ಭಟ್ಕಳ ಮೂಲದ ಉಗ್ರನಿಗೆ ರಿಲೀಫ್: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಾಂಬ್ ಸ್ಫೋಟ ಕೇಸ್‌ನ ಆರೋಪಿ ನಾಳೆ ರಿಲೀಸ್
ಮುಂಬೈ ಅಟ್ಯಾಕ್, ಚಿನ್ನಸ್ವಾಮಿ ಕ್ರೀಡಾಂಗಣ ಬ್ಲಾಸ್ಟ್ನಲ್ಲಿ ಆರೋಪಿಯಾಗಿದ್ದ ಭಟ್ಕಳ ಮೂಲದ ಉಗ್ರಗಾಮಿ ಅಬ್ದುಲ್ ವಾಯಿದ್ ಸಿದ್ದಿಬಪ್ಪಗೆ ದೆಹಲಿ ಪಟಿಯಾಲ ನ್ಯಾಯಾಲಯ 1 ಕೇಸ್‌ನಲ್ಲಿ ರಿಲೀಫ್ ನೀಡಿದೆ.
ಕಾರವಾರ: ಮುಂಬೈ ಅಟ್ಯಾಕ್, ಚಿನ್ನಸ್ವಾಮಿ ಕ್ರೀಡಾಂಗಣ ಬ್ಲಾಸ್ಟ್ನಲ್ಲಿ (Chinnaswamy stadium bomb blast) ಆರೋಪಿಯಾಗಿದ್ದ ಭಟ್ಕಳ ಮೂಲದ ಉಗ್ರಗಾಮಿ ಅಬ್ದುಲ್ ವಾಯಿದ್ ಸಿದ್ದಿಬಪ್ಪಗೆ ದೆಹಲಿ ಪಟಿಯಾಲ ನ್ಯಾಯಾಲಯ 1 ಕೇಸ್‌ನಲ್ಲಿ ರಿಲೀಫ್ ನೀಡಿದೆ. ಭಯೋತ್ಪಾದಕ ಚಟುವಟಿಕೆಗೆ ಹವಾಲಾ ಹಣ ವರ್ಗಾವಣೆ ಆರೋಪ ಸಾಬೀತಾಗದ ಹಿನ್ನಲೆಯಲ್ಲಿ ಪ್ರಕರಣವನ್ನು ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ. 20 ಮೇ 2016 ರಲ್ಲಿ ದೆಹಲಿಯಲ್ಲಿ ಅಬ್ದುಲ್ ವಾಯಿದ್ ಸಿದ್ದಿಬಪ್ಪ ಬಂಧಿತನಾಗಿದ್ದ. ಇಂಡಿಯನ್ ಮುಜಾಹಿದ್ದಿನ್ (ಸಿಮಿ) ಸಂಘಟನೆಗೆ ಅಕ್ರಮ ಹಣಕಾಸು ವ್ಯವಹಾರ, ಹವಾಲಾ ದಂದೆ, ಜೊತೆಗೆ ಮುಂಬೈ ಅಟ್ಯಾಕ್, ಚನ್ನಸ್ವಾಮಿ ಕ್ರೀಡಾಂಗಣ ಬ್ಲಾಸ್ಟ್ನಲ್ಲಿ ಸಹ ಈತನ ಕೈವಾಡ ಇರುವ ಕುರಿತು NIA ಪ್ರಕರಣ ದಾಖಲಿಸಿತ್ತು. ಆದರೆ NIA ದಾಖಲಿಸಿದ್ದ ದೂರಿನಲ್ಲಿ ಸಾಕ್ಷಿ ಕೊರತೆ ಹಿನ್ನಲೆಯಲ್ಲಿ ಪ್ರಕರಣ ರದ್ದು ಮಾಡಲಾಗಿದ್ದು, ಅಬ್ದುಲ್ ವಾಯಿದ್ ಸಿದ್ದಿಬಪ್ಪ ಸೋಮವಾರ (ಏಪ್ರಿಲ್ 03) ಬಿಡುಗಡೆಯಾಗಲಿದ್ದಾನೆ. ಬಳಿಕ ಮುಂಬೈ ಮತ್ತು ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣ ಪ್ರಕರಣದಲ್ಲಿ ಮತ್ತೊಮ್ಮೆ ಆತನನ್ನು NIA ಬಂಧಿಸಲಿದೆ ಎನ್ನಲಾಗುತ್ತಿದೆ.
ಪ್ರಕರಣ ಹಿನ್ನೆಲೆ
2010ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಾವಳಿಗೂ ಮೊದಲು ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಫಾಶಿ ಮೊಹಮ್ಮದ್ ಎಂಬ ಆರೋಪಿಗೆ 7 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು. ಬಿಹಾರ ಮೂಲದ ಫಾಶಿಗೆ ಇಂಜಿನಿಯರಿಂಗ್ ಓದುತ್ತಿದ್ದಾಗ ಯಾಸೀನ್ ಭಟ್ಕಳ್ ಪರಿಚಯವಾಗಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಬಾಂಬ್ ಸ್ಫೋಟದಲ್ಲಿ ಯಾಸೀನ್ ಭಟ್ಕಳ್ಗೆ ಫಾಶಿ ಮೊಹಮ್ಮದ್ ಸಹಕರಿಸಿದ್ದ.
ಇದನ್ನೂ ಓದಿ: ಸಂಚಲನ ಮೂಡಿಸಿದ ಬಿಸಿ ಪಾಟೀಲ್ ಭೇಟಿ, ಹಾವೇರಿಯಲ್ಲಿ ಕಾಂಗ್ರೆಸ್‍ಗೆ ರಿವರ್ಸ್ ಆಪರೇಷನ್ ಭೀತಿ
ಇತರೆ ಆರೋಪಿಗಳಾದ ಅಹಮದ್ ಜಮಾಲ್, ಅಫ್ತಾಬ್ ಆಲಂ ಅಲಿಯಾಸ್ ಫಾರೂಕ್ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯದ ಎದುರು ತಪ್ಪೊಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ವಿಶೇಷ ನ್ಯಾಯಾಲಯ 8 ವರ್ಷ ಜೈಲು ಶಿಕ್ಷೆ ಮತ್ತು 4 ಲಕ್ಷ ರೂ. ದಂಡ ವಿಧಿಸಿತ್ತು. ಆ ಶಿಕ್ಷೆಯನ್ನು ಮರು ಪರಿಶೀಲನೆ ಮಾಡಿದ ವಿಶೇಷ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಆರೋಪಿಗಳು ಹೇಳಿದ್ದೇನು?
ನಾವು ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಸದಸ್ಯರು. ದೆಹಲಿಯ ಜಾಮೀಯಾನಗರದ ಮನೆಯೊಂದರಲ್ಲಿ ಒಳ ಸಂಚು ರೂಪಿಸಿದ್ದೆವು. ನಮಗೆ ‘ಲಷ್ಕರ್ ಇ-ತೋಯ್ಬಾ’ ಸಂಘಟನೆಯ ಆರ್ಥಿಕ ಸಹಾಯ ದೊರಕಿತ್ತು. ಬಾಂಬ್ ಸ್ಫೋಟಿಸುವ ಸ್ಥಳವನ್ನು ಪ್ರಮುಖ ಆರೋಪಿ ಮಹಮದ್ ಯಾಸಿನ್ ಅಲಿಯಾಸ್ ಶಾರೂಕ್ ನಿರ್ದಶನದಂತೆ ಗುರುತಿಸಲಾಗಿತ್ತು. ಬಳಿಕ ಕೃತ್ಯಕ್ಕೆ ನೆರವಾಗಲು ಬೆಂಗಳೂರಿನ ಸದಾಶಿವನಗರ ಮತ್ತು ತುಮಕೂರಿನಲ್ಲಿ ಸಂಚು ರೂಪಿಸಲಾಗಿತ್ತು. ಆರೋಪಿ ಜೊತೆ ನಾವಿಬ್ಬರು ಸೇರಿ ಸ್ಫೋಟಕಗಳನ್ನು ತಯಾರಿಸಿದ್ದೆವು.
ಇದನ್ನೂ ಓದಿ: ರೇಣುಕಾಚಾರ್ಯ ಸಭೆ ಮೇಲೆ ಚುನಾವಣಾಧಿಕಾರಿಗಳ ದಾಳಿ, ಜನರಿಗೆ ತಂದಿದ್ದ ಊಟ ವಾಪಸ್
ಎಲೆಕ್ಟ್ರಿಕಲ್ ಡಿಟೋನೇಟರ್ಸ್, ಬ್ಯಾಟರಿಗಳನ್ನು ಸೇರಿಸಿ ಸ್ಫೋಟಕ ಸಿದ್ಧಪಡಿಸಿದ್ದೆವು. ಅದಕ್ಕಾಗಿ ಕೆಎಸ್‌ಸಿಎ ಸುತ್ತಮುತ್ತ ಸುತ್ತಾಡಿ ಜಾಗ ಸೆಟ್ ಮಾಡಿದ್ದೆವು. ಸ್ಫೋಟಕಗಳನ್ನು ತುಮಕೂರಿನಿಂದ ಬೆಂಗಳೂರಿಗೆ ತಂದೆವು. ಯಾಸಿನ್ ಮತ್ತು ನಾಲ್ವರು ಸೇರಿಕೊಂಡು ಅಲ್ಲಿಂದ ಐದು ಸ್ಫೋಟಕಗಳನ್ನು ಶಿಫ್ಟ್ ಮಾಡಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಅಳವಡಿಸಿದ್ದೆವು. ಟೈಮರ್‌ಗಳ ಮೂಲಕ ಸ್ಫೋಟದ ಸಮಯ ನಿಗದಿ ಮಾಡಿದೆವು.
ಅನಿಲ್ ಕುಂಬ್ಳೆ ಸರ್ಕಲ್ ಗೇಟ್ ನಂಬರ್ 12, ಕ್ವೀನ್ಸ್ ರೋಡ್ ಗೇಟ್ ನಂ. 8 ಪುಟ್‌ಪಾತ್ ಗೇಟ್ ನಂ 1, ಬಿಎಂಟಿಸಿ ಬಸ್ ಸ್ಟಾಪ್ ಗೇಟ್ ನಂ. 1ರ ಬಳಿ ಸ್ಫೋಟಕ ಇಟ್ಟಿದ್ದೆವು. ಅದರಲ್ಲಿ ಗೇಟ್ ನಂ. 12ರಲ್ಲಿದ್ದ ಬಾಂಬ್ ಸ್ಫೋಟಗೊಂಡು 15 ಮಂದಿ ಗಾಯಗೊಂಡಿದ್ದರು. ಉಳಿದವುಗಳನ್ನು ಪೊಲೀಸರು ಪತ್ತೆ ಮಾಡಿ ನಿಷ್ಕ್ರಿಯಗೊಳಿಸಿದರು ಎಂದು ಈ ಇಬ್ಬರು ಆರೋಪಿಗಳು ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:44 pm, Sun, 2 April 23