ವೆಂಟಿಲೇಟರ್ ಆಪರೇಟರ್​ಗಳ ಕೊರತೆ; ಉಡುಪಿ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗಳ ಮೇಲೆ ಹೆಚ್ಚಿದ ಒತ್ತಡ

ಇರುವ ವೆಂಟಿಲೇಟರ್​ಗಳನ್ನು ಆಪರೇಟ್ ಮಾಡುವ ತಜ್ಞರ ನೇಮಕಾತಿ ಆಗದೆ 25 ವರ್ಷ ಕಳೆದು ಹೋಗಿದೆ. ಆದರೆ ಇದೀಗ ಸೋಂಕಿತರು ಹೆಚ್ಚಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಆಪರೇಟರ್​ಗಳು ಇಲ್ಲದೆ ವೈದ್ಯರು ಮತ್ತು ನರ್ಸ್​ಗಳ ಮೇಲೆ ಒತ್ತಡ ಹೆಚ್ಚಾಗಿದೆ.

ವೆಂಟಿಲೇಟರ್ ಆಪರೇಟರ್​ಗಳ ಕೊರತೆ; ಉಡುಪಿ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗಳ ಮೇಲೆ ಹೆಚ್ಚಿದ ಒತ್ತಡ
ಪ್ರಾತಿನಿಧಿಕ ಚಿತ್ರ
Follow us
preethi shettigar
|

Updated on: May 03, 2021 | 1:46 PM

ಉಡುಪಿ: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ ಪ್ರಸರಣ ಹೆಚ್ಚಾಗಿದ್ದು, ಸೋಂಕಿತರ ಸಂಖ್ಯೆಯ ಹೆಚ್ಚಳದ ಜೊತೆಗೆ ಸಾವಿನ ಸಂಖ್ಯೆಯಲ್ಲಿ ಕೂಡ ಏರಿಕೆ ಕಂಡುಬಂದಿದೆ. ಇನ್ನು ಆಸ್ಪತ್ರೆಗಳಲ್ಲಿ ಬೆಡ್​ ಇಲ್ಲ, ಆಕ್ಸಿಜನ್ ಸಿಗುತ್ತಿಲ್ಲ ಎನ್ನುವ ಕೂಗು ಕೂಡ ಬೆಂಗಳೂರಿನಂತಹ ನಗರಗಳಲ್ಲಿ ಕೇಳಿ ಬರುತ್ತಿದೆ. ಆದರೆ ಉಡುಪಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಸಾಕಷ್ಟು ವೆಂಟಿಲೇಟರ್ ಖರೀದಿ ಮಾಡಿದ್ದರೂ ಆಪರೇಟರ್​ಗಳ ಸಮಸ್ಯೆ ಎದುರಾಗಿದೆ ಎನ್ನುವ ಆರೋಪ ಸದ್ಯ ಕೇಳಿ ಬಂದಿದೆ.

ಉಡುಪಿ ಜಿಲ್ಲೆಯಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ದಾಖಲಾಗುತ್ತಿದ್ದು, ಸದ್ಯ ವೆಂಟಿಲೇಟರ್ ಬೆಡ್ ಸಮಸ್ಯೆ ಎದುರಾಗಿದೆ. ಈ ನಡುವೆ ಇರುವ ವೆಂಟಿಲೇಟರ್​ಗಳನ್ನು ಆಪರೇಟ್ ಮಾಡುವ ತಜ್ಞರ ನೇಮಕಾತಿ ಆಗದೆ 25 ವರ್ಷ ಕಳೆದು ಹೋಗಿದೆ. ಆದರೆ ಇದೀಗ ಸೋಂಕಿತರು ಹೆಚ್ಚಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಆಪರೇಟರ್​ಗಳು ಇಲ್ಲದೆ ವೈದ್ಯರು ಮತ್ತು ನರ್ಸ್​ಗಳ ಮೇಲೆ ಒತ್ತಡ ಹೆಚ್ಚಾಗಿದೆ.

ವೆಂಟಿಲೇಟರ್ ಆಪರೇಟ್ ಮಾಡುವ ಕೋರ್ಸ್ ಮಾಡಿದ ಆರು ಸಾವಿರಕ್ಕೂ ಹೆಚ್ಚು ಜನ ತಜ್ಞರು ರಾಜ್ಯದಲ್ಲಿದ್ದಾರೆ. ಲಕ್ಷಾಂತರ ರೂಪಾಯಿ ಫೀಸ್ ಕಟ್ಟಿ ಕೋರ್ಸ್ ಮುಗಿಸಿದ ಯುವಕ -ಯುವತಿಯರು ಖಾಲಿಯಿದ್ದಾರೆ. ಕೊವಿಡ್ ವಾರಿಯರ್​ಗಳಾಗಿ ಕೆಲಸ ಮಾಡಲು ಅವರು ಸಿದ್ಧರಿದ್ದರೂ ಹೊಸ ನೇಮಕಾತಿ ಮಾಡಲು ಸರ್ಕಾರ ತಯಾರಿಲ್ಲ. ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲು ಆರೋಗ್ಯ ಇಲಾಖೆ ಹಿಂದೇಟು ಹಾಕುತ್ತಿದೆ ಎಂದು ವೆಂಟಿಲೇಟರ್ ಆಪರೇಟ್​ ತರಬೇತಿ ಪಡೆದ ಮಾಲತಿ ನಾಗೇಶ್ ಹೇಳಿದ್ದಾರೆ.

ಒಟ್ಟಾರೆ ವೆಂಟಿಲೇಟರ್ ಆಪರೇಟರ್ಸ್ ಈಗಾಗಲೇ ಆರೋಗ್ಯ ಸಚಿವ ಡಾ. ಸುಧಾಕರ್ ಅವರನ್ನು ಭೇಟಿ ಮಾಡಿದ್ದಾರೆ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಗಮನಕ್ಕೆ ತಂದಿದ್ದಾರೆ. ಇನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಆದರೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಜ್ಯ ಸರ್ಕಾರ ಹೊಸ ನೇಮಕಾತಿಗೆ ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಸಂದಿಗ್ಧ ಪರಿಸ್ಥಿತಿಯಲ್ಲಿರುವ ಆರೋಗ್ಯ ಇಲಾಖೆ ಶೀಘ್ರ ಕ್ರಮ ಕೈಗೊಳ್ಳಬೇಕಾಗಿದೆ ಎನ್ನುವುದು ಉಡುಪಿ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗಳ ಮನವಿಯಾಗಿದೆ.

ಇದನ್ನೂ ಓದಿ:

ಬಳ್ಳಾರಿ ಜಿಲ್ಲೆಯಲ್ಲಿ ವೆಂಟಿಲೇಟರ್ ಕೊರತೆ ಇದೆ: ಬಳ್ಳಾರಿ ಡಿಸಿ ಪವನ್‌ ಕುಮಾರ್ ಮಾಲಿಪಾಟಿ

ಆಕ್ಸಿಜನ್ ವ್ಯತ್ಯಯ: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಕೊವಿಡ್ ಸೋಂಕಿತರೂ ಸೇರಿ 22 ರೋಗಿಗಳ ಸಾವು