ಗಣಿಗಾರಿಕೆ ಪ್ರಕರಣ: ಸಹಿ ಫೋರ್ಜರಿ ಮಾಡಲಾಗಿತ್ತೆಂದ ಹೆಚ್​ಡಿ ಕುಮಾರಸ್ವಾಮಿ

ಗಣಿಗಾರಿಕೆಗೆ ಅನುಮತಿ ನೀಡಿದ್ದ ಪ್ರಕರಣದಲ್ಲಿ ಲೋಕಾಯುಕ್ತ ಎಸ್​ಐಟಿ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಸಲು ರಾಜ್ಯಪಾಲರ ಅನುಮತಿ ಕೋರಿದೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಆ ಪ್ರಕರಣದಲ್ಲಿ ನನ್ನ ಸಹಿ ಫೋರ್ಜರಿ ಮಾಡಲಾಗಿದೆ ಎಂದಿದ್ದಾರೆ. ಅಲ್ಲದೆ, ಸುಪ್ರೀಂ ಕೋರ್ಟ್​ ಆದೇಶದಂತೆ ವರದಿ ಸಲ್ಲಿಸದೆ ಚಾರ್ಜ್​ಶೀಟ್ ಸಲ್ಲಿಸಲು ಮುಂದಾಗಿದ್ದರ ಹಿಂದಿನ ಕಾರಣ ಏನೆಂದು ಪ್ರಶ್ನಿಸಿದ್ದಾರೆ.

ಗಣಿಗಾರಿಕೆ ಪ್ರಕರಣ: ಸಹಿ ಫೋರ್ಜರಿ ಮಾಡಲಾಗಿತ್ತೆಂದ ಹೆಚ್​ಡಿ ಕುಮಾರಸ್ವಾಮಿ
ಹೆಚ್​ಡಿ ಕುಮಾರಸ್ವಾಮಿ
Follow us
Ganapathi Sharma
|

Updated on: Aug 22, 2024 | 7:28 AM

ಬೆಂಗಳೂರು, ಆಗಸ್ಟ್ 22: ಮುಖ್ಯಮಂತ್ರಿಯಾಗಿದ್ದಾಗ 2007ರ ಅಕ್ಟೋಬರ್‌ನಲ್ಲಿ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್‌ಗೆ ಗಣಿಗಾರಿಕೆ ಗುತ್ತಿಗೆ ನೀಡಿದ್ದೆ ಎನ್ನಲಾದ ಕಡತದಲ್ಲಿ ನನ್ನ ಸಹಿಯನ್ನು ಫೋರ್ಜರಿ ಮಾಡಲಾಗಿದೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಬುಧವಾರ ಆರೋಪಿಸಿದ್ದಾರೆ. ಇದೇ ಪ್ರಕರಣದಲ್ಲಿ ಕುಮಾರಸ್ವಾಮಿ ವಿರುದ್ಧ ಚಾರ್ಜ್​ಶೀಟ್ ದಾಖಲಿಸಲು ಲೋಕಾಯುಕ್ತ ಎಸ್​ಐಟಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರ ಅನುಮತಿ ಕೋರಿದೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಈ ಕಡತ ನನ್ನ ಬಳಿಗೆ ಬಂದಿತ್ತೇ ಎಂಬುದೇ ಖಚಿತವಾಗಿಲ್ಲ ಎಂದಿದ್ದಾರೆ.

‘ನನಗೆ ಸರಿಯಾಗಿ ನೆನಪಿಲ್ಲ, ಆ ನಿರ್ದಿಷ್ಟ ಕಡತ ನನ್ನ ಬಳಿಗೆ ಬಂದಿತ್ತೇ ಅಥವಾ ಇಲ್ಲವೇ ಎಂದು ಪರಿಶೀಲಿಸಬೇಕಾಗಿದೆ. ಅದರಲ್ಲಿರುವುದು ನನ್ನ ಕೈಬರಹ ಮತ್ತು ನನ್ನ ಸಹಿಯ ಫೋರ್ಜರಿಯಾಗಿದೆ. ವಿಚಾರಣೆಯಿಂದ ಎಲ್ಲವನ್ನೂ ಬಹಿರಂಗಪಡಿಸಲಿ. ನಾನು ವಿಶೇಷ ತನಿಖಾ ತಂಡಕ್ಕೆ ತಡೆಯೊಡ್ಡುವುದಿಲ್ಲ. ಅಂತರರಾಷ್ಟ್ರೀಯ ವಿಧಿವಿಜ್ಞಾನ ಪ್ರಯೋಗಾಲಯದಿಂದ ಸಹಿಯನ್ನು ಪರೀಕ್ಷಿಸಲಿ’ ಎಂದು ಅವರು ಹೇಳಿದ್ದಾರೆ.

ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ, ವರದಿ ಸಲ್ಲಿಸಲು ನ್ಯಾಯಾಲಯ ಎಸ್‌ಐಟಿಗೆ ಸೂಚಿಸಿದೆ. ಅವರು ರಾಜ್ಯಪಾಲರ ಬಳಿಗೆ ಏಕೆ ಹೋದರು? ನ್ಯಾಯಾಲಯದ ಮುಂದೆ ತಮ್ಮ ವರದಿಯನ್ನು ಸಲ್ಲಿಸಲು ಅವರಿಗೆ ಅಡ್ಡಿ ಏನು ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಪ್ರಕರಣ ಸಂಬಂಧ ಕುಮಾರಸ್ವಾಮಿ 2014ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. 2016ರಲ್ಲಿ ಆಗಿನ ಕಾಂಗ್ರೆಸ್ ಸರ್ಕಾರ ಮಧ್ಯ ಪ್ರವೇಶಿಸಿ ತನಿಖೆ ನಡೆಸುವುದಾಗಿ ಹೇಳಿತ್ತು.

ಇದನ್ನೂ ಓದಿ: ಪ್ರಾಸಿಕ್ಯೂಷನ್ ಸಂಕಷ್ಟ: ಹೆಚ್​ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಪ್ರಕರಣಗಳ ವ್ಯತ್ಯಾಸವೇನು? ಇಲ್ಲಿದೆ ವಿವರ

ಮೂರು ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸಬೇಕು ಎಂದು ನ್ಯಾಯಾಲಯ ಹೇಳಿತ್ತು. ವಿಚಾರಣೆ ಪೂರ್ಣಗೊಂಡರೆ, ನೀವು ವರದಿಯನ್ನು ಏಕೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ಸಾಯಿ ವೆಂಕಟೇಶ್ವರ ಮಿನರಲ್ಸ್ ಒಂದು ವಂಚಕ ಕಂಪನಿ, ಅದು ಕೋರ್ಟ​ನ್ನೇ ಯಾಮಾರಿಸಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಇದಕ್ಕೆಲ್ಲಾ ನಾನು ಹೆದರುವುದಿಲ್ಲ: ಕಾಂಗ್ರೆಸ್ ವಿರುದ್ಧ ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ

ಕಾಂಗ್ರೆಸ್ ನನ್ನನ್ನು ಹೆದರಿಸಲು ಪ್ರಯತ್ನಿಸುತ್ತಿದೆ, ಅವರು ನನ್ನ ಹೆಸರನ್ನು ಹಾಳು ಮಾಡಲು ಇಲ್ಲದ ಪ್ರಕರಣವನ್ನು ಎಳೆದು ತರುತ್ತಿದ್ದಾರೆ. ಈ ಬಗ್ಗೆ ಕಾನೂನು ಹೋರಾಟ ನಡೆಸುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ