ಕಾರವಾರ: ಅನೈತಿಕ ಚಟುವಟಿಕೆಗಳ ಅಡ್ಡೆಯಾದ ಆರೋಗ್ಯ ಇಲಾಖೆ ವಸತಿಗೃಹಗಳು; ಮಜಾ ಮಾಡಲು ಹುಡುಗ-ಹುಡುಗಿಯರು ಬರ್ತಾರೆ

ಉತ್ತರ ಕನ್ನಡದ ಅಂಕೋಲಾ ಹಟ್ಟಿಕೇರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ (PHC) ಸರ್ಕಾರಿ ವಸತಿಗೃಹಗಳು ಸಂಪೂರ್ಣ ಪಾಳುಬಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿವೆ. ಮಹಿಳೆಯರು ಮತ್ತು ಸಾರ್ವಜನಿಕರು ಓಡಾಡಲು ಭಯಪಡುತ್ತಿದ್ದಾರೆ. ಸಚಿವ ಯು.ಟಿ. ಖಾದರ್ ಅವರ ತಕ್ಷಣದ ಗಮನಕ್ಕೆ ತರಲಾಗಿದ್ದು, ಈ ಅಪಾಯಕಾರಿ ಕಟ್ಟಡಗಳನ್ನು ತೆರವುಗೊಳಿಸಲು ಅಥವಾ ಹೊಸ ಆಸ್ಪತ್ರೆ ನಿರ್ಮಿಸಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ನಿರ್ಲಕ್ಷಿಸಿದರೆ ಸ್ವತಃ ಕೆಡವಲು ಸಿದ್ಧ.

ಕಾರವಾರ: ಅನೈತಿಕ ಚಟುವಟಿಕೆಗಳ ಅಡ್ಡೆಯಾದ ಆರೋಗ್ಯ ಇಲಾಖೆ ವಸತಿಗೃಹಗಳು; ಮಜಾ ಮಾಡಲು ಹುಡುಗ-ಹುಡುಗಿಯರು ಬರ್ತಾರೆ
ಪಾಳುಬಿದ್ದ ವಸತಿಗೃಹಗಳು
Edited By:

Updated on: Jul 18, 2026 | 10:13 AM

ಕಾರವಾರ, ಜು.18: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಟ್ಟಿಕೇರಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ (PHC) ಸುತ್ತಮುತ್ತಲಿನ ಜಾಗದಲ್ಲಿರುವ ಆರೋಗ್ಯ ಇಲಾಖೆಯ ಸರ್ಕಾರಿ ವಸತಿಗೃಹಗಳು ಸಂಪೂರ್ಣ ಪಾಳುಬಿದ್ದಿದ್ದು, ಸದ್ಯ ಸಮಾಜಘಾತುಕ ಹಾಗೂ ಅನೈತಿಕ ಚಟುವಟಿಕೆಗಳ ಪ್ರಮುಖ ತಾಣವಾಗಿ ಮಾರ್ಪಟ್ಟಿವೆ. ಹಗಲೊತ್ತಿನಲ್ಲೇ ಈ ಭಾಗದಲ್ಲಿ ಒಂಟಿಯಾಗಿ ಓಡಾಡಲು ಮಹಿಳೆಯರು ಮತ್ತು ಸಾರ್ವಜನಿಕರು ತೀವ್ರ ಭಯ ಪಡುವಂತಹ ಭೀಕರ ವಾತಾವರಣ ಸೃಷ್ಟಿಯಾಗಿದ್ದು, ಆರೋಗ್ಯ ಇಲಾಖೆ ಸಚಿವ ಯು.ಟಿ. ಖಾದರ್ ಅವರು ತಕ್ಷಣವೇ ಈ ಕಡೆ ಗಮನ ಹರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಹಟ್ಟಿಕೇರಿಯಲ್ಲಿ ಆರೋಗ್ಯ ಇಲಾಖೆಗೆ ಸೇರಿದ ಸುಮಾರು 15 ಎಕರೆಗೂ ಅಧಿಕ ವಿಸ್ತಾರವಾದ ಭೂಮಿ ಇದೆ. ಈ ಹಿಂದೆ ಇಲ್ಲಿ ಹಟ್ಟಿಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ತಂಗಲು ವಸತಿಗೃಹಗಳನ್ನು ನಿರ್ಮಿಸಲಾಗಿತ್ತು. ಆದರೆ, ಕಾಲಕ್ರಮೇಣ ನಿರ್ವಹಣೆ ಇಲ್ಲದೇ ಯಾರು ವಾಸವಿರದ ಕಾರಣ ಈ ವಸತಿಗೃಹಗಳು ಸಂಪೂರ್ಣ ಪಾಳುಬಿದ್ದಿವೆ.

ಸದ್ಯ ಈ ಕಟ್ಟಡಗಳು ಮೇಲ್ಚಾವಣಿ ಇಲ್ಲದೆ ಕೇವಲ ಗೋಡೆಗಳಷ್ಟೇ ಉಳಿದುಕೊಂಡಿದ್ದು, ಸುತ್ತಲೂ ದಟ್ಟವಾದ ಗಿಡಗಂಟಿಗಳು ಹಾಗೂ ಪೊದೆಗಳು ಆವರಿಸಿಕೊಂಡಿವೆ. ಈ ಪಾಳುಬಿದ್ದ ಕೊಠಡಿಗಳ ಒಳಗೆ ರಾಶಿ ರಾಶಿ ಮದ್ಯದ ಖಾಲಿ ಬಾಟಲಿಗಳು ಬಿದ್ದಿದ್ದು, ಹಗಲು-ರಾತ್ರಿ ಎನ್ನದೆ ಇಲ್ಲಿ ಅನಾಚಾರ ಮತ್ತು ಅನೈತಿಕ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿವೆ ಎಂದು ಸ್ಥಳೀಯರು ಗಂಭೀರವಾಗಿ ಆರೋಪಿಸಿದ್ದಾರೆ. ಹೊರ ಊರುಗಳಿಂದ ಕಾರುಗಳಲ್ಲಿ ಹುಡುಗ-ಹುಡುಗಿಯರನ್ನು ತಂದು ಇಲ್ಲಿ ಬಿಟ್ಟು ಹೋಗುವ ಜಾಲ ಸಕ್ರಿಯವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಈ ಜಾಗದ ಪಕ್ಕದಲ್ಲೇ ಶಾಲಾ ಕಾಲೇಜು ಹಾಗೂ ಅಂಗನವಾಡಿ ಕೇಂದ್ರಗಳಿದ್ದು, ತಾಯಂದಿರು ತಮ್ಮ ಪುಟ್ಟ ಮಕ್ಕಳನ್ನು ಕರೆದುಕೊಂಡು ಹೋಗುವಾಗ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಕುರಿತು ಟಿವಿ9 ವಾಹಿನಿಯೊಂದಿಗೆ ಮಾತನಾಡಿರುವ ಸ್ಥಳೀಯ ನಿವಾಸಿ ಮೋಹಿನಿ ಅವರು ತಮ್ಮ ಭಯಾನಕ ಅನುಭವಗಳನ್ನು ಹಂಚಿಕೊಂಡಿದ್ದಾರೆ.

“ಈ ಹಳೇ ಕಟ್ಟಡಗಳಲ್ಲಿ ದಿನನಿತ್ಯ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಹೊರ ಊರುಗಳಿಂದ ಹುಡುಗ-ಹುಡುಗಿಯರು ಇಲ್ಲಿಗೆ ಬಂದು ಅಸಭ್ಯವಾಗಿ ವರ್ತಿಸುತ್ತಾರೆ. ಇನ್ನೊಂದು ಬಿಲ್ಡಿಂಗ್‌ನಲ್ಲಿ ಕುಡುಕರು ಕುಡಿಯಲು ಕೂರುತ್ತಾರೆ. ಈಗಾಗಲೇ ಈ ಭಾಗದಲ್ಲಿ ಕೊಲೆಯತ್ನ ಪ್ರಕರಣಗಳೂ ದಾಖಲಾಗಿವೆ. ಪರಿಸ್ಥಿತಿ ಹೀಗೇ ಮುಂದುವರಿದರೆ ನಾಳೆ ಇಲ್ಲಿ ಯಾರನ್ನಾದರೂ ಕೊಲೆ ಮಾಡಿ ಹೋದರೂ ಕೇಳುವವರಿಲ್ಲದಂತಾಗುತ್ತದೆ. ಈ ಬಗ್ಗೆ ಅಧಿಕಾರಿಗಳಿಗೆ ಹೇಳಿ ಹೇಳಿ ಸಾಕಾಗಿದೆ. ಸಚಿವ ಯು.ಟಿ. ಖಾದರ್ ಅವರ ಗಮನಕ್ಕೂ ಈ ವಿಷಯ ತಂದಿದ್ದೇವೆ. ಕೂಡಲೇ ಈ ಕಟ್ಟಡಗಳನ್ನು ತೆರವುಗೊಳಿಸಬೇಕು.” ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಆಟೋ ಡ್ರೈವರ್ ಅಕೌಂಟ್‌ನಲ್ಲಿ 29 ಲಕ್ಷ, ಪೌರಕಾರ್ಮಿಕನ ಖಾತೆಯಲ್ಲಿ 34 ಲಕ್ಷ! ಅಮಾಯಕರ ಬ್ಯಾಂಕ್ ಖಾತೆ ಬಳಸಿ ಕೋಟ್ಯಂತರ ರೂ. ವಂಚನೆ

ಆರೋಗ್ಯ ಇಲಾಖೆಗೆ ಸೇರಿದ ಈ ಇಷ್ಟೊಂದು ದೊಡ್ಡ ಪ್ರಮಾಣದ ಅಮೂಲ್ಯವಾದ ಭೂಮಿಯನ್ನು ದುರುಪಯೋಗಪಡಿಸಿಕೊಳ್ಳುವ ಬದಲು, ಇಲ್ಲೇ ಆಸ್ಪತ್ರೆ ಸಿಬ್ಬಂದಿಗಳಿಗೆ ಹೊಸ ವಸತಿಗೃಹಗಳನ್ನು ನಿರ್ಮಿಸಿಕೊಡಬೇಕು ಅಥವಾ ನೂತನ ಜಿಲ್ಲಾಸ್ಪತ್ರೆಯನ್ನು (District Hospital) ಇದೇ ಜಾಗದಲ್ಲಿ ನಿರ್ಮಿಸಿದರೆ ಇಡೀ ಜಿಲ್ಲೆಯ ಜನರಿಗೆ ಅನುಕೂಲವಾಗುತ್ತದೆ ಎಂದು ಸಾರ್ವಜನಿಕರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಈ ಅಪಾಯಕಾರಿ ಹಾಗೂ ಪಾಳುಬಿದ್ದ ಕಟ್ಟಡಗಳನ್ನು ಇಲಾಖೆಯು ಶೀಘ್ರವಾಗಿ ತೆರವುಗೊಳಿಸಬೇಕು. ಒಂದು ವೇಳೆ ಸರ್ಕಾರ ಅಥವಾ ಸಂಬಂಧಪಟ್ಟ ಅಧಿಕಾರಿಗಳು ಈ ಜಾಗವನ್ನು ಸ್ವಚ್ಛಗೊಳಿಸಿ ಕಟ್ಟಡ ಕೆಡವದಿದ್ದರೆ, ಇಡೀ ಗ್ರಾಮಸ್ಥರೇ ಒಟ್ಟು ಸೇರಿ ಸ್ವತಃ ಆ ಕಟ್ಟಡಗಳನ್ನು ಕೆಡವಿ ಧ್ವಂಸ ಮಾಡುವುದಾಗಿ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:12 am, Sat, 18 July 26

ಅಶೋಕ್​ ಪೂಜಾರಿ

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸ್ಥಳೀಯ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಖಾಸಗಿ ಸುದ್ದಿ ವಾಹಿನಿಯಲ್ಲಿ ಉಡುಪಿ ಜಿಲ್ಲಾ ವರದಿಗಾರರಾಗಿ ಕೆಲಕಾಲ ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ ನಂತರ ಟಿವಿ9 ಸುದ್ದಿ ವಾಹಿನಿಯಲ್ಲಿ ಉತ್ತರ ಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ indiatelevision.com 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

Read More
Loading...
Unable to load recommendations.
Follow Us