
ಉತ್ತರ ಕನ್ನಡ/ಕೊಡಗು, ಮೇ 26: ರಾಜ್ಯ ಪ್ರವೇಶಿಸಿರುವ ಮುಂಗಾರು (Monsoon) ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಎಡಬಿಡದೆ ಸುರಿಯುತ್ತಿದೆ. ನಿರಂತರ ಮಳೆಯಿಂದ (Rain) ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ನದಿಗಳ ನೀರು ಉಕ್ಕಿ ಹರಿಯುತ್ತಿದ್ದು, ಕೆಲವು ಪ್ರದೇಶಗಳು ಮುಳಗಡೆಯಾಗಿವೆ. ಅರಬ್ಬೀ ಸಮುದ್ರದಲ್ಲಿ (Arabian Sea) ವಾಯುಭಾರ ಕುಸಿತದಿಂದಾಗಿ ಭಾರಿ ವೇಗದಲ್ಲಿ ಗಾಳಿ ಬೀಸುವ ಹಾಗೂ ಮಳೆಯಾಗುವ ಸಂಭವ ಇದೆ. ಹೀಗಾಗಿ, ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತ ಕಡಲತೀರಕ್ಕೆ ಪ್ರವಾಸಿಗರು ಬರುವುದನ್ನು ನಿರ್ಬಂಧಿಸಿದೆ. ಮುರ್ಡೇಶ್ವರ ಮತ್ತು ಕಾರವಾರ ಕಡಲತೀರದಲ್ಲಿ ಕೆಂಪು ಬಾವುಟ ನೆಟ್ಟಿದ್ದು, ಪ್ರವಾಸಿಗರು ಆಗಮಿಸಿದಂತೆ ಸೂಚನೆ ನೀಡಲಾಗಿದೆ.
ಭಾರಿ ಬಿರುಗಾಳಿಯ ಸಂದರ್ಭದಲ್ಲಿ ಸಮುದ್ರದ ಅಲೆಗಳು 2-7 ಮೀಟರ್ನಿಂದ 3.3 ಮೀಟರ್ ಎತ್ತರದ ತನಕ ಏಳುವ ಸಾಧ್ಯತೆ ಇದ್ದು, ಮೀನುಗಾರರಿಗೆ ಮತ್ತು ಸಮುದ್ರದಲ್ಲಿ ಇಳಿಯುವರಿಗೆ ತೀರಾ ಅಪಾಯಕಾರಿಯಾಗಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಪ್ರವಾಸಿಗರಿಗೆ ಮತ್ತು ಮೀನುಗಾರಿಕೆಗೆ ನಿಷೇಧ ಹೇರಿದ್ದಾರೆ.
ಕೊಡಗು ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತಿವೆ. ಹೀಗಾಗಿ ನದಿ, ತೊರೆ, ಜಲಪಾತಗಳಿಗೆ ಇಳಿಯುವುದು, ಸ್ನಾನ ಮಾಡುವುದನ್ನು ನಿಷೇಧಿಸಿ ಕೊಡಗು ಜಿಲ್ಲಾಧಿಕಾರಿ ಕೆ. ವೆಂಕಟರಾಜ ಅವರು ಆದೇಶ ಹೊರಡಿಸಿದ್ದಾರೆ. ನದಿಗಳು ತುಂಬಿ ಹರಿಯುತ್ತಿರುವುದರಿಂದ ಜಲಪಾತಗಳು ಕೂಡ ಮೈದುಂಬಿ ಧುಮ್ಮುಕ್ಕುತ್ತಿವೆ.
ಈ ಸಂದರ್ಭದಲ್ಲಿ ಜಲಪಾತದ ತಳ ಭಾಗಕ್ಕೆ ಇಳಿಯುವ ಸಾಹಸ ಮಾಡಿ ಬಹಳಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಜಿಲ್ಲಾಡಳಿತ ಜಲಪಾತಗಳ ತಳ ಭಾಗಕ್ಕೆ ಇಳಿಯದಂತೆ ಆದೇಶ ಹೊರಡಿಸಿದೆ. ಆದೇಶ ಉಲ್ಲಂಘಿಸಿದರೇ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಕರಾವಳಿ ಹಾಗೂ ಪಶ್ಚಿಮ ಘಟ್ಟದಲ್ಲಿ ಮಳೆ ಅಬ್ಬರ ಮುಂದುವರೆದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಫಾಲ್ಗುಣಿ ನದಿಯಲ್ಲಿ ನೀರಿನ ಒಳ ಹರಿವು ಹೆಚ್ಚಿದೆ. ಮಂಗಳೂರಿನ ಮರವೂರು ಕಿಂಡಿ ಅಣೆಕಟ್ಟಿನ ಎಲ್ಲಾ ಗೇಟ್ಗಳನ್ನು ತೆರೆಯಲಾಗಿದೆ. ಮಳೆ ಹೀಗೆ ಮುಂದುವರೆದರೇ ಮರವೂರು ಡ್ಯಾಂ ಸುತ್ತಲಿನ ಪ್ರದೇಶಗಳು ಮುಳುಗಡೆಯಾಗುವ ಸಾಧ್ಯತೆ ಇದೆ.
ಇದನ್ನೂ ನೋಡಿ: ಮುಂಗಾರು ಮಳೆ ಆರಂಭಕ್ಕೂ ಮುನ್ನವೇ ತುಂಬಿ ತುಳುಕಿದ ತುಂಗಾ ಜಲಾಶಯ, ನೀರಿನ ಭೋರ್ಗರೆತ ನೋಡಿ
ಮುಂದಿನ ಮೂರು ದಿನಕ್ಕೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಮೈಸೂರು, ಹಾಸನ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:08 pm, Mon, 26 May 25