
ಉತ್ತರ ಕನ್ನಡ, ಜು.20: ಅಂಕೋಲಾ(Ankola) ತಾಲೂಕಿನ ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ಗುಡ್ಡ ಕುಸಿತ ಸ್ಥಳಕ್ಕೆ ಇಂದು(ಶನಿವಾರ) ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ(HD Kumaraswamy) ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ‘ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕೇಂದ್ರ ಹಾಗೂ ರಾಜ್ಯ ಎಂದು ರಾಜ್ಯ ಸರ್ಕಾರ ರಾಜಕಾರಣ ಮಾಡಬಾರದು. ಹಾನಿಯಾದ ಕುಟುಂಬದ ಜೊತೆ ಸರ್ಕಾರ ಇರಬೇಕು. ಘಟನೆ ಆಗಿದ್ದರ ಬಗ್ಗೆ ನನಗೆ ಬೇಸರವಿದೆ ಎಂದರು.
ಅವೈಜ್ಞಾನಿಕ ಕಾಮಗಾರಿಯಿಂದ ಘಟನೆ ನಡೆದಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮಿ ಪ್ರೀಯಾ ಮಾಹಿತಿ ನೀಡಿದ್ದಾರೆ. ಈ ಘಟನೆಯಿಂದ ಒಂದೇ ಕುಟುಂಬದ ಐವರು ಮೃತಪಟ್ಟಿರುವುದು ದುರಂತ. 2018 ರಲ್ಲಿ ನಾನು ಸಿಎಂ ಆಗಿದ್ದಾಗ ಕೊಡಗಿನಲ್ಲಿ ಭೂ ಕುಸಿತ ಆಗಿತ್ತು. ಆಗ ಮನೆ ಕಳೆದುಕೊಂಡವರಿಗೆ ಹತ್ತು ಲಕ್ಷ ಹಣ ಕೊಟ್ಟಿದ್ದೆವು ಎಂದು ತಮ್ಮ ಅವಧಿಯಲ್ಲಿ ನಡೆದ ಘಟನೆಯನ್ನು ನೆನೆದರು. ಇನ್ನು ಎನ್ಡಿಆರ್ಎಫ್ ಈ ಕಾರ್ಯಾಚರಣೆಯಲ್ಲಿ ಸಹಾಯ ಮಾಡುತ್ತಿದೆ. ಅದು ಕೇಂದ್ರ ಸರ್ಕಾರದ ಅಂಗವಲ್ಲವೇ?, ಮೊದಲು ಇಂತಹ ಘಟನೆಯಲ್ಲಿ ರಾಜಕಾರಣ ಮಾಡುವುದನ್ನ ರಾಜ್ಯ ಸರ್ಕಾರ ಬಿಡಲಿ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಶಿರೂರು ಗುಡ್ಡಕುಸಿತ; ಜಿಲ್ಲಾ ಉಸ್ತುವಾರಿ ಸಚಿವನ ಸಮಕ್ಷಮ ತೆರವು ಕಾರ್ಯಾಚರಣೆ ನಡೆದಿದೆ: ಶಿವಕುಮಾರ್
ಇನ್ನು ಘಟನೆಯಲ್ಲಿ ಹಲವು ಜನ ಪ್ರಾಣ ಕಳೆದುಕೊಂಡಿದ್ದರು. ನಿನ್ನೆಯಷ್ಟೇ ನದಿಗೆ ತೇಲಿ ಹೋಗಿದ್ದ ಗ್ಯಾಸ್ ಟ್ಯಾಂಕರ್ನಿಂದ ಎಲ್ಪಿಜಿ ಗ್ಯಾಸ್ನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ. 24 ಗಂಟೆಗಳ ನಿರಂತರ ಕಾರ್ಯಾಚರಣೆ ನಡೆಸಿ, ಸುಮಾರು 100 ಕ್ಕೂ ಹೆಚ್ಚು ಜನರ ನಿರಂತರ ಶ್ರಮದಿಂದ ಯಾವುದೇ ಅಪಾಯ ಸಂಭವಿಸಿದಂತೆ ಟ್ಯಾಂಕರ್ನಲ್ಲಿದ್ದ ಪೂರ್ತಿ ಗ್ಯಾಸ್ನ್ನು ಗಂಗಾವಳಿ ನದಿಗೆ ಬಿಡಲಾಗಿತ್ತು. ಇದರಿಂದ ಸುಮಾರು 10 ಗ್ರಾಮಗಳಿಗಿದ್ದ ಆತಂಕ ದೂರವಾಗಿದ್ದು, ದೊಡ್ಡ ಆತಂಕದಿಂದ ಗ್ರಾಮಸ್ಥರನ್ನು ಪಾರುಮಾಡಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:53 pm, Sat, 20 July 24