ಕುರ್ಚಿ ಉಳಿಸಿಕೊಳ್ಳಲು ವಿಪಕ್ಷಗಳ ಹೋರಾಟ ಹತ್ತಿಕ್ಕುವ ಸರ್ವಾಧಿಕಾರಿ ಸಿದ್ದರಾಮಯ್ಯ: ಬಿಜೆಪಿ ವಾಗ್ದಾಳಿ
ಮುಡಾ ಹಗರಣದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬೃಹತ್ ಪ್ರತಿಭಟನೆಗೆ ಬಿಜೆಪಿ ಮುಂದಾಗಿತ್ತು. ಆದರೆ, ಪ್ರತಿಭಟನೆಗಾಗಿ ಮೈಸೂರಿಗೆ ತೆರಳುತ್ತಿದ್ದ ಬಿಜೆಪಿ ನಾಯಕರನ್ನು ಬಿಡದಿಯಲ್ಲಿ ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದ್ದಾರೆ. ಸರ್ಕಾರದ ಈ ನಡೆಯಿಂದ ಕೆರಳಿ ಕೆಂಡವಾಗಿರುವ ಬಿಜೆಪಿ, ಸಿಎಂ ಸಿದ್ದರಾಮಯ್ಯನವರನ್ನು ಸರ್ವಾಧಿಕಾರಿ ಎಂದು ಜರೆದಿದೆ.
ಬೆಂಗಳೂರು, ಜುಲೈ 12: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣ ಖಂಡಿಸಿ ಪ್ರತಿಭಟನೆ ನಡೆಸಲು ಮೈಸೂರಿಗೆ ತೆರಳುತ್ತಿದ್ದ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿರುವುದಕ್ಕೆ ಕಮಲ ಪಾಳೆಯ ಕಿಡಿ ಕಾರಿದೆ. ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ಭ್ರಷ್ಟ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಟೀಕಿಸಿದೆ.
‘ಮುಡಾ ಹಗರಣ ಖಂಡಿಸಿ, ಮೈಸೂರಿನಲ್ಲಿ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಭೆಗೆ ತೆರಳುತ್ತಿದ್ದ ರಾಜ್ಯಾಧ್ಯಕ್ಷರಾದ ಬಿವೈ ವಿಜಯೇಂದ್ರ ಹಾಗೂ ಪಕ್ಷದ ಸಂಸದರು, ಶಾಸಕರು, ಮಾಜಿ ಸಂಸದರು, ಮಾಜಿ ಶಾಸಕರು, ಪಕ್ಷದ ಹಿರಿಯ ನಾಯಕರು ಹಾಗೂ ಕಾರ್ಯಕರ್ತರನ್ನು ಬೆಂಗಳೂರಿನಲ್ಲೇ ರಣಹೇಡಿ ಕಾಂಗ್ರೆಸ್ ಸರ್ಕಾರ ಬಂಧಿಸಿದೆ. ಮಾತೆತ್ತಿದರೆ ಸಂವಿಧಾನ ರಕ್ಷಣೆ, ಅಭಿವ್ಯಕ್ತಿ ಸ್ವಾತಂತ್ರ್ಯವೆಂದು ಬಡಾಯಿಕೊಚ್ಚಿಕೊಳ್ಳುವ ಸಿಎಂ ಸಿದ್ದರಾಮಯ್ಯನವರು ತಮ್ಮ ಕುರ್ಚಿ ಉಳಿಸಿಕೊಳ್ಳಲು, ವಿಪಕ್ಷಗಳ ಹೋರಾಟ ಹತ್ತಿಕ್ಕುವ ಮೂಲಕ ಸರ್ವಾಧಿಕಾರಿ ನಡೆ ಪ್ರದರ್ಶನ ಮಾಡಿದ್ದಾರೆ’ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಮುಡಾ ಹಗರಣದಲ್ಲಿ ತಮ್ಮ ಪಾತ್ರವಿರುವುದನ್ನು ಒಪ್ಪಿಕೊಳ್ಳದ ಸಿಎಂ ಸಿದ್ದರಾಮಯ್ಯನವರು, ಕಾಂಗ್ರೆಸ್ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕಿಳಿದಿರುವ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ ಹತ್ತಿಕ್ಕುವ ಮೂಲಕ ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
ದೇಶದ ಜನರ ದಾರಿ ತಪ್ಪಿಸಲು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಕೈಯಲ್ಲಿ ಸಂವಿಧಾನ ಪ್ರತಿ ಪ್ರದರ್ಶನ ಮಾಡುತ್ತಾರೆ. ಶ್ರೇಷ್ಠ ಸಂವಿಧಾನವೇ ವಿಪಕ್ಷಗಳಿಗೆ ಅನ್ಯಾಯದ ವಿರುದ್ಧ ಪ್ರತಿಭಟಿಸುವ, ಹೋರಾಟ ನಡೆಸುವ ಸ್ವಾತಂತ್ರ್ಯ ನೀಡಿದೆ ಎಂಬ ಅರಿವಿಲ್ಲ ಎಂದು ಬಿಜೆಪಿ ಉಲ್ಲೇಖಿಸಿದೆ.
ಬಿಜೆಪಿ ಎಕ್ಸ್ ಸಂದೇಶ
ಭ್ರಷ್ಟ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ!#SidduMUDAScam #MudaScam pic.twitter.com/fPkFB1P72W
— BJP Karnataka (@BJP4Karnataka) July 12, 2024
ಸಂವಿಧಾನ ವಿರೋಧಿ ಸಿದ್ದರಾಮಯ್ಯನವರೇ, ತಮ್ಮ ಸರ್ವಾಧಿಕಾರಿ ನಡೆಗೆ ರಾಜ್ಯದ ಜನರು ತಕ್ಕ ಪಾಠ ಕಲಿಸುವುದು ಶತಸಿದ್ಧ. ನೀವು ಹಾಗೂ ನಿಮ್ಮ ಸಂಪುಟದ ಭ್ರಷ್ಟ ಸಚಿವರುಗಳು ರಾಜೀನಾಮೆ ನೀಡಿ ಮನೆಗೆ ಹೋಗುವ ಕಾಲ ಸನ್ನಿಹಿತವಾಗುತ್ತಿದೆ ಎಂದು ಬಿಜೆಪಿ ಕಿಡಿಕಾರಿದೆ.
ಸದನದಲ್ಲಿ ಪ್ರಸ್ತಾಪಿಸುತ್ತೇವೆ: ವಿಜಯೇಂದ್ರ
ಮೈಸೂರಿಗೆ ಹೋಗದಂತೆ ನಮ್ಮನ್ನು ಪೊಲೀಸರು ತಡೆದಿದ್ದಾರೆ. ಈ ವಿಚಾರವನ್ನು ಇಲ್ಲಿಗೇ ಬಿಡುವುದಿಲ್ಲ. ನಾವು ಸದನದಲ್ಲಿ ಇದನ್ನು ಚರ್ಚೆ ಮಾಡುತ್ತೇವೆ ಎಂದು ವಿಜಯೇಂದ್ರ ಬಿಡದಿಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಲೂಟಿ ಮಾಡುವುದಷ್ಟೇ ಕಾಂಗ್ರೆಸ್ ಸರ್ಕಾರದ ಕೆಲಸ: ಆರ್ ಅಶೋಕ್ ವಾಗ್ದಾಳಿ
ಇದಕ್ಕೂ ಮುನ್ನ, ವಿಜಯೇಂದ್ರ ಸೇರಿದಂತೆ ಪ್ರತಿಭಟನೆಗಾಗಿ ಮೈಸೂರಿಗೆ ತೆರಳುತ್ತಿದ್ದ ಬಿಜೆಪಿ ನಾಯಕರನ್ನು ಬಿಡದಿ ಪೊಲೀಸರು ವಶಕ್ಕೆ ಪಡೆದು ಬಿಡದಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ನಂತರ ಅವರನ್ನೆಲ್ಲ ಬಿಡುಗಡೆ ಮಾಡಲಾಯಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ