ಹುಬ್ಬಳ್ಳಿ ಅಂಕೋಲಾ ರೈಲ್ವೆ ಯೋಜನೆಗೆ ಭೂಕುಸಿತದ ಆತಂಕ; ಈ ಬಗ್ಗೆ ತಜ್ಞರು ಹೇಳುವುದೇನು?

|

Updated on: Mar 20, 2023 | 7:08 AM

ಪಶ್ಚಿಮ ಘಟ್ಟದ ಕಾಡು ಎಂದರೆ ಅದು ಜೀವ ವೈವಿಧ್ಯಕ್ಕೆ ಹೆಸರುವಾಸಿ. ಅಲ್ಲಿ ಕಂಡು ಬರುವ ಸಸ್ಯ, ಪ್ರಾಣಿ, ಪಕ್ಷಿ ಸಂಕುಲ ಪ್ರಪಂಚದ ಎಲ್ಲಿಯೂ ಇಲ್ಲ ಎಂದು ವಿಜ್ಞಾನಿಗಳು ಹೇಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಆಧುನಿಕತೆ ಹಾಗೂ ಸೌಲಭ್ಯಗಳ ಹೆಸರಿನಲ್ಲಿ ಈ ಕಾಡನ್ನು ನಾಶ ಮಾಡಲಾಗುತ್ತಿದೆ. ಅಂತಹದರಲ್ಲಿ ಇದೀಗ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ವಿಷಯ ಮತ್ತಷ್ಟು ಆತಂಕ ಸೃಷ್ಟಿಸಿದೆ.

ಹುಬ್ಬಳ್ಳಿ ಅಂಕೋಲಾ ರೈಲ್ವೆ ಯೋಜನೆಗೆ ಭೂಕುಸಿತದ ಆತಂಕ; ಈ ಬಗ್ಗೆ ತಜ್ಞರು ಹೇಳುವುದೇನು?
ಹುಬ್ಬಳ್ಳಿ ಅಂಕೋಲಾ ರೈಲ್ವೆ ಯೋಜನೆಗೆ ಭೂ ಕುಸಿತದ ಆತಂಕ
Follow us on

ಉತ್ತರ ಕನ್ನಡ: ಜಿಲ್ಲೆಯ ಅಂಕೋಲಾ ತಾಲೂಕಿನ ಜನರ ನಿರಂತರ ಹೋರಾಟದಿಂದಾಗಿ ಇದೀಗ ಹುಬ್ಬಳ್ಳಿ ಅಂಕೋಲಾ ರೈಲ್ವೆ ಯೋಜನೆಗೆ ಎಲ್ಲ ಕಡೆಯಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ಅದರಲ್ಲೂ ಪರಿಸರ ಇಲಾಖೆ ಮತ್ತು ಅರಣ್ಯ ಇಲಾಖೆಯಿಂದ ಸಮ್ಮತಿ ಸಿಕ್ಕ ಬಳಿಕವಷ್ಟೇ ಈ ಯೋಜನೆ ಜಾರಿಯಾಗುವುದು ಖಚಿತ ಎಂದು ಜನರು ನಂಬಿದ್ದಾರೆ. ಆದರೆ ಈ ಯೋಜನೆ ಜಾರಿಯಾದರೆ ಪಶ್ಚಿಮ ಘಟ್ಟದ ಸುಮಾರು 650 ಹೆಕ್ಟೇರ್ ಪ್ರದೇಶದ ದಟ್ಟ ಅರಣ್ಯ ನಾಶವಾಗುತ್ತದೆ. ಪ್ರಪಂಚದಲ್ಲಿಯೇ ಪಶ್ಚಿಮ ಘಟ್ಟ ಪ್ರದೇಶ ಅತ್ಯಂತ ಸೂಕ್ಷ್ಮವಾಗಿದ್ದು ಎಂದು ವಿಜ್ಞಾನಿಗಳು ಹೇಳುತ್ತಲೇ ಇದ್ದಾರೆ. ಇಂತಹ ವೈವಿಧ್ಯಮಯ ಪ್ರದೇಶದಲ್ಲಿ ಈ ಯೋಜನೆ ಮಾಡಿದರೆ ಜೀವವೈವಿಧ್ಯಕ್ಕೆ ತೊಂದರೆ ಆಗುತ್ತೆ ಎನ್ನುವುದು ಪರಿಸರ ವಾದಿಗಳ ವಾದ. ರೈಲ್ವೆ ಹಳಿಯಂಥ ಯೋಜನೆಗಳಿಂದ ಇಲ್ಲಿ ವಾಸಿಸುವ ವನ್ಯಮೃಗಗಳಿಗೆ ತುಂಬಾನೇ ತೊಂದರೆಯಾಗುತ್ತದೆ. ಸುಮಾರು 88 ದಶಲಕ್ಷ ವರ್ಷಗಳ ಕಾಡು ಇದಾಗಿದ್ದು. ಇಷ್ಟೊಂದು ವರ್ಷಗಳಿಂದ ಉಳಿಸಿಕೊಂಡು ಬಂದಿರುವ ಇಂತಹ ಅದ್ಭುತ ಕಾಡಿನಲ್ಲಿ ಈ ಯೋಜನೆಗಳನ್ನು ತರುವುದು ಏಕೆ ಎಂದು ಪರಿಸರವಾದಿಗಳ ಪ್ರಶ್ನೆಯಾಗಿದೆ.

161 ಕಿ.ಮೀ. ಉದ್ದದ ಈ ಯೋಜನೆಯಲ್ಲಿ ಸುಮಾರು 108 ಕಿ.ಮೀ. ದಟ್ಟ ಹಾಗೂ ಜೀವವೈವಿಧ್ಯಮಯ ಅರಣ್ಯದ ಮಧ್ಯೆ ರೈಲು ಹಳಿ ಹಾದು ಹೋಗಲಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಯಲ್ಲಾಪುರ, ದಾಂಡೇಲಿ ಹಾಗೂ ಕಾರವಾರ ತಾಲೂಕಿನ 32 ಕಡೆಗಳಲ್ಲಿ ಆಗಾಗ ಭೂಕುಸಿತವಾಗುತ್ತಲೇ ಇವೆ. ಉತ್ತರ ಕನ್ನಡ ಜಿಲ್ಲೆಯ ಶೇ. 3.7 ರಷ್ಟು ಪ್ರದೇಶದಲ್ಲಿ ಭೂಕುಸಿತದ ಸಾಧ್ಯತೆ ದಟ್ಟವಾಗಿದೆ. ಶೇ. 25.8 ಪ್ರದೇಶದಲ್ಲಿ ಭೂಕುಸಿತದ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇತ್ತಿಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಭೂಕುಸಿತ ಪ್ರಮಾಣ ಹೆಚ್ಚಾಗಿರುವುದರಿಂದ ಇದರ ಕುರಿತು ರೈಲ್ವೆ ಇಲಾಖೆಯ ಪ್ರಸ್ತಾಪದಲ್ಲಿ ಉಲ್ಲೇಖವೇ ಇಲ್ಲ ಎಂದು ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆಯ ಸಚಿವಾಲಯದ ಹೆಚ್ಚುವರಿ ಮಹಾನಿರ್ದೇಶಕರ ನೇತ್ರತ್ವದ ಸಮಿತಿ ಹೇಳಿದೆ.

ಇದನ್ನೂ ಓದಿ:ಉತ್ತರ ಕನ್ನಡ ಜಿಲ್ಲೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಜಾಗ ಮಂಜೂರು ಮಾಡಿದ ಕರ್ನಾಟಕ ಸರ್ಕಾರ

ಯೋಜನೆ ಹಾದು ಹೋಗುವ ಪ್ರದೇಶದ ಜನರನ್ನು ತಜ್ಞರ ಸಮಿತಿ ಭೇಟಿ ಮಾಡಿ ಅಹವಾಲು ಸ್ವೀಕರಿಸಿದೆ. ಜೊತೆಗೆ ಪರಿಸರ ಸಚಿವಾಲಯಕ್ಕೆ 50 ಪುಟಗಳ ವರದಿಯನ್ನು ಸಲ್ಲಿಸಿದೆ. ಈ ವರದಿಯಲ್ಲಿ ಈಗಿನ ಸ್ವರೂಪದಲ್ಲಿ ಯೋಜನೆ ಅನುಷ್ಠಾನ ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಇದರಿಂದಾಗಿ ಯೋಜನೆ ಜಾರಿಗೆ ಮತ್ತೊಂದು ಅಡ್ಡಗಾಲಾಗಿ ಪರಿಣಮಿಸಿದೆ. ಇನ್ನು ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಕೇಳಿದರೆ, ಈ ವರದಿ ಬಗ್ಗೆ ನನಗೆ ಮಾಹಿತಿ ಇಲ್ಲ. ಸಂಬಂಧಿಸಿದ ಸಚಿವರೊಂದಿಗೆ ಹಾಗೂ ತಜ್ಞರೊಂದಿಗೆ ಈ ಬಗ್ಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳುತ್ತಾರೆ.

ರೈಲು ಮಾರ್ಗ ನಿರ್ಮಾಣದ ಸಂದರ್ಭದಲ್ಲಿ ಅರಣ್ಯ ನಾಶ ಕಡಿಮೆ ಮಾಡಲು ಯೋಜನಾ ಸ್ವರೂಪದಲ್ಲಿ ಹಲವು ಸಲ ಬದಲಾವಣೆ ಮಾಡಲಾಗಿದೆ. ಯೋಜನೆಗೆ ಅರಣ್ಯ ಬಳಕೆ ಪ್ರಮಾಣ ಕಡಿಮೆ ಮಾಡಿ, ಸುರಂಗ ಹಾಗೂ ಸೇತುವೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಿಸಲು ಪ್ರಸ್ತಾಪಿಸಲಾಗಿದೆ. ಇಷ್ಟೆಲ್ಲ ಬೆಳವಣಿಗೆ ನಡೆದ ಬಳಿಕವೂ ಈ ಯೋಜನೆ ಅನುಷ್ಠಾನದ ವೇಳೆ ಅರಣ್ಯ ನಾಶ ಪ್ರಮಾಣ ದೊಡ್ಡ ಪ್ರಮಾಣದಲ್ಲಿ ಆಗಲಿದೆ ಎಂದು ತಜ್ಞರ ಸಮಿತಿ ಎಚ್ಚರಿಸಿದೆ. ಈ ಅಂಶಗಳನ್ನು ಗಮನಿಸಿದರೆ ಈ ಯೋಜನೆ ಜಾರಿ ಬಗ್ಗೆ ಅನೇಕ ಅನುಮಾನಗಳು ಹುಟ್ಟುತ್ತಿರುವುದಂತೂ ಸತ್ಯ.

ವರದಿ: ನರಸಿಂಹಮೂರ್ತಿ ಪ್ಯಾಟಿ ಟಿವಿ9 ಧಾರವಾಡ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ