AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೂಟಿ ಮಾಡುವುದಷ್ಟೇ ಕಾಂಗ್ರೆಸ್ ಸರ್ಕಾರದ ಕೆಲಸ: ಆರ್ ಅಶೋಕ್ ವಾಗ್ದಾಳಿ

ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಳಿ ಬಂದಿರುವ ಹಗರಣಗಳ ಆರೋಪ ಸಂಬಂಧ ಬಿಜೆಪಿ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ. ಇದೇ ವೇಳೆ ನೆಲಮಂಗಲದಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ ಪ್ರತಿಪಕ್ಷ ನಾಯಕ ಆರ್ ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಶೋಕ್ ಏನೇನು ಹೇಳಿದರೆಂಬುದನ್ನು ತಿಳಿಯಲು ಮುಂದೆ ಓದಿ.

ಲೂಟಿ ಮಾಡುವುದಷ್ಟೇ ಕಾಂಗ್ರೆಸ್ ಸರ್ಕಾರದ ಕೆಲಸ: ಆರ್ ಅಶೋಕ್ ವಾಗ್ದಾಳಿ
ಆರ್ ಅಶೋಕ (ಸಂಗ್ರಹ ಚಿತ್ರ)Image Credit source: PTI
ಬಿ ಮೂರ್ತಿ, ನೆಲಮಂಗಲ
| Updated By: Ganapathi Sharma|

Updated on: Jul 12, 2024 | 12:12 PM

Share

ನೆಲಮಂಗಲ, ಜುಲೈ 12: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಮುಡಾ ಹಗರಣ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣಗಳು ಈ ಸರ್ಕಾರಕ್ಕೆ ಎರಡು ಕಪ್ಪು ಚುಕ್ಕೆಗಳು ಇದ್ದಂತೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ‌ಹೇಳಿದರು. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಒಂದು ಮುಡಾ ಹಗರಣ, ಇನ್ನೊಂದು ವಾಲ್ಮೀಕಿ ನಿಗಮ ಹಗರಣ. ಕಳೆದ ಒಂದು ವರ್ಷದಿಂದ ‌ಒಂದೇ ಒಂದು ಅಭಿವೃದ್ಧಿ ‌ಕೆಲಸ ಕಾರ್ಯ‌ಮಾಡಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಮೇಲೇ ಬರೀ ಲೂಟಿ ಮಾಡದೇ ಕೆಲಸ ಆಗಿದೆ ಎಂದು ಟೀಕಿಸಿದರು.

ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ‌ಮಾಡುವ ಹಕ್ಕು ಎಲ್ಲರಿಗೂ ಇದೆ. ಆದರೆ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಸರ್ಕಾರ ಮಾಡುತ್ತಿದೆ. ಬಿಜೆಪಿ ಮುಖಂಡರನ್ನು ಮನೆ ಬಳಿಯೇ ಬಂಧಿಸುವ ಕೆಲಸ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ತುರ್ತುಪರಿಸ್ಥಿತಿ ಜಾರಿಗೊಳಿಸಿದೆ ಎನಿಸುತ್ತಿದೆ. ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವ ಕೆಲಸ ಮಾಡುತ್ತಿದೆ ಎಂದು ಅಶೋಕ್ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಸರ್ಕಾರ ಬರೀ ಹಗರಣಗಳ ಸರಮಾಲೆಯಾಗಿದೆ. ವಾಲ್ಮೀಕಿ ‌ನಿಗಮದ ದಲಿತರ ನೂರು ಪರ್ಸೆಂಟ್ ಹಣ ನುಂಗಿದ್ದಾರೆ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳಗಿದೆ. ಮೈಸೂರು ‌ಮುಡಾ ಹಗರಣ ಹೊರತೆಗೆದ ಸಂದರ್ಭದಲ್ಲಿ ‌ಬಿಜೆಪಿಗೆ ಮಾಡೋದಕ್ಕೆ ಕೆಲಸ ಇಲ್ಲ ಎಂದರು ಸಿದ್ದರಾಮಯ್ಯ. ನಾವು ಜನರ ಮುಂದೆ ಇಡುತ್ತಾ ಇದ್ದೇವೆ. ಅಂತಿಮವಾಗಿ ಜನ ತೀರ್ಮಾನ ಮಾಡುತ್ತಾರೆ ಎಂದು ಅಶೋಕ್ ಹೇಳಿದರು.

ಕಾಂಗ್ರೆಸ್​ನವರದ್ದು ಗೂಂಡಾ ಸರ್ಕಾರ. ‌ನಮ್ಮ ಮೇಲೆ ಪೊಲೀಸರಿಂದ ದೌರ್ಜನ್ಯ ಮಾಡಿಸುವ ಕೆಲಸ ಮಾಡುತ್ತಿದೆ. ಬಿಜೆಪಿ ಪ್ರತಿಭಟನೆಗೆ ರಾಜ್ಯ ಸರ್ಕಾರ ಗಢಗಢ ನಡುಗಿದೆ. ಬಿಜೆಪಿ ಹೋರಾಟದ ಫಲವಾಗಿ ‌ಒಂದು ವಿಕೆಟ್ ಬಿದ್ದಿದೆ. ಕಾಂಗ್ರೆಸ್ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ. ಇದು ಕರ್ನಾಟಕದ ಇತಿಹಾಸದಲ್ಲೇ ಸರ್ಕಾರಕ್ಕೆ ಅಂಟಿದ ಎರಡು ಕಪ್ಪು ಚುಕ್ಕೆಗಳಾಗಿವೆ. ಉಪ್ಪು ತಿಂದವರು‌ ನೀರು ಕುಡಿಯಲೇ ಬೇಕು ಎಂದು ಅವರು ಹೇಳಿದರು.

ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ: ನಾಗೇಂದ್ರ ವಿರುದ್ಧ ಸಿಕ್ಕಿದೆ ಅನೇಕ‌ ಸಾಕ್ಷ್ಯ, ಶಾಮೀಲಾಗಿದ್ದನ್ನು ಪುಷ್ಟೀಕರಿಸುವ ಅಂಶಗಳು ಇಲ್ಲಿವೆ

ಏನೂ ಭ್ರಷ್ಟಾಚಾರ ‌ನಡದೇ ಇಲ್ಲ ಎಂಬ ರೀತಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ಕೊಡುತ್ತಿದ್ದಾರೆ. ಇವತ್ತು ‌ನಾಗೇಂದ್ರರನ್ನು ಬಂಧಿಸಿದ್ದಾರೆ. ಆದರೆ, ರೇವಣ್ಣ ಕೇಸ್​​ನಲ್ಲಿ ಮೂರು ದಿನಕ್ಕೊಮ್ಮೆ ಬಂಧಿಸುತ್ತಾರೆ. ಆದರೆ, 40 ದಿನವಾದರೂ ಹಗರಣ ಪ್ರಕರಣದಲ್ಲಿ ಬಂಧನ ಮಾಡುತ್ತಿಲ್ಲ ಎಂದರೆ ಏನು ಅರ್ಥ ಎಂದು ಅಶೋಕ್ ಪ್ರಶ್ನಿಸಿದರು.

ಇದನ್ನೂ ಓದಿ: ಅಭಿವೃದ್ಧಿಗೆ ಹಣವಿಲ್ಲ, ಸಿಎಂ ಹಿಂದೆ ಇರುವುದಕ್ಕೆ ನನಗೆ ಹಣ ಬಂದಿದೆ: ಸತ್ಯ ಒಪ್ಪಿಕೊಂಡ ಆರ್ಥಿಕ ಸಲಹೆಗಾರ ರಾಯರೆಡ್ಡಿ

ಎಸ್​​ಐಟಿ ಮಾಡಿ ಹಗರಣ ಮುಚ್ಚಿಹಾಕುವ ಕೆಲಸ ಮಾಡಿದರು. ಇವತ್ತು ಇಡಿ ಹಾಗೂ ಸಿಬಿಐ‌ ಪಾರದರ್ಶಕವಾಗಿ ಕೆಲಸ ಮಾಡಬೇಕು. ಅಧಿವೇಶನ ಪ್ರಾರಂಭವಾಗುತ್ತಾ ಇದೆ. ಇವತ್ತು ಸಭೆ ಕರೆದಿದ್ದೇನೆ. ಅಧಿವೇಶನದಲ್ಲಿ ಯಾವ ರೀತಿ ‌ಹೋರಾಟ‌ ಮಾಡಬೇಕು ಎಂದು ಚರ್ಚಿಸಿ ತಿಳಿಸುತ್ತೇನೆ ಎಂದು ಅಶೋಕ್ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ