ನಗು ಮುಖದಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಬಂದ ಖಾದರ್,ಸಚಿವ ಸ್ಥಾನ ಫಿಕ್ಸಾ?

ಹೊಸ ಮುಖ್ಯಮಂತ್ರಿ ಆಗಿ ಡಿಕೆ.ಶಿವಕುಮಾರ್ ಅಧಿಕಾರ ಸ್ವೀಕರಿಸಲು ಸಜ್ಜಾಗಿರುವ ಬೆನ್ನಲ್ಲೇ ಸಚಿವ ಸಂಪುಟ ರಚನೆ ಮಾತ್ರವಲ್ಲ, ವಿಧಾನಸಭೆ ಸ್ಪೀಕರ್ ಮತ್ತು ವಿಧಾನ ಪರಿಷತ್ ಸಭಾಪತಿ ಹುದ್ದೆಗಳಲ್ಲೂ ಬದಲಾವಣೆಯಾಗುವ ಸಾಧ್ಯತೆ ಕುರಿತು ರಾಜಕೀಯ ವಲಯದಲ್ಲಿ ಚರ್ಚೆಗಳು ಜೋರಾಗಿವೆ. ವಿಧಾನಸಭೆ ಸ್ಪೀಕರ್ ಆಗಿರುವ ಯು.ಟಿ.ಖಾದರ್ ಅವರ ಹೆಸರು ಡಿ.ಕೆ. ಶಿವಕುಮಾರ್ ಸಚಿವ ಸಂಪುಟಕ್ಕೆ ಸೇರುವ ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿಬರುತ್ತಿದೆ. ಇದಕ್ಕೆ ಪೂರಕವೆಂಬಂತೆ ಖಾದರ್ ಮಂಗಳೂರಿನಿಂದ ಬೆಂಗಳೂರಿಗೆ ದೌಡಾಯಿಸಿದ್ದಾರೆ, ಹೀಗಾಗಿ ಅವರಿಗೆ ಮಂತ್ರಿ ಸ್ಥಾನ ಖಚಿತ ಎನ್ನಲಾಗಿದೆ.

ನಗು ಮುಖದಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಬಂದ ಖಾದರ್,ಸಚಿವ ಸ್ಥಾನ ಫಿಕ್ಸಾ?
Ut Khader

Updated on: Jun 02, 2026 | 7:23 PM

ಬೆಂಗಳೂರು, (ಜೂನ್ 02): ಡಿಕೆ ಶಿವಕುಮಾರ್ ಅವರು ನಾಳೆ (ಜೂನ್ 03) ಸಂಜೆ 4.05ಕ್ಕೆ ಲೋಕಭವನದ ಗಾಜಿನಮನೆಯಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹಾಗೇ ಇವರ ಜೊತೆ 10 ರಿಂದ 12 ಶಾಸಕರು ಸಚಿವರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಸಚಿವರಾಗುವವರು ಯಾರು ಎನ್ನುವುದೇ ನಿಗೂಢವಾಗಿದೆ. ಈ ಬಗ್ಗೆ ದೆಹಲಿಯಲ್ಲಿ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸೇರಿ ಹೈಕಮಾಂಡ್ ನಾಯಕರೊಂದಿಗೆ ಮ್ಯಾರಥಾನ್ ಸಭೆ ನಡೆಸಿದ್ದು, ಯಾರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಎಲ್ಲಾ ಬೆಳವಣಿಗಳ ನಡುವೆ ಸ್ಪೀಕರ್ ಯುಟಿ ಖಾದರ್ ಅವರು ದಿಢೀರ್ ಮಂಗಳೂರಿನಿಂದ ಬೆಂಗಳೂರಿಗೆ ದೌಡಾಯಿಸಿದ್ದು, ಅವರು ಮಂತ್ರಿಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಮುಖ್ಯಾಂಶಗಳು

  • ಮಂಗಳೂರಿನಿಂದ ಕೆಂಪೇಗೌಡ ಏರ್ಪೊಟ್ ಗೆ ಆಗಮಿಸಿದ ಸ್ಪೀಕರ್ ಯುಟಿ ಖಾದರ್
  • ನಗು ಮುಖದಲ್ಲಿ ಏರ್ಪೊಟ್ ಗೆ ಬಂದ ಯುಟಿ ಖಾದರ್ ಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ
  • ಸಹಕಾರ ಕೊಟ್ಟ ಕಾರಣ ನಾನು ಡಿನ್ನರ್ ಇಟ್ಟುಕೊಂಡಿದ್ದೇನೆ ಎಂದ ಖಾದರ್.

ಹೌದು…2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಸಚಿವ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದ ಖಾದರ್ ಅವರಿಗೆ ಕೊನೆ ಕ್ಷಣದಲ್ಲಿ ಸ್ಪೀಕರ್ ಹುದ್ದೆ ನೀಡಲಾಗಿತ್ತು. ಆಗಲೇ ಭವಿಷ್ಯದಲ್ಲಿ ಸಚಿವ ಸಂಪುಟ ಪುನಾರಚನೆ ವೇಳೆ ಅವಕಾಶ ನೀಡುವ ಭರವಸೆ ನೀಡಲಾಗಿತ್ತು ಎನ್ನಲಾಗುತ್ತಿದೆ. ಇದೀಗ ಡಿಕೆ ಶಿವಕುಮಾರ್ ಅವರ ಸಂಪುಟದಲ್ಲಿ ಅವಕಾಶ ನೀಡುವ ಸಾಧ್ಯತೆಗಳು ಹೆಚ್ಚಿದ್ದು, ಇದರಿಂದ ಖಾದರ್ ಅವರು ನಗು ನಗುತ್ತಲೇ ಇಂದು (ಜೂನ್ 02) ಸಂಜೆ ಮಂಗಳೂರಿನಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

ಮಂತ್ರಿ, ಡಿನ್ನರ್ ಬಗ್ಗೆ ಖಾದರ್ ಹೇಳಿದ್ದೇನು?

ಮಂಗಳೂರಿನಿಂದ ಕೆಂಪೇಗೌಡ ಏರ್ಪೊಟ್ ಗೆ ಆಗಮಿಸಿ ಮಾಧ್ಯಮಗಳಿಗೆ ಪ್ರತಿಕ್ರಿಯಸಿದ ಖಾದರ್, ನನಗೆ ಸಚಿವ ಸ್ಥಾನದ ಅಧಿಕೃತ ಮಾಹಿತಿ ಇನ್ನೂ ಬಂದಿಲ್ಲ. ಸದ್ಯಕ್ಕೆ ನಾನು ಸ್ವೀಕರ್ ಆಗಿ ಇದ್ದೇನೆ. ಬಂದ ತಕ್ಷಣ ಮಾಹಿತಿ ಕೊಡುತ್ತೇನೆ. ಅಧಿಕಾರ ಹುಡಿಕಿಕೊಂಡು‌ ಹೋಗಬಾರದು, ನಮ್ಮನ್ನ ಹುಡುಕಿಕೊಂಡು ಬರಬೇಕು ಎಂದರು.

ಇನ್ನು ಸಿಬ್ಬಂದಿಗಳಿಗೆ ಡಿನ್ನರ್ ಆಯೋಜನೆ ಬಗ್ಗೆ ಮಾತನಾಡಿದ ಅವರು, ಸೌಹಾರ್ದವಾಗಿ ನಾನು ಊಟ ಅರೆಂಜ್ ಮಾಡಿದ್ದೇನೆ. ಮೂರು ವರ್ಷಗಳಿಂದ ನಮ್ಮ ಸಿಬ್ಬಂದಿ ಬೇರೆ ಬೇರೆ ಕೆಲಸಗಳನ್ನ ಅಸೆಂಬ್ಲಿಯಲ್ಲಿ ಮಾಡಿದ್ದಾರೆ. ತಳ ಮಟ್ಟದಿಂದ ಐಪಿಎಸ್ ಆಫೀಸರ್ ನನಗೆ ಸಹಕಾರ ಕೊಟ್ಟಿದ್ದಾರೆ. ಸಹಕಾರ ಕೊಟ್ಟ ಕಾರಣ ಡಿನ್ನರ್ ಇಟ್ಟುಕೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಖಾದರ್​​​​​ಗೆ ಮಂತ್ರಿ ಸ್ಥಾನ ಫಿಕ್ಸ್?

ಖಾದರ್ ಅವರಿಗೆ ಮಂತ್ರಿ ಸ್ಥಾನ ಫಿಕ್ಸ್ ಆಗಿದ್ದರಿಂದಲೇ ಮಂಗಳವಾರ ಸಂಜೆ ವಿಧಾನಸೌಧದ ಸಿಬ್ಬಂದಿಗೆ ಬ್ಯಾಂಕ್ವೆಟ್ ಹಾಲ್ ನಲ್ಲಿ ಭೋಜನ ಕೂಟ ಆಯೋಜನೆ ಮಾಡಿದ್ದಾರೆ ಎನ್ನುವ ಚರ್ಚೆ ನಡೆದಿದೆ. ಒಂದು ವೇಳೆ ಖಾದರ್ ಗೆ ಮಂತ್ರಿ ಸ್ಥಾನ ಖಚಿತವಾದರೆ ಅವರು ಸ್ಪೀಕರ್ ಹುದ್ದೆಗೆ ರಾಜೀನಾಮೆಯನ್ನು ನೀಡಲಿದ್ದಾರೆ. ಬಳಿಕ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಮರಳಿ ಪಡೆದುಕೊಳ್ಳಲಿದ್ದಾರೆ.

ಸ್ಪೀಕರ್ ಯುಟಿ ಖಾದರ್ ಅವರು ಕರ್ನಾಟಕದ ಮೊದಲ ಮುಸ್ಲಿಂ ಸಮುದಾಯದಿಂದ ಈ ಹುದ್ದೆಗೇರಿರುವ ಹೆಗ್ಗಳಿಕೆ ಹೊಂದಿದ್ದಾರೆ. ಈ ಮೊದಲು ಅಂದರೆ ಈ 2013ರಲ್ಲಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದರು. ಇನ್ನು 2023ರಿಂದ 3 ವರ್ಷಗಳ ಕಾಲ ಸ್ಫೀಕರ್ ಆಗಿ ಸದನವನ್ನು ನಡೆಸಿದ್ದಾರೆ. ಇದೀಗ ಅವರು ಡಿಕೆ ಶಿವಕುಮಾರ್ ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆ ದಟ್ಟವಾಗಿದೆ.

ಕರ್ನಾಟಕದ ಮ್ತತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:15 pm, Tue, 2 June 26

Follow Us