ ದೊಡ್ಡ ಬಂದರು ಇದ್ದು, ವರ್ಷದ 365 ದಿನವೂ ಇಲ್ಲಿ ಮೀನುಗಾರಿಕೆ ಸಂಬಂಧಿತ ಚಟುವಟಿಕೆಗಳು ನಡೆಯುತ್ತದೆ. ಆದರೆ ಲಾಕ್​ಡೌನ್ ಘೋಷಣೆ ಆದ ನಂತರ ಮೀನುಗಾರಿಕಾ ಚಟುವಟಿಕೆ ಬಹುತೇಕ ಸ್ಥಗಿತಗೊಂಡಿದೆ.

ಸರ್ಕಾರದ ಆದೇಶದಂತೆ 10 ಗಂಟೆ ಒಳಗಾಗಿ ಎಲ್ಲಾ ರೀತಿಯ ಅಗತ್ಯ ವಸ್ತುಗಳನ್ನು ಖರೀದಿಸಬೇಕಾಗಿದೆ. ಆ ಪ್ರಕಾರ 10 ಗಂಟೆ ಹೊತ್ತಿಗೆ ಮಲ್ಪೆ ಬಂದರು ಖಾಲಿಯಾಗಿಬಿಡುತ್ತದೆ. ಬೆಳಿಗ್ಗೆ 5 ರಿಂದ 10 ಗಂಟೆಯವರೆಗೆ ಮಾತ್ರ ಸದ್ಯ ಮೀನುಗಾರಿಕಾ ಚಟುವಟಿಕೆ ನಡೆಸಲಾಗುತ್ತದೆ. ಹೀಗಾಗಿ ಮೀನು ಹೊತ್ತು ತರುವ ಬೋಟುಗಳನ್ನು ಖಾಲಿ ಮಾಡುವುದಕ್ಕಷ್ಟೇ ಸಮಯ ದೊರಕುತ್ತಿದೆ ಮರುದಿನದ ಮೀನುಗಾರಿಕೆಗೆ ತೆರಳಲು ಸಿದ್ಧತೆ ಮಾಡಿಕೊಳ್ಳಲು ಅವಕಾಶ ಇಲ್ಲದಂತಾಗಿದೆ.

ಬೋಟುಗಳಿಗೆ ಐಸ್ ತುಂಬಿಸುವುದು, ಬಲೆ, ಬೋಟ್ ರಿಪೇರಿ ಮಾಡಿಕೊಳ್ಳುವುದು ಮುಂತಾದ ಚಟುವಟಿಕೆಗಳಿಗೆ ಅಡ್ಡಿಯಾಗಿದೆ. ಮೀನುಗಾರಿಕೆಯನ್ನು ಕೂಡ ಕೃಷಿ ಎಂದು ಪರಿಗಣಿಸಿ ಹೆಚ್ಚಿನ ಸಮಯ ನೀಡಿ, ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮೀನುಗಾರರು ಒತ್ತಾಯಿಸಿದ್ದಾರೆ. ಜೊತೆಗೆ ಮೀನು ಕಡಿಮೆಯಾಗಿರುವ ಕಾರಣಕ್ಕೆ ಮೀನಿನ ದರವು ಕೂಡ ಹೆಚ್ಚಾಗಿದೆ. ಇದರಿಂದ ಮೀನು ಪ್ರೀಯರಿಗೂ ಮೀನು ಸದ್ಯ ತುಟ್ಟಿಯಾಗಿದೆ.

ತರಕಾರಿ ಮಾರಾಟಕ್ಕೆ ಸಂಜೆಯವರಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಮೀನು ಮಾರುಕಟ್ಟೆಗಳು 10 ಗಂಟೆಗೆ ಬಂದ್ ಆಗುತ್ತದೆ. ಇದರಿಂದ ಕಡಲಿನಿಂದ ತಂದ ಮೀನುಗಳು ಮಾರುಕಟ್ಟೆಯ ಮೂಲಕ ಗ್ರಾಹಕರಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಮೀನಿನ ದರದಲ್ಲೂ ವ್ಯತ್ಯಾಸವಾಗಿದೆ. ಕರಾವಳಿಯ ಆರ್ಥಿಕತೆಗೆ ಇದರಿಂದ ಭಾರಿ ಹೊಡೆತ ಬಿದ್ದಿದೆ. ಕನಿಷ್ಠಪಕ್ಷ 12 ಗಂಟೆಯವರೆಗಾದರೂ ಮೀನುಗಾರಿಕಾ ಚಟುವಟಿಕೆ ನಡೆಸಲು ಅವಕಾಶ ಕೊಡಿ ಎಂದು ಮೀನುಗಾರ ಮಹಿಳೆ ಸ್ವೆಲಿ ಒತ್ತಾಯಿಸಿದ್ದಾರೆ.

ಈಗಾಗಲೇ ಡೀಸೆಲ್ ಸಬ್ಸಿಡಿ ಸಿಗದೇ ಮೀನುಗಾರರ ಸಂಕಷ್ಟದಲ್ಲಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಹತ್ತಾರು ಕೋಟಿ ರೂಪಾಯಿ ಡೀಸೆಲ್ ಸಬ್ಸಿಡಿ ಬಿಡುಗಡೆಯಾಗಿಲ್ಲ. ಕೋಟ್ಯಾಂತರ ಮೌಲ್ಯದ ಡೀಸೆಲ್ ಹಾಕಿ ಮೀನುಗಾರಿಕೆ ನಡೆಸಿದ ಮೀನುಗಾರರು ಸಬ್ಸಿಡಿ ಹಣ ಪಾವತಿಯಾಗದ ಸಂಕಷ್ಟದಲ್ಲಿದ್ದಾರೆ. ಇದೀಗ ಲಾಕ್​ಡೌನ್ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮೀನುಗಾರಿಕೆ ಹಾಗೂ‌ ಮೀನು ಮಾರಾಟ ಅವಧಿ ವಿಸ್ತರಣೆ ಆಗಬೇಕು ಎನ್ನುವುದು ಸದ್ಯ ಮೀನುಗಾರಿಕೆ ನಂಬಿದ ಮಂದಿಯ ಬೇಡಿಕೆಯಾಗಿದೆ.

ಇನ್ನು ಕೇವಲ ಒಂದು ತಿಂಗಳ ಆಳ ಸಮುದ್ರ ಮೀನುಗಾರಿಕೆ ಬಾಕಿಯಿದೆ ಮೀನುಗಾರಿಕಾ ಸೀಜನ್​ನಲ್ಲಿ ಕೊರೊನಾ ಸೋಂಕು ಅಪ್ಪಳಿಸಿರುವುದು, ಕೈಗೆ ಬಂದ ತುತ್ತು ಬಾಯಿಗೆ ಸಿಕ್ಕಿಲ್ಲ ಎಂಬಂತಾಗಿದೆ ಎನ್ನುವುದು ಮಾತ್ರ ಮೀನುಗಾರ ಸದ್ಯದ ಮಾತಾಗಿದೆ.

ಇದನ್ನೂ ಓದಿ:

ಕೊರೊನಾ ಲಾಕ್​ಡೌನ್​ನಿಂದ ಕುಸಿದು ಬಿತ್ತು ಕೃಷಿ ಉತ್ಪನ್ನಗಳ ಬೆಲೆ; ಕೋಲಾರದ ರೈತರಲ್ಲಿ ಹೆಚ್ಚಿದ ಆತಂಕ

ಗಡಿ ಮೀರಿ ಮೀನುಗಾರಿಕೆ: ತಪಾಸಣೆಗೆ ಬಂದ ಪೊಲೀಸರನ್ನೇ ಬಂಧಿಸಿ ಬಂದರಿಗೆ ಕರೆತಂದ ಮೀನುಗಾರರು, ಯಾವೂರಲ್ಲಿ?