
ಉಡುಪಿ, ಏಪ್ರಿಲ್ 12: ಪ್ರಾಕೃತಿಕ ಸಂಪತ್ತಿನಿಂದ ಖ್ಯಾತಿ ಪಡೆದ ಕರಾವಳಿ ನಗರ ಉಡುಪಿಯಲ್ಲಿ ಹೊಸ ಆತಂಕ ಎದುರಾಗಿದೆ. ಉಡುಪಿಯ (udupi) ವಾಯು ಗುಣಮಟ್ಟ (air quality) ಹದಗೆಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ಈ ಪ್ರದೇಶದಲ್ಲಿ ಉತ್ತಮ ಮಳೆ ಮತ್ತು ಹವಾಮಾನ ಇದ್ದರೂ ಗಾಳಿಯ ಗುಣಮಟ್ಟದಲ್ಲಿ ನಿರಂತರ ಏರುಪೇರು ಕಂಡುಬರುತ್ತಿದೆ.
ಉಡುಪಿ ನಗರ ವ್ಯಾಪ್ತಿಯಲ್ಲಿ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ, 2.5 ಮೈಕ್ರೋನ್ಗಿಂತ ಕಡಿಮೆ ವ್ಯಾಸದ ಅತಿಸೂಕ್ಷ್ಮ ಕಣಗಳು (PM2.5) ಗಾಳಿಯಲ್ಲಿ ಪತ್ತೆಯಾಗಿವೆ. ಜೊತೆಗೆ ಕಾರ್ಬನ್ ಮಾನಾಕ್ಸೈಡ್ ಹಾಗೂ ಸಲ್ಫರ್ ಅಂಶಗಳ ಪ್ರಮಾಣವೂ ಹೆಚ್ಚಿರುವುದನ್ನು ತಜ್ಞರು ಗಮನಿಸಿದ್ದಾರೆ. ಪರಿಸರ ತಜ್ಞರ ಪ್ರಕಾರ, ಜಿಲ್ಲೆಯ ಗಡಿಯಲ್ಲಿರುವ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳಿಂದ ಹೊರಬರುವ ಹೊಗೆ ಪ್ರಮುಖ ಕಾರಣವಾಗಿರಬಹುದು. ಯೋಜನೆ ಆರಂಭದಲ್ಲೇ ಪರಿಸರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು ಎಂದು ಪ್ರೇಮಾನಂದ ಕಲ್ಮಾಡಿ ತಿಳಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ಕರಾವಳಿಯಲ್ಲಿ ಹೆಚ್ಚಾಯ್ತು ತಾಪಮಾನ; ಉಡುಪಿ, ಉತ್ತರ ಕನ್ನಡದಲ್ಲಿಂದು ಹೀಟ್ ವೇವ್ ಅಲರ್ಟ್!
ಇನ್ನು ವಿಶೇಷವಾಗಿ ಶ್ವಾಸಕೋಶ ಸಂಬಂಧಿ ಸಮಸ್ಯೆ ಹೊಂದಿರುವವರು, ಹಿರಿಯ ನಾಗರಿಕರು ಮತ್ತು ಅಶಕ್ತರು ಹೆಚ್ಚು ಎಚ್ಚರಿಕೆಯಿಂದ ಇರಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಮಾಸ್ಕ್ ಧರಿಸುವ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ ಎನ್ನುವ ವಿಚಾರ ತಜ್ಞರು ತಿಳಿಸಿದ್ದಾರೆ. ಇನ್ನೊಂದೆಡೆ, ಪರಿಸರ ಸಂರಕ್ಷಣೆಗಾಗಿ ಖಾಲಿ ಜಾಗಗಳಲ್ಲಿ ಹಸಿರು ವಲಯವನ್ನು ವಿಸ್ತರಿಸುವುದು ಅಗತ್ಯವಾಗಿದೆ. ವಿಶೇಷವಾಗಿ ಬಿದಿರು ಗಿಡಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೆಡುವಂತೆ ಬೆಂಗಳೂರಿನ ಪರಿಸರ ಸಂಘಟನೆಗಳು ಒತ್ತಾಯಿಸಿವೆ. ಬಿದಿರು ಗಿಡಗಳು ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಉತ್ಪಾದಿಸುವುದರಿಂದ ವಾಯು ಗುಣಮಟ್ಟ ಸುಧಾರಣೆಗೆ ಸಹಕಾರಿ ಎನ್ನಲಾಗಿದೆ.
ಇದನ್ನೂ ಓದಿ: ಪ್ರಯಾಣಿಕರೇ ಗಮನಿಸಿ: ತೀರ್ಥಹಳ್ಳಿ, ಕುಂದಾಪುರ ರಾಜ್ಯ ಹೆದ್ದಾರಿ ಬಂದ್; ಬದಲಿ ಮಾರ್ಗಗಳ ಮಾಹಿತಿ ಇಲ್ಲಿದೆ
ಒಟ್ಟಾರೆಯಾಗಿ, ಪ್ರಕೃತಿಯ ಮಧ್ಯೆಯೇ ಇರುವ ಊರಿನಲ್ಲಿ ವಾಯು ಮಾಲಿನ್ಯದ ನೆರಳು ಆವರಿಸಿದ್ದು, ಉಡುಪಿ ನಗರದಲ್ಲಿ ತಕ್ಷಣದ ಕ್ರಮದ ಅಗತ್ಯತೆ ಎದುರಾಗಿದೆ. ಇನ್ನಾದರೂ ಈ ನಿಟ್ಟಿನಲ್ಲಿ ಅಧಿಕಾರಿಗಳು, ಜನರು ಗಮನ ಹರಿಸುತ್ತಾರಾ ಕಾದು ನೋಡಬೇಕಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.