ಶಿರಸಿ, ಫೆಬ್ರವರಿ 17: ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಹೋಗಲು ಸಾಧ್ಯವಾಗದು ಎಂದು ಅರಿತ ಮಹಿಳೆಯೊಬ್ಬರು ಮನೆ ಹಿತ್ತಲಲ್ಲೇ ಒಬ್ಬಂಟಿಯಾಗಿ 40 ಅಡಿ ಬಾವಿ ತೋಡಿ ‘ಗಂಗಾ’ ಜಲ ಸೃಷ್ಟಿಸಿಕೊಂಡ ಅಪರೂಪದ ವಿದ್ಯಮಾನಕ್ಕೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಾಕ್ಷಿಯಾಗಿದೆ. 57 ವರ್ಷದ ಗೌರಿ ನಾಯ್ಕ್ ಎಂಬವರೇ ಈ ಸಾಧನೆ ಮಾಡಿದವರು.
ಮಹಾಕುಂಭಕ್ಕೆ ಹೋಗಲು ಅದೃಷ್ಟವಂತರಾಗಿರಬೇಕು. ಸಣ್ಣ ಕೃಷಿ ಭೂಮಿ ಇರುವ, ಆದಾಯ ಕಡಿಮೆ ಇರುವ ನನಗೆ ಅದು ಸಾಧ್ಯವಾಗದು. ಅದಕ್ಕಾಗಿ ನಾನು ಇಲ್ಲಿಯೇ ಬಾವಿ ಅಗೆದು ಗಂಗೆಯನ್ನು ತರಲು ನಿರ್ಧರಿಸಿದೆ ಎಂದು ಗೌರಿ ಹೇಳಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ. ಗೌರಿ ಸುಮಾರು 40 ಅಡಿ ವರೆಗೆ ಬಾವಿ ತೋಡಿದ್ದರು. ಬಾವಿಯಲ್ಲಿ ಸಾಕಷ್ಟು ನೀರು ದೊರೆತಿರುವುದಕ್ಕೆ ಸಂತಸಗೊಂಡಿದ್ದಾರೆ ಎಂದೂ ವರದಿ ಉಲ್ಲೇಖಿಸಿದೆ.
ಈ ತಿಂಗಳ ಕೊನೆಯಲ್ಲಿ ಮಹಾ ಶಿವರಾತ್ರಿಯಂದು ನಾನು ಬಾವಿಯ ನೀರಿನಿಂದ ಪುಣ್ಯ ಸ್ನಾನ ಮಾಡಲು ಯೋಜಿಸುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಮಹಾಕುಂಭಮೇಳದ ಬಗ್ಗೆ ಡಿಸೆಂಬರ್‌ನಲ್ಲಿ ಗೌರಿ ಅವರಿಗೆ ಮಾಹಿತಿ ಗೊತ್ತಾಗಿತ್ತು. ಆದರೆ ಪ್ರಯಾಗ್‌ರಾಜ್‌ಗೆ ಪ್ರಯಾಣಿಸಲು ಸಾಕಷ್ಟು ಹಣವಿಲ್ಲ ಎಂಬ ಅರಿವೂ ಅವರಿಗಿತ್ತು. ಆಗಲೇ ಅವರು ಬಾವಿ ತೋಡಲು ನಿರ್ಧರಿಸಿದರು ಮತ್ತು ಡಿಸೆಂಬರ್ 15 ರಿಂದಲೇ ಕೆಲಸ ಪ್ರಾರಂಭಿಸಿದ್ದರು ಎಂದು ವರದಿ ತಿಳಿಸಿದೆ.
ಆಕೆಯ ಸಂಬಂಧಿಕರು ಮತ್ತು ನೆರೆಹೊರೆಯವರು ಹೇಳಿದ ಪ್ರಕಾರ, ಗೌರಿ ದಿನಕ್ಕೆ ಸುಮಾರು 6-8 ಗಂಟೆಗಳ ಕಾಲ ಮಣ್ಣನ್ನು ಅಗೆಯುವ ಕೆಲಸ ಮಾಡುತ್ತಿದ್ದರು. ಅವರು ತಮ್ಮ ಪ್ರಯತ್ನವನ್ನು ಪ್ರಾರಂಭಿಸಿದ ಎರಡು ತಿಂಗಳ ನಂತರ ಫೆಬ್ರವರಿ 15 ರಂದು ಬಾವಿಯನ್ನು ಪೂರ್ಣಗೊಳಿಸಿದ್ದರು. ಬಾವಿಯಲ್ಲಿ ನೀರಿನ ಒರತೆಯೂ ಚಿಮ್ಮಿತ್ತು.
ಯಾರ ಸಹಾಯವಿಲ್ಲದೆ ಬಾವಿ ತೋಡುವುದು ಗೌರಿಗೆ ಹೊಸದೇನಲ್ಲ. ಅವರು ಈ ಹಿಂದೆಯೂ ನಾಲ್ಕು ಬಾವಿಗಳನ್ನು ತೋಡಿದ್ದಾರೆ. ಒಂದು ಕೃಷಿಗಾಗಿ ತನ್ನ ಹೊಲದಲ್ಲಿ, ಇನ್ನೊಂದು ತನ್ನ ಹಳ್ಳಿಯ ಜನರ ಬಾಯಾರಿಕೆ ನೀಗಿಸಲು ಮತ್ತು ಮೂರನೆಯದು 2024 ರ ಮಧ್ಯ ಭಾಗದಲ್ಲಿ ಶಿರಸಿಯ ಗಣೇಶ ನಗರ ಅಂಗನವಾಡಿ ಶಾಲೆಗಾಗಿ ಎಂದು ವರದಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಜೀವ ಬಿಟ್ಟೆನೂ, ಆದ್ರೆ ಬಾವಿ ತೆಗೆಯುವುದನ್ನ ನಿಲ್ಲಿಸುವುದಿಲ್ಲ ಎಂದ ಶಿರಸಿಯ ಗೌರಿ ನಾಯ್ಕ್
ಅಂಗನವಾಡಿಯ ಬಾವಿಯ ಕೆಲಸದ ಬಗ್ಗೆ ಮಾಧ್ಯಮಗಳು ವರದಿ ಮಾಡಿದ ಬೆನ್ನಲ್ಲೇ ಜಿಲ್ಲಾಡಳಿತವು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಬಾವಿ ತೋಡುವುದನ್ನು ನಿಲ್ಲಿಸುವಂತೆ ಸೂಚನೆ ನೀಡಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮೊದಲಿಗೆ ಗೌರಿ ಅವರನ್ನು ಸನ್ಮಾನಿಸಿದರಾದರೂ, ನಂತರ ಬಾವಿ ತೋಡುವುದನ್ನು ನಿಲ್ಲಿಸುವಂತೆ ಕೇಳಿಕೊಂಡಿದ್ದರು. ಆದರೆ ಆಗಿನ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗ್ಡೆ ಅವರ ಬೆಂಬಲದ ನಂತರ ಗೌರಿ ಬಾವಿಯ ನಿರ್ಮಾಣವನ್ನು ಪೂರ್ಣಗೊಳಿಸಿದ್ದರು. ಗೌರಿ ಅವರು ಅಂದು ತೋಡಿದ್ದ 45 ಅಡಿ ಆಳದ ಬಾವಿ ಇಂದಿಗೂ ಬಳಕೆಯಲ್ಲಿದೆ.
Published On - 10:42 am, Mon, 17 February 25