ಉತ್ತರ ಕನ್ನಡ: ಪ್ರವಾಸೋದ್ಯಮಕ್ಕೆ ಡಿಜಿಟಲ್ ಸ್ಪರ್ಶ; ಪ್ರವಾಸಿ ಸ್ಥಳದ ಟಿಕೆಟ್ ಸಮಸ್ಯೆ ಬಗೆಹರಿಸಲು ಹೊಸ ಪ್ಲ್ಯಾನ್
ತಾನು ಹೊಂದಿರುವ ಹತ್ತು ಹಲವು ಪ್ರವಾಸಿ ತಾಣಗಳಿಂದಲೇ ದೇಶ, ವಿದೇಶಗಳಲ್ಲೂ ಗುರುತಿಸಿಕೊಂಡಿರುವ ಜಿಲ್ಲೆ ಇದಾಗಿದ್ದು, ಇಲ್ಲಿನ ಸುಂದರ ಕಡಲತೀರಗಳಲ್ಲಿನ ಜಲಸಾಹಸ ಕ್ರೀಡೆಗಳನ್ನಾಡಿ ಎಂಜಾಯ್ ಮಾಡುವುದರ ಜೊತೆಗೆ ಹಚ್ಚಹಸಿರಿನ ಪರಿಸರದಲ್ಲಿ ರಿಲ್ಯಾಕ್ಸ್ ಮಾಡೋದಕ್ಕೆ ಅಂತಾನೇ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ ಹೀಗೆ ಬರುವ ಪ್ರವಾಸಿಗರು ಪ್ರತಿಯೊಂದು ತಾಣದಲ್ಲೂ ಪ್ರತ್ಯೇಕ ಟಿಕೆಟ್ ಪಡೆದು ವೀಕ್ಷಣೆ ಮಾಡಬೇಕಾದ ಸ್ಥಿತಿ ಇದೆ. ಈ ಸಮಸ್ಯೆಯನ್ನ ಪರಿಹರಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಹೊಸ ಪ್ಲ್ಯಾನ್ ರೂಪಿಸಿದೆ.
ಉತ್ತರ ಕನ್ನಡ: ಜಿಲ್ಲೆಯು ಪ್ರವಾಸೋದ್ಯಮಕ್ಕೆ ಸಾಕಷ್ಟು ಹೆಸರುವಾಸಿಯಾಗಿದೆ. ಇಂತಹ ಜಿಲ್ಲೆಗೆ ಪ್ರತಿವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರಾದರೂ ಯಾವೆಲ್ಲ ಸ್ಥಳಗಳಿಗೆ ಎಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಅದರಿಂದ ಎಷ್ಟೆಲ್ಲ ಆದಾಯ ಬಂದಿದೆ ಎನ್ನುವ ನಿಖರ ಮಾಹಿತಿ ಪ್ರವಾಸೋದ್ಯಮ ಇಲಾಖೆಗೆ ಸಿಗುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಅಡಿಯಲ್ಲಿ ಟಿಕೆಟ್ ಸೌಲಭ್ಯವಿರುವ ಎಲ್ಲ ಪ್ರವಾಸಿತಾಣಗಳ ಟಿಕೆಟ್ ವ್ಯವಸ್ಥೆಯನ್ನ ಆ್ಯಪ್(app) ಮೂಲಕ ಒಂದೇ ಕಡೆ ಸಂಯೋಜಿಸಲು ಪ್ರವಾಸೋದ್ಯಮ ಇಲಾಖೆ ಯೋಜನೆ ರೂಪಿಸಿದೆ. ಈ ಮೂಲಕ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಡಿಜಿಟಲ್ ಸ್ಪರ್ಶ ನೀಡಲಾಗುತ್ತಿದೆ. ಎಲ್ಲೆಲ್ಲಿ ಟಿಕೆಟ್ ಪಡೆದು ಪ್ರವಾಸಿಗರಿಗೆ ಅವಕಾಶ ನೀಡಲಾಗುತ್ತಿದೆಯೋ ಅಂತಹ ಎಲ್ಲ ಪ್ರವಾಸಿ ತಾಣಗಳನ್ನ ಟಿಕೆಟ್ ಇಂಟಿಗ್ರೇಷನ್ ಸಿಸ್ಟಮ್(Ticket Integration System) ಅಡಿಯಲ್ಲಿ ತರಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸದ್ಯ ಪ್ರವಾಸೋದ್ಯಮ ಇಲಾಖೆಯಿಂದ ಟೆಂಡರ್ ಪಡೆದವರೆ ಟಿಕೆಟ್ ನೀಡಿ ಹಣ ಪಡೆದುಕೊಳ್ಳುತ್ತಿದ್ದಾರೆ. ನೂತನ ಟಿಕೆಟ್ ಇಂಟಿಗ್ರೇಷನ್ ಸಿಸ್ಟಮ್‌ನಲ್ಲಿ ಪ್ರತಿಯೊಂದು ಪ್ರವಾಸಿ ತಾಣದಲ್ಲಿ ಲಾಗಿನ್ ಮೂಲಕವೇ ಟಿಕೆಟ್ ನೀಡಬೇಕಾಗುವುದರಿಂದ ಎಷ್ಟು ಪ್ರವಾಸಿಗರು ಬರುತ್ತಿದ್ದಾರೆ, ಎಲ್ಲೆಲ್ಲಿಂದ ಪ್ರವಾಸಿಗರು ಬರುತ್ತಿದ್ದಾರೆ, ಇವರಿಂದ ಎಷ್ಟು ಆದಾಯ ಬರುತ್ತಿದೆ, ಯಾವ ಅವಧಿಯಲ್ಲಿ ಹೆಚ್ಚು ಪ್ರವಾಸಿಗರು ಬರುತ್ತಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಕಲೆ ಹಾಕಲು ಸಾಧ್ಯವಾಗಲಿದೆ. ಅಲ್ಲದೇ ಆನ್‌ಲೈನ್‌ನಲ್ಲಿ ಎಲ್ಲಿಂದ ಬೇಕಾದರೂ ಟಿಕೆಟ್ ಬುಕ್ ಮಾಡಿಕೊಳ್ಳಲು ಅವಕಾಶ ಸಿಗುವುದರಿಂದ ಪ್ರವಾಸಿಗರಿಗೂ ಇದರಿಂದ ಅನುಕೂಲವಾಗಲಿದೆ. ಇನ್ನು ಪ್ರವಾಸೋದ್ಯಮ ಇಲಾಖೆ ಜಾರಿಗೆ ತರಲು ಮುಂದಾಗಿರುವ ಈ ಯೋಜನೆಗೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದ್ದು, ಬಂದ ಆದಾಯದಿಂದ ತಾಣಗಳ ಅಭಿವೃದ್ಧಿ ಹಾಗೂ ನಿರ್ವಹಣೆಯನ್ನ ಸಮರ್ಪಕವಾಗಿ ಮಾಡುವಂತಾಗಲೀ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:ಕಾರವಾರ: ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ನಿಯಮ ಮೀರಿ ನಿರ್ಮಾಣಗೊಂಡ ಕಟ್ಟಡಗಳ ನೆಲಸಮಕ್ಕೆ ಆದೇಶ
ಒಟ್ಟಾರೇ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಪ್ರವಾಸಿಗರ ಅನುಕೂಲದ ದೃಷ್ಟಿಯಿಂದ ಟಿಕೆಟ್ ಇಂಟಿಗ್ರೇಷನ್ ಸಿಸ್ಟಮ್ ಜಾರಿಗೊಳಿಸುತ್ತಿರುವುದು ನಿಜಕ್ಕೂ ಉತ್ತಮವಾದುದೇ. ಆದರೆ ಇದರೊಂದಿಗೆ ಪ್ರವಾಸಿತಾಣಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯನ್ನೂ ಇಲಾಖೆ ಮಾಡಿದಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಇತರರಿಗೆ ಮಾದರಿಯಾಗೋದರಲ್ಲಿ ಯಾವುದೇ ಅನುಮಾನಗಳಿಲ್ಲ.
ವರದಿ: ವಿನಾಯಕ ಬಡಿಗೇರ ಟಿವಿ9 ಕಾರವಾರ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ