‘ನಾನು ಹಾಗೆ ಹೇಳಬಾರದಿತ್ತು’; ಸಾವಿನ ಮಾತಿಗೆ ಕ್ಷಮೆ ಕೇಳಿದ ಸಚಿವ ಉಮೇಶ ಕತ್ತಿ
ನಾನು ಆ ಕ್ಷಣದಲ್ಲಿ ಮಾತನಾಡಿದ್ದು ತಪ್ಪಾಗಿರಬಹುದು, ನಾನು ಅದನ್ನು ಅಲ್ಲಗಳೆಯುತ್ತಿಲ್ಲ. ‘ಸಾಯಬೇಕಾ’ ಎಂದು ಕೇಳಿದಾಗ ನಾನು ಮತ್ತೇನು ಹೇಳಲು ಸಾಧ್ಯ. ‘ಸಾಯಿ’ ಅಂದೆ ಎಂದು ಉಮೇಶ್ ಕತ್ತಿ ಪ್ರತಿಕ್ರಿಯಿಸಿದ್ದಾರೆ.
ಬೆಳಗಾವಿ: ತಮಗೆ ಕರೆ ಮಾಡಿ ಅಳಲು ತೋಡಿಕೊಂಡ ವ್ಯಕ್ತಿಯ ಜೊತೆಗೆ ಸಾಯುವ ಮಾತು ಆಡಿದ್ದಕ್ಕೆ ಸಚಿವ ಉಮೇಶ್ ಕತ್ತಿ ಟಿವಿ9 ಸುದ್ದಿವಾಹಿನಿಯ ಮೂಲಕ ಕ್ಷಮೆಯಾಚಿಸಿದ್ದಾರೆ. ‘ನಾನು ಯಾರ ಜೊತೆಗೂ ಸಾಯುವ ವಿಷಯ ಮಾತಾಡಿಲ್ಲ. ಏಪ್ರಿಲ್ 1ರಿಂದ 10ರ ವರೆಗೂ ಅಕ್ಕಿ ವಿತರಣೆ ಆಗಿದೆ. ಏಪ್ರಿಲ್ ತಿಂಗಳು ಅಂತ್ಯದವರೆಗೆ ಅಕ್ಕಿ ಇರುತ್ತೆ’ ಎಂದು ನನ್ನೊಂದಿಗೆ ಮಾತನಾಡಿದವನಿಗೆ ವಿವರಿಸಿದೆ. ಆತ ಕೇಳಿದ ಪ್ರಶ್ನೆಗೆ ಉತ್ತರ ಹೇಳುವುದು ಅನಿವಾರ್ಯವಾಗಿತ್ತು. ಹೀಗಾಗಿ ಹೇಳಿದೆ ಎಂದು ತಿಳಿಸಿದರು.
ನಾನು ಆ ಕ್ಷಣದಲ್ಲಿ ಮಾತನಾಡಿದ್ದು ತಪ್ಪಾಗಿರಬಹುದು, ನಾನು ಅದನ್ನು ಅಲ್ಲಗಳೆಯುತ್ತಿಲ್ಲ. ‘ಸಾಯಬೇಕಾ’ ಎಂದು ಕೇಳಿದಾಗ ನಾನು ಮತ್ತೇನು ಹೇಳಲು ಸಾಧ್ಯ. ‘ಸಾಯಿ’ ಅಂದೆ. ಆದರೆ ಆಗ ನಾನು ಹಾಗೆ ಹೇಳಿದ್ದು ತಪ್ಪಾಗಿದೆ ಎಂದು ನನಗೂ ಅನ್ನಿಸಿದೆ. ನಾನು ಒಬ್ಬ ಹಿರಿಯ ಶಾಸಕ, ಹೀಗಾಗಿಯೇ ಸಚಿವ ಸ್ಥಾನಕ್ಕೆ ಏರಿದ್ದೇನೆ. ಜನರಿಗೆ ತೊಂದರೆ ಆಗುತ್ತಿದೆ ಎಂಬುದು ನನಗೆ ಗೊತ್ತಾಗಿದೆ. ಈ ನಿಟ್ಟಿನಲ್ಲಿ ಕಾಲಕಾಲಕ್ಕೆ ಅಧಿಕಾರಿಗಳ ಸಭೆ ನಡೆಸಿ, ಇಲಾಖೆಯ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.
ಆತ ‘ಸಾಯಬೇಕಾ’ ಅಂತ ಕೇಳಿದಾಗ, ‘ಸಾಯಿ’ ಅಂದೆ. ಆ ಮಾತನ್ನು ನಾನು ಹೇಳಬಾರದಿತ್ತು, ಆದರೂ ಹೇಳಿಬಿಟ್ಟಿದ್ದೇನೆ. ಈಗ ಇದಕ್ಕಿಂತ ಇನ್ನೇನೂ ಮಾಡುವುದಕ್ಕೆ ಆಗುವುದಿಲ್ಲ. ‘ಸಾರಿ, ನನ್ನ ಮನಸ್ಸಿನಲ್ಲಿ ಈ ರೀತಿ ಬರಬಾರದಿತ್ತು. ಜನರು ಇದರ ಬಗ್ಗೆ ತಪ್ಪು ತಿಳಿದುಕೊಳ್ಳಬಾರದು. ಏನೇ ಇದ್ದರು ನಾನು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ’ ಎಂದು ತಿಳಿಸಿದರು.
ಉಡಾಫೆ ಉತ್ತರ ನೀಡಿದ್ದ ಸಚಿವರು ಈಶ್ವರ ಆರ್ಯರ ಎಂಬ ರೈತ ಕೇಳಿದ ಪ್ರಶ್ನೆಗೆ ಸಚಿವರು ಉಡಾಫೆ ಉತ್ತರ ನೀಡಿದ್ದಾರೆ. ಗದಗ ಜಿಲ್ಲೆಯ ಕುರ್ತಕೋಟಿ ಗ್ರಾಮದ ರೈತ ಸಂಘದ ಕಾರ್ಯಕರ್ತ ಈಶ್ವರ್ ಪಡಿತರ ಅಕ್ಕಿ ಕಡಿತಗೊಳಿಸಿರೋದನ್ನು ಪ್ರಶ್ನಿಸಿದರು. ಈ ವೇಳೆ ಉತ್ತರ ಕರ್ನಾಟಕದಲ್ಲಿ ಅಕ್ಕಿ ಜತೆಗೆ ಜೋಳ ಕೊಡ್ತಿವಿ. ಲಾಕ್ಡೌನ್ ಸಂದರ್ಭದಲ್ಲಿ 5 ಕೆಜಿ ಅಕ್ಕಿ ಕೇಂದ್ರ ಸರ್ಕಾರ ಕೊಡುತ್ತೆ. ಮುಂದಿನ ತಿಂಗಳಿನಿಂದ ಅಕ್ಕಿ ಕೊಡಲಾಗುವುದು ಎಂದು ಉಮೇಶ್ ಕತ್ತಿ ಹೇಳಿದ್ರು.
ಲಾಕ್ಡೌನ್ ಇದೆ ಅಲ್ಲಿಯವರೆಗೆ ಉಪವಾಸ ಸಾಯೋದಾ ಎಂದು ಈಶ್ವರ್ ಪ್ರಶ್ನಿಸಿದಕ್ಕೆ ಸಾಯೋದು ಒಳ್ಳೆಯದು, ಅದಕ್ಕಿಂತ ಮೊದಲು ಅಕ್ಕಿ ಮಾರಾಟ ಮಾಡೋ ದಂಧೆ ನಿಲ್ಲಿಸಿ ಎಂದು ಅಹಂಕಾರದ ಮಾತುಗಳನ್ನಾಡಿದ್ದಾರೆ. ಫೋನ್ ಮಾಡಬೇಡಿ ಎಂದು ಹೇಳಿ ಕಾಲ್ ಕಟ್ ಮಾಡಿದ್ದಾರೆ. ಸದ್ಯ ಆಹಾರ ಸಚಿವರ ಈ ಆಡಿಯೋ ವೈರಲ್ ಆಗಿದೆ.
ನಾನು ಎಲ್ಲರಿಗೂ ಉತ್ತರ ಕೊಡುವುದಕ್ಕೆ ಆಗುತ್ತಾ? ಇನ್ನು ಈ ಬಗ್ಗೆ ಸ್ಪಷ್ಟನೆ ನೀಡಿದ ಉಮೇಶ್ ಕತ್ತಿ ಯೋಜನೆ ಏನು ಇದೆಯೋ ಅದನ್ನೇ ಹೇಳಿದ್ದೇನೆ. ಕರೆ ಮಾಡಿ ವ್ಯಕ್ತಿ ಸತ್ತೋಗೋದಾ ಎಂದು ಕೇಳಿದ ಅದಕ್ಕೆ ನಾನು ಸತ್ತೋಗಿ ಎಂದು ಹೇಳಿದ್ದೇನೆ. ಅದಕ್ಕಿಂತ ಬೇರೆ ಇನ್ನೇನು ಹೇಳಲಿ. ಬೇಡ ಎಂದು ಹೇಳುವಷ್ಟು ದೊಡ್ಡ ಮನಸ್ಸು ನನಗಿಲ್ಲ. ರಾಜ್ಯದಲ್ಲಿ ಊಟ ಸಿಗದೆ ಯಾರೂ ಸಾಯಬಾರದು. ಮುಖ್ಯಮಂತ್ರಿಗಳು ನನಗೆ ಒಳ್ಳೆಯ ಖಾತೆ ಕೊಟ್ಟಿದ್ದಾರೆ ಎಂದು ಬೆಳಗಾವಿಯಲ್ಲಿ ಆಹಾರ ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.
(Umesh Katti appologise for his statement on death)
Published On - 4:14 pm, Wed, 28 April 21