ಕೈತಪ್ಪಿದ ಬಿಜೆಪಿ ಟಿಕೆಟ್: ನಿಜಕ್ಕೂ ಅಷ್ಟೇ ಸಾಕು… ಅನಂತಕುಮಾರ್ ಹೆಗಡೆ ಭಾವುಕ ಪತ್ರ
ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳ ಐದನೇ ಪಟ್ಟಿ ಬಿಡುಗಡೆಯಾಗಿದ್ದು, ಉತ್ತರ ಕನ್ನಡ ಕ್ಷೇತ್ರದ ಟಿಕೆಟ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಘೋಷಣೆಯಾಗಿದೆ. ಅದರಂತೆ ಹಾಲಿ ಸಂಸದ ಅನಂತಕುಮಾರ್ ಹೆಗಡೆ ಅವರಿಗೆ ಟಿಕೆಟ್ ಕೈತಪ್ಪಿದೆ. ಇದರ ಬೆನ್ನಲ್ಲೇ ಹೆಗಡೆ ಅವರು ಭಾವುಕ ಪತ್ರ ಬರೆದಿದ್ದಾರೆ.
ನವದೆಹಲಿ, ಮಾ.24: ಲೋಕಸಭೆ ಚುನಾವಣೆಗೆ (Lok Sabha Elections) ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳ ಐದನೇ ಪಟ್ಟಿ ಬಿಡುಗಡೆಯಾಗಿದ್ದು, ಉತ್ತರ ಕನ್ನಡ (Uttar Kannada) ಕ್ಷೇತ್ರದ ಟಿಕೆಟ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಘೋಷಣೆಯಾಗಿದೆ. ಅದರಂತೆ ಹಾಲಿ ಸಂಸದ ಅನಂತಕುಮಾರ್ ಹೆಗಡೆ (Anantkumar Hegde) ಅವರಿಗೆ ಟಿಕೆಟ್ ಕೈತಪ್ಪಿದೆ. ಇದರ ಬೆನ್ನಲ್ಲೇ ಹೆಗಡೆ ಅವರು ಭಾವುಕ ಪತ್ರ ಬರೆದಿದ್ದು, ಸೇವೆಯ ಸೌಭಾಗ್ಯ ಒದಗಿಸಿಕೊಟ್ಟ ಕ್ಷೇತ್ರದ ಜನಮನಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಅನಂತಕುಮಾರ್ ಹೆಗಡೆ ಪತ್ರದಲ್ಲಿ ಏನಿದೆ?
ಆತ್ಮೀಯ ಬಂಧುಗಳೇ, ಈ ಭೂಮಿಯಲ್ಲಿ ನನ್ನ ಲೌಕಿಕ ಬದುಕಿನಿಂದಾಚೆಗೂ ಒಂದು ಭವ್ಯವಾದ ಬದುಕಿದೆ ಎಂದೆನಿಸಿತ್ತು. ಅಂತಹ ಬದುಕನ್ನು ನೋಡುವ ತಹತಹ ಇತ್ತು, ತಳಮಳವೂ ಇತ್ತು. ಸೋಲು ಗೆಲುವಿನ ಆತಂಕದಿಂದಾಚೆ ಜೀವನವನ್ನು ನಿತ್ಯ ಸತ್ಯವಾಗಿಸುವ ಹಾಗೂ ಎಂದೂ ನಿಲ್ಲದ ಪ್ರವಾಹವಾಗಿಸುವ, ಚೈತನ್ಯದ ಪೂಜೆಯನ್ನಾಗಿಸುವ ಹಂಬಲ ಕಾಡುತ್ತಿತ್ತು.
ಆದರೆ, ಆರಂಭ ಎಲ್ಲಿಂದ ತಿಳಿದಿರಲಿಲ್ಲ. ಜ್ಞಾನಿಗಳು, ಹಣವಂತರು, ಅಧಿಕಾರ ಇದ್ದವರು ಅವರದೇ ಆದ ರೀತಿಯಲ್ಲಿ ಪೂಜೆ ಮಾಡುತ್ತಾರೆ. ಆದರೆ, ಅಂತಹ ಯಾವುದೇ ಉಪಾಧಿಗಳಿಲ್ಲದ ನಾನು ಈ ಪೂಜೆಯನ್ನು ಎಲ್ಲಿಂದ, ಹೇಗೆ ಆರಂಭಿಸಲಿ ಎಂದು ಗೊತ್ತಿರಲಿಲ್ಲ.
ಇದನ್ನೂ ಓದಿ: BJP candidates Fifth list: ಬಿಜೆಪಿ ಅಭ್ಯರ್ಥಿಗಳ 5ನೇ ಪಟ್ಟಿ ಬಿಡುಗಡೆ, ಬೆಳಗಾವಿಯಿಂದ ಜಗದೀಶ್ ಶೆಟ್ಟರ್ ಕಣಕ್ಕೆ
ಈ ಮಧ್ಯದಲ್ಲಿ ಆರಂಭಗೊಂಡಿದ್ದು ಜನತಾ ಜನಾರ್ದನ ಆರಾಧನೆ. ಸರಿ ಸುಮಾರು ಮೂವತ್ತು ವರ್ಷಗಳ ತಮ್ಮೆಲ್ಲರ ಅಪೂರ್ವ ಒಡನಾಟ, ತಾವುಗಳು ತೋರಿದ ಸ್ನೇಹ, ಪ್ರೀತಿ, ವಾತ್ಸಲ್ಯ ನಿಜಕ್ಕೂ ಭಾಷೆಗೆ ನಿಲುಕದ್ದು, ಅದು ಅದಮ್ಯ. ಯಾವುದೇ ಪೂಜೆ ಆರಾಧನೆ, ಅದು ಎಂದಿಗೂ ಮುಗಿಯದ ಅನಂತ ಕಾಯಕ. ಈ ತಾಯ್ನೆಲದ ಪೂಜೆಯಲ್ಲಿ, ಆಕೆಯ ಸೇವೆಯಲ್ಲಿ ನನ್ನನ್ನು ನಾನು ಸಮರ್ಪಿಸಿಕೊಳ್ಳುವ ಸೌಭಾಗ್ಯ ಈ ಜನ್ಮದಲ್ಲಿ ಭಗವಂತ ಕರುಣಿಸಿದಕ್ಕೆ, ಈ ಕಣ್ಣಿಗೆ ಕಾಣದ ಆ ಅಕ್ಷಯ ಪಾದಪದ್ಮಗಳಿಗೆ ನನ್ನ ಅನಂತ ನಮನಗಳನ್ನು ಸಲ್ಲಿಸುತ್ತೇನೆ.
ಕಳೆದ 3 ದಶಕಗಳಿಂದ ಹಿಂದವೀ ಹಿತದಲ್ಲಿ ಸೇವೆ ಸಲ್ಲಿಸುವ ಅಪೂರ್ವ ಸಯ್ಯೋಗ ಈ ಬದುಕಿನಲ್ಲಿ ನನಗೊಂದು ಗುರುತು ನೀಡಿದೆ. ನಿಜಕ್ಕೂ ಅಷ್ಟೇ ಸಾಕು!!!!! ಈ ಸಮಾಜ ದೇವತೆಯ ಪದತಲದಲ್ಲಿ ಹೂವಾಗುವ ಸೌಭಾಗ್ಯ ಅದೆಷ್ಟು ಜನರಿಗೆ ತಾನೇ ಸಿಕ್ಕೀತು?
ಹೆತ್ತ ತಾಯೊಡಲಿಗೆ, ಬದುಕು ಕೊಟ್ಟ ಈ ಮಣ್ಣಿಗೆ ಗುರುತು ಕೊಟ್ಟ ನನ್ನ ಜನಕ್ಕೆ ಸೇವೆಯ ಸೌಭಾಗ್ಯವನ್ನು ಒದಗಿಸಿಕೊಟ್ಟ ಕ್ಷೇತ್ರದ ಜನಮನಕ್ಕೆ ಮತ್ತೊಮ್ಮೆ, ಮತ್ತೊಮ್ಮೆ, ಮತ್ತೊಮ್ಮೆ ಸಾಷ್ಟಾಂಗವೆರಗುತ್ತೇನೆ. ತಮ್ಮೆಲ್ಲರ ನೆನಪಿನಲ್ಲಿ ಹೃದಯದಾಳದ ಕೃತಜ್ಞತೆಯೊಂದಿಗೆ, ಅನಂತಕುಮಾರ ಹೆಗಡೆ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:56 pm, Sun, 24 March 24