ಅಮಾವಾಸ್ಯೆ ದಿನ ಒಳ್ಳೆ ನಿರ್ಧಾರ, 10-12 ಸೀಟ್ ಖಾಲಿ ಆಗುತ್ತೆ: ಉಚ್ಛಾಟನೆ ಬೆನ್ನಲ್ಲೇ ಸೋಮಶೇಖರ್ ಹೊಸ ಬಾಂಬ್
ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಶಿವರಾಮ್ ಹೆಬ್ಬಾರ್ ಹಾಗೂ ಎಸ್ ಟಿ ಸೋಮಶೇಖರ್ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿದೆ. ಬರೋಬ್ಬರಿ ಎರಡು ವರ್ಷದ ಬಳಿಕ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಈ ಕ್ರಮಕೈಗೊಂಡಿದೆ. ಇನ್ನು ಈ ಬಗ್ಗೆ ಸ್ವತಃ ಶಿವರಾಮ್ ಹೆಬ್ಬಾರ್ ಹಾಗೂ ಎಸ್ ಟಿ ಸೋಮಶೇಖರ್ ಪ್ರತಿಕ್ರಿಯಿಸಿದ್ದು, ಏನೆಲ್ಲಾ ಹೇಳಿದ್ದಾರೆ ಎನ್ನುವುದು ಈ ಕೆಳನಂತಿದೆ.

ಕಾರವಾರ/ಬೆಂಗಳೂರು, (ಮೇ 27): ಬಿಜೆಪಿಯಿಂದ ಗೆದ್ದು ವಿಧಾನಸಭೆ ಪ್ರವೇಶಿಸಿರುವ ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್ (ST Somashekar) ಹಾಗೂ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ (Shivaram Hebbar) ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಈ ಸಂಬಂಧ ಉಚ್ಛಾಟಿತ ಶಾಸಕ ಎಸ್ ಟಿ ಸೋಮಶೇಖರ್ ಟಿವಿ9ಗೆ ಮೊದಲ ಪ್ರತಿಕ್ರಿಯೆ ನೀಡಿದ್ದು, ಅಮವಾಸ್ಯೆ ದಿನ ಒಳ್ಳೆ ನಿರ್ಧಾರ ಕೈಗೊಂಡಿದ್ದಾರೆ. ಬೆಳಗ್ಗೆ 10.30ರಲ್ಲಿ ಮೊಬೈಲ್ ನೋಡಿದಾಗ ಈ ವಿಚಾರ ತಿಳಿಯಿತು. ಚುನಾವಣೆ ವೇಳೆಗೆ ಬಿಜೆಪಿಯಲ್ಲಿ ಇನ್ನೂ 10-12 ಸೀಟ್ ಖಾಲಿ ಆಗುತ್ತೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಹೊಸ ಬಾಂಬ್ ಸಿಡಿಸಿದ ಸೋಮಶೇಖರ್
ಪಕ್ಷದಿಂದ ನಮ್ಮನ್ನು ಉಚ್ಚಾಟನೆ ಮಾಡುತ್ತಾರೆ ಎಂದು ಗೊತ್ತಿತ್ತು. ಆದ್ರೆ ಯಾವಾಗ ಉಚ್ಚಾಟನೆ ಮಾಡುತ್ತಾರೆ ಎಂದು ಗೊತ್ತಿರಲಿಲ್ಲ. 6 ವರ್ಷಗಳ ಕಾಲ ನನ್ನನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿದ್ದಾರೆ. ನೋಟಿಸ್ ಕೊಡುವ ಮುನ್ನ ಅಮಿತ್ ಶಾ ನನ್ನ ಜತೆ ಮಾತಾಡಿದ್ದರು. ಕ್ಷೇತ್ರದಲ್ಲಿರುವ ಭಿನ್ನಮತದ ಬಗ್ಗೆ ಅಮಿತ್ ಶಾ ಜತೆ ಮಾತನಾಡಿದ್ದೆ. ಸಮಸ್ಯೆ ಬಗೆಹರಿಸದಿದ್ದರೆ ಪಕ್ಷ ತೊರೆಯುವುದಾಗಿ ನಾನು ಹೇಳಿದ್ದೆ. ಬಿಜೆಪಿಯ ಯಾರೂ ನನ್ನನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸಲಿಲ್ಲ. ಅಮಾವಾಸ್ಯೆಯ ದಿನ ಒಳ್ಳೆಯದು ಮಾಡಿದ್ದಾರೆ. ಸಂತೋಷವಾಗಿದ್ದೇನೆ. ಚುನಾವಣೆ ವೇಳೆಗೆ ಬಿಜೆಪಿಯಲ್ಲಿ ಇನ್ನೂ 10-12 ಸೀಟ್ ಖಾಲಿ ಆಗುತ್ತೆ ಎಂದು ಹೊಸ ಬಾಂಬ್ ಸಿಡಿಸಿದರು.
ಇದನ್ನೂ ಓದಿ: ಬಿಜೆಪಿಯಿಂದ ಶಾಸಕ್ ಶಿವರಾಮ್ ಹೆಬ್ಬಾರ್ ಹಾಗೂ ಎಸ್ಟಿ ಸೋಮಶೇಖರ್ ಉಚ್ಚಾಟನೆ
ಚುನಾವಣೆ ಘೋಷಣೆಯಾದಾಗ ಮುಂದಿನ ನಿರ್ಧಾರ
ಬೆಳಗ್ಗೆ 10.30ರಲ್ಲಿ ಮೊಬೈಲ್ ನೋಡಿದಾಗ ಈ ವಿಚಾರ ತಿಳಿಯಿತು. ಉಚ್ಚಾಟನೆಗೂ ಮುನ್ನ ಶಿಸ್ತು ಸಮಿತಿಯಿಂದ ನೋಟಿಸ್ ನೀಡಿದ್ದರು. ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ ಎಂದು ನೋಟಿಸ್ ಗೆ ಉತ್ತರಿಸಿದ್ದೆ. ಬಿಜೆಪಿ ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ. ಸದ್ಯಕ್ಕೆ ನಮ್ಮ ಕೆಲಸವನ್ನು ನಾವು ಮಾಡಿಕೊಂಡು ಹೋಗುತ್ತೇವೆ. ಚುನಾವಣೆ ಘೋಷಣೆಯಾದಾಗ ಮುಂದಿನ ನಿರ್ಧಾರ ತಿಳಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಯತ್ನಾಳ್ ರನ್ನ ಅಂದೇ ಉಚ್ಚಾಟಿಸಿದ್ದರೆ ಬಿಜೆಪಿ ಸರ್ಕಾರ ಹೋಗುತ್ತಿರಲಿಲ್ಲ
ಉಚ್ಚಾಟನೆ ಮಾಡಿದವರಿಗೆ ಚಾಮುಂಡೇಶ್ವರಿ ಆರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿ. ನಮ್ಮ ಉಚ್ಚಾಟನೆಗೂ, ಯತ್ನಾಳ್ ಉಚ್ಚಾಟನೆಗೂ ತುಂಬಾ ವ್ಯತ್ಯಾಸವಿದೆ. ಯತ್ನಾಳ್ ರನ್ನ ಅಂದೇ ಉಚ್ಚಾಟಿಸಿದ್ದರೆ ಬಿಜೆಪಿ ಸರ್ಕಾರ ಹೋಗುತ್ತಿರಲಿಲ್ಲ. ಬಿಜೆಪಿಯ ಒಬ್ಬ ಶಾಸಕ ವಿಧಾನಸೌಧದಲ್ಲಿ ರೇಪ್ ಮಾಡುತ್ತಾನೆ. ವಿಪಕ್ಷ ನಾಯಕರಿಗೆ ಏಡ್ಸ್ ಇಂಜೆಕ್ಷನ್ ಚುಚ್ಚಲು ಪ್ರಯತ್ನ ಮಾಡುತ್ತಾರೆ. ಒಕ್ಕಲಿಗ ಹೆಣ್ಮಗಳನ್ನು ಮಂಚಕ್ಕೆ ಕರೆಯುವುದನ್ನು ಎಲ್ಲಾದ್ರೂ ಕೇಳಿದ್ದೀರಾ? ಬಿಜೆಪಿ ಪ್ರಾಮಾಣಿಕ ಆಗಿದ್ದರೆ ಇಂತಹವರನ್ನು ಸಸ್ಪೆಂಡ್ ಮಾಡಬೇಕಿತ್ತು ಎಂದು ಪರೋಕ್ಷವಾಗಿ ಶಾಸಕ ಮುನಿರತ್ನ ವಿರುದ್ಧ ವಾಗ್ದಾಳಿ ನಡೆಸಿದರು.
ಉಚ್ಚಾಟನೆಯಲ್ಲಿ ಬಿಎಸ್ವೈ, ವಿಜಯೇಂದ್ರರದ್ದು ಯಾವ ಪಾತ್ರ. ಉಳಿದ ನಾಯಕರೂ ಉಳಿಸಿಕೊಳ್ಳಲು ಪ್ರಯತ್ನ ಮಾಡಲಿಲ್ಲ. ನಾನಾಗಿ ಹೋಗಿ ಮೇಲೆ ಬಿದ್ದು ಕೇಳುವ ಮನಸ್ಸು ನನ್ನದಲ್ಲ. ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರು ಉಳಿಸಿಕೊಳ್ಳುವ ಪ್ರಯತ್ನ ಮಾಡ್ಲಿಲ್ಲ. ಇಬ್ಬರೂ ಕೂಡ 100% ನನ್ನ ಉಳಿಸಿಕೊಳ್ಳಲು ಪ್ರಯತ್ನ ಮಾಡಲಿಲ್ಲ. ಅವರು ಪ್ರಯತ್ನ ಮಾಡಿದ್ದರೆ ಇಂದು ನಾನು ಉಚ್ಚಾಟನೆ ಆಗುತ್ತಿರಲಿಲ್ಲ ಎಂದರು.
ನನ್ನನ್ನು ರಾಜಕೀಯವಾಗಿ ನನ್ನ ಬೆಳೆಸಿದ್ದು ಡಿಕೆಶಿ
ಡಿಕೆ ಶಿವಕುಮಾರ್ ನನ್ನನ್ನು ರಾಜಕೀಯವಾಗಿ ಬೆಳೆಸಿದವರು. ಸಹಕಾರ ಕ್ಷೇತ್ರದಲ್ಲಿ ನಾನು ಬೆಳೆಯಲು ಡಿ.ಕೆ.ಶಿವಕುಮಾರ್ ಕಾರಣ. ಉತ್ತರಹಳ್ಳಿ ಟಿಕೆಟ್ ಸಿಗಲು ಡಿ.ಕೆ.ಶಿವಕುಮಾರ್ ಅವರೇ ಕಾರಣ. ಖರ್ಗೆ, ಪರಮೇಶ್ವರ್ ಯಶವಂತಪುರ ಕ್ಷೇತ್ರದ ಟಿಕೆಟ್ ಕೊಡಿಸಿದರು. ಹಿಂದೆ ಕಾಂಗ್ರೆಸ್ನಲ್ಲಿದ್ದ ಕಾರಣಕ್ಕೆ ಅನುದಾನ ಕೇಳುವ ಕೆಲಸ ಮಾಡಿದೆ. ಅದರಿಂದಾಗಿ ಇವರು ಪಕ್ಷಕ್ಕೆ ಮುಜುಗರ ಆಗುತ್ತೆ ಎನ್ನುವುದಾದರೆ ರೇಪ್, ಏಡ್ಸ್ ಇಂಜೆಕ್ಷನ್ ಯಾವುದೂ ಮುಜುಗರ ಅಲ್ಲವೇ? ಕ್ಷೇತ್ರದ ವಿಚಾರ ಸರಿಪಡಿಸದಿದ್ದರೆ ಪಕ್ಷದಲ್ಲಿ ಮುಂದುವರಿಯಲ್ಲ ಎಂದಿದ್ದೆ. ಅಮಿತ್ ಶಾ ನನ್ನ ಜೊತೆ ಮಾತನಾಡಿದ್ದಾಗ ಈ ಬಗ್ಗೆ ಹೇಳಿದ್ದೆ ಎಂದು ಹೇಳಿದರು.
ಉಚ್ಛಾಟನೆ ಬಗ್ಗೆ ಹೆಬ್ಬಾರ್ ಹೇಳಿದ್ದೇನು?
ಯಲ್ಲಾಪುರದಲ್ಲಿ Tv9ಗೆ ಜೊತೆ ಮಾತನಾಡಿದ ಬಿಜೆಪಿ ಉಚ್ಛಾಟಿತ ಶಾಸಕ ಶಿವರಾಂ ಹೆಬ್ಬಾರ್, ನನಗೂ ಉಚ್ಚಾಟನೆ ಮಾಡಿರುವ ಪತ್ರ ಬಂದು ತಲುಪಿದೆ. ಪಕ್ಷ ಯಾವುದೇ ನಿರ್ಣಯ ತೆಗೆದುಕೊಂಡ್ರು ನಾನು ಸ್ವಾಗತಿಸುತ್ತೇನೆ. ಪಕ್ಷ ಮಾಡಿರುವ ನಿರ್ಣಯ ಕೈಗೊಂಡಿರುವ ಬಗ್ಗೆ ಉತ್ತರ ಕೊಡಬೇಕು. ಕೆಲವರು ಅನೇಕ ತಪ್ಪು ಮಾಡಿದ ಬಳಿಕ ಉಚ್ಛಾಟಣೆ ನಿರ್ಣಯ ಕೈಗೊಂಡ್ರು. ಕೆಲವರು ತಪ್ಪು ಮಾಡಿದ ಬಳಿಕವೂ ಅವರ ವಿರುದ್ದ ಕ್ರಮ ಇಲ್ಲ. ತಪ್ಪು ಮಾಡದೆ ಇದ್ದರೂ ಅವರ ವಿರುದ್ದ ಕ್ರಮ ಕೈಗೊಂಡಿದ್ದಾರೆ. ನಾನು ತಪ್ಪೆ ಮಾಡಿಲ್ಲ ಉಚ್ಛಾಟನೆಯನ್ನ ಯಾಕೆ ನಿರಿಕ್ಷಿಸಲಿ. ರಾಜಕಾರಣಿಗೆ ಗೆಲುವಿನ ಸಮಯದಲ್ಲಿ ಮಾಡಿದ ದ್ರೋಹಕ್ಕಿಂತ ದೊಡ್ಡ ದ್ರೋಹ ಮತ್ತೊಂದು ಇಲ್ಲ. ನನ್ನ ಸೋಲಿಸಲು ಹುನ್ನಾರ ನಡೆದ ಮೇಲೂ ಕ್ರಮ ಕೈಗೊಂಡಿರಲಿಲ್ಲ. ನಾನು ಶಾಸಕ ಆಗಬಾರದಗಿದ್ರೆ ಬಿ.ಫಾರಂ ಕೊಡಬಾರದಾಗಿತ್ತು. ಬಿ.ಫಾರಂ ಕೊಟ್ಟು ಸೋಲಿಸುವ ಕೆಲಸ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಸೂಕ್ತ ಸಂದರ್ಭದಲ್ಲಿ ಸೂಕ್ತ ವ್ಯಕ್ತಿಗಳ ಜತೆ ಚರ್ಚಿಸಿ ನಿರ್ಣಯ ಕೈಗೊಳ್ಳುತ್ತೇನೆ. ಆದಷ್ಟು ಬೇಗ ಎಲ್ಲವನ್ನೂ ನಿಮ್ಮ ಮುಂದೆ ಹೇಳುತ್ತೇನೆ ಎಂದರು.
ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ನಾಯಕರು ನನ್ನನ್ನು ಸೋಲಿಸಲು ಪ್ರಯತ್ನಿಸಿದ್ರು. ಈ ಬಗ್ಗೆ ಪಕ್ಷದ ಯಾರೆಲ್ಲ ನಾಯಕರಿಗೆ ಹೇಳಬೇಕೋ ಹೇಳಿದ್ದೇನೆ. ಆದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಜಿಲ್ಲಾ ಮಟ್ಟದ ನಾಯಕರು ಏನೇನು ಮಾಡಿದ್ದಾರೆಂದು ಹೇಳಿದ್ದೇನೆ. ಪಶ್ಚಾತ್ತಾಪದಿಂದ ನಾನು ಈ ಮಾತನ್ನು ಹೇಳುತ್ತಿಲ್ಲ. ಪಕ್ಷ ಕೈಗೊಂಡಿರುವ ನಿರ್ಣಯದ ಕುರಿತು ಹೇಳುತ್ತಿದ್ದೇನೆ. ಸಾರ್ವಜನಿಕರ ರಂಗದಲ್ಲಿ ಇರುವವರಿಗೆ ಸ್ವಲ್ಪವಾದ್ರೂ ಸ್ವಾಭಿಮಾನ ಇರಬೇಕು. ಯಾರನ್ನು ಉಚ್ಛಾಟನೆ ಮಾಡಬೇಕಿದೆ ಎಂದು ಎಲ್ಲರಿಗೂ ಗೊತ್ತಿದೆ. ಕಳೆದ 6 ತಿಂಗಳಿನಿಂದ ರಾಜ್ಯ ಬಿಜೆಪಿಯಲ್ಲಿ ಏನೆಲ್ಲ ಆಗಿದೆ ಗೊತ್ತಿದೆ. ಯಾರೆಲ್ಲ ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆ ಎಂದು ಗೊತ್ತಿದೆ. ಅವರನ್ನೆಲ್ಲ ಯಾವಾಗ ಪಕ್ಷದಿಂದ ಹೊರ ಹಾಕುತ್ತೀರಾ ಎಂದು ಪ್ರಶ್ನಿಸಿದರು.
ಇನ್ನಷ್ಟು ಕರ್ನಾಟಕ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 4:15 pm, Tue, 27 May 25