ವಾಲ್ಮೀಕಿ ನಿಗಮ ಹಗರಣ: ರಾಜ್ಯ, ಕೇಂದ್ರ ತನಿಖಾ ಸಂಸ್ಥೆಗಳ ನಡುವೆ ಶೀತಲ ಸಮರ
ವಾಲ್ಮೀಕಿ ನಿಗಮ ಹಗರಣದಲ್ಲಿ ಅತ್ತ ನಾಗೇಂದ್ರ ಇ.ಡಿ ವಶ ಆಗುತ್ತಿದ್ದಂತೆಯೇ ಇತ್ತ ತನಿಖೆಯಲ್ಲಿ ಹೊಸ ಹೊಸ ಲಿಂಕ್ಗಳು ತೆರೆದುಕೊಳ್ಳಲು ಆರಂಭವಾಗಿವೆ. ನಾಗೇಂದ್ರ ಆಪ್ತರಿಗೂ ನಡುಕ ಶುರುವಾಗಿದೆ. ಈ ಮಧ್ಯೆ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಎಸ್ಐಟಿ ಕಚೇರಿಗೆ ಬಂದು, ‘ನನ್ನನ್ನು ಬಂಧಿಸಿ’ ಎಂದು ಮನವಿ ಮಾಡಿರುವ ಘಟನೆಯೂ ನಡೆದಿದೆ.
ಬೆಂಗಳೂರು, ಜುಲೈ 12: ವಾಲ್ಮೀಕಿ ನಿಗಮ ಹಗರಣದಲ್ಲಿ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಬಿ ನಾಗೇಂದ್ರರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದರ ಬೆನ್ನಲ್ಲೇ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ವಾಲ್ಮೀಕಿ ನಿಗಮದ ಹಗರಣ ಪ್ರಕರಣ, ಕೇಂದ್ರ ವರ್ಸಸ್ ರಾಜ್ಯ ಸರ್ಕಾರವಾಗಿ ಬದಲಾಗಿದೆಯಾ ಎಂಬ ಅನುಮಾನ ಮೂಡಿದೆ. ಇದಕ್ಕೆ ಕಾರಣ ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ನಡೆ.
ಇ.ಡಿ ಕಣ್ಣು ತಪ್ಪಿಸಿ ಎಸ್ಐಟಿ ಮುಂದೆ ಹಾಜರಾಗಿರುವ ದದ್ದಲ್
ಇ.ಡಿ ಕಣ್ಣು ತಪ್ಪಿಸಿ ಶಾಸಕ ದದ್ದಲ್ ಎಸ್ಐಟಿ ಮುಂದೆ ಹಾಜರಾಗಿದ್ದು, ‘ನನ್ನನ್ನು ಬಂಧಿಸಿ’ ಎಂದು ಮನವಿ ಮಾಡಿದ್ದಾರೆ. ಎಸ್ಐಟಿ ಅಧಿಕಾರಿ ಡಿವೈಎಸ್ಪಿ ಶ್ರಿನಿವಾಸ್ ಮುಂದೆ ಬಂಧಿಸುವಂತೆ ಕೇಳಿಕೊಂಡಿದ್ದಾರೆ. ಎಸ್ಐಟಿ ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಈ ಮಧ್ಯೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದರು. ಇ.ಡಿ ದಾಳಿ ಮುಗಿದ ಬೆನ್ನಲ್ಲೇ ಎಸ್ಐಟಿ ಮುಂದೆ ಹಾಜರಾಗಿರುವ ದದ್ದಲ್ ಅರೆಸ್ಟ್ ಮಾಡುವಂತೆ ಮನವಿ ಮಾಡಿದ್ದಾರೆ.
ಇಡಿ ಬಲೆಯಲ್ಲಿ ನಾಗೇಂದ್ರ; ಬಳ್ಳಾರಿಯಲ್ಲಿರೋ ಆಪ್ತರಿಗೆ ನಡುಕ
ಮಾಜಿ ಸಚಿವ ನಾಗೇಂದ್ರ ಇಡಿ ವಶದಲ್ಲಿದ್ದು, ಇಡಿ ಕಚೇರಿಯಲ್ಲಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಇದೀಗ ಬಳ್ಳಾರಿಯಲ್ಲಿರುವ ನಾಗೇಂದ್ರ ಆಪ್ತರಿಗೆ ಢವಢವ ಶುರುವಾಗಿದೆ. ಯಾವುದೇ ಕ್ಷಣದಲ್ಲಿ ನಾಗೇಂದ್ರ ಆಪ್ತರನ್ನ ಇಡಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಈಗಾಗಲೇ ನಾಗೇಂದ್ರ ಪಿಎ ಚೇತನ್ ಮತ್ತು ಮಾಧ್ಯಮ ಸಲಹೆಗಾರ ಸೇರಿದಂತೆ ಐವರಿಗೆ ನೋಟಿಸ್ ನೀಡಲಾಗಿದ್ದು ಅವರಿಗೂ ಈಗ ಭೀತಿ ಶುರುವಾಗಿದೆ.
ನಾಗೇಂದ್ರರ ಬಳ್ಳಾರಿ ನಿವಾಸದಲ್ಲಿ ಮಹತ್ವದ ದಾಖಲೆ ಜಪ್ತಿ
ಬಳ್ಳಾರಿಯ ನಾಗೇಂದ್ರ ಮನೆಯಲ್ಲಿ ಸಿಕ್ಕ ಮಹತ್ವದ ದಾಖಲೆಗಳನ್ನ ಹಾಗೂ ಮನೆಯಲ್ಲಿ ಸಿಕ್ಕ ಕೆಲವು ಅಸ್ತಿಪತ್ರಗಳೊಂದಿಗೆ ಇಡಿ ಅಧಿಕಾರಿಗಳು ತೆರಳಿದ್ದಾರೆ. 12 ಗಂಟೆಗಳ ಕಾಲ ಬಳ್ಳಾರಿಯ ನಿವಾಸದಲ್ಲಿ ಇಡಿ ಶೋಧ ನಡೆಸಿತ್ತು. ಶೋಧದ ವೇಳೆ ನಾಗೇಂದ್ರ ಆಪ್ತರು ವಿಚಾರಣೆಗೆ ಗೈರಾಗಿ ಕಳ್ಳಾಟ ಆಡಿದ್ದು, ಇದೀಗ ನಾಗೇಂದ್ರ ವ್ಯವಹಾರ ನೋಡಿಕೊಳ್ಳುತ್ತಿದ್ದ ಆಪ್ತರಿಗೂ ಸಂಕಷ್ಟ ಎದುರಾಗಿದೆ.
ಹೈದರಾಬಾದ್ಗೂ ಅಕ್ರಮದ ಲಿಂಕ್
ಕೋಟಿ ಕೋಟಿ ಹಣ ವರ್ಗಾವಣೆ ಆಗಿದೆ ನಕಲಿ ಖಾತೆ ತೆರೆದು ಕಳ್ಳಾಟ ಆಡಲಾಗಿದೆ. ಹಗರಣದಲ್ಲಿ ಹವಾಲ ಹಣ ಕೂಡ ವರ್ಗಾವಣೆ ಆದ ಅನುಮಾನ ಇದೆ. ಇದರ ಜೊತೆಗೆ ಬಳ್ಳಾರಿಯಲ್ಲಿ ನಾಗೇಂದ್ರರನ್ನ ಹಲವು ಉದ್ಯಮಿಗಳೂ ಭೇಟಿಯಾಗಿದ್ದರು. ಹೀಗಾಗಿ ನಾಗೇಂದ್ರ ಭೇಟಿ ಆಗಿದ್ದ ಉದ್ಯಮಿಗಳಿಗೂ ಇಡಿ ನೋಟಿಸ್ ಕೊಡುವ ಸಾಧ್ಯತೆ ಇದೆ. ಆಪ್ತರು ಹಾಗೂ ಉದ್ಯಮಿಗಳನ್ನ ವಿಚಾರಣೆ ಕರೆಯುವ ಸಾಧ್ಯತೆ ಇದೆ. ಇದಲ್ಲದೆ, 25 ಕೋಟಿಗೂ ಅಧಿಕ ಹಣವನ್ನು ಬಳ್ಳಾರಿಗೆ ಸಾಗಿಸಿರುವ ಅನುಮಾನವೂ ಇ.ಡಿಗೆ ಇದೆ.
ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ: ನಾಗೇಂದ್ರ ವಿರುದ್ಧ ಸಿಕ್ಕಿದೆ ಅನೇಕ ಸಾಕ್ಷ್ಯ, ಶಾಮೀಲಾಗಿದ್ದನ್ನು ಪುಷ್ಟೀಕರಿಸುವ ಅಂಶಗಳು ಇಲ್ಲಿವೆ
ವಾಲ್ಮೀಕಿ ಹಗರಣದಲ್ಲಿ ಒಬ್ಬರಿಂದೊಬ್ಬರಿಗೆ ಚೈನ್ ಲಿಂಕ್
ಈ ವಾಲ್ಮೀಕಿ ನಿಗಮದ ಹಗರಣದಲ್ಲಿ ಅದೆಷ್ಟು ಕೈ ಸೇರಿವೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಸದ್ಯದ ಮಾಹಿತಿ ಪ್ರಕಾರ, ಹಗರಣದಲ್ಲಿ ಒಬ್ಬರಿಂದೊಬ್ಬರಿಗೆ ಲಿಂಕ್ ಇರುವುದು ಗೊತ್ತಾಗಿದೆ. ಅಂದಹಾಗೆ, ಎಸ್ಐಟಿಯಿಂದ ಬಂಧನಕ್ಕೆ ಒಳಗಾಗಿರುವ ಒಬ್ಬ ಅಧಿಕಾರಿ, ತನಿಖೆ ವೇಳೆ ಪಂಪಣ್ಣ ಹೆಸರು ಉಲ್ಲೇಖಿಸಿದ್ದ. ಹೀಗಾಗಿ ಎಸ್ಐಟಿಯಿಂದ ಈಗಾಗಲೇ ಪಂಪಣ್ಣ ವಿಚಾರಣೆ ನಡೆಸಲಾಗಿದೆ. ಈ ಬಗ್ಗೆ ಇಡಿ ಅಧಿಕಾರಿಗಳಿಗೆ ಪಂಪಣ್ಣ ಮಾಹಿತಿ ನೀಡಿದ್ದಾನೆ. ಅಲ್ಲದೆ, ಪಂಪಣ್ಣ ಮನೆಯಲ್ಲಿ ಇಡಿ ಶೋಧ ನಡೆಸಿದ್ದು, ಆಸ್ತಿ ವಿವರ ದಾಖಲೆಗಳನ್ನ ಪರಿಶೀಲನೆ ನಡೆಸಿದೆ. ಪಂಪಣ್ಣ ಬ್ಯಾಂಕ್ ಟ್ಯಾನ್ಸಾಕ್ಷನ್ಸ್ ಬಗ್ಗೆ ಸುದೀರ್ಘವಾಗಿ ಪರಿಶೀಲಿಸಿದೆ. ಬಸನಗೌಡ ದದ್ದಲ್ & ನಿಗಮದ ಅಧಿಕಾರಿಗಳ ಸಂಪರ್ಕದ ಬಗ್ಗೆ ಹಾಗೂ ಪ್ರಭಾವಿಗಳ ಲಿಂಕ್, ವ್ಯವಹಾರದ ಬಗ್ಗೆ ಇಡಿ ಹೇಳಿಕೆ ದಾಖಲು ಮಾಡಿಕೊಂಡಿದೆ.
ಇನ್ನು ತಮ್ಮ ವಿಚಾರಣೆ ಬಗ್ಗೆ ಟಿವಿ9 ಜೊತೆ ಮಾತನಾಡಿರುವ ಪಂಪಣ್ಣ, ಎಂಡಿ ಪದ್ಮನಾಭ್ ತಮ್ಮ ಹೆಸರು ಹೇಳಿದ್ದೇಕೆ ಗೊತ್ತಿಲ್ಲ. ನನ್ನದೇನೂ ತಪ್ಪಿಲ್ಲ ಎಂದಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:16 pm, Fri, 12 July 24