ಉತ್ತರ ಕನ್ನಡ ಜಿಲ್ಲೆಯ ದಶಕಗಳ ರೈಲು ಕನಸಿಗೆ ರೆಕ್ಕೆ: ಹುಬ್ಬಳ್ಳಿ-ಅಂಕೋಲಾ ಹಳಿ ಜೋಡಣೆಗೆ ಸಿಕ್ತು ಗ್ರೀನ್ ಸಿಗ್ನಲ್

Uttar Kannada: ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗವು ಉತ್ತರ ಕನ್ನಡದ ಬಹುದಿನದ ಕನಸಾಗಿದ್ದು, ಕರ್ನಾಟಕ ಆರ್ಥಿಕತೆಗೆ ದೊಡ್ಡ ಬಲ ತುಂಬಲಿದೆ. ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮತೆಯಿಂದಾಗಿ ಎದುರಾಗಿದ್ದ ತಾಂತ್ರಿಕ-ಕಾನೂನು ತೊಡಕುಗಳು ಇದೀಗ ನಿವಾರಣೆಯಾಗಿವೆ. ಪರಿಸರವಾದಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಶೀಘ್ರದಲ್ಲೇ ಯೋಜನೆ ಅನುಷ್ಠಾನಕ್ಕೆ ತರಲು ಸಂಸದರಾದ ಪ್ರಲ್ಹಾದ್ ಜೋಶಿ ಮತ್ತು ವಿಶ್ವೇಶ್ವರ ಹೆಗಡೆ ಕಾಗೇರಿ ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ದಶಕಗಳ ರೈಲು ಕನಸಿಗೆ ರೆಕ್ಕೆ: ಹುಬ್ಬಳ್ಳಿ-ಅಂಕೋಲಾ ಹಳಿ ಜೋಡಣೆಗೆ ಸಿಕ್ತು ಗ್ರೀನ್ ಸಿಗ್ನಲ್
ಸಾಂದರ್ಭಿಕ ಚಿತ್ರ
Edited By:

Updated on: Jun 23, 2026 | 9:07 PM

ಕಾರವಾರ, ಜೂ.23: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಮತ್ತು ಮಲೆನಾಡು ಭಾಗದ ಜನರ ಬಹುದಿನಗಳ ಕನಸಿನ ಯೋಜನೆಯಾದ ‘ಹುಬ್ಬಳ್ಳಿ – ಅಂಕೋಲಾ ರೈಲು ಮಾರ್ಗ’ ಆದಷ್ಟು ಬೇಗ ಅನುಷ್ಠಾನಕ್ಕೆ ಬರಲಿದೆ ಎಂದು ಕಾರವಾರ-ಅಂಕೋಲಾ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ. ಈ ರೈಲು ಯೋಜನೆಯು ಕೇವಲ ಕರಾವಳಿ ಭಾಗದ ಜನರಿಗಷ್ಟೇ ಸೀಮಿತವಾಗಿರದೆ, ಇಡೀ ಕರ್ನಾಟಕ ರಾಜ್ಯದ ಆರ್ಥಿಕತೆಗೆ (Karnataka Economy) ದೊಡ್ಡ ಮಟ್ಟದ ಬಲ ತುಂಬಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಲಾಗಿದೆ.

ಉತ್ತರ ಕನ್ನಡ ಜಿಲ್ಲೆಯು ಒಂದು ಕಡೆ ಪಶ್ಚಿಮ ಘಟ್ಟಗಳ ಸಾಲು, ಇನ್ನೊಂದು ಕಡೆ ಅರಬ್ಬಿ ಸಮುದ್ರದ ಸಮೃದ್ಧವಾದ ಪ್ರಕೃತಿ ಸೌಂದರ್ಯವನ್ನು ಹೊಂದಿದೆ. ಆದರೆ, ಇದೇ ಘಟ್ಟಗಳ ಸಾಲು ಜಿಲ್ಲೆಯ ಸಾರಿಗೆ ಸಂಪರ್ಕದ ಪ್ರಗತಿಗೆ ದೊಡ್ಡ ಸವಾಲಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆದಿದ್ದರೂ, ಇಂದಿಗೂ ಕರಾವಳಿ ಮತ್ತು ಮಲೆನಾಡು-ಬಯಲು ಸೀಮೆಯನ್ನು ನೇರವಾಗಿ ಸಂಪರ್ಕಿಸುವ ಸುಸಜ್ಜಿತ ರೈಲು ಸಂಪರ್ಕ ಜಿಲ್ಲೆಯಲ್ಲಿಲ್ಲ. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿ ಹಾಗೂ ವಾಣಿಜ್ಯ ಪ್ರಗತಿಗಾಗಿ ಈ ರೈಲು ಯೋಜನೆ ಅತ್ಯಂತ ಅವಶ್ಯಕವಾಗಿದೆ.

ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆಗೆ ಸುಮಾರು 1700 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ, ಪಶ್ಚಿಮ ಘಟ್ಟಗಳ ದಟ್ಟ ಅರಣ್ಯ ಪ್ರದೇಶದಲ್ಲಿ ಸುರಂಗ ಮಾರ್ಗಗಳನ್ನು ನಿರ್ಮಿಸಬೇಕಾದ ಅನಿವಾರ್ಯತೆ ಇರುವುದರಿಂದ, ಪರಿಸರ ಹಾನಿಯ ಆತಂಕ ವ್ಯಕ್ತಪಡಿಸಿ ಹಲವು ಪರಿಸರವಾದಿಗಳು ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದಾಗಿ ಯೋಜನೆಗೆ ತಾಂತ್ರಿಕ ಹಾಗೂ ಕಾನೂನು ತೊಡಕುಗಳು ಎದುರಾಗಿದ್ದವು.

ಇದನ್ನೂ ಓದಿ: ಕಾರವಾರ-ಬಳ್ಳಾರಿಯಲ್ಲಿ ಏಕಕಾಲಕ್ಕೆ ಲೋಕಾಯುಕ್ತ ದಾಳಿ: ಲಂಚ ಪಡೆಯುತ್ತಿದ್ದ ಇಬ್ಬರು ಅಧಿಕಾರಿಗಳು ರೆಡ್ ಹ್ಯಾಂಡ್ ಲಾಕ್

ಪ್ರಸ್ತುತ ಈ ಸಮಸ್ಯೆಯ ನಿವಾರಣೆಗಾಗಿ ಡೆಹರಾಡೂನ್‌ನ ಭಾರತೀಯ ವನ್ಯಜೀವಿ ಸಂಸ್ಥೆ ವತಿಯಿಂದ ವಿಶೇಷ ಅಧ್ಯಯನ ನಡೆಸಲು ಸೂಚಿಸಲಾಗಿದೆ. ಯೋಜನೆಗೆ ಎದುರಾಗಿದ್ದ ಪ್ರಮುಖ ಕಾನೂನು ತೊಡಕುಗಳಿಂದ ಈಗ ಮುಕ್ತಿ ಸಿಕ್ಕಿದ್ದು, ಪರಿಸರವಾದಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆ ಜಾರಿಗೆ ತರಲು ಅಂತಿಮ ಹಂತದ ಸಿದ್ಧತೆಗಳು ನಡೆದಿವೆ ಎಂದು ಸಂಸದ ಕಾಗೇರಿ ಸ್ಪಷ್ಟಪಡಿಸಿದ್ದಾರೆ. ಉತ್ತರ ಕನ್ನಡದ ದಶಕಗಳ ಈ ಕನಸನ್ನು ನನಸು ಮಾಡಲು ಕೇಂದ್ರ ಸಚಿವ ಹಾಗೂ ಹುಬ್ಬಳ್ಳಿ-ಧಾರವಾಡ ಸಂಸದ ಪ್ರಲ್ಹಾದ್ ಜೋಷಿ ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಜಂಟಿಯಾಗಿ ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ಮಟ್ಟದಲ್ಲಿ ಅಗತ್ಯ ಅನುಮತಿಗಳನ್ನು ತ್ವರಿತವಾಗಿ ಪಡೆದು, ಆದಷ್ಟು ಬೇಗ ಕಾಮಗಾರಿ ಆರಂಭಿಸುವ ಭರವಸೆಯನ್ನು ನಾಯಕರು ನೀಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Follow Us