141 ವರ್ಷಗಳ ಹಳೆಯ ಶಾಲೆಯ ಸ್ಥಿತಿ ನೋಡಿ: ಗೆದ್ದಲು ಹಿಡಿದ ಮೇಲ್ಚಾವಣಿ, ಬಿರುಕು ಬಿಟ್ಟ ಮಣ್ಣಿನ ಗೋಡೆಗಳು; ವಿದ್ಯಾರ್ಥಿಗಳ ಜೀವದ ಜತೆ ಚೆಲ್ಲಾಟ

ಅಂಕೋಲಾ ತಾಲೂಕಿನ ಹರವಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 141 ವರ್ಷಗಳ ಕಟ್ಟಡ ಸಂಪೂರ್ಣ ಶಿಥಿಲವಾಗಿದೆ. ಗೆದ್ದಲು ಹಿಡಿದ ಮೇಲ್ಚಾವಣಿ, ಬಿರುಕು ಬಿಟ್ಟ ಗೋಡೆಗಳಿಂದಾಗಿ ಮಕ್ಕಳು ಜೀವಭಯದಲ್ಲೇ ಪಾಠ ಕೇಳುತ್ತಿದ್ದಾರೆ. ಮಳೆ ಬಂದರೆ ಸೋರುವ ಕಟ್ಟಡದ ಬಗ್ಗೆ ಪೋಷಕರು ಆತಂಕಗೊಂಡಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳ ಸಂಖ್ಯೆಯೂ ಕುಸಿದಿದೆ. ಮಕ್ಕಳ ಸುರಕ್ಷತೆ ದೊಡ್ಡ ಸವಾಲಾಗಿದೆ.

141 ವರ್ಷಗಳ ಹಳೆಯ ಶಾಲೆಯ ಸ್ಥಿತಿ ನೋಡಿ: ಗೆದ್ದಲು ಹಿಡಿದ ಮೇಲ್ಚಾವಣಿ, ಬಿರುಕು ಬಿಟ್ಟ ಮಣ್ಣಿನ ಗೋಡೆಗಳು; ವಿದ್ಯಾರ್ಥಿಗಳ ಜೀವದ ಜತೆ ಚೆಲ್ಲಾಟ
ಅಂಕೋಲಾ ಶಾಲೆ ಶಿಥಿಲ ಕಟ್ಟಡ
Edited By:

Updated on: Jul 17, 2026 | 7:30 PM

ಮುಖ್ಯಾಂಶಗಳು

  • ಅಂಕೋಲಾ ತಾಲೂಕಿನ ಹಾರವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
  • 141 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಈ ಹೆಮ್ಮೆಯ ಶಾಲಾ
  • ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ಬಂದು ತಲುಪಿದೆ

ಅಂಕೋಲಾ, ಜು.17: ಶಾಲೆ ಅಂದರೆ ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸುವ ಜ್ಞಾನದ ದೇವಾಲಯ. ಆದರೆ, ಉತ್ತರ ಕನ್ನಡ ಜಿಲ್ಲೆಯ ಈ ಶಾಲೆಯಲ್ಲಿ ಮಕ್ಕಳಿಗೆ ಅಕ್ಷರ ಕಲಿಯುವುದಕ್ಕಿಂತ ಹೆಚ್ಚಾಗಿ ದಿನವಿಡೀ ತಮ್ಮ ಜೀವ ಉಳಿಸಿಕೊಳ್ಳುವುದೇ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಯಾವ ಕ್ಷಣದಲ್ಲಾದರೂ ಕುಸಿದು ಬೀಳುವ ಸ್ಥಿತಿಯಲ್ಲಿರುವ ಕಟ್ಟಡ, ಗೆದ್ದಲು ಹಿಡಿದ ಮೇಲ್ಚಾವಣಿ, ಮಳೆ ಬಂದರೆ ಸೋರುವ ಮಣ್ಣಿನ ಗೋಡೆಗಳು, ಇಂತಹದ್ದೇ ಒಂದು ತೀವ್ರ ಅಪಾಯಕಾರಿ ಪರಿಸ್ಥಿತಿಯಲ್ಲಿ ಪುಟಾಣಿ ಮಕ್ಕಳು ಪ್ರತಿದಿನ ಜೀವ ಭಯದಲ್ಲೇ ಪಾಠ ಕೇಳುತ್ತಿದ್ದಾರೆ.

ಇದು ಅಂಕೋಲಾ ತಾಲೂಕಿನ ಹಾರವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಬರೋಬ್ಬರಿ 141 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಈ ಹೆಮ್ಮೆಯ ಶಾಲಾ ಕಟ್ಟಡ ಇಂದು ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ಬಂದು ತಲುಪಿದೆ. ಶಾಲೆಯ ಮೇಲ್ಚಾವಣಿಗೆ ಸಂಪೂರ್ಣವಾಗಿ ಗೆದ್ದಲು ಹಿಡಿದಿದ್ದು, ಮಣ್ಣಿನ ಗೋಡೆಗಳು ಅಲ್ಲಲ್ಲಿ ಬಿರುಕು ಬಿಟ್ಟಿವೆ. ಯಾವುದೇ ಮುನ್ಸೂಚನೆ ಇಲ್ಲದೆ ಕಟ್ಟಡ ನೆಲಸಮವಾಗುವ ಭೀತಿ ಎದುರಾಗಿದೆ.

ಶಾಲೆಯ ಹಳೆಯ ಕಟ್ಟಡಗಳು ಅತ್ಯಂತ ಅಪಾಯಕಾರಿಯಾಗಿರುವ ಹಿನ್ನೆಲೆಯಲ್ಲಿ ಮುಖ್ಯ ಶಿಕ್ಷಕರು ಅನಿವಾರ್ಯವಾಗಿ ಆ ಕೊಠಡಿಗಳನ್ನು ಬಂದ್ ಮಾಡಿದ್ದಾರೆ. ಸ್ತುತ ಒಂದೇ ಕೊಠಡಿಯಲ್ಲಿ ಎರಡೆರಡು ತರಗತಿಗಳನ್ನು ಒಟ್ಟಿಗೆ ನಡೆಸಲಾಗುತ್ತಿದೆ. ಆದರೆ, ಈಗ ತರಗತಿ ನಡೆಯುತ್ತಿರುವ ಕೊಠಡಿಯೂ ಅಷ್ಟೇನೂ ಸುರಕ್ಷಿತವಾಗಿಲ್ಲ.

ಜೋರು ಮಳೆ ಬಂದರೆ ಸಾಕು, ಶಾಲೆಯ ಗೋಡೆಗಳಿಂದ ನೀರು ಒಳಗೆ ಸೋರುತ್ತದೆ. ಗಾಳಿ ಜೋರಾಗಿ ಬೀಸಿದರೆ ಇಡೀ ಕಟ್ಟಡವೇ ಅಲುಗಾಡುವಂತಾಗಿ ಆತಂಕ ಸೃಷ್ಟಿಸುತ್ತದೆ. “ನಮ್ಮ ಮಕ್ಕಳು ಸುರಕ್ಷಿತವಾಗಿದ್ದಾರೋ ಇಲ್ಲವೋ ಎಂದು ಪೋಷಕರು ಪ್ರತಿದಿನ ಕಳವಳದಿಂದ ಶಾಲೆಗೆ ಬಂದು ನೋಡಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಶಾಲೆಯ ಮುಖ್ಯ ಶಿಕ್ಷಕಿ ವನಿತಾ ನಾಯ್ಕ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮುರುಡೇಶ್ವರ ದೇವಸ್ಥಾನದ ಹೆಸರಲ್ಲಿ ನಕಲಿ ಲಾಟರಿ ದಂಧೆ: ಬೀದರ್ ಮೂಲದ ವ್ಯಕ್ತಿ ಅರೆಸ್ಟ್

ಶಾಲೆಯ ಈ ದುಃಸ್ಥಿತಿಯ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಹಲವು ಬಾರಿ ಲಿಖಿತ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತ ಪೋಷಕರು ತಾವೇ ಸ್ವತಃ ಹಣ ಸಂಗ್ರಹಿಸಿ ಸಣ್ಣಪುಟ್ಟ ದುರಸ್ತಿ ಕೆಲಸ ಮಾಡಿಸಿದ್ದಾರೆ. ಆದರೂ ಭೀತಿ ಮಾತ್ರ ದೂರಾಗಿಲ್ಲ. ಎಸ್‌ಡಿಎಂಸಿ ಅಧ್ಯಕ್ಷರಾದ ವಿನೋದ್ ಅವರು ಈ ಬಗ್ಗೆ ಮಾತನಾಡಿದ್ದಾರೆ. “ಒಂದು ಕಾಲದಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದ್ದ ಈ ಶಾಲೆಯಲ್ಲಿ ಇಂದು ಕೇವಲ 40 ಮಕ್ಕಳು ಮಾತ್ರ ಉಳಿದಿದ್ದಾರೆ. ಶಿಥಿಲಗೊಂಡಿರುವ ಕಟ್ಟಡದ ಭಯದಿಂದಲೇ ಪೋಷಕರು ತಮ್ಮ ಮಕ್ಕಳನ್ನು ಈ ಶಾಲೆಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ. ಇಲ್ಲಿ ಶಿಕ್ಷಣದ ಗುಣಮಟ್ಟಕ್ಕಿಂತ ಮೊದಲು ಮಕ್ಕಳ ಜೀವದ ಸುರಕ್ಷತೆಯೇ ದೊಡ್ಡ ಪ್ರಶ್ನೆಯಾಗಿದೆ” ಎಂದು ಅಳಲು ತೋಡಿಕೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us