ಬೇಡ್ತಿ–ವರದಾ ನದಿ ಜೋಡಣೆಗೆ ತೀವ್ರ ವಿರೋಧ: ಡಿಪಿಆರ್ ಪ್ರಕ್ರಿಯೆ​​ ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹ

ಜೀವವೈವಿಧ್ಯ ಮತ್ತು ಅರಣ್ಯ ಸಂಪತ್ತಿಗೆ ಧಕ್ಕೆಯಾಗಲಿದೆ ಎಂಬ ಆತಂಕದ ಹಿನ್ನೆಲೆ 9,652.7 ಕೋಟಿ ರೂ. ವೆಚ್ಚದ ಬೇಡ್ತಿ–ವರದಾ ನದಿ ಜೋಡಣೆ ಯೋಜನೆಯ ಡಿಪಿಆರ್ ಪ್ರಕ್ರಿಯೆ ಹಿಂಪಡೆಯುವಂತೆ ಉತ್ತರ ಕನ್ನಡ ನಿವಾಸಿಗಳು ಹಾಗೂ ಅಕ್ಕ ಫೌಂಡೇಷನ್ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿವೆ. ಫೌಂಡೇಷನ್ ಹಾಗೂ ಸ್ಥಳೀಯ ನಿವಾಸಿಗಳ ಪ್ರಕಾರ, ಈ ಯೋಜನೆಯಿಂದ 500ರಿಂದ 600 ಎಕರೆ ಅರಣ್ಯ ಪ್ರದೇಶ ನಾಶವಾಗುವ ಸಾಧ್ಯತೆಯಿದೆ. ಅಲ್ಲದೆ, ಸುಮಾರು 17,421 ಸಸ್ಯ ಪ್ರಭೇದಗಳು ಹಾಗೂ 420ಕ್ಕೂ ಹೆಚ್ಚು ಪ್ರಾಣಿ ಮತ್ತು ಪಕ್ಷಿ ಪ್ರಭೇದಗಳಿಗೆ ಅಪಾಯ ಎದುರಾಗಲಿದೆ.

ಬೇಡ್ತಿ–ವರದಾ ನದಿ ಜೋಡಣೆಗೆ ತೀವ್ರ ವಿರೋಧ: ಡಿಪಿಆರ್ ಪ್ರಕ್ರಿಯೆ​​ ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹ
ಬೇಡ್ತಿ–ವರದಾ ನದಿ ಜೋಡಣೆಗೆ ತೀವ್ರ ವಿರೋಧ

Updated on: Nov 28, 2026 | 7:04 AM

ಉತ್ತರ ಕನ್ನಡ, ನವೆಂಬರ್​​ 28: ಜೀವವೈವಿಧ್ಯ, ಅರಣ್ಯ ಸಂಪತ್ತು ಹಾಗೂ ಸ್ಥಳೀಯ ಜನರ ಜೀವನೋಪಾಯಕ್ಕೆ ಅಪಾಯ ಎದುರಾಗಲಿದೆ ಎಂಬ ಆತಂಕದ ಹಿನ್ನೆಲೆಯಲ್ಲಿ 9,652.7 ಕೋಟಿ ರೂಪಾಯಿ ವೆಚ್ಚದ ಬೇಡ್ತಿ–ವರದಾ ನದಿ ಜೋಡಣೆ ಯೋಜನೆಗೆ ಉತ್ತರ ಕನ್ನಡ ಜಿಲ್ಲೆಯ ನಿವಾಸಿಗಳು ಹಾಗೂ ಅಕ್ಕ ಫೌಂಡೇಷನ್ ಟ್ರಸ್ಟ್ ವಿರೋಧ ವ್ಯಕ್ತಪಡಿಸಿವೆ. ನವೆಂಬರ್ 23ರಂದು ಸಲ್ಲಿಸಿರುವ ಮನವಿ ಪತ್ರದಲ್ಲಿ, ಯೋಜನೆಯ ವಿವರವಾದ ಯೋಜನಾ ವರದಿ, ಸಮೀಕ್ಷೆ ಹಾಗೂ ಭೂಸ್ವಾಧೀನ ಪ್ರಕ್ರಿಯೆಗಳನ್ನು ತ್ವರಿತಗೊಳಿಸುವಂತೆ ರಾಜ್ಯ ಸರ್ಕಾರ ನೀಡಿರುವ ನಿರ್ದೇಶನಗಳನ್ನು ಹಿಂಪಡೆಯಬೇಕು ಮತ್ತು ಯೋಜನೆಯನ್ನೇ ಕೈಬಿಡಬೇಕು ಎಂದು ಆಗ್ರಹಿಸಲಾಗಿದೆ.

ಡಿಪಿಆರ್​​ ಸ್ಥಗಿತದ ಅಧಿಕಾರ ರಾಜ್ಯದ್ದು ಎಂದಿದ್ದ ಕೇಂದ್ರ

ಈ ಹಿಂದೆ ನದಿ ತಿರುವು ಯೋಜನೆ ಹಾಗೂ ಡಿಪಿಆರ್ ಸಿದ್ಧಪಡಿಸುವ ಕಾರ್ಯವನ್ನು ಸ್ಥಗಿತಗೊಳಿಸುವಂತೆ ಕೋರಿ ಫೌಂಡೇಷನ್ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (NWDA)ಗೆ ಪತ್ರ ಬರೆದಿತ್ತು. ನವೆಂಬರ್ 12 ಮತ್ತು 17, 2026ರಂದು ಬರೆದ ಪತ್ರಗಳಿಗೆ ಪ್ರತಿಕ್ರಿಯಿಸಿದ್ದ ಎನ್‌ಡಬ್ಲ್ಯೂಡಿಎ, ಡಿಪಿಆರ್ ಸಿದ್ಧಪಡಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ ಎಂದು ತಿಳಿಸಿತ್ತು. ಆದರೆ, ನವೆಂಬರ್ 17ರಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೇಡ್ತಿ–ವರದಾ ಯೋಜನೆಯ ಡಿಪಿಆರ್ ಸಿದ್ಧಪಡಿಸುವ ಕಾರ್ಯವನ್ನು ತ್ವರಿತಗೊಳಿಸಲು, ಸಮೀಕ್ಷೆ ಮತ್ತು ಭೂಸ್ವಾಧೀನ ಪ್ರಕ್ರಿಯೆಗಳನ್ನು ಚುರುಕುಗೊಳಿಸಲು ಹಾಗೂ ಸೂಕ್ತ ಸ್ಥಳಗಳನ್ನು ಗುರುತಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ವರದಿಯಾಗಿತ್ತು.

Loading...

ಇದನ್ನೂ ಓದಿ: ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆ: ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾದರೇ ಉತ್ತರ ಕನ್ನಡದ ಜನ ಪ್ರತಿನಿಧಿಗಳು?

ಸಸ್ಯ, ಪ್ರಾಣಿ ಪ್ರಭೇದಗಳಿಗೆ ಅಪಾಯದ ಆತಂಕ

ಫೌಂಡೇಷನ್ ಹಾಗೂ ಸ್ಥಳೀಯ ನಿವಾಸಿಗಳ ಪ್ರಕಾರ, ಈ ಯೋಜನೆಯಿಂದ 500ರಿಂದ 600 ಎಕರೆ ಅರಣ್ಯ ಪ್ರದೇಶ ನಾಶವಾಗುವ ಸಾಧ್ಯತೆಯಿದೆ. ಅಲ್ಲದೆ, ಸುಮಾರು 17,421 ಸಸ್ಯ ಪ್ರಭೇದಗಳು ಹಾಗೂ 420ಕ್ಕೂ ಹೆಚ್ಚು ಪ್ರಾಣಿ ಮತ್ತು ಪಕ್ಷಿ ಪ್ರಭೇದಗಳಿಗೆ ಅಪಾಯ ಎದುರಾಗಲಿದೆ. ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಈ ನದಿ ತಿರುವು ಯೋಜನೆಯಿಂದ ಭೂಕುಸಿತದ ಅಪಾಯವೂ ಹೆಚ್ಚಾಗಬಹುದು ಎಂಬ ಆತಂಕವೂ ವ್ಯಕ್ತವಾಗಿದೆ.

ಈ ಯೋಜನೆಯಡಿ 18.5 ಟಿಎಂಸಿ ನೀರನ್ನು ವರದಾ ಮತ್ತು ತುಂಗಭದ್ರಾ ನದಿ ಜಲಾನಯನ ಪ್ರದೇಶಗಳಿಗೆ ತಿರುಗಿಸಿ, ಸುಮಾರು 70,053 ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಆದರೆ ಜುಲೈನಿಂದ ಸೆಪ್ಟೆಂಬರ್‌ವರೆಗೆ ಮಾತ್ರ ಬೇಡ್ತಿ ನದಿಯಲ್ಲಿ ಗಣನೀಯ ಪ್ರಮಾಣದ ಹೆಚ್ಚುವರಿ ನೀರು ಹರಿಯುತ್ತದೆ. ಉಳಿದ ಒಂಬತ್ತು ತಿಂಗಳು ನದಿಯಲ್ಲಿ ನೀರಿನ ಹರಿವು ಕಡಿಮೆ ಇರುತ್ತದೆ ಎಂದು ಸ್ಥಳೀಯರು ಹೇಳಿದ್ದಾರೆ. ಹೀಗಾಗಿ ನದಿ ನೀರನ್ನು ಬೇರೆಡೆಗೆ ತಿರುಗಿಸಿದರೆ ನದಿ ದಂಡೆಯಲ್ಲಿರುವ ಗ್ರಾಮಗಳ ಜನರಿಗೆ ನೀರಿನ ಲಭ್ಯತೆ ಮತ್ತಷ್ಟು ಕಡಿಮೆಯಾಗಬಹುದು ಎಂಬುದು ಸ್ಥಳೀಯರ ಮಾತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದಾರೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us